ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಪ್ರಚಲಿತ > ಕನ್ನಡಿಗ ಈ ಅರವಿಂದ ಅಡಿಗ, ಯಾವೂರಿನ ಹುಡುಗ?
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕನ್ನಡಿಗ ಈ ಅರವಿಂದ ಅಡಿಗ, ಯಾವೂರಿನ ಹುಡುಗ?
ವ್ಯಕ್ತಿಯೊಬ್ಬ ಪ್ರಖ್ಯಾತಿ ಪಡೆದಾಗಲಷ್ಟೇ "ಇವರು ನಮ್ಮವರು" ಅಂತ ಹೇಳಿಕೊಂಡು ಬೆನ್ನು ತಟ್ಟಿಕೊಳ್ಳುವ ಸಂಪ್ರದಾಯ ಹೊಸದೇನಲ್ಲ. ಐಶ್ವರ್ಯಾ ರೈ "ವಿಶ್ವ ಸುಂದರಿ"ಯಾದಾಗ ಈ ಬಗ್ಗೆ ಚರ್ಚೆ ಬಹುವಾಗಿ ಕೇಳಿಬಂದಿತ್ತು. (ಈಕೆ ಐಶ್ವರ್ಯಾ "ರಾಯ್" ಅಂತ ಬಂಗಾಳಿಗಳು ಹೇಳಿಕೊಂಡಿದ್ದರು!) ಇದೀಗ ಅತ್ಯಂತ ಕಿರಿಯ ಪ್ರಾಯದಲ್ಲೇ ಬುಕರ್ ಪ್ರಶಸ್ತಿ ಪಡೆದ 33ರ ಹರೆಯದ ಅರವಿಂದ ಅಡಿಗ ಸರದಿ.

ಅರವಿಂದ ಅಡಿಗ 'ನಮ್ಮವರು' ಅಂತ ತಮಿಳುನಾಡು ಕೂಡ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದೆ. ಮಂಗಳೂರು, ಮುಂಬಯಿ, ದೆಹಲಿಗಳು ಕೂಡ ಇದೇ ಹಾದಿಯಲ್ಲಿವೆ. ಈ ಕುರಿತು ವಾದ-ವಿವಾದಗಳು ನಡೆಯುತ್ತಿವೆ ಅವರ ಹಿರಿಯರೆಲ್ಲರೂ ಮೂಲತಃ ಕನ್ನಡಿಗರು (ಮಂಗಳೂರಿಗರು) ಎಂಬುದು ವಿವಾದಾತೀತ. ಆದರೂ, ಅರವಿಂದರು ಹುಟ್ಟಿದ್ದು ಚೆನ್ನೈಯಲ್ಲಿ. ಬೆಳೆದಿದ್ದು, ಪ್ರಾಥಮಿಕ ವಿದ್ಯಾಭ್ಯಾಸ ಪೂರೈಸಿದ್ದು ಮಂಗಳೂರಿನಲ್ಲಿ, ವಿದೇಶದಲ್ಲಿ ಉನ್ನತ ಶಿಕ್ಷಣ, ದೆಹಲಿಯಲ್ಲಿ ಉದ್ಯೋಗ ಮತ್ತು ಮುಂಬಯಿಯಲ್ಲಿ ವಾಸ. ಇವಿಷ್ಟು ಅವರ ಜೀವನದ ಪಥ.

ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, "ನವದೆಹಲಿ, ಮುಂಬಯಿ, ಬೆಂಗಳೂರುಗಳು ಕೂಡ "ಇವ ನಮ್ಮವ" ಅಂತ ಹೇಳಿಕೊಳ್ಳಬಹುದು, ಆದರೆ, ಅಡಿಗ ಎಂಬ ಹುಡುಗ ಇಂಗ್ಲಿಷ್ ಕಾಗುಣಿತ ಕಲಿತದ್ದು ಮದ್ರಾಸಿನಲ್ಲಿ" ಅಂತ ಹೆಮ್ಮೆಯಿಂದ ಅದು ಪ್ರಕಟಿಸಿದೆ. ಚೆನ್ನೈಯಲ್ಲಿ ಅವರ ಅಜ್ಜ ಮೋಹನ ರಾವ್ ಅವರಿಗೆ ಪೂನಮಲೀ ಹೈರೋಡ್‌ನಲ್ಲಿ ನರ್ಸಿಂಗ್ ಹೋಮ್ ಇದೆ. ವಿದ್ಯಾರಂಭ ಮಾಡಿದ್ದು, ಚೆನ್ನೈಯ ಎಗ್ಮೋರ್ ಎಂಬಲ್ಲಿನ ಡಾನ್ ಬೋಸ್ಕೋ ಮೆಟ್ರಿಕ್ಯುಲೇಷನ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ. ಆ ಬಳಿಕ ಅವರ ಕುಟುಂಬವು ಮಂಗಳೂರಿಗೆ ಹಿಂತಿರುಗಿತ್ತು.

