ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಪ್ರಚಲಿತ > ಕಲಾಪ: ನಾಯಕರು ಒಳಗೆ, ನೈತಿಕತೆ ಹೊರಗೆ!
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಲಾಪ: ನಾಯಕರು ಒಳಗೆ, ನೈತಿಕತೆ ಹೊರಗೆ!
ಅವಿನಾಶ್ ಬಿ.
PTI
ಅಲ್ಲಿ ಚಾರಿತ್ರ್ಯ, ಸನ್ನಡತೆ, ನೈತಿಕತೆ ಮುಂತಾದವುಗಳ ಸುಳಿವಿರಲಿಲ್ಲ. ನಮ್ಮ ನಾಯಕರು ಒಳಗೆ ಬಂದ ತಕ್ಷಣ ಅವುಗಳೆಲ್ಲಾ ಹೊರಗೆ! ವಿಷಯ ಜ್ಞಾನ, ಪೂರ್ವಸಿದ್ಧತೆ ಎಲ್ಲವೂ ಅದೆಲ್ಲೋ ಕೇಳಿದ ಶಬ್ದಗಳಂತಿವೆಯಲ್ಲ ಎಂಬಂತಾಗಿತ್ತು. ಬೆಳಗಾವಿಯ ಅಧಿವೇಶನವನ್ನೊಮ್ಮೆ ಟಿವಿಯಲ್ಲಿ ನೇರಪ್ರಸಾರದಲ್ಲಿ ನೋಡಿದ ರಾಜ್ಯದ ಪ್ರಜೆಗಳು ಇಂಥದ್ದೊಂದು ಆಲೋಚನೆಯ ಸುಳಿಯಲ್ಲಿ ಸಿಲುಕದಿದ್ದರೆ, ಛೀ... ಥೂ... ಅಂದುಕೊಳ್ಳದಿದ್ದರೆ ಮತ್ತೆ ಕೇಳಿ. ಸದನದೊಳಗಿದ್ದ ಯಾರ ಮುಖದಲ್ಲಾದರೂ ರಾಜ್ಯದ ಅಭಿವೃದ್ಧಿ ಬಗೆಗಿನ ಕಾಳಜಿ ಕಂಡುಬರುತ್ತಿತ್ತೇ? ಎಂದು ಟಾರ್ಚ್ ಹಚ್ಚಿ ಹುಡುಕುವಂತಾಗಿತ್ತು ಈ ಬೆಳಗಾವಿ ವಿಧಾನಮಂಡಲ ಅಧಿವೇಶನ.

ಅಷ್ಟೂ ದಿನಗಳ ಕಲಾಪವು ರೆಡ್ಡಿ ಸಹೋದರರು ಮತ್ತು ಎಚ್‌ಡಿ ಸಹೋದರರ ಆರೋಪ-ಪ್ರತ್ಯಾರೋಪಗಳಿಂದೊಡಗೂಡಿದ ವಾಕ್ಸಮರಕ್ಕೆ ಸಮರ್ಥ ವೇದಿಕೆಯಾಯಿತೇ ಹೊರತು, ಸದನದ ಹೊರಗೆ ಜೋರಾಗಿಯೇ ಕೇಳಿಬರುತ್ತಿದ್ದ ಗಡಿ ವಿವಾದವಾಗಲಿ, ರಾಜ್ಯದ ಜನತೆ ಬೆಲೆ ಏರಿಕೆಯಿಂದ ಇನ್ನೂ ತತ್ತರಿಸುತ್ತಿದ್ದಾರೆ ಎಂಬ ಆತಂಕಕಾರಿ ವಿಷಯವಾಗಲಿ, ಸದನದೊಳಗೆ ಅಪ್ಪಿ ತಪ್ಪಿ ನುಸುಳಿದ್ದು ಕಡಿಮೆ.

