ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಪ್ರಚಲಿತ > ಸಿಡಿಯಲಿರುವ ಸಿದ್ದು: ರಾಜ್ಯ ರಾಜಕೀಯದಲ್ಲಿ ಸಂಚಲನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಿಡಿಯಲಿರುವ ಸಿದ್ದು: ರಾಜ್ಯ ರಾಜಕೀಯದಲ್ಲಿ ಸಂಚಲನ
ನಾಗರಾಜ್ ಭೂತನ ಹೊಸೂರು
NRB
ವಿಧಾನಸಭೆ ಉಪಚುನಾವಣೆಗಳು ಮತ್ತು ಲೋಕಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ, ರಾಜ್ಯ ರಾಜಕೀಯದಲ್ಲಿ ಮಹತ್ವದ ಬದಲಾವಣೆಯಾಗುವ ಮುನ್ಸೂಚನೆ ದೊರೆಯುತ್ತಿದೆ. ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್‌ನಲ್ಲಿ ಮೂಲೆಗುಂಪಾಗುತ್ತಾ, ಒಳಗೊಳಗೇ ಅಸಮಾಧಾನ ನುಂಗಿಕೊಳ್ಳುತ್ತಿದ್ದರೂ ಅವರ ಅಭಿಮಾನಿಗಳು ಸುಮ್ಮನೆ ಕೂರುತ್ತಿಲ್ಲ. ಇದಕ್ಕೆ ಸ್ವತಂತ್ರ ಶಾಸಕ, ಸಚಿವ ವರ್ತೂರ್ ಪ್ರಕಾಶ್ ಅವರ ಹೇಳಿಕೆಯೇ ಸಾಕ್ಷಿ.

ರಾಜ್ಯ ರಾಜಕೀಯದಲ್ಲಿ ಭಾರೀ ಬದಲಾವಣೆ ಕಂಡುಬರಲಿದೆ ಎಂದು ಅವರು ಹೇಳಿರುವುದರಲ್ಲಿ ಹುರುಳಿಲ್ಲದಿಲ್ಲ.

ಹೌದು, ಸಿದ್ದರಾಮಯ್ಯ ಅವರು ತಮ್ಮದೇ ಪಕ್ಷ ಕಟ್ಟುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಅವರು ಕರ್ನಾಟಕ ಜನತಾದಳ ಎಂಬ ಪಕ್ಷವೊಂದನ್ನು ಕಟ್ಟುವ ಕುರಿತ ವದಂತಿಗೆ ಈಗಾಗಲೇ ರೆಕ್ಕೆ ಪುಕ್ಕ ಹುಟ್ಟಿಕೊಂಡಿದೆ. ಅವರು ಪಕ್ಷ ಕಟ್ಟಿದರೆ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳಲ್ಲಿನ ಸ್ಥಿತ್ಯಂತರ ಸಾಧ್ಯತೆಗಳನ್ನು ರಾಜಕೀಯ ವಿಶ್ಲೇಷಕರು ಈಗಾಗಲೇ ಲೆಕ್ಕ ಹಾಕತೊಡಗಿದ್ದಾರೆ.

ಸಿದ್ದರಾಮಯ್ಯ ಅವರು ಈಗಾಗಲೇ ಯಡಿಯೂರಪ್ಪ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಮತ್ತು ಕರ್ನಾಟಕ ಜನತಾದಳಕ್ಕೆ ಬಿಜೆಪಿ ನಿಧಿ ಒದಗಿಸಲು ಸಿದ್ಧವಾಗಿದೆ ಎಂಬ ಮಾತುಗಳು ನಂಬಲರ್ಹ ಮೂಲಗಳಿಂದ ಗೊತ್ತಾಗಿದೆ. ಕೆಲವು ದಿನಗಳ ಹಿಂದೆ ಗಾಳಿಮಾತುಗಳು ಕೇಳಿಬಂದಿತ್ತಾದರೂ, ಸ್ಪಷ್ಟ ಸೂಚನೆಗಳು ಗೋಚರವಾಗಿರಲಿಲ್ಲ. ಆದರೆ, ಸಿದ್ದರಾಮಯ್ಯ ಅವರ ಬೆಂಬಲಿಗರಲ್ಲಿ ಒಬ್ಬರಾದ ವರ್ತೂರು ಪ್ರಕಾಶ್ ಅವರು ಮಂಗಳವಾರ ಕಾಂಗ್ರೆಸ್ ಪಕ್ಷದ ವಿರುದ್ಧ ಸಿಡಿದೆದ್ದು, ರಾಜ್ಯ ರಾಜಕೀಯದಲ್ಲಿ ಮಹತ್ತರ ಬದಲಾವಣೆ ಆಗಿಯೇ ತೀರುತ್ತದೆ ಎಂದು ಗುಡುಗಿರುವುದು ಗಾಳಿಗೋಪುರಕ್ಕೆ ಗಟ್ಟಿ ಸ್ವರೂಪ ಕೊಡುವ ಮುನ್ಸೂಚನೆ ಎಂದು ರಾಜ್ಯ ರಾಜಕೀಯದ ನಾಡಿ ಪಂಡಿತರಿಗೆ ಅರ್ಥವಾಗದಿರದು.

ಮಾಜಿ ಪ್ರಧಾನಿ ದೇವೇಗೌಡ ಅವರ ಕೆಂಗಣ್ಣಿಗೆ ಗುರಿಯಾಗಿ ಜೆಡಿಎಸ್‌ನಿಂದ ಉಚ್ಚಾಟಿಸಲ್ಪಟ್ಟ ಸಿದ್ದರಾಮಯ್ಯ ಅವರು ನ್ಯಾಯ ಪಡೆಯಲು ತಟ್ಟಿದ್ದು ಕಾಂಗ್ರೆಸ್ ಪಕ್ಷದ ಬಾಗಿಲನ್ನು. ಆದರೆ ರಾಜ್ಯ ಕಾಂಗ್ರೆಸ್ಸಿನ ಒಳಜಗಳ, ನಾಯಕರ ಪಿತೂರಿಯಿಂದ ಸಿದ್ದರಾಮಯ್ಯ ಆರಂಭದಿಂದಲೂ ಕಾಂಗ್ರೆಸ್‌ನಲ್ಲಿ ಬೇಡದೆ ಬಂದ ಅತಿಥಿಯಂತಾಗಿಬಿಟ್ಟಿರುವುದು ರಹಸ್ಯವಾಗೇನೂ ಉಳಿದಿಲ್ಲ. ಸಮಯ ಸಿಕ್ಕಾಗ ಕಾಂಗ್ರೆಸ್ಸಿಗರಿಗೆ ಚುರುಕು ಮುಟ್ಟಿಸುತ್ತಿದ್ದ ಸಿದ್ದು, ಈಗ ಬಲವಾದ ಪ್ರಹಾರ ಮಾಡಲು ತೊಡೆತಟ್ಟಿ ನಿಲ್ಲುತ್ತಿದ್ದಾರೆ.

ರಾಜ್ಯ ವಿಧಾನಸಭಾ ಚುನಾವಣೆ, ವಿಧಾನಪರಿಷತ್ತಿನ ಸದಸ್ಯರ ಮತ್ತು ಸಭಾಪತಿ ಚುನಾವಣೆಯಲ್ಲಿ ಸಿದ್ದು ಮಾತಿಗೆ ಎಳ್ಳಷ್ಟೂ ಬೆಲೆ ಇಲ್ಲದಾಯಿತು. ಬೇಡಬೇಡವೆಂದರೂ ಕಾಂಗ್ರೆಸ್, ಜೆಡಿಎಸ್ ಸಖ್ಯಕ್ಕೆ ಹಾತೊರೆಯಿತು. ಕೆಪಿಸಿಸಿ ಸ್ಥಾನಕ್ಕೆ ಬಲವಾದ ಆಕಾಂಕ್ಷಿಯಾಗಿದ್ದ ಸಿದ್ದು, ಅಲ್ಲೂ ಅವಮಾನ ಅನುಭವಿಸುವಂತಾಯಿತು. ಅಧ್ಯಕ್ಷ ಪಟ್ಟ ಅಲಂಕರಿಸಿದ ದೇಶಪಾಂಡೆಯವರು ಮತ್ತೊಮ್ಮೆ ಜೆಡಿಎಸ್ ಬಗ್ಗೆ ಮೃದು ಮಾತುಗಳನ್ನು ಆಡಲಾರಂಭಿಸಿರುವುದು ಅವರ ಅಂತರಂಗದ ಅಸಮಾಧಾನಕ್ಕೆ ಪ್ರಧಾನ ಕಾರಣ.

ಇದೆಲ್ಲದರಿಂದ ಬೇಸತ್ತ ಸಿದ್ದರಾಮಯ್ಯ ‘ಸಿಡಿದೆದ್ದ ಸಿದ್ದು’ವಾಗಿ ಅವತರಿಸಲು ಅಣಿಯಾಗುತ್ತಿದ್ದಾರೆ. ಕಾಂಗ್ರೆಸ್ ಹಾಗೂ ಮಾಜಿ ಪ್ರಧಾನಿ ದೇವೇಗೌಡರಿಗೆ ನೀರು ಕುಡಿಸಲು ರಣತಂತ್ರ ರೂಪಿಸುತ್ತಿದ್ದಾರೆ.

