ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಪ್ರಚಲಿತ > ಉಗ್ರ ನಿಗ್ರಹ: ಹೊಸ ಕಾನೂನಿನಲ್ಲಿ ಏನೇನಿದೆ?
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಉಗ್ರ ನಿಗ್ರಹ: ಹೊಸ ಕಾನೂನಿನಲ್ಲಿ ಏನೇನಿದೆ?
ಭಯೋತ್ಪಾದನೆಗೆ ಸಂಬಂಧಿಸಿದಂತೆ ಸುದೀರ್ಘ ಕಾಲ ಕಾಲಹರಣ ಮಾಡಿದ ಯುಪಿಎ ಸರಕಾರ, ಮುಂಬಯಿ ಘಟನಾವಳಿಯಿಂದ ಎಚ್ಚೆತ್ತುಕೊಂಡು ರಾಷ್ಟ್ರೀಯ ತನಿಖಾ ಸಂಸ್ಥೆ ಎನ್ಐಎ ರಚಿಸಲು ಕೊನೆಗೂ ನಿರ್ಧರಿಸಿದೆ. ಈ ಕುರಿತು ಸಂಸತ್ತಿನಲ್ಲಿ ಮಂಗಳವಾರ ಮಂಡಿಸಲಾದ ವಿಧೇಯಕದಲ್ಲಿ ಇರುವ ಪ್ರಮುಖ 24 ಅಂಶಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

1. ಎನ್ಐಎ ರಚನೆ ಕುರಿತ ಈ ವಿಧೇಯಕವು ಇಡೀ ಭಾರತಕ್ಕೆ, ಭಾರತದ ಹೊರಗಿರುವ ಭಾರತೀಯರು ಮತ್ತು ಭಾರತದಲ್ಲಿ ನೋಂದಾವಣೆಗೊಂಡಿರುವ ಮಳಿಗೆಗಳು ಹಾಗೂ ವಿಮಾನದಲ್ಲಿರುವವರಿಗೆ ಅನ್ವಯವಾಗುತ್ತದೆ.

2. ಯಾವುದೇ ಅಪರಾಧ ಕೃತ್ಯಗಳಿಗೆ ಸಂಬಂಧಿಸಿ ಪೊಲೀಸ್ ಅಧಿಕಾರಿಗಳಿಗೆ ಇರುವ ಎಲ್ಲ ಅಧಿಕಾರ, ಹಕ್ಕು, ಬಾಧ್ಯತೆಗಳು ಎನ್ಐಎ ಅಧಿಕಾರಿಗಳಿಗೂ ಇರುತ್ತವೆ.

3. ಅದರ ವ್ಯಾಪ್ತಿಗೆ ಬರುವ ಅಪರಾಧ ಕೃತ್ಯಗಳ ವರದಿ ಬಂದ ತಕ್ಷಣ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿಯು ತಕ್ಷಣವೇ ಅದನ್ನು ರಾಜ್ಯ ಸರಕಾರಕ್ಕೆ ಒಪ್ಪಿಸಬೇಕು. ರಾಜ್ಯ ಸರಕಾರವು ಅದನ್ನು ಕೇಂದ್ರಕ್ಕೆ ಕಳುಹಿಸಬೇಕು.

4. ಅಪರಾಧವು ಭಯೋತ್ಪಾದನೆಗೆ ಸಂಬಂಧಿಸಿದ್ದು ಎಂದು ಕೇಂದ್ರಕ್ಕೆ ಮನದಟ್ಟಾದರೆ, ಅದು ಅದರ ತನಿಖೆಗಾಗಿ ಎನ್ಐಎಗೆ ಒಪ್ಪಿಸುತ್ತದೆ.

5. ಕೇಂದ್ರದ ಮುಂಚಿತ ಒಪ್ಪಿಗೆಯೊಂದಿಗೆ ಅಪರಾಧ ಕೃತ್ಯಗಳ ತನಿಖೆ ಮತ್ತು ವಿಚಾರಣೆಯನ್ನು ರಾಜ್ಯ ಸರಕಾರಗಳಿಗೆ ವರ್ಗಾಯಿಸುವ ಅವಕಾಶ.

6. ಭಯೋತ್ಪಾದನೆಗೆ ಸಂಬಂಧಿಸಿದ ಅಪರಾಧಕೃತ್ಯಗಳ ಬಗ್ಗೆ ಎನ್ಐಎ ತನಿಖೆ ಮಾಡಬಹುದು.

7. ಭಯೋತ್ಪಾದನೆ-ಸಂಬಂಧಿತ ಅಪರಾಧ ಕೃತ್ಯಗಳ ತನಿಖೆಗೆ ರಾಜ್ಯ ಸರಕಾರಗಳು ಸಂಪೂರ್ಣ ಸಹಕಾರ ನೀಡಬೇಕು.

8. ತನಿಖೆಗೆ ಸಂಬಂಧಿಸಿ ಒದಗಿಸಲಾಗಿರುವ ಅವಕಾಶಗಳು, ಭಯೋತ್ಪಾದನೆ-ಸಂಬಂಧಿತ ಅಪರಾಧಕೃತ್ಯಗಳು ಅಥವಾ ಇತರ ಯಾವುದೇ ಅಪರಾಧಗಳ ತನಿಖೆ ನಡೆಸಿ ಶಿಕ್ಷಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರಗಳಿಗಿರುವ ಅಧಿಕಾರಕ್ಕೆ ಯಾವುದೇ ಸಂದರ್ಭದಲ್ಲಿಯೂ ಅಡ್ಡಿಯಾಗಬಾರದು.

9. ಭಯೋತ್ಪಾದನೆ ಸಂಬಂಧಿತ ಅಪರಾಧ ಕೃತ್ಯಗಳ ವಿಚಾರಣೆಗೆ ಕೇಂದ್ರವು ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಬೇಕು.

10. ವಿಶೇಷ ನ್ಯಾಯಾಲಯಗಳು ತನ್ನ ಯಾವುದೇ ಕಲಾಪಕ್ಕಾಗಿ ಯಾವುದೇ ಸ್ಥಳದಲ್ಲಿ ಕಾರ್ಯಾಚರಿಸಬಹುದಾಗಿದೆ.

11. ತ್ವರಿತ ಮತ್ತು ನಿಷ್ಪಕ್ಷಪಾತ ವಿಚಾರಣೆಗಾಗಿ, ಯಾವುದೇ ಬಾಕಿ ಉಳಿದಿರುವ ಕೇಸುಗಳನ್ನು ಸುಪ್ರೀಂಕೋರ್ಟು ಒಂದು ವಿಶೇಷ ನ್ಯಾಯಾಲಯದಿಂದ ಮತ್ತೊಂದು ವಿಶೇಷ ನ್ಯಾಯಾಲಯಕ್ಕೆ, ಅದೇ ರಾಜ್ಯದಲ್ಲಿ ಅಥವಾ ಹೊರಗೆ ವರ್ಗಾಯಿಸಬಹುದಾಗಿದೆ. ಮತ್ತು ಹೈಕೋರ್ಟುಗಳು ಕೂಡ ಇಂಥ ಯಾವುದೇ ಕೇಸುಗಳನ್ನು ರಾಜ್ಯದೊಳಗೆ ಯಾವುದೇ ವಿಶೇಷ ನ್ಯಾಯಾಲಯಗಳಿಗೆ ವರ್ಗಾಯಿಸಬಹುದಾಗಿದೆ.

12. ಮೂರು ವರ್ಷಕ್ಕಿಂತ ಕಡಿಮೆ ಅವಧಿಯ ಶಿಕ್ಷೆಯ ಸಾಧ್ಯತೆಗಳಿರುವ ಅಪರಾಧ ಪ್ರಕರಣಗಳನ್ನು ಒಟ್ಟಾಗಿ ವಿಚಾರಣೆ ನಡೆಸಬಹುದಾಗಿದೆ.

13. ಕಾಯಿದೆಯಡಿ ಯಾವುದೇ ಪ್ರಕರಣಗಳ ವಿಚಾರಣೆಗೆ ಸಿಆರ್‌ಪಿಸಿಯಲ್ಲಿ ಸೆಶನ್ಸ್ ನ್ಯಾಯಾಲಯಗಳಿಗಿರುವ ಎಲ್ಲ ಅಧಿಕಾರಗಳು ವಿಶೇಷ ನ್ಯಾಯಾಲಯಕ್ಕೂ ಇರುತ್ತದೆ.

14. ವಿಶೇಷ ನ್ಯಾಯಾಲಯಕ್ಕೆ ಅಗತ್ಯ ಎಂದು ಕಂಡುಬಂದರೆ, ಕ್ಯಾಮರಾ ಎದುರು ವಿಚಾರಣೆಗಳನ್ನು ನಡೆಸಬೇಕಾಗಬಹುದು.

15. ಎಲ್ಲಾ ಕಚೇರಿ ದಿನಗಳಂದು ಪ್ರತಿ ದಿನವೂ ಮತ್ತು ಇತರ ಅಪರಾಧ ಪ್ರಕರಣಗಳ ವಿಚಾರಣೆಗಿಂತ ಆದ್ಯತೆಯೊಂದಿಗೆ ಈ ಪ್ರಕರಣಗಳ ವಿಚಾರಣೆ ನಡೆಸಬೇಕು.

16. ಒಂದು ಅಥವಾ ಹೆಚ್ಚು ವಿಶೇಷ ನ್ಯಾಯಾಲಯಗಳ ಸ್ಥಾಪನೆ ಅಧಿಕಾರವು ರಾಜ್ಯ ಸರಕಾರಗಳಿಗಿರುತ್ತದೆ.

