ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಪ್ರಚಲಿತ > ಬರಾಕ್ ಒಬಾಮ ಅವರ ಆರ್ಥಿಕ ಅಜೆಂಡಾ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬರಾಕ್ ಒಬಾಮ ಅವರ ಆರ್ಥಿಕ ಅಜೆಂಡಾ
ಜಿತೇಂದ್ರ ಮುಚ್ಚಾಲ್, ನ್ಯೂಯಾರ್ಕ್
PR
ಸೆಪ್ಟೆಂಬರ್ ತಿಂಗಳ ಆದಿ ಭಾಗದಲ್ಲಿ ಅಮೆರಿಕದ ಆರ್ಥಿಕ ಬಿಕ್ಕಟ್ಟು ಒಂದೊಂದೇ ಬೃಹತ್ ಬ್ಯಾಂಕುಗಳನ್ನು ಕಬಳಿಸಲಾರಂಭಿಸಿದಾಗ, ರಾಷ್ಟ್ರಪತಿ ಹುದ್ದೆಯ ಅಭ್ಯರ್ಥಿಗಳಲ್ಲೊಬ್ಬರಾಗಿದ್ದ ಜಾನ್ ಮೆಕೇನ್ ಮೊದಲ ಅಧ್ಯಕ್ಷೀಯ ಚರ್ಚೆಯನ್ನು ರದ್ದುಪಡಿಸುವುದಾಗಿ ಘೋಷಿಸಿದರಲ್ಲದೆ, ಚುನಾವಣಾ ಪ್ರಚಾರಾಂದೋಲನ ಸ್ಥಗಿತಗೊಳಿಸಿ, ವಾಷಿಂಗ್ಟನ್ ಡಿಸಿಗೆ ಮರಳಿದರು. ಆನಂತರ ಅವರ ಬಳಿ ಕೇಳಲು ಪ್ರಶ್ನೆಯಾಗಲೀ ಅಥವಾ ಮಂಡಿಸಲು ಹೊಸ ಯೋಜನೆಗಳಾಗಲಿ ಇದ್ದಿರಲಿಲ್ಲ. ಅದೇ ಬರಾಕ್ ಒಬಾಮರನ್ನು ಗಮನಿಸಿ. ಅವರ ಬಳಿಯೂ ಯಾವುದೇ ಸ್ಪಷ್ಟ ಚಿಂತನೆ ಇರಲಿಲ್ಲ. ಆದರೆ ಅವರು ಭಾಗವಹಿಸಿದ ಎಲ್ಲಾ ಚರ್ಚೆಗಳಲ್ಲಿ ತೋರಿದ ತಾಳ್ಮೆ ಮತ್ತು ಗಂಭೀರತೆಯು ಇಡೀ ಅಮೆರಿಕದ ಮೇಲೆ ಪ್ರಭಾವ ಬೀರಿತು. ಅಂದಿನಿಂದ ಬರಾಕ್ ಒಬಾಮ ಹಿಂತಿರುಗಿ ನೋಡಿದ್ದೇ ಇಲ್ಲ ಮತ್ತು ಆರ್ಥಿಕ ವಿಷಯಗಳಿಗೆ ಸಂಬಂಧಿಸಿದ ಅವರ ಪ್ರಚಾರಾಂದೋಲನದ ವೈಖರಿ ಎಲ್ಲರ ಗಮನ ಸೆಳೆದಿತ್ತು. ಮೆಕೇನ್‌ಗೆ ಅದುವೇ ಹಿನ್ನಡೆಯೂ ಆಯಿತು.

