ಚುನಾವಣೆಯ ಸದ್ದು ದೂರದಲ್ಲೆಲ್ಲೋ ಕೇಳತೊಡಗಿದಂತೆಯೇ ಅಗ್ರ ರಾಷ್ಟ್ರೀಯ ಪಕ್ಷವಾಗಿರುವ ಕಾಂಗ್ರೆಸ್‌ನೊಳಗಡೆಯಿಂದಲೂ ಪಟಾಕಿ ಸದ್ದುಗಳು ಕೇಳಿಬರಲಾರಂಭಿಸಿವೆ. ಮುಂದಿನ ಎರಡು ತಿಂಗಳಲ್ಲಿ ಆರು ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗಳಲ್ಲಿ ಕನಿಷ್ಠ ಐದರಲ್ಲಿ ಸಂಘ ಪರಿವಾರವನ್ನು ನೇರವಾಗಿಯೇ ಎದುರಿಸಲು ಸಜ್ಜಾಗಿರುವ ಕಾಂಗ್ರೆಸ್, ತನ್ನ ಮನೆಯೊಳಗಿಂದಲೇ ಅಪಸ್ವರ ಕೇಳಿಬಂದಿರುವುದರಿಂದ ಒಂದರೆಕ್ಷಣ ಆಘಾತಕ್ಕೀಡಾಗಿದ್ದಂತೂ ನಿಜ.ಎಐಸಿಸಿಯ ಹಿರಿಯ ಪ್ರಧಾನ ಕಾರ್ಯದರ್ಶಿಗಳಲ್ಲೊಬ್ಬರಾಗಿದ್ದ, ಪಕ್ಷಾಧ್ಯಕ್ಷೆ ಸೋನಿಯಾ ಗಾಂಧಿಯವರ ನಿಷ್ಠರೇ ಎಂದು ಪರಿಗಣಿಸಲ್ಪಟ್ಟಿದ್ದ ಮಾರ್ಗರೆಟ್ ಆಳ್ವಾರಿಂದಲೇ ಈ ಅಪಶ್ರುತಿಗೆ ಚಾಲನೆ ದೊರೆತಿದ್ದು ಯಾರೂ ನಿರೀಕ್ಷಿಸದಿದ್ದ ವಿದ್ಯಮಾನ. ಕರ್ನಾಟಕ ಚುನಾವಣೆಗಳಲ್ಲಿ ಕಾಂಗ್ರೆಸ್ ಟಿಕೆಟುಗಳನ್ನು ದುಡ್ಡಿಗೆ ಮಾರಾಟ ಮಾಡಲಾಗಿದೆ ಎಂದಿದ್ದ ಅವರು, ಹಿರಿಯ ಮುಖಂಡರ ಸಂಬಂಧಿಕರಿಗೆ ಟಿಕೆಟ್ ನೀಡುವಾಗ ತಾರತಮ್ಯ ನೀತಿ ಅನುಸರಿಸಲಾಗಿದೆ ಎಂದು ಆರೋಪಿಸಿದ್ದರು.ಮಧ್ಯಪ್ರದೇಶ, ಛತ್ತೀಸಗಢ ಮತ್ತು ರಾಜಸ್ಥಾನಗಳಲ್ಲಿ ಹಿರಿಯ ನೇತಾರರ ಬಂಧುಗಳಿಗೆ ಸಾರಾಸಗಟಾಗಿ ಟಿಕೆಟ್ ನೀಡಲಾಗುತ್ತಿದ್ದು, ತನ್ನ ಮಗನಿಗೆ ಟಿಕೆಟ್ ನೀಡಲು ಹಿಂದೆ ಮುಂದೆ ನೋಡಿದ್ದೇಕೆ ಎಂಬುದು ಆಳ್ವಾ ಪ್ರಶ್ನೆ. ಆಳ್ವಾ ಹೇಳಿದ್ದು ನಿಜವಿರಲೂಬಹುದು. ಆದರೆ, ಪಕ್ಷದೊಳಗೆ ಮ್ಯಾಗಿ ಏಳಿಗೆ ಸಹಿಸದವರಿಗೆ ಆಕೆಯನ್ನು ತುಳಿಯಲು ಇದೊಂದು ಉತ್ತಮ ಅವಕಾಶವೂ ಆಯಿತು ಎಂಬುದು ಕೂಡ ಅಷ್ಟೇ ಸತ್ಯ. ಕಾಂಗ್ರೆಸ್ಸನ್ನು ಆವಾಹಿಸಿಕೊಳ್ಳುತ್ತಿರುವ ರೋಗವೊಂದರ ಮುನ್ಸೂಚನೆಯನ್ನು ಮ್ಯಾಗಿ ಗುರುತಿಸಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ. ಪಕ್ಷದೊಳಗೆ ಭಟ್ಟಂಗಿ ಪಡೆಯೊಂದು ಹೇಗೆ ಕಾರ್ಯ ನಿರ್ವಹಿಸುತ್ತಿದೆ, ಅವರು ತೆಗೆದುಕೊಳ್ಳುವ ದಿಢೀರ್ ನಿರ್ಧಾರಗಳು ಹೇಗೆ ಪಕ್ಷಕ್ಕೆ ಹಾನಿಯುಂಟು ಮಾಡುತ್ತವೆ ಎಂಬುದನ್ನೂ ಅವರು ಎತ್ತಿತೋರಿಸಲು ಪ್ರಯತ್ನಿಸಿದ್ದರು. ಇದೀಗ ಭಟ್ಟಂಗಿ ಪಡೆಯು ಶರದ್ ಪವಾರ್, ರಾಜೇಶ್ ಪೈಲಟ್ ಮತ್ತು ಪಿ.ಎ.ಸಂಗ್ಮಾರನ್ನು ಪಕ್ಷದಿಂದ ಹೊರ ಹಾಕಿಸಿದಂತೆಯೇ, ಮಾರ್ಗರೆಟ್ ಆಳ್ವರು ಕೂಡ ಪಕ್ಷದಿಂದ ಹೊರ ಹೋಗುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ ಎಂಬುದು ಆಕೆಯ ಅಭಿಮಾನಿಗಳ ಆರೋಪ.ಪಕ್ಷದೊಳಗಿನ ವಿರೋಧಿಗಳು ಮ್ಯಾಗಿ ಮಾಡಿದ ಆರೋಪವನ್ನು ಅವರ ತಲೆಗೇ ಕಟ್ಟತೊಡಗಿದ್ದಾರೆ. ತನ್ನ ಮಗನಿಗೆ ಟಿಕೆಟ್ ದೊರಕಿಸಲು ಶ್ರಮಿಸಿದ್ದ ಆಕೆ, ಎಂಟು ರಾಜ್ಯಗಳ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿದ್ದುಕೊಂಡು, ಆತನ ಚುನಾವಣೆಗಾಗಿ ಭಾರಿ ಪ್ರಮಾಣದ ನಿಧಿ ಸಂಗ್ರಹಿಸಲು ಪ್ರಯತ್ನಿಸಿದ್ದರು ಎಂಬ ಆರೋಪವೂ ಅವುಗಳಲ್ಲೊಂದು. ಆಳ್ವಾ ಅವರು ಪಕ್ಷದಲ್ಲಿ ಪಡೆಯುತ್ತಿದ್ದ ಗೌರವ ಮತ್ತು ಆಕೆಯ ಹಿರಿತನವನ್ನು ಪರಿಗಣನೆಗೆ ತೆಗೆದುಕೊಂಡರೆ, ಈ ಆರೋಪಗಳಂತೂ ಅತ್ಯಂತ ಕೆಳ ಮಟ್ಟದ್ದು. ಮತ್ತೆ ಕೆಲವರು ಹೇಳುವ ಪ್ರಕಾರ, ಕರ್ನಾಟಕದ ಸ್ಕ್ರೀನಿಂಗ್ ಕಮಿಟಿ ನೇತೃತ್ವ ವಹಿಸಿದ್ದ ದಿಗ್ವಿಜಯ್ ಸಿಂಗ್ ಹಾಗೂ ರಾಜ್ಯದ ವ್ಯವಹಾರಗಳ ಉಸ್ತುವಾರಿ ವಹಿಸಿದ್ದ ಪೃಥ್ವಿರಾಜ್ ಚವಾಣ್ ಅವರ ವಿರುದ್ಧ ಕಿಡಿಕಾರಲು ಈ ಅವಕಾಶ ಬಳಸಿಕೊಂಡಿದ್ದಾರೆ ಎಂಬುದು ಮತ್ತೊಂದೆಡೆ ಕೇಳಿ ಬರುತ್ತಿರುವ ಆರೋಪ.