17. 90 ದಿನಗಳ ಗಡುವು ಮುಗಿದ ಬಳಿಕ ಯಾವುದೇ ಮೇಲ್ಮನವಿಗಳನ್ನು ಮಾನ್ಯ ಮಾಡುವಂತಿಲ್ಲ.

ಕಾನೂನುಬಾಹಿರ ಚಟುವಟಿಕೆ ತಡೆ ತಿದ್ದುಪಡಿ ವಿಧೇಯಕ -2008ರ ಮುಖ್ಯಾಂಶಗಳು:

18. ಬಾಂಬುಗಳು, ಡೈನಮೈಟ್, ವಿಷ ಅಥವಾ ವಿಷಾನಿಲಗಳು, ಜೈವಿಕ ವಿಕಿರಣಶೀಲ ಪರಮಾಣುಸಂಬಂಧಿತ ವಸ್ತುಗಳ ಬಳಕೆಯು ಭಯೋತ್ಪಾದನೆ ಕೃತ್ಯವಾಗಿರುತ್ತದೆ.

19. ಭಯೋತ್ಪಾದನಾ ಕೃತ್ಯಕ್ಕೆ ಬೆಂಬಲ ನೀಡುವುದು, ಪ್ರೋತ್ಸಾಹಿಸುವುದು ಅಥವಾ ಅದರಲ್ಲಿ ತೊಡಗುವುದು ಸಾಬೀತಾದಲ್ಲಿ 10 ವರ್ಷದವರೆಗೂ ಜೈಲು ಶಿಕ್ಷೆ ವಿಧಿಸಬಹುದಾಗಿದೆ.

20. ಭಯೋತ್ಪಾದನಾ ಚಟುವಟಿಕೆಗಳಿಗೆ ನಿಧಿ ಒದಗಿಸುವುದು, ತರಬೇತಿ ಶಿಬಿರಗಳನ್ನು ಸಂಘಟಿಸುವುದು ಮತ್ತು ಭಯೋತ್ಪಾದನಾ ಕೃತ್ಯ ನಡೆಸಲು ಜನರ ನೇಮಕಾತಿ - ಇವುಗಳಿಗೆಲ್ಲಾ ಕನಿಷ್ಠ ಐದು ವರ್ಷಗಳ ಜೈಲು ಶಿಕ್ಷೆ.

21. ತನಿಖೆ ಪೂರ್ಣಗೊಳ್ಳದಿದ್ದರೆ, ಆರೋಪಿಯನ್ನು 180 ದಿನಗಳಷ್ಟು ಕಾಲ ಕಸ್ಟಡಿಯಲ್ಲಿ ಇರಿಸಿಕೊಳ್ಳಬಹುದು.

22. ಆರೋಪಿಯು ಭಾರತೀಯ ಪೌರನಲ್ಲದಿದ್ದರೆ ಮತ್ತು ಆತ ಅನಧಿಕೃತವಾಗಿ ದೇಶದೊಳಗೆ ಪ್ರವೇಶಿಸಿದ್ದರೆ ಆತನಿಗೆ ಜಾಮೀನು ನೀಡಲಾಗುವುದಿಲ್ಲ.

23. ಕಸ್ಟಡಿಯಲ್ಲಿದ್ದರೆ, ಯಾವುದೇ ಆರೋಪಿಯನ್ನೂ ಜಾಮೀನಿನಲ್ಲಿ ಅಥವಾ ಸ್ವಂತ ಬಾಂಡ್ ಮೂಲಕ ಬಿಡುಗಡೆಗೆ ಅವಕಾಶವಿಲ್ಲ.

24. ವ್ಯತಿರಿಕ್ತ ನಿದರ್ಶನ ದೊರೆಯುವವರೆಗೂ, ಆರೋಪಿಯು ಅಪರಾಧ ಎಸಗಿದ್ದಾನೆ ಎಂದು ತೀರ್ಮಾನಿಸುವ ಹಕ್ಕು ನ್ಯಾಯಾಲಯಕ್ಕೆ ಇರುತ್ತದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಇದೋ ಬಂದಿದೆ 3-ಜಿ ಸೌಲಭ್ಯ: ಏನಿದು?
ಲಷ್ಕರ್ ಸಂಘಟನೆ ಹುಟ್ಟುಹಾಕಿದ್ದು ಯಾರು?
2008ರ ಶ್ರೇಷ್ಠರು ಯಾರು? ವೆಬ್‌ದುನಿಯಾ ಸಮೀಕ್ಷೆ
ಧಿಕ್ಕಾರವಿರಲಿ ಓಟ್ ಬ್ಯಾಂಕ್ ರಾಜಕಾರಣಿಗಳಿಗೆ!
'ಧರ್ಮ ರಾಜಕೀಯ' ಬೇಡ, ರಾಜಕೀಯ ಧರ್ಮ ಇರಲಿ
ಕಾಂಗ್ರೆಸ್ ರಣಕಹಳೆಯಲ್ಲಿ ಅಪಸ್ವರ