ಚುನಾವಣಾ ಪ್ರಚಾರ ಎಂದರೆ ಇದೇ. ಇಂಥದ್ದು ಇನ್ನಿರಲಾರದು. ದೇಶವನ್ನು ಕಾಡುತ್ತಿರುವ ಅತ್ಯಂತ ದೊಡ್ಡ ಸವಾಲು ಎಂದು ಶೇ.60ರಷ್ಟು ಮಂದಿ ಮತದಾರರೂ ಗುರುತಿಸಿದ್ದು "ಆರ್ಥಿಕ ಸವಾಲು ಮತ್ತು ಹಣಕಾಸು ಹಿಂಜರಿತ"ವನ್ನೇ. ಹೀಗಿರುವಾಗ ಒಬಾಮ ಅಮೆರಿಕದಿಂದ ಮಾತ್ರವೇ ಅಲ್ಲ, ಜಾಗತಿಕವಾಗಿಯೂ ಈ ವಿಷಯದಲ್ಲಿ ಬೆಂಬಲದ ನಿರೀಕ್ಷೆಯಲ್ಲಿದ್ದರು. ಅರ್ಥ ವ್ಯವಸ್ಥೆಯನ್ನು ಸಾಮಾನ್ಯ ಸ್ಥಿತಿಗೆ ಮರಳಿಸುವುದು ಮತ್ತು ವಿಶ್ವಾಸವೃದ್ಧಿಯ ಕ್ರಮಗಳೇ ಸೂಕ್ತ ಎಂಬುದು ಅವರ ಖಚಿತ ಅಭಿಪ್ರಾಯವಾಗಿತ್ತು.

  ತೆರಿಗೆ ವಿಂಗಡಣೆ ಮತ್ತು ಪ್ರೋತ್ಸಾಹದೊಂದಿಗೆ ಅಮೆರಿಕದಲ್ಲಿ ಉದ್ಯೋಗ ಸೃಷ್ಟಿಸುವ ಬಗ್ಗೆ ಹಾಗೂ ಉದ್ಯೋಗ ಹೊರಗುತ್ತಿಗೆಯನ್ನು ಕಠಿಣವಾದ ತೆರಿಗೆ ನೀತಿಗಳ ಮೂಲಕ ನಿಯಂತ್ರಿಸುವ ಕುರಿತು ಒಬಾಮ ತಮ್ಮ ಪ್ರಚಾರದುದ್ದಕ್ಕೂ ಹೇಳುತ್ತಲೇ ಬಂದಿದ್ದರು.      
ಆಯ್ಕೆಯಾದ ಕೆಲವೇ ದಿನಗಳಲ್ಲಿ ಒಬಾಮ ಮತ್ತಷ್ಟು ಪ್ರಭಾವ ತೋರಿಸಲು ಸಿದ್ಧರಾಗಿದ್ದಾರೆ. ನವೆಂಬರ್ ಮಧ್ಯಭಾಗದಲ್ಲಿ ಅಮೆರಿಕದ ನಿರ್ಗಮನ ಅಧ್ಯಕ್ಷ ಜಾರ್ಜ್ ಬುಷ್ ಆರ್ಥಿಕ ಸಮಾವೇಶವೊಂದನ್ನು ಕರೆದಿದ್ದು, ಅದರಲ್ಲಿ ಒಬಾಮರಿಗೆ ವಿಶೇಷ ಆಹ್ವಾನ ನೀಡಲಾಗಿದೆ. ಇದರಲ್ಲಿ 20 ರಾಷ್ಟ್ರಗಳು ಪಾಲ್ಗೊಳ್ಳುತ್ತಿದ್ದು ಒಬಾಮ ಬಹುಮುಖ್ಯ ಪಾತ್ರ ವಹಿಸುವ ನಿರೀಕ್ಷೆಯೂ ಇದೆ. ಆರ್ಥಿಕ ಕುಸಿತ ತಡೆ ಪ್ರಯತ್ನಗಳು ಪೂರ್ಣಪ್ರಮಾಣದಲ್ಲಿ ನಡೆಯುತ್ತಿರುವುದರೊಂದಿಗೆ ಒಬಾಮ ಮುಂದಿಡಬಹುದಾದ ಅತ್ಯಂತ ಪ್ರಮುಖವಾದ ಹೆಜ್ಜೆ ಎಂದರೆ ತಮ್ಮ ಆರ್ಥಿಕ ಸಲಹೆಗಾರರ ನೇಮಕ. ತಮ್ಮ ಪ್ರಚಾರಾಂದೋಲನದ ಆದ್ಯಂತವಾಗಿ ಒಬಾಮ ಅವರು ವಾರೆನ್ ಬಫೆ ಮುಂತಾದ ಹಣಕಾಸು ದೈತ್ಯ ಸಂಸ್ಥೆಗಳಿಂದ ಸಲಹೆ ಪಡೆಯುತ್ತಲೇ ಇದ್ದರು ಎಂಬುದು ಗಮನಿಸಬೇಕಾದ ವಿಚಾರ.