ಆಡಳಿತ ಪಕ್ಷದ ಕಡೆಯಿಂದ ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ, ಕಂದಾಯ ಸಚಿವ ಕರುಣಾಕರ ರೆಡ್ಡಿ ಮತ್ತು ವಿರೋಧ ಪಕ್ಷದ ವತಿಯಿಂದ ಎಚ್.ಡಿ.ಕುಮಾರಸ್ವಾಮಿ-ಎಚ್.ಡಿ.ರೇವಣ್ಣ ಸೋದರರ ಆಟಾಟೋಪ ನೋಡಬೇಕಿತ್ತು. ಪ್ರತಿಯೊಂದು ವಿಷಯದಲ್ಲೂ ಒಬ್ಬರಲ್ಲ ಒಬ್ಬರು ಎದ್ದು ನಿಲ್ಲುತ್ತಿದ್ದುದು ನಮ್ಮ ವ್ಯವಸ್ಥೆಯನ್ನೇ ಅಣಕಿಸಿದಂತಿತ್ತು. (ಇಡೀ ಕಲಾಪದಲ್ಲಿ ಈ 'ಸೋದರರ ಸವಾಲ್' ಘಟನಾವಳಿಗಳೇ ಎದ್ದು ಕಾಣುತ್ತಿದ್ದುದರಿಂದ ಅದನ್ನು ಮಾತ್ರ ಇಲ್ಲಿ ಉಲ್ಲೇಖಿಸಲಾಗಿದೆ. ಉಳಿದ 'ಸವಾಲ್-ಜವಾಬ್'ಗಳೂ ಇದ್ದವೆಂಬುದು ಬೇರೆ ವಿಷಯ.)

ಹೊರಗೆ, ಸಭೆ-ಸಮಾರಂಭಗಳಲ್ಲಿ, ಚುನಾವಣಾ ಭಾಷಣಗಳಲ್ಲಿ ಮಾಡುತ್ತಿದ್ದ ಕೆಸರೆರಚಾಟಗಳು ಮತ್ತು ಪತ್ರಿಕಾಗೋಷ್ಠಿಗಳಲ್ಲಿ ತೂರಿಬಿಡುತ್ತಿದ್ದ ವಾಕ್ಬಾಣಗಳು ನೇರಾನೇರ ಕದನಕ್ಕೆ ಎದುರು-ಬದುರಾದಾಗ ಮತ್ತೆ ವಿಜೃಂಭಿಸಿದವು. ಹೊರಗೆ ನಡೆಯುತ್ತಿದ್ದದ್ದೇ ಮತ್ತಷ್ಟು ತೀಕ್ಷ್ಣವಾಗಿ ಒಳಗೆ ನಡೆದು ಸಮಯ ವ್ಯರ್ಥವಾಯಿತೇ ಹೊರತು ಅಲ್ಲಿ ಜನಪರ ಕಾಳಜಿಯ ಲವಲೇಶವೂ ಕಂಡುಬಾರದಿರುವುದು ಅಭಿವೃದ್ಧಿ ಬಗೆಗೆ ಜನಪರ ಕಾಳಜಿ, ಚಿಂತನೆ ನಡೆಯಬೇಕಾಗಿದ್ದ ಬೆಳಗಾವಿ ಅಧಿವೇಶನದಲ್ಲಿ ಕಂಡುಬಂದ ವಿಪರ್ಯಾಸ ಪ್ರಸಂಗ.

ಎಂಥ ಪರಿಸ್ಥಿತಿ ಬಂತು ನಮ್ಮ ಸಂವಿಧಾನದ ಪ್ರಮುಖ ಅಂಗವಾಗಿರುವ ಶಾಸಕಾಂಗಕ್ಕೆ! ಒಂದು ಕಾಲವಿತ್ತು. ಸದನದಲ್ಲಿ ಕಲಾಪ ನಡೆಯುತ್ತದೆ ಎಂದಾಗ ಎಲ್ಲ ಸದಸ್ಯರು ಅಂದರೆ ವಿಧಾಯಕವರೇಣ್ಯರು ಯಾವ ರೀತಿಯೆಲ್ಲಾ ವಿಧೇಯರಾಗಿ ತಯಾರಿ ನಡೆಸಿಕೊಂಡು ಸದನದೊಳಕ್ಕೆ ಕಾಲಿಡುತ್ತಿದ್ದರು. ಲೋಕಸಭೆಯಲ್ಲಿ ಏನಾದರೂ ಚರ್ಚೆಯಾಗುತ್ತಿತ್ತೆಂದರೆ, ಅಂದಿನ ಮುತ್ಸದ್ಧಿಗಳಾದ ಪಂಡಿತ್ ನೆಹರೂ, ಶ್ಯಾಮಪ್ರಸಾದ್ ಮುಖರ್ಜಿ, ಅಟಲ್ ಬಿಹಾರಿ ವಾಜಪೇಯಿ, ಜಾರ್ಜ್ ಫರ್ನಾಂಡಿಸ್, ಇಂದ್ರಜಿತ್ ಗುಪ್ತಾ, ಹರಕಿಶನ್ ಸಿಂಗ್ ಸುರ್ಜೀತ್ ಮುಂತಾದವರು ನಡೆಸುತ್ತಿದ್ದ ಪೂರ್ವ ತಯಾರಿ ಎಂಥವರಿಗೂ ಆದರ್ಶಪ್ರಾಯ. ಅದೇ ರೀತಿ ಇಂದು ಕೂಡ, ವಿಶೇಷವಾಗಿ ಕಮ್ಯೂನಿಸ್ಟ್ ಪಕ್ಷಗಳಲ್ಲಿ, ಇಂಥ ಪೂರ್ವ ತಯಾರಿಯನ್ನು ಕಾಣಬಹುದಷ್ಟೆ.