ಅದರಲ್ಲಿರುವ ವರದಿ ಪ್ರಕಾರ, ಸ್ವತಃ ಅಡಿಗರು ಟೈಮ್ಸ್ ಆಫ್ ಇಂಡಿಯಾಗೆ ಇತ್ತೀಚೆಗೆ ಕಳುಹಿಸಿದ ಇ-ಮೇಲ್‌ನಲ್ಲಿ ಈ ರೀತಿ ಹೇಳಿದ್ದಾರೆ - "ನಾವು ಮಂಗಳೂರಿಗರಾಗಿದ್ದರೂ, ಚೆನ್ನೈಯಿಂದ ಹೊರಗಿರುವ ಬಗ್ಗೆ ನನ್ನ ತಾಯಿಗೆ ಕೊಂಚವೂ ಇಷ್ಟವಿರಲಿಲ್ಲ. ಮಂಗಳೂರಿನಲ್ಲಿನ ನಮ್ಮ ಮನೆಯನ್ನು ಆಕೆ ಎಂಜಿಆರ್ ಚಿತ್ರಗಳು ಮತ್ತು ತಮಿಳು ಹಾಡುಗಳಿಂದ ತುಂಬಿಟ್ಟಿದ್ದರು. ಒಂದಲ್ಲ ಒಂದು ದಿನ ನನ್ನ ತಂದೆ ಚೆನ್ನೈಗೆ ಮತ್ತೆ ಮರಳುತ್ತಾರೆ ಎಂಬ ಬಗ್ಗೆ ನಾನು ಮತ್ತು ತಾಯಿ ಇಬ್ಬರೂ ಆಶಾವಾದ ಇರಿಸಿಕೊಂಡಿದ್ದೆವು".

ಮಂಗಳೂರಿನ ಕೆನರಾ ಮೈನ್ ಶಾಲೆ ಮತ್ತು ಸಂತ ಅಲೋಷಿಯಸ್ ಶಾಲೆಯ ವಿದ್ಯಾರ್ಥಿಯಾಗಿದ್ದರು ಅರವಿಂದ ಅಡಿಗ. ಆ ಬಳಿಕ ತಂದೆ ಡಾ.ಮಾಧವ ಅಡಿಗ ಆಸ್ಟ್ರೇಲಿಯಾಗೆ ತೆರಳಿದರು. ಅಡಿಗರು ಆಸ್ಟ್ರೇಲಿಯಾದಲ್ಲಿ, ಕೊಲಂಬಿಯಾ ವಿಶ್ವವಿದ್ಯಾನಿಲಯದಲ್ಲಿ ಮತ್ತು ಆಕ್ಸ್‌ಫರ್ಡ್‌ನಲ್ಲಿ ವಿದ್ಯಾಭ್ಯಾಸ ಪೂರೈಸಿ, ಟೈಮ್ ಮ್ಯಾಗಜಿನ್ ಪತ್ರಿಕೆಯಲ್ಲಿ ಉದ್ಯೋಗ ಹಿಡಿದರು. ಈಗವರು ಉದ್ಯೋಗ ತೊರೆದು ಪೂರ್ಣಪ್ರಮಾಣದಲ್ಲಿ ಬರವಣಿಗೆಯಲ್ಲಿ ತೊಡಗಿಕೊಂಡಿದ್ದಾರೆ.

1990ರಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾಭ್ಯಾಸ ಸಂದರ್ಭದಲ್ಲಿ ತಾಯಿಯನ್ನು ಕಳೆದುಕೊಂಡರೂ, ಮೊದಲ ರ‌್ಯಾಂಕ್ ಪಡೆದಿದ್ದರು. ಬಳಿಕ ಸಹೋದರ ಆನಂದ್ ಅಡಿಗ ಜೊತೆಗೆ, ಆಸ್ಟ್ರೇಲಿಯಾದಲ್ಲಿ ತಂದೆಯನ್ನು ಸೇರಿಕೊಂಡ ಅವರು, ಅಲ್ಲಿ ಕಾನೂನು ಪದವಿ, ಬಳಿಕ ಲಂಡನ್‌ನ ಆಕ್ಸ್‌ಫರ್ಡ್‌ನಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಎಂಫಿಲ್ ಪದವಿ ಪಡೆದರು. ಟೈಮ್ ಮ್ಯಾಗಜಿನ್‌ನ ದೆಹಲಿ ವರದಿಗಾಗಿ ಉದ್ಯೋಗ ಮಾಡಿದ ಅವರು, ಬೆಂಗಳೂರಿನ ಐಐಎಸ್‌ಸಿ ದಾಳಿ ಕುರಿತ ವರದಿಗಾಗಿ, ಮಾಹಿತಿ ಸಂಗ್ರಹ ನಿಮಿತ್ತ 2005ರಲ್ಲಿ ಮಂಗಳೂರಿಗೆ ಮತ್ತೊಮ್ಮೆ ಬಂದಿದ್ದರು.