ಒಬಾಮ ಅನುಸರಿಸಲಿರುವ ನೀತಿ ನಿಯಮಾವಳಿಗಳ ಬಗ್ಗೆ ಹೇಳಬಹುದಾದರೆ, ಅವರೊಬ್ಬ ಕೆಳ ಮತ್ತು ಮಧ್ಯಮ ವರ್ಗದ ಜನರಿಗೆ ತೆರಿಗೆ ಹೊರೆ ಇಳಿಸುವ ವಿಷಯದಲ್ಲಿ ಬಲವಾಗಿ ನಂಬಿಕೆ ಇರಿಸಿರುವ ವ್ಯಕ್ತಿ. ಶ್ರೀಮಂತಿಕೆಯ ಉಚ್ಚ ಸ್ಥಾನದಲ್ಲಿರುವವರ ತೆರಿಗೆ ಪ್ರಮಾಣ ಹೆಚ್ಚಳಗೊಳಿಸುವ ಬಗ್ಗೆಯೂ ಒಬಾಮ ಮಾತನಾಡಿದ್ದಾರೆ. ಆದರೆ ಇದಕ್ಕೆ ಕಾಲವೇ ಉತ್ತರಿಸಬೇಕು. ಇರಾಕ್‌ನಿಂದ ಯೋಜಿತ ಆದರೆ ಖಚಿತವಾಗಿ ಸೇನಾಪಡೆ ಹಿಂತೆಗೆತವನ್ನು ಬಲವಾಗಿ ಪ್ರತಿಪಾದಿಸುತ್ತಿರುವ ಒಬಾಮ, ಇದರಿಂದ ಪ್ರತಿ ತಿಂಗಳೂ ಅಮೆರಿಕಕ್ಕೆ ಅತಿದೊಡ್ಡ ಹೊರೆ ಎಂದು ಪರಿಗಣಿಸಲ್ಪಟ್ಟಿರುವ ಸುಮಾರು 10 ಶತಕೋಟಿ ಡಾಲರ್ ಉಳಿಸುವ ಇರಾದೆ ಹೊಂದಿದ್ದಾರೆ. ಪ್ರಸಕ್ತ ಆರ್ಥಿಕ ಬಿಕ್ಕಟ್ಟಿನ ಮೂಲ ಬೇರು ಅಮೆರಿಕದ ವಸತಿ ಕ್ಷೇತ್ರಕ್ಕೆ ಸಂಬಂಧಿಸಿದ್ದಾಗಿರುವುದರಿಂದ, ಆರ್ಥಿಕ ಪುನಶ್ಚೇತನ ದೊರೆಯಬೇಕಿದ್ದರೆ ಗೃಹ ವಿಭಾಗದಲ್ಲಿ ವಿಶ್ವಾಸವೃದ್ಧಿ ಕ್ರಮ ಕೈಗೊಳ್ಳುವುದು ಅನಿವಾರ್ಯ ಎಂಬುದನ್ನು ಒಬಾಮ ಮನಗಂಡಿದ್ದಾರೆ. ಇದುವರೆಗಿನ ವಿದ್ಯಮಾನಗಳನ್ನೆಲ್ಲಾ ಗಮನಿಸಿದರೆ, ತಾವೇನೂ ಆರ್ಥಿಕ ವಿಷಯದಲ್ಲಿ ತಜ್ಞರಲ್ಲದಿದ್ದರೂ, ತನ್ನ ಸುತ್ತ ಮುತ್ತ ತಜ್ಞರನ್ನು ಇರಿಸಿಕೊಳ್ಳುವ ಸಾಮರ್ಥ್ಯವಿದೆ ಮತ್ತು ಇಂತಹ ವಿಷಯಗಳಲ್ಲಿ ಅವರ ಅಮೂಲ್ಯ ಸಲಹೆ ಪಡೆಯಲು ಸದಾ ಸಿದ್ಧ ಎಂಬುದನ್ನು ತೋರ್ಪಡಿಸಿಕೊಟ್ಟಿದ್ದಾರೆ.