ಆದರಿಲ್ಲಿ? ಉತ್ತರ ಕರ್ನಾಟಕದಲ್ಲಿ ಅಧಿವೇಶನ ಯಾಕಾಗಿ ನಡೆಸಲಾಗುತ್ತದೆ ಎಂಬುದರ ಸದುದ್ದೇಶವನ್ನು ಎಲ್ಲರೂ ಮರೆತಂತಿದ್ದರು. ಅದೇನೋ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಕೊಡುಗೆಗಳ ಮಹಾಪೂರ ಹರಿಸಿ ಕೈತೊಳೆದುಕೊಂಡರೆ ಸಾಕಾಗುವುದಿಲ್ಲ. ಈ ಬಗ್ಗೆ ಒಂದು ಪೂರ್ವ ತಯಾರಿಯ, ಯೋಜನಾಬದ್ಧವಾದ, ದೂರದೃಷ್ಟಿಯ ಯೋಜನೆಯ ಕುರಿತು ಸಮಗ್ರ ಚರ್ಚೆಯಾಗಬೇಕಿತ್ತು, ಎಲ್ಲಿ ಹುಳುಕುಗಳು ಬರಬಹುದು, ಎಲ್ಲಿ ಮತ್ತಷ್ಟು ಅಭಿವೃದ್ಧಿ ಬಗ್ಗೆ ಯೋಚಿಸಬಹುದು ಎಂದೆಲ್ಲಾ ಚಿಂತಿಸಬಹುದಿತ್ತು. ಆದರೆ ಇಡೀ ಅಧಿವೇಶನವನ್ನು ನುಂಗಿಹಾಕಿದ್ದು ಆಡಳಿತ ಪಕ್ಷ ಮತ್ತು ಪ್ರತಿಪಕ್ಷ ಸದಸ್ಯ "ಪ್ರತಿಷ್ಠೆಯ ಮೇಲಿನ ಚರ್ಚೆ"ಯೇ. ಒಟ್ಟಿನಲ್ಲಿ ಬೆಳಗಾವಿಯಲ್ಲಿ ಅಧಿವೇಶನ ನಡೆಯಿತು ಎಂದಷ್ಟೇ ಎದೆತಟ್ಟಿಕೊಳ್ಳುವಂತಾಯಿತು.