ಹಾಗಿದ್ದರೆ ಆಳ್ವ ಮುಂದಿನ ನಡೆ ಏನು? ಕೆಲವರು ಅಂದಾಜಿಸುವ ಪ್ರಕಾರ, ಮಾರ್ಗರೆಟ್ ಕೂಡ ಹಿರಿಯ ಕಾಂಗ್ರೆಸ್ ನಾಯಕಿಯಾಗಿದ್ದ, ನಾಲ್ಕು ಬಾರಿ ಕಾಂಗ್ರೆಸ್ ರಾಜ್ಯಸಭಾ ಸಂಸದೆಯಾಗಿದ್ದ ನಜ್ಮಾ ಹೆಫ್ತುಲ್ಲಾ ಹಾದಿ ಹಿಡಿಯಲಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಚುನಾವಣೆಗೆ ಟಿಕೆಟ್ ನೀಡದಿರುವ ಕಾಂಗ್ರೆಸ್ ನಿರ್ಧಾರದಿಂದ ಬೇಸತ್ತಿದ್ದ ನಜ್ಮಾ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿಕೊಂಡಿದ್ದರು. ಬೇರೆ ರಾಜ್ಯಗಳಿಗೆ ಚುನಾವಣೆ ಸಮೀಪಿಸುತ್ತಿರುವಾಗ, ಆಗಿ ಹೋದ ಕರ್ನಾಟಕದ ವಿಷಯವನ್ನು ಎಳೆದು ತಂದಿದ್ದೇಕೆ ಎಂಬ ಪ್ರಶ್ನೆ ಇಲ್ಲಿ ಕಾಡುತ್ತದೆ. ಇದು ಅಶಿಸ್ತು, ಪಕ್ಷ ವಿರೋಧಿ ನಡವಳಿಕೆ ಎಂದು ಪರಿಗಣಿತವಾಗಿದ್ದರೂ, ಆಕೆ ಇದುವರೆಗೂ ನಿರ್ಲಕ್ಷಿಸಲ್ಪಟ್ಟಿದ್ದ ಪಕ್ಷದ ಕೆಲವೊಂದು ಹುಳುಕುಗಳನ್ನು ಹೊರಗೆಳೆದು ಹಾಕಿದ್ದಾರೆ. ಈ ಹಂತದಲ್ಲಿ ಹಣದ ವ್ಯವಹಾರ ನಡೆದಿತ್ತು ಎಂದು ಹೇಳುವ ಮೂಲಕ, ಮುಂಬರುವ ಚುನಾವಣೆಗಳಲ್ಲಿ ಈ ರೀತಿಯಾಗದಂತೆ ಪಕ್ಷದ ವರಿಷ್ಠರನ್ನು ಎಚ್ಚರಿಸಿ, ಅವರ ಗಮನ ಸೆಳೆಯುವುದು ಕೂಡ ಅವರ ಉದ್ದೇಶವಾಗಿದ್ದಿರಬಹುದು. ಆದರೆ ಅದಕ್ಕೆ ಅದರದ್ದೇ ಆದ ವೇದಿಕೆಯಿದೆ, ಆಕೆ ಸ್ವತಃ ಪಕ್ಷಾಧ್ಯಕ್ಷೆಯನ್ನು ಭೇಟಿ ಮಾಡಿ ಈ ವಿಷಯವನ್ನು ಗಮನಕ್ಕೆ ತರಬಹುದಿತ್ತು ಎಂಬುದು ಪಕ್ಷದ ಸಂವಿಧಾನ ಅರಿತಿರುವವರ ಅಭಿಪ್ರಾಯ.ಮಾರ್ಗರೆಟ್ ಬಡಬಡಿಕೆಯಿಂದ ಸಾಬೀತಾದ ಇನ್ನೊಂದು ಬಹುಮುಖ್ಯ ಅಂಶವೆಂದರೆ, ಕಾಂಗ್ರೆಸ್ ನಾಯಕತ್ವಕ್ಕೆ ಪಕ್ಷದ ಮೇಲಿನ ಹಿಡಿತ ಸಡಿಲವಾಗುತ್ತಿದೆಯೇ ಎಂಬ ಶಂಕೆ. ಸಾಮಾನ್ಯವಾಗಿ ಹೇಳುವುದಾದಲ್ಲಿ, ಆಳ್ವ ಅವರ ಅಶಿಸ್ತಿಗಾಗಿ ಅವರನ್ನು ಕಳೆದ ಗುರುವಾರವೇ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಅಮಾನತು ಮಾಡಬೇಕಾಗಿತ್ತು. ಹಾಗೆ ಮಾಡದೆ, ಪಕ್ಷದ ನಾಯಕತ್ವವು ಆಕೆಯ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿದೆಯೇ? ಆಳ್ವಾ ಹೇಳಿಕೆಗಳು ನಿಷ್ಠಾವಂತ ಕಾಂಗ್ರೆಸಿಗರು ಪಕ್ಷದೊಳಗೆ ಉಸಿರುಕಟ್ಟಿಸುವ ಅನುಭವ ಹೊಂದುತ್ತಿದ್ದಾರೆ ಮತ್ತು ಹೊರಗಿನಿಂದ ಬಂದವರು ಮೆರೆಯುತ್ತಿದ್ದಾರೆ ಎಂಬುದನ್ನು ಸೂಚಿಸುವ ಸಂಕೇತವೂ ಆಗಿರಬಹುದೇ? ಎಂಬ ಪ್ರಶ್ನೆ ಕೂಡ ಕಾಡುವುದು ಸಹಜ.ಒಟ್ಟಿನಲ್ಲಿ ಪಕ್ಷದೊಳಗೆ ಅಧಿಕಾರಕ್ಕಾಗಿ ಮೇಲಾಟವೊಂದು ನಿಧಾನವಾಗಿ ಆರಂಭವಾಗಿದೆ ಎಂಬುದರ ಮುನ್ಸೂಚನೆ ದೊರೆತಿದೆ. ಪಕ್ಷದೊಳಗೆ ಎಷ್ಟೇ ಗುಂಪುಗಳಿದ್ದರೂ, ಅವುಗಳು ಸೋನಿಯಾ ಗಾಂಧಿಗೆ ಸಂಪೂರ್ಣವಾಗಿ ವಿಧೇಯವಾಗಿರುತ್ತವೆ ಎಂಬುದು ನಿಜವಾಗಿದ್ದರೂ, ಪರಸ್ಪರ ಕೆಸರೆರಚಾಟಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿವೆ ಎಂಬುದು ಆಳ್ವಾ ಪ್ರಕರಣದಿಂದ ಮೂಡಿಬಂದಿರುವ ಸಂದೇಹ.ಮುಂಬರುವ ರಾಜ್ಯಗಳ ಚುನಾವಣೆಗಳಲ್ಲಿ ಪಕ್ಷಕ್ಕೇನಾದರೂ ಹೀನಾಯ ಹಿನ್ನಡೆಯಾದರೆ (ಕರ್ನಾಟಕದಲ್ಲಿ ಆಗಿರುವಂತೆ), ಆಳ್ವಾರಂತಹ ಧ್ವನಿಗಳು ಮತ್ತಷ್ಟು ಜೋರಾಗಿಯೇ ಕೇಳಿಸಬಹುದು. ಗೆಲ್ಲಬಹುದಾದ ಚುನಾವಣೆಗಳಲ್ಲಿ ಪಕ್ಷವು ಸೋಲನುಭವಿಸುತ್ತಿದೆ ಮತ್ತು ಈ ತಪ್ಪಿಸಬಹುದಾದಂತಹ ಹೀನಾಯ ಪರಿಸ್ಥಿತಿಗೆ ಯಾರನ್ನು ಕೂಡ ಹೊಣೆಗಾರರನ್ನಾಗಿ ಮಾಡಲಾರದಂತಹ ಪರಿಸ್ಥಿತಿಯು ಪಕ್ಷದೊಳಗೆ ಹತಾಶೆ ಹೆಚ್ಚಲು ಕಾರಣವಾಗುತ್ತಿದೆ.ಇದರೊಂದಿಗೆ, ಪಕ್ಷವು ಚುನಾವಣೆ ರಣಾಂಗಣದ ಬಾಗಿಲಲ್ಲಿ ನಿಂತಿರುವಾಗ ತನ್ನೊಳಗಿನ ಅಸಮಾಧಾನವನ್ನು ಶಮನಗೊಳಿಸುವ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ಕಾಲ ಮೀರುವ ಮುನ್ನ ಸೋನಿಯಾ ಗಾಂಧಿ ತಮ್ಮ ನಾಯಕತ್ವ ಗುಣವನ್ನು ತೋರ್ಪಡಿಸಬೇಕಾಗಿದೆ. |