ವಿದ್ಯುತ್ ಸ್ವಾವಲಂಬನೆಯ ಹೆಚ್ಚಿದ ಅವಶ್ಯಕತೆ ಮತ್ತು ಅಮೆರಿಕದಲ್ಲಿ ಪರ್ಯಾಯ ಇಂಧನದ ಮೂಲದ ಕ್ಷೇತ್ರದಲ್ಲಿ ಭಾರೀ ಪ್ರಮಾಣದ ಹೂಡಿಕೆಯ ಅಗತ್ಯವಿದೆ ಎಂಬುದನ್ನು ಅವರು ಅದೆಷ್ಟೋ ಬಾರಿ ಒತ್ತಿ ಹೇಳಿದ್ದಾರೆ. ಒಬಾಮ ಅಮೆರಿಕದ ಮೂಲಸೌಕರ್ಯ ಕ್ಷೇತ್ರದಲ್ಲಿ ಹೆಚ್ಚಿನ ಬಂಡವಾಳವನ್ನು ಆಕರ್ಷಿಸುವರು ಎಂಬುದು ನಿರೀಕ್ಷಿತವೇ. ಇವೆಲ್ಲಕ್ಕೂ ಸಮಯಾವಕಾಶ ಬೇಕಿದೆ ಮತ್ತು ರಾತ್ರಿ ಬೆಳಗಾಗುವುದರೊಳಗೆ ಇದು ನಡೆಯುವುದು ಸಾಧ್ಯವೂ ಇಲ್ಲ. ಆದರೆ ತಮ್ಮ ನೀತಿಗಳಿಗೆ ಡೆಮಾಕ್ರಟಿಕ್ ಸೆನೆಟ್‌ನ ಬಲವಾದ ಬೆಂಬಲವಿರುವುದರಿಂದ, ಅಮೆರಿಕವನ್ನು ಅದರ ಆರ್ಥಿಕ ಪ್ರಾಮುಖ್ಯತೆಯ ಘಟ್ಟದಲ್ಲಿ ಮರಳಿ ನಿಲ್ಲಿಸುವುದಕ್ಕೆ ಮತ್ತು ಪುನಶ್ಚೇತನ ಮಾಡಿ ಪ್ರಗತಿಯತ್ತ ಕೊಂಡೊಯ್ಯುವಲ್ಲಿ ಒಬಾಮ ಅವರಿಗೆ ಅತ್ಯಂತ ವಿಶಿಷ್ಟವಾದ ಅವಕಾಶವಿದೆ ಮತ್ತು ಐತಿಹಾಸಿಕ ಜನಾದೇಶವೂ ಇದೆ.

ಒಬಾಮ ಅವರ ಎಲ್ಲ ರೀತಿಯ ಪ್ರಚಾರಕ್ಕೂ ಭಾರತೀಯರು ಬಲವಾಗಿಯೇ ಬೆಂಬಲಿಸಿದ್ದಾರೆ ಮತ್ತು ಅಮೆರಿಕದಲ್ಲಿ ಮತ್ತು ಭಾರತ-ಅಮೆರಿಕ ಬಾಂಧವ್ಯದಲ್ಲಿ ಭಾರತೀಯರ ಕೊಡುಗೆಯನ್ನು ಆಗಾಗ್ಗೆ ಮುಕ್ತ ಕಂಠದಿಂದ ಶ್ಲಾಘಿಸುತ್ತಲೇ ಬಂದಿದ್ದಾರೆ. ಪೆಪ್ಸಿ ಕಂಪನಿಯ ಮುಖ್ಯಸ್ಥೆ ಇಂದಿರಾ ನೂಯಿ ಒಬಾಮ ಅವರ ಆಪ್ತ ವ್ಯವಹಾರ ಸಲಹೆಗಾರರಲ್ಲೊಬ್ಬರು. ಒಬಾಮ ಅವರು ಪರಮಾಣು ಒಪ್ಪಂದ ಮತ್ತು ಅದರಿಂದ ಉಭಯ ರಾಷ್ಟ್ರಗಳಿಗಾಗುವ ಲಾಭದ ಪ್ರಬಲ ಪ್ರತಿಪಾದಕರು ಎಂಬುದನ್ನೂ ಗಮನಿಸಬೇಕು.