ಇಡೀ ರಾಜ್ಯದ ಜನತೆ ತಮ್ಮನ್ನು ನೋಡುತ್ತಿದ್ದಾರೆ, ನಮ್ಮ ಅಭಿವೃದ್ಧಿಗಾಗಿಯೇ ನಾವು ಆರಿಸಿ ಕಳುಹಿಸಿದವರು ಅಲ್ಲೇನು ಮಾತನಾಡುತ್ತಾರೆ ಎಂದು ಕೇಳಲು, ನೋಡಲು ಕಾತುರರಾಗಿದ್ದಾರೆ ಎಂಬ ಕನಿಷ್ಠ ಪರಿಜ್ಞಾನವೂ ಇಲ್ಲದೆ, ಅಪಾಪೋಲಿಗಳು ಪರೀಕ್ಷೆಗೆ ಹಾಜರಾಗುವಂತೆ, ಯಾವುದೇ ಪೂರ್ವ ತಯಾರಿ ಇಲ್ಲದೆ ಕೈಬೀಸಿಕೊಂಡು ಸದನಕ್ಕೆ ಬಂದವರು ಕೂಡ ಮಾಡೋದು ಬರೇ ಗದ್ದಲ. ಮತ್ತೆ ಕೆಲವರು, ತಮ್ಮ (ಅಪ) ಹಾಸ್ಯ ಪ್ರಜ್ಞೆಯನ್ನು ಮೆರೆಯಲು ಹೋಗಿ, ಗಂಭೀರ ವಿಷಯದ ಮಧ್ಯೆ ಮೂಗು ತೂರಿಸಿ ವಿಷಯಾಂತರ ಮಾಡುತ್ತಲೋ ಕಾಲ ಕಳೆಯುತ್ತಿದ್ದರು. ಬೆಳಗ್ಗಿನಿಂದ ರಾತ್ರಿವರೆಗೂ ಇವರಿಗೆ ಗಂಭೀರ ಚರ್ಚೆಯಾಗಬೇಕಿದ್ದ, ಈ ರಾಜ್ಯದ ಪ್ರಕೃತಿಗೇ ಮಾರಕವಾಗಿರುವ ಗಣಿ ಹಗರಣ ಎಂಬ ಆತಂಕಕಾರಿ ವಿಷಯದ ಬಗ್ಗೆ, ಕೇವಲ ರಾಜಕೀಯಕ್ಕಾಗಿ ಮತ್ತು ದ್ವೇಷಸಾಧನೆಗಾಗಿ ವ್ಯರ್ಥ ಚರ್ಚೆ ನಡೆಸಲು ಸಾಧ್ಯವಾಗುತ್ತದೆ, ರಾಜ್ಯದ ಅಭಿವೃದ್ಧಿ ಬಗೆ ಕನಿಷ್ಠ ನಾಲ್ಕಾರು ತಾಸಾದರೂ ಚಿಂತಿಸುವ ಪರಿಜ್ಞಾನ ಬೇಡವೇ ಎಂದು ಕೇಳುವಂತಾಗಿದೆ.

ಲೋಕಾಯುಕ್ತ ವರದಿಯನ್ನೇ ತಿದ್ದುಪಡಿ ಮಾಡಿ, ರಾಜಕೀಯ ತೂರಿಸಿ, ವರದಿಯನ್ನು ತಿರುಚಿರುವ ಬಗ್ಗೆ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆಯವರು, ಸಹಜವಾಗಿ ಆಕ್ರೋಶಗೊಂಡಿದ್ದಾರೆ, "ಹಾಗಿದ್ದರೆ ನಮ್ಮಿಂದ ತನಿಖೆ ಮಾಡಿಸಿದ್ದೇಕೆ, ಇಷ್ಟು ವರ್ಷ ವೃಥಾ ಶ್ರಮ ಪಡುವಂತೆ ಮಾಡಿದ್ದೇಕೆ, ನೀವು ಮೊದಲೇ ಅರಣ್ಯ ಇಲಾಖೆಯಿಂದಲೇ ವರದಿ ತಯಾರಿಸಿಕೊಳ್ಳಬಹುದಿತ್ತಲ್ಲ" ಎಂಬ ಪ್ರಶ್ನೆಯಲ್ಲಿ ಎಲ್ಲವೂ ಹುದುಗಿದೆ. ಗಣಿಯಿಂದಾಗಿ ರಾಜ್ಯದ ಬೊಕ್ಕಸಕ್ಕೆ 36 ಸಾವಿರ ಕೋಟಿ ರೂಪಾಯಿ ನಷ್ಟವಾಗಿದ್ದು ಹೇಗೆ, ಅದಿರು ಲಾರಿಗಳಿಂದಾಗಿ ರಸ್ತೆಗಳು ಹಾಳಾಗಿ ಎಷ್ಟು ನಷ್ಟವಾಯಿತು, ಅಕ್ರಮ ನಡೆದಿದೆ, ಒತ್ತುವರಿಯಾಗಿದೆ ಎಂಬಿತ್ಯಾದಿಯಾಗಿ ಒಂದೂವರೆ ವರ್ಷ ಸಮಗ್ರ ತನಿಖೆ ನಡೆಸಿ ತಯಾರಿಸಿದ ವರದಿಯನ್ನು ಕೆಲವೇ ಗಂಟೆಗಳಲ್ಲಿ ತಿರಸ್ಕರಿಸಿ ಬದಲಿಸುವುದೆಂದರೆ? ಜನಪ್ರತಿನಿಧಿಗಳ ಈ ವೈಖರಿಗೆ ಜನರೇ ಉತ್ತರ ನೀಡಬೇಕು. ತಮ್ಮ ಶ್ರಮವು ಈ ಸರಕಾರಕ್ಕೆ ತಮಾಷೆಯಾಯಿತೇ ಎಂದು ಲೋಕಾಯುಕ್ತರು ಪ್ರಶ್ನಿಸಿರುವುದರಲ್ಲಿ ಹುರುಳಿಲ್ಲದಿಲ್ಲ. ಸರಕಾರವೇನು ಆಟ ಆಡ್ತಿದೆಯೇ? ಅಂತನೂ ಕೇಳಬಹುದು.

