ಅಮೆರಿಕ ಇತಿಹಾಸದಲ್ಲೇ ಅತಿ ದೀರ್ಘಾವಧಿಯ ಮತ್ತು ಅತೀ ಹೆಚ್ಚು ಹಣ ವ್ಯಯವಾದ ಅಧ್ಯಕ್ಷೀಯ ಚುನಾವಣೆಗಳಲ್ಲಿ ಬರಾಕ್ ಹುಸೇನ್ ಒಬಾಮಾ ಎಂಬ ಕರಿ ಜನಾಂಗೀಯ ನಾಯಕ ವಿಶ್ವದ ದೊಡ್ಡಣ್ಣ ಖ್ಯಾತಿಯ ಅಮೆರಿಕದ ಪರಮೋನ್ನತ ಸ್ಧಾನ ಪಡೆಯುವುದರೊಂದಿಗೆ, ಅಲ್ಲೀಗ ಒಬಾಮ ಯುಗಕ್ಕೆ ಕ್ಷಣಗಣನೆ ಆರಂಭವಾಗಿದೆ.ಸುಮಾರು 75 ನಿವಾಸಿಗಳುಳ್ಳ, ನ್ಯೂ ಹ್ಯಾಂಪ್‌ಶೈರ್‌ನ ಪುಟ್ಟ ಪಟ್ಟಣ ಡಿಕ್ಸ್‌ವಿಲೆ ನಾಚ್ ಎಂಬಲ್ಲಿ ಮಂಗಳವಾರ ಮೊದಲ ಫಲಿತಾಂಶ ಹೊರಬಿದ್ದಾಗ, ಅದು ದೇಶದ ಆಯ್ಕೆ ಯಾರು ಎಂಬುದರ ಸಂಕೇತವಾಗಿತ್ತು. ಇಲ್ಲಿ ಈ ಬಾರಿ ಡೆಮಾಕ್ರಟಿಕ್ ಅಭ್ಯರ್ಥಿ ಒಬಾಮಾ ಅವರಿಗೆ 21 ಮತಗಳು ಹಾಗೂ ಪ್ರತಿಸ್ಪರ್ಧಿ ರಿಪಬ್ಲಿಕನ್ ಅಭ್ಯರ್ಥಿ ಜಾನ್ ಮೆಕೇನ್ ಅವರಿಗೆ 6 ಮತಗಳು ಬಿದ್ದಿದ್ದವು. ಇಲ್ಲಿಂದಲೇ ಹೊಸದೊಂದು ಇತಿಹಾಸದ ಮುನ್ನುಡಿ ಬರೆದಂತಾಗಿತ್ತು. ಅಧ್ಯಕ್ಷ ಪಟ್ಟಕ್ಕಾಗಿನ ಚುನಾವಣಾ ಕಣದಲ್ಲಿ ಒಟ್ಟು 227 ಮಂದಿ ಇದ್ದರೂ ಇಡೀ ಹೋರಾಟವು ಒಬಾಮ ಮತ್ತು ಮೆಕೇನ್ ನಡುವೆ ಮಾತ್ರ ಕೇಂದ್ರೀಕೃತವಾಗಿ, ಅಮೆರಿಕದ ಮೊತ್ತ ಮೊದಲ ಕರಿಯ ಜನಾಂಗೀಯ ಅಧ್ಯಕ್ಷ ಎಂಬ ಇತಿಹಾಸ ಬರೆಯಲು ಒಬಾಮ ಸಜ್ಜಾಗಿದ್ದಾರೆ.ಬರಾಕ್ ಅವರ ತಂದೆ, ಒಬಾಮಾ ಸೀನಿಯರ್ ಅರ್ಥಶಾಸ್ತ್ರ ಓದಲೆಂದು ಕೀನ್ಯಾದಿಂದ ಅಮೆರಿಕದ ಹೊನೊಲುಲುವಿಗೆ ಆಗಮಿಸಿದ್ದರು. ಹವಾಯಿ ವಿಶ್ವವಿದ್ಯಾನಿಲಯದಲ್ಲಿ ತಂದೆ ಮತ್ತು ತಾಯಿ ಆನ್ ಡುನಾಮ್ ಅವರ ಭೇಟಿಯಾಗಿತ್ತು. ಅದೇ ವರ್ಷವೇ ಬರಾಕ್ ಜನನವೂ ಆಗಿತ್ತು (4 ಆಗಸ್ಟ್ 1961).ಬರಾಕ್ ಒಬಾಮ ಜೀವನದ ಪ್ರಮುಖ ಘಟ್ಟಗಳು:* 1963ರಲ್ಲಿ ಬರಾಕ್ ಒಬಾಮಾ ಅವರ ತಂದೆ ಮತ್ತು ತಾಯಿ ಬೇರ್ಪಟ್ಟರು.* 1967ರಲ್ಲಿ ಒಬಾಮಾ ತಾಯಿ ಎರಡನೇ ವಿವಾಹವಾದರು ಮತ್ತು ಅವರು ಇಂಡೋನೇಷ್ಯಾಕ್ಕೆ ತೆರಳಿದರು. ಇಲ್ಲಿ ಅವರು ನಾಲ್ಕು ವರ್ಷ ಇದ್ದರು.* 1971ರಲ್ಲಿ ಒಬಾಮಾ ಅವರು ಹವಾಯಿಗೆ ವಾಪಸ್ ಬಂದರು ಮತ್ತು ತಮ್ಮ ಅಜ್ಜ-ಅಜ್ಜಿಯರೊಂದಿಗೆ ವಾಸಿಸಲಾರಂಭಿಸಿದರು.