ಹೌದು. ತೆರಿಗೆ ವಿಂಗಡಣೆ ಮತ್ತು ಪ್ರೋತ್ಸಾಹದೊಂದಿಗೆ ಅಮೆರಿಕದಲ್ಲಿ ಉದ್ಯೋಗ ಸೃಷ್ಟಿಸುವ ಬಗ್ಗೆ ಹಾಗೂ ಉದ್ಯೋಗ ಹೊರಗುತ್ತಿಗೆಯನ್ನು ಕಠಿಣವಾದ ತೆರಿಗೆ ನೀತಿಗಳ ಮೂಲಕ ನಿಯಂತ್ರಿಸುವ ಕುರಿತು ಒಬಾಮ ತಮ್ಮ ಪ್ರಚಾರದುದ್ದಕ್ಕೂ ಹೇಳುತ್ತಲೇ ಬಂದಿದ್ದರು. ಇವುಗಳಲ್ಲಿ ಯಾವುದು ಎಷ್ಟರ ಮಟ್ಟಿಗೆ ಅನುಷ್ಠಾನಯೋಗ್ಯ ಮತ್ತು ಭಾರತೀಯ ಹೊರಗುತ್ತಿಗೆ ಉದ್ಯಮದ ಮೇಲೆ ಇವುಗಳೆಷ್ಟು ಪರಿಣಾಮ ಬೀರಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಅಮೆರಿಕದಲ್ಲಿ ಹೊಸ ಆಡಳಿತ ಬರುತ್ತಿದೆ. ಭಾರತೀಯ ಮತ್ತು ಜಾಗತಿಕ ಸ್ಟಾಕ್ ಮಾರುಕಟ್ಟೆ ಆದಷ್ಟು ಬೇಗನೇ ಚೇತರಿಕೆ ಕಾಣಬೇಕಾಗಿದೆ. ರಿಪಬ್ಲಿಕನ್ ಆಡಳಿತಾವಧಿಯಲ್ಲಿದ್ದ ಬಲವಾಗಿಯೇ ಇದ್ದ ತೈಲ-ವಿದ್ಯುತ್ ಲಾಬಿ ದುರ್ಬಲವಾಗುವ ನಿರೀಕ್ಷೆಗಳೂ ಇವೆ ಮತ್ತು ಸದ್ಯೋಭವಿಷ್ಯದಲ್ಲಿ ನಾವು ಬ್ಯಾರೆಲ್ ತೈಲದ ಬೆಲೆ 150 ಡಾಲರಿಗೆ ಏರುವುದನ್ನು ಕಾಣದಂತಾಗಬೇಕಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಗಾಯನದ 'ಭೀಮಸೇನ' ಈಗ ಭಾರತದ ರತ್ನ
'ಶ್ವೇತ' ಭವನಕ್ಕೆ ಕರಿಯ 'ಹಿರಿಯಣ್ಣ' ಒಬಾಮ!
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ!
6 ತಿಂಗಳಲ್ಲಿ 64 ಸರಣಿ ಸ್ಫೋಟ: ಗೃಹ ಸಚಿವರೆಲ್ಲಿ?
ಹಬ್ಬದ ಸಂಭ್ರಮದ ವಂಚನೆ ತಡೆಗೆ 12 ಸೂತ್ರಗಳು
ಚಿನ್ನವೇ ಸುರಕ್ಷಿತ ಹೂಡಿಕೆ: ಹಣಕಾಸು ತಜ್ಞರ ಹೇಳಿಕೆ