ಈ ಸಂವಿಧಾನದ ಪವಿತ್ರ ಮಂದಿರದೊಳಗೆ ಎಂಥಾ ಮಾತುಗಳು ಉದುರುತ್ತಿದ್ದವು ಎಂಬುದಕ್ಕೆ ಕೆಲವೊಂದು ಸ್ಯಾಂಪಲ್ ನೋಡಿ: ಬಳ್ಳಾರಿ ಏನು ನಿಮ್ ಅಪ್ಪಂದಾ? ಬಳ್ಳಾರಿಗೆ ಬಂದ್ರೆ ಒಂದ್ ಕೈ ನೋಡ್ಕೋತೀವಿ. ನಿಮ್ ಬಗ್ಗೆ ಸೀರಿಯಲ್ ತೆಗೀತೀವಿ, ಹಲ್ಲು ಬಿಗಿ ಹಿಡಿದು ಮಾತಾಡಿ.... ಕಲ್ಲೇಟು, ಚಪ್ಪಲಿಯೇಟು ಮಾಡಿ ಮುಖ್ಯಮಂತ್ರಿಯಾಗಿದ್ದು ನಮಗೊತ್ತಿಲ್ವಾ, 'ನೀವೆಂತ ಮಾಡಿದ್ದೀರಿ' ಅಂತ ಅವರು, 'ನಾವು ಬಾಯಿಬಿಟ್ರೆ ನಿಮ್ಮದೆಲ್ಲಾ ಹೊರಗೆ ಬರ್ತದೆ, ಹೇಳಲಾ' ಅಂತ ಇವರು ಕೇಳೋದು, 'ಹೇಳಿ' ಅಂತ ಅವರು ಹೇಳೋದು... ಇವರು ಇಲ್ಲ ಸಲ್ಲದ್ದನ್ನೆಲ್ಲಾ 'ಬಿಚ್ಚಿಡುತ್ತಾ' ಹೋಗೋದು, ಅವರು ಅದನ್ನು ನಿರಾಕರಿಸುತ್ತಾ ಇರೋದು... ಇದರಲ್ಲೇ ಕಾಲಹರಣ ಮಾಡಿದ ಈ ಕಲಾಪದ ಬಗ್ಗೆ ಅಯ್ಯೋ ವಿಧಿಯೇ ಎನ್ನದೆ ಬೇರೆ ದಾರಿಯಿಲ್ಲ.

ಯೋಗ ಪ್ರಾಣಾಯಾಮ ಇತ್ಯಾದಿಗಳನ್ನೆಲ್ಲಾ ಮಾಡಲು ಹೋಗಿ, ಅದನ್ನು ಸದನದಲ್ಲೇ ಪ್ರಯೋಗಿಸುತ್ತಾ, ವಿಭಿನ್ನ ರೀತಿಯ ಭಂಗಿಗಳಲ್ಲಿ, ನಿದ್ರಾಸನಗಳಲ್ಲಿ, ಆರಾಮಾಸನಗಳಲ್ಲಿ ಪವಡಿಸುತ್ತಾ, ತೂಕಡಿಸುತ್ತಾ, ಗಂಭೀರ ವಿಷಯಗಳ ಚರ್ಚೆಯಾಗುತ್ತಿರುವಾಗ ತಮಗೆ ಸಂಬಂಧವೇ ಇಲ್ಲವೇನೋ ಎಂಬಂತೆ ವರ್ತಿಸುತ್ತಿದ್ದುದನ್ನು ನೋಡಿದರೆ, ಯಾವ ಪ್ರಜೆಗೂ ಅಸಹ್ಯ ಎನ್ನಿಸದಿರದು. ಇಂಥವರು ನಮ್ಮ "ನಾಯಕರು"! ಹುಡುಕಿದರೆ ಕೈಬೆರಳಿನಷ್ಟು ಸಂಖ್ಯೆಯಲ್ಲಿ ಈ ಆರೋಪಕ್ಕೆ ಅಪವಾದವೂ ಇರಬಹುