ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಪ್ರಚಲಿತ > ಚಿನ್ನವೇ ಸುರಕ್ಷಿತ ಹೂಡಿಕೆ: ಹಣಕಾಸು ತಜ್ಞರ ಹೇಳಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚಿನ್ನವೇ ಸುರಕ್ಷಿತ ಹೂಡಿಕೆ: ಹಣಕಾಸು ತಜ್ಞರ ಹೇಳಿಕೆ
PTI
ಜಾಗತಿಕವಾಗಿ ಹಣಕಾಸು ಬಿಕ್ಕಟ್ಟು ಪ್ರತಿಯೊಂದು ಜೀವನಾವಶ್ಯಕ ವಸ್ತುಗಳ ಮೇಲೆ ಪ್ರಭಾವ ಬೀರುತ್ತಿರುವುದರೊಂದಿಗೆ ಚಿನ್ನವೂ ಅದಕ್ಕೆ ಹೊರತಾಗಿಲ್ಲ. ಶೇರು ಮಾರುಕಟ್ಟೆಯಂತೂ ಪಾತಾಳಕ್ಕಿಳಿಯುತ್ತಿದೆ. ಈ ಬಿಕ್ಕಟ್ಟಿನ ಕಾಲದಲ್ಲಿ ನಮ್ಮಲ್ಲಿರುವ ಹಣವನ್ನು ಸುರಕ್ಷಿತವಾಗಿ ಎಲ್ಲಿಡುವುದು? ಎಂಬುದೇ ಜನಸಾಮಾನ್ಯರಿಗೆ ಚಿಂತೆ ಹುಟ್ಟಿಸಿದ ಸಂಗತಿ. ನವೆಂಬರ್ ತಿಂಗಳು ಬಂದಿತೆಂದರೆ ಮದುವೆಗಳ ಋತು ಆರಂಭವಾದಂತೆ. ಈ ಕಾಲದಲ್ಲಿ ಚಿನ್ನದ ಬೇಡಿಕೆಯೂ ಹೆಚ್ಚು ಹೆಚ್ಚು. ಹೀಗಾಗಿ ಬೇರೆಲ್ಲಾ ಹೂಡಿಕೆ ಆಸ್ತಿಗಳು ಬಿಕ್ಕಟ್ಟಿನಲ್ಲಿರುವುದರಿಂದ ಚಿನ್ನದ ಮೇಲೆ ಹಣ ಹೂಡುವುದೇ ಹೆಚ್ಚು ಸೂಕ್ತ ಎನ್ನುತ್ತಾರೆ ಹಣಕಾಸು ತಜ್ಞರು.

ಪ್ರತಿವರ್ಷ ಹಬ್ಬಗಳ ಋತು ಒಂದು ಹಂತಕ್ಕೆ ಬಂದ ಬಳಿಕ ಆರಂಭವಾಗುವ ವಿವಾಹ ಸೀಸನ್‌ನಲ್ಲಿ ಭಾರತದಲ್ಲಿ ಚಿನ್ನದ ಬೆಲೆ ಗಗನಕ್ಕೇರುವುದು ಇದ್ದೇ ಇರುತ್ತದೆ. "ಶೇರು ಮತ್ತು ಸ್ಥಿರಾಸ್ಥಿ ಮಾರುಕಟ್ಟೆಯೂ ಅಷ್ಟೇನೂ ಆಶಾದಾಯಕವಾಗಿಲ್ಲ. ಹೀಗಾಗಿ, ಶೀಘ್ರದಲ್ಲೇ ಬೆಲೆ ಏರಿಕೆ ಕಾಣಬಲ್ಲ ಚಿನ್ನದ ಮೇಲೆ ಹಣ ಹೂಡುವಂತೆ ನಾನು ನನ್ನೆಲ್ಲಾ ಗ್ರಾಹಕರಿಗೆ ಸಲಹೆ ನೀಡುತ್ತಿದ್ದೇನೆ" ಎಂದು ಕೋಲ್ಕತಾ ಮೂಲದ ಹೂಡಿಕೆ ಸಲಹೆಗಾರ ಬಿಜಯ್ ಮರ್ಮುರಿಯಾ ಹೇಳುತ್ತಾರೆ. ಅವರು ಸುಮೇಧ ಫಿಸ್ಕಲ್ ಸರ್ವಿಸಸ್ ಕಂಪನಿಯ ನಿರ್ದೇಶಕರಾಗಿದ್ದು, ನ್ಯಾಷನಲ್ ಎಕ್ಸ್‌ಚೇಂಜ್ಸ್ ಮೆಂಬರ್ಸ್ ಆಫ್ ಇಂಡಿಯಾ ಒಕ್ಕೂಟದ ಅಧ್ಯಕ್ಷರೂ ಹೌದು.

ಪೂರ್ವ ಭಾರತದ ಅತ್ಯಂತ ದೊಡ್ಡ ಚಿನ್ನಾಭರಣ ಸಮೂಹಸಂಸ್ಥೆ ಪಿ.ಸಿ.ಚಂದ್ರ&ಸನ್ಸ್‌ನ ಉಪ ಆಡಳಿತ ನಿರ್ದೇಶಕ ಪ್ರಶಾಂತ ಚಂದ್ರ ಕೂಡ ಇದೇ ಮಾತನ್ನು ಬೆಂಬಲಿಸುತ್ತಾರೆ. ಮದುವೆ ಸೀಸನ್ನಿನಲ್ಲಿ ಚಿನ್ನದ ಬೆಲೆಯು 10 ಗ್ರಾಮ್‌ಗೆ 15ರಿಂದ 16 ಸಾವಿರ ರೂಪಾಯಿಗಳಷ್ಟು ಮಟ್ಟಕ್ಕೇರಬಹುದು ಎಂದು ಅಭಿಪ್ರಾಯಪಡುತ್ತಾರವರು.

ಪ್ರಸಕ್ತ ಚಿನ್ನದ ಬೆಲೆ 10 ಗ್ರಾಂ.ಗೆ 12 ಸಾವಿರದಿಂದ 14 ಸಾವಿರದ ನಡುವೆ ಓಲಾಡುತ್ತಿದೆ. 24 ಕ್ಯಾರಟ್ ಚಿನ್ನದ ಬೆಲೆಯು ಗುರುವಾರ 12 ಸಾವಿರ ರೂಪಾಯಿ ಇತ್ತು. ಹೀಗಾಗಿ ಹೂಡಿಕೆದಾರರು ಚಿನ್ನದ ಮೂಲಕ ಏನಿಲ್ಲವೆಂದರೂ ತಿಂಗಳಿಗೆ ಕನಿಷ್ಠ ಶೇ.15ರಿಂದ ಶೇ.30ರಷ್ಟು ಲಾಭ ಪಡೆಯಬಹುದು ಎಂಬುದು ತಜ್ಞರ ಆತ್ಮವಿಶ್ವಾಸದ ನುಡಿ.

ಮದುವೆ ಸೀಸನ್ನಿನ ಆದಿ ಭಾಗದಲ್ಲಿ ಚಿನ್ನ ಖರೀದಿಸಿಡುವುದು ಉತ್ತಮ ಹೂಡಿಕೆಯ ಪರ್ಯಾಯ ಮಾರ್ಗ ಎಂಬುದನ್ನು ಜನ ಈಗ ಅರಿತುಕೊಂಡಿದ್ದಾರೆ ಎನ್ನುತ್ತಾರೆ ಪ್ರಶಾಂತ ಚಂದ್ರ.

ಆದರೆ ಇತ್ತೀಚಿನ ದಿನಗಳಲ್ಲಿ ಚಿನ್ನವು ಕೂಡ ಏರಿಕೆ-ಇಳಿಕೆ ಕಾಣುತ್ತಲೇ ಇದ್ದುದರಿಂದ, ಎಲ್ಲರೂ ಈ ಬಗ್ಗೆ ಆಶಾವಾದಿಗಳಾಗಿ ಉಳಿದಿಲ್ಲ. ಬೆಲೆ ಏರಿಳಿಕೆಯಂತೂ ದಿಢೀರ್ ಆಗುತ್ತಿರುತ್ತದೆ. ಇಂತಹ ಮಾರುಕಟ್ಟೆ ಪರಿಸ್ಥಿತಿಯಲ್ಲಿ ಇದೇ ರೀತಿ ಆಗುತ್ತದೆ ಎಂದು ಹೇಳಲಾಗುವುದಿಲ್ಲ. ಈ ರೀತಿಯ ಪರಿಸ್ಥಿತಿಯಲ್ಲಿ ಯಾವುದೇ ಸೂತ್ರವೂ ಕೆಲಸ ಮಾಡುವುದಿಲ್ಲ ಎನ್ನುತ್ತಾರೆ ಹರಳು ಮತ್ತು ಚಿನ್ನಾಭರಣಾ ರಫ್ತು ಉತ್ತೇಜನ ಮಂಡಳಿಯ ಕೋಲ್ಕತಾದ ಪ್ರಾದೇಶಿಕ ಅಧ್ಯಕ್ಷ ಪಂಕಜ್ ಪಾರೇಖ್.

ಪ್ರಶಾಂತ ಚಂದ್ರ ತಮ್ಮ ಆಶಾವಾದಕ್ಕೆ ಕಾರಣಗಳನ್ನೂ ಕೊಡುತ್ತಾರೆ. ಮದುವೆ ಸೀಸನ್ನಿನಲ್ಲಿ ಚಿನ್ನದ ಬೇಡಿಕೆ ಖಂಡಿತವಾಗಿಯೂ ಹೆಚ್ಚಿರುತ್ತದೆ, ಈ ಕಾರಣಕ್ಕೆ ಪೂರೈಕೆ ಕಡಿಮೆಯಾಗುತ್ತದೆ. ಇದರೊಂದಿಗೆ ಮಜೂರಿ ವೆಚ್ಚವೂ ಹೆಚ್ಚುತ್ತಿದೆ. "ದಕ್ಷಿಣ ಆಫ್ರಿಕಾದ ಕೆಲವು ಚಿನ್ನದ ಗಣಿಗಳು ಖಾಲಿಯಾಗತೊಡಗಿವೆ ಎಂಬುದರ ಬಗ್ಗೆ ಕೇಳಿದ್ದೇವೆ. ಇದರಿಂದಾಗಿ ಬೇಡಿಕೆ-ಪೂರೈಕೆ ನಡುವೆ ದೊಡ್ಡ ಕಂದಕ ಏರ್ಪಡುತ್ತದೆ ಮತ್ತು ಮಜೂರಿಯೂ ಹೆಚ್ಚಾಗುತ್ತಿದೆ ಎಂದಿದ್ದಾರೆ ಚಂದ್ರ.

ಆದರೆ, ಅಧಿಕ ದರದಿಂದಾಗಿ ಬೇಡಿಕೆ ಕಡಿಮೆಯಾಗಿ, ಕೊನೆಯಲ್ಲಿ ಚಿನ್ನದ ದರವೂ ಇಳಿಕೆಯಾಗಬಹುದೇ?