ಅರವಿಂದ ಅಡಿಗರಿಗೆ 70 ಸಾವಿರ ಡಾಲರ್ ಮೊತ್ತದ ಬುಕರ್ ಪ್ರಶಸ್ತಿ ಗೆದ್ದುಕೊಟ್ಟ ದಿ ವೈಟ್ ಟೈಗರ್ ಕೃತಿಯು ಬಲರಾಮ ಹಲ್ವಾಯಿ ಎಂಬ ಚಾಲಕನೊಬ್ಬ ಗ್ರಾಮೀಣ ಬದುಕಿನಿಂದ ನವದೆಹಲಿಯ ಜಗಮಗ ಜೀವನಕ್ಕೆ ಕಾಲಿಟ್ಟ ಕುರಿತ ಕಥಾ ಹಂದರವನ್ನೊಳಗೊಂಡಿದೆ. ಹೀಗಾಗಿ ದೆಹಲಿಯ ಬೀದಿಗಳೇ ಈ ಕಥಾ ಹಂದರದಲ್ಲಿ ಕಂಡುಬರುತ್ತವೆ.

ಮಂಗಳೂರಿನಲ್ಲಿರುವ ಅವರ ಬಂಧುಗಳು ಹೇಳಿರುವಂತೆ, ಅಡಿಗರಿಗೆ ಯಾವತ್ತೂ ತಮ್ಮೂರಾದ ಮಂಗಳೂರಿನ ಬಗ್ಗೆ ವಿಶೇಷ ಆಸ್ಥೆ ಇತ್ತು. ಇ-ಮೇಲ್ ಮೂಲಕವೇ ಮಂಗಳೂರಿನ ಬಗ್ಗೆ ವಿಚಾರಿಸಿಕೊಳ್ಳುತ್ತಿದ್ದರು. ಅದೇ ಟೈಮ್ಸ್ ಆಫ್ ಇಂಡಿಯಾದಲ್ಲಿರುವ ಇನ್ನೊಂದು ವರದಿಯಲ್ಲಿ ಅವರು ಹೇಳಿದ್ದು ಹೀಗೆ: "ನಾನು ಹಲವಾರು ವರ್ಷಗಳನ್ನು ನಿಜಾಮುದ್ದೀನ್‌ನಲ್ಲಿ ಕಳೆದಿದ್ದೆ. ಮತ್ತೆ ದೆಹಲಿಗೆ ಮರಳುವುದು ನನಗಿಷ್ಟ".

ಹುಟ್ಟಿದ್ದು ಮದ್ರಾಸ್, ಬೆಳೆದದ್ದು ಮಂಗಳೂರು, ವಿದೇಶದಲ್ಲಿ ವಿದ್ಯಾಭ್ಯಾಸ, ದೆಹಲಿಯಲ್ಲಿ ಉದ್ಯೋಗ, ಸದ್ಯದ ವಾಸ ಸ್ಥಾನ ಮುಂಬಯಿ- ಹೀಗೆ ಊರೂರುಗಳೆಲ್ಲವೂ ಅರವಿಂದ ಅಡಿಗರೊಂದಿಗೆ ತಮ್ಮನ್ನು ಗುರುತಿಸಿಕೊಳ್ಳತೊಡಗಿವೆ. ಬುಕರ್ ಪ್ರಶಸ್ತಿ ಬಂದಿದ್ದು ನಮ್ಮ ದೇಶದ ಒಬ್ಬ ಅದ್ಭುತ ಬರಹಗಾರನಿಗೆ. ಹೀಗಿರುವಾಗ ಪ್ರಾದೇಶಿಕತೆಯ ಮನಸ್ಥಿತಿ ಎಷ್ಟು ಸರಿ? ಓದುಗರಾದ ನೀವೇನು ಹೇಳುತ್ತೀರಿ? ನಿಮ್ಮ ಅಭಿಪ್ರಾಯ ತಿಳಿಸಿ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ವಿಶ್ವ ಸೃಷ್ಟಿಯ ಮರ್ಮವರಿಯಲು ಬಿಗ್ ಬ್ಯಾಂಗ್ ಮಹಾಪ್ರಯೋಗ !
ಆಪರೇಶನ್ ಕಮಲ ಕಳಂಕದೊಂದಿಗೆ ಬಿಜೆಪಿ ಶತದಿನ
ಜರ್ದಾರಿ: ಜೈಲಿನಿಂದ ಅಧ್ಯಕ್ಷ ಪಟ್ಟಕ್ಕೆ ಸಾಗಿ ಬಂದ ದಾರಿ
ಬನ್ನಿ, ಬಿಹಾರ ಪ್ರವಾಹ ಪೀಡಿತರಿಗೆ ನೆರವಾಗೋಣ
ಮೋದಿಯ ಮತ್ತೊಂದು ಮುಖ ಕಂಡ ಗುಜರಾತ್
ನಾಚಿಕೆಗೇಡು, ಪ್ರಜಾತಂತ್ರದ ಕಪ್ಪು ಚುಕ್ಕೆ!