* 1983ರಲ್ಲಿ ಕೊಲಂಬಿಯಾ ವಿಶ್ವವಿದ್ಯಾನಿಲಯದಿಂದ ರಾಜಕೀಯ ವಿಜ್ಞಾನದಲ್ಲಿ ಸ್ನಾತಕ ಪದವಿ ಪಡೆದ ಬಳಿಕ ಬಿಸಿನೆಸ್ ಇಂಟರ್‌ನ್ಯಾಷನಲ್ ಕಾರ್ಪೊರೇಶನ್ ಎಂಬ ಕಂಪನಿಯಲ್ಲಿ ಉದ್ಯೋಗ ಮಾಡಿದರು.* 1985ರಲ್ಲಿ ಅವರು ಶಿಕಾಗೋಗೆ ತೆರಳಿದರು ಮತ್ತು ಅಲ್ಲಿ ಸ್ವಯಂಸೇವಾ ಸಂಸ್ಥೆಯೊಂದರಲ್ಲಿ ನೌಕರಿ ಮಾಡಿದರು.* 1988ರಲ್ಲಿ 27ರ ಹರೆಯದಲ್ಲಿ ಅವರು ಹವಾಯಿಯ ಕಾನೂನು ಕಾಲೇಜಿಗೆ ಸೇರಿದರು.* 1991ರಲ್ಲಿ ಹವಾಯಿಯಲ್ಲಿ ಕಾನೂನು ಪದವಿ ಪೂರ್ಣಗೊಳಿಸಿದ ಅವರು, ಶಿಕಾಗೋಕ್ಕೆ ಮರಳಿದರು. ಅಲ್ಲಿ ವಕೀಲ ವೃತ್ತಿ ಆರಂಭಿಸಿದರಲ್ಲದೆ, ಶಿಕಾಗೋ ವಿಶ್ವವಿದ್ಯಾನಿಲಯದಲ್ಲಿ ಬೋಧನೆಯನ್ನೂ ಮಾಡಲಾರಂಭಿಸಿದರು.* 1992ರ ಅಕ್ಟೋಬರ್ 18ರಂದು ಮಿಶೆಲ್ ರಾಬಿನ್ಸನ್ ಜತೆ ಅವರ ವಿವಾಹವಾಯಿತು.* 1993ರಲ್ಲಿ ಮಿನಾರ್‌ನಲ್ಲಿ ಅಸೋಸಿಯೇಟ್ ಆದರು ಹಾಗೂ ಸಮುದಾಯ ಸಂಘಟಕರಾಗಿ ಕೆಲಸ ಮಾಡಿದರಲ್ಲದೆ, ಜನರ ಮತದಾನದ ಹಕ್ಕು ಮುಂತಾದ ವಿಷಯಗಳಲ್ಲಿ ಹೋರಾಡಿದರು. 1996ರಲ್ಲಿ ಈ ಉದ್ಯೋಗ ತೊರೆದರು.* 1996ರಲ್ಲಿ ಇಲಿನಾಯ್ಸ್ ಸ್ಟೇಟ್ ಸೆನೆಟ್ ಸದಸ್ಯರಾದರು.* 2000ದಲ್ಲಿ ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ಗೆ ನಾಮನಿರ್ದೇಶನಗೊಳ್ಳಲು ವಿಫಲ ಪ್ರಯತ್ನ ಮಾಡಿದರು.* 2004ರ ಮಾರ್ಚ್ ತಿಂಗಳಲ್ಲಿ ಡೆಮಾಕ್ರಟ್ ಪಕ್ಷದ ನಾಮನಿರ್ದೇಶನ ಪಡೆಯಲು ಸಫಲರಾದರು ಮತ್ತು ಶೇ.52 ಮತಗಳೊಂದಿಗೆ ಅಮೆರಿಕದ ಸೆನೆಟ್ ಪ್ರವೇಶಿಸಿದರು.* 2005ರಲ್ಲಿ ಟೈಮ್ ಮ್ಯಾಗಜಿನ್‌ನ ವಿಶ್ವದ ಅತ್ಯಂತ ಪ್ರಭಾವೀ ವ್ಯಕ್ತಿಗಳ ಸಾಲಿನಲ್ಲಿ ಹೆಸರು ಸೇರ್ಪಡೆ.* 2006ರಲ್ಲಿ ತಮ್ಮ ಶ್ರೇಷ್ಠ ಕೃತಿ 'ಡ್ರೀಮ್ಸ್ ಆಫ್ ಮೈ ಫಾದರ್'ಗೆ ಗ್ರಾಮಿ ಪ್ರಶಸ್ತಿ ವಿಜೇತರಾದರು.* 2007ರ ಫೆಬ್ರವರಿ 10ರಂದು ರಾಷ್ಟ್ರಪತಿ ಹುದ್ದೆಗೆ ತಾನೂ ಆಕಾಂಕ್ಷಿ ಎಂದು ಘೋಷಿಸಿದರು.* 2007ರ ಜುಲೈ 1ರಂದು ತಮ್ಮ ಚುನಾವಣಾ ಪ್ರಚಾರದಿಂದ ದೊರೆತ ಹಣ 58 ದಶಲಕ್ಷ ಡಾಲರ್ ಎಂದು ಘೋಷಿಸಿದರು. ಇದು ಪಕ್ಷದೊಳಗಿನ ಪ್ರತಿಸ್ಪರ್ಧಿಯಾಗಿದ್ದ ಹಿಲರಿ ಕ್ಲಿಂಟನ್‌ಗಿಂತಲೂ ಹೆಚ್ಚು. |
|