ಇಲ್ಲ ಎನ್ನುತ್ತಾರೆ ಚಂದ್ರ. ಯಾಕೆಂದರೆ, ಮದುವೆ ಸೀಸನ್ನಿನಲ್ಲಿ ಭಾರತೀಯರು ಚಿನ್ನದ ಬೆಲೆ ಬಗ್ಗೆ ತಲೆಕೆಡಿಸಿಕೊಳ್ಳುವುದು ಕಡಿಮೆ ಎನ್ನುತ್ತಾರವರು ವಿಶ್ವಾಸದಿಂದ. ಅತ್ಯಧಿಕ ಬೆಲೆ ಇದ್ದರೂ ಮದುವೆ ಆಭರಣ ಖರೀದಿ ಮೇಲೆ ಯಾವುದೇ ಪರಿಣಾಮವಾಗದು ಎಂಬ ದೃಢ ಅಭಿಪ್ರಾಯ ಅವರದು.

ಚಂದ್ರ ಅವರು ಪೂರ್ವ ಭಾರತದ ಅತಿ ದೊಡ್ಡ ಚಿನ್ನಾಭರಣ ಮಾರಾಟಗಾರ ಮಾತ್ರವೇ ಅಲ್ಲ, ಅಮೆರಿಕ, ಇಂಗ್ಲೆಂಡ್, ಟರ್ಕಿ, ದುಬೈ ಮತ್ತು ಸಿಂಗಾಪುರದಂತಹ ರಾಷ್ಟ್ರಗಳಿಗೆ ರಫ್ತುದಾರರೂ ಹೌದು.

ಭಾರತವು ಚಿನ್ನದ ಅತ್ಯಂತ ದೊಡ್ಡ ಮಾರುಕಟ್ಟೆಯೂ ಹೌದು. ಯಾಕೆಂದರೆ ಇಲ್ಲಿ ಜನರು ಆಭರಣಗಳನ್ನು ಧರಿಸುತ್ತಾರೆ. ಅದು ಅವರ ಸಂಸ್ಕೃತಿ ಮತ್ತು ಧಾರ್ಮಿಕತೆಯೊಂದಿಗೂ ಥಳಕು ಹಾಕಿಕೊಂಡಿದೆ. ಅತ್ಯಂತ ಶುಭ ದಿನಗಳಲ್ಲೆಲ್ಲಾ ಭಾರತೀಯರು ಚಿನ್ನ ಖರೀದಿಸುವ ಅಭ್ಯಾಸ/ಸಂಪ್ರದಾಯ ಇಟ್ಟುಕೊಂಡಿದ್ದಾರೆ. ಮದುವೆ, ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವ, ಉಪನಯನ, ಅನ್ನಪ್ರಾಶನ ಮಾತ್ರವಲ್ಲದೆ, ಅಕ್ಷಯ ತೃತೀಯಾ, ಧನ್ ತೇರಸ್ ಮುಂತಾದ ಹಬ್ಬ ಹರಿದಿನಗಳ ಹೆಸರಿನಲ್ಲಿ ಚಿನ್ನ ಖರೀದಿ ನಡೆದೇ ಇರುತ್ತದೆ.

ಆದರೆ ಪಾರೇಖ್ ಅವರ ಪ್ರಕಾರ, ಭಾರತದ ಯುವ ಜನಾಂಗ ಇಂಥ ಸಂದರ್ಭಗಳಲ್ಲೆಲ್ಲಾ ಚಿನ್ನ ಖರೀದಿಸುವ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಭಾರತದ ನಿವಾಸಿ ಮತ್ತು ಅನಿವಾಸಿ ಭಾರತೀಯರಲ್ಲಿ ಬಹುಪಾಲು ಮಂದಿ 40ರ ವಯಸ್ಸಿಗಿಂತ ಕೆಳಗಿನವರಾಗಿರುವುದರಿಂದ ಪಾರೇಖ್ ಹೇಳಿಕೆಯಲ್ಲಿಯೂ ಗುರುತಿಸಬೇಕಾದ ಅಂಶವಿದೆ. ತಮ್ಮ ವಾದವನ್ನು ಸಮರ್ಥಿಸುತ್ತಾ ಅವರು, "1940ರ ಅವಧಿಯಲ್ಲಿ ಭಾರತೀಯರು ತಮ್ಮ ಮಾಸಿಕ ಆದಾಯದ ಶೇ.32ರಷ್ಟು ಭಾಗವನ್ನು ಚಿನ್ನಕ್ಕಾಗಿ ವ್ಯಯಿಸುತ್ತಿದ್ದರು. ಆದರೆ ಇಂದು ಅವರು ಆದಾಯದ ಶೇ.2ರಷ್ಟು ಭಾಗವನ್ನೂ ಆಭರಣಕ್ಕಾಗಿ ಖರ್ಚು ಮಾಡುತ್ತಿಲ್ಲ" ಎಂದಿದ್ದಾರೆ ಅವರು.