ಆದರೆ ಈ ಬಗ್ಗೆ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದರೆ ಅವರು ಯಾವುದೇ ಗುಟ್ಟು ಬಿಟ್ಟುಕೊಡುವುದಿಲ್ಲ. ಅವರು ತಮ್ಮದೇ ಆದ ಶೈಲಿಯಲ್ಲಿ “ಇವೆಲ್ಲ ಬರೀ ಉಹಾಪೋಹ, ವರದಿಗಳೆಲ್ಲ ನಿಜ ಆಗಲು ಸಾಧ್ಯವಿಲ್ಲ, ನಾನು ಕಾಂಗ್ರೆಸ್‌ನಲ್ಲೇ ಇದ್ದೇನೆ, ಇರುತ್ತೇನೆ” ಎಂದು ಪಕ್ಕಾ ಮುತ್ಸದ್ಧಿಯಂತೆ ಮಾತನಾಡಿದ್ದಾರೆ.

ಏನೇ ಆದರೂ ಸಿದ್ದರಾಮಯ್ಯ ಅವರು ಇಡುವ ಮುಂದಿನ ಹೆಜ್ಜೆಗಳು ಕಾಂಗ್ರೆಸ್ ಮತ್ತು ಜೆಡಿಎಸ್‌ಗಳು ತಲೆ ಕೆರೆದುಕೊಳ್ಳುವಂತೆ ಮಾಡಿರುವುದು ಸುಳ್ಳೇನಲ್ಲ. ಸಿದ್ದು ಬಿಜೆಪಿಯೊಂದಿಗೆ ರಹಸ್ಯ ಸಂಬಂಧ ಇರಿಸಿಕೊಂಡಿರುವುದು ರಾಜ್ಯ ರಾಜಕೀಯದ ಮಾಸ್ಟರ್ ಮೈಂಡ್ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರ ತಲೆಯನ್ನೂ ಬಿಸಿ ಮಾಡದಿರದು. ಏಕೆಂದರೆ, ಸಿದ್ದು ರಕ್ಷಣಾತ್ಮಕ ಆಟಕ್ಕೆ ರಣತಂತ್ರ ರೂಪಿಸಿದ್ದು, ಬಿಜೆಪಿಯ ಬೆಂಬಲ ಅವರಿಗೆ ಸಿಕ್ಕಿರುವ ಸಾಧ್ಯತೆಗಳು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳನ್ನು ಮತ್ತಷ್ಟು ಚಿಂತೆಗೀಡು ಮಾಡಿದೆ.

ಬಿಜೆಪಿ ಎಷ್ಟೇ ತಂತ್ರ ರೂಪಿಸಿದರೂ, ದೇವೇಗೌಡರ ಉಪಟಳ ನಿಯಂತ್ರಿಸುವುದು, ತಡೆಯುವುದು ಕಷ್ಟದ ಮಾತೇ. ಆದರೆ ಮುಯ್ಯಿಗೆ ಮುಯ್ಯಿ ಎನ್ನುವ ಸಿದ್ದು ಅವರ ದೃಢ ವ್ಯಕ್ತಿತ್ವವನ್ನು ಈಗ ಬಿಜೆಪಿ ಹೊಸ ಅಸ್ತ್ರವಾಗಿ ಬಳಸಿಕೊಂಡು ಒಂದೇ ಕಲ್ಲಿಗೆ ಶತ್ರುಪಾಳಯದ ಹಕ್ಕಿಗಳನ್ನು ಹೊಡೆದುರುಳಿಸುವ ಯೋಚನೆಯಲ್ಲಿದೆ.

ಒಟ್ಟಿನಲ್ಲಿ ಬಿಜೆಪಿ ಮತ್ತು ಸಿದ್ದು ಬಣದ ಈ ತಂತ್ರಕ್ಕೆ ಮುಂಬರುವ ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ದೇವೇಗೌಡರು ಸುಸ್ತಾಗಿ ಬೆಸ್ತುಬಿದ್ದರೆ ಅಚ್ಚರಿಯೇನಲ್ಲ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕನ್ನಡಿಗ ಈ ಅರವಿಂದ ಅಡಿಗ, ಯಾವೂರಿನ ಹುಡುಗ?
ವಿಶ್ವ ಸೃಷ್ಟಿಯ ಮರ್ಮವರಿಯಲು ಬಿಗ್ ಬ್ಯಾಂಗ್ ಮಹಾಪ್ರಯೋಗ !
ಆಪರೇಶನ್ ಕಮಲ ಕಳಂಕದೊಂದಿಗೆ ಬಿಜೆಪಿ ಶತದಿನ
ಜರ್ದಾರಿ: ಜೈಲಿನಿಂದ ಅಧ್ಯಕ್ಷ ಪಟ್ಟಕ್ಕೆ ಸಾಗಿ ಬಂದ ದಾರಿ
ಬನ್ನಿ, ಬಿಹಾರ ಪ್ರವಾಹ ಪೀಡಿತರಿಗೆ ನೆರವಾಗೋಣ
ಮೋದಿಯ ಮತ್ತೊಂದು ಮುಖ ಕಂಡ ಗುಜರಾತ್