ಆದರೆ, ಬ್ರಾಂಡ್ ಇರುವ ಚಿನ್ನಾಭರಣಕ್ಕಿನ್ನೂ ಭವಿಷ್ಯವಿದೆ ಎಂಬುದನ್ನು ಪಾರೇಖ್ ಮತ್ತು ಚಂದ್ರ ಇಬ್ಬರೂ ಒಪ್ಪುತ್ತಾರೆ. ಯಾಕೆಂದರೆ, ಯುವ ಜನಾಂಗದ ಬ್ರಾಂಡ್-ಪ್ರಜ್ಞೆ ಆ ಮಟ್ಟದಲ್ಲಿದೆ. ಅವರ ಖರೀದಿ ನಿರ್ಧಾರಗಳು ಜಾಹೀರಾತುಗಳನ್ನೇ ಅವಲಂಬಿಸಿವೆ ಎಂಬುದರಲ್ಲಿ ಎರಡು ಮಾತಿಲ್ಲ.

ಭವಿಷ್ಯದ ಬೆಲೆಯ ಏರು-ಪೇರಿನ ಊಹೆಯಲ್ಲೇ ಉಳಿಯುತ್ತಿರುವ ಹೂಡಿಕೆ ಅವಕಾಶಗಳು ಮತ್ತು ಜಾಗತಿಕ ಹಣಕಾಸು ಸುನಾಮಿಯು ಉಳಿದೆಲ್ಲಾ ಹೂಡಿಕೆಗಳ ಮಾರುಕಟ್ಟೆಯನ್ನು ತಲ್ಲಣಗೊಳಿಸುತ್ತಿರುವ ನಡುವೆ, ಚಿನ್ನದ ಮೇಲೆ ಹೂಡಿಕೆ ಮಾಡುವುದು ಎಷ್ಟರ ಮಟ್ಟಿಗೆ ಲಾಭದಾಯಕ ಎಂಬುದಕ್ಕೆ ಕಾಲವೇ ಉತ್ತರಿಸಲಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ವೆಬ್‌ದುನಿಯಾದಲ್ಲಿ ಉಪಸಂಪಾದಕರ ಹುದ್ದೆ ಖಾಲಿ ಇದೆ
ಸಿಡಿಯಲಿರುವ ಸಿದ್ದು: ರಾಜ್ಯ ರಾಜಕೀಯದಲ್ಲಿ ಸಂಚಲನ
ಕನ್ನಡಿಗ ಈ ಅರವಿಂದ ಅಡಿಗ, ಯಾವೂರಿನ ಹುಡುಗ?
ವಿಶ್ವ ಸೃಷ್ಟಿಯ ಮರ್ಮವರಿಯಲು ಬಿಗ್ ಬ್ಯಾಂಗ್ ಮಹಾಪ್ರಯೋಗ !
ಆಪರೇಶನ್ ಕಮಲ ಕಳಂಕದೊಂದಿಗೆ ಬಿಜೆಪಿ ಶತದಿನ
ಜರ್ದಾರಿ: ಜೈಲಿನಿಂದ ಅಧ್ಯಕ್ಷ ಪಟ್ಟಕ್ಕೆ ಸಾಗಿ ಬಂದ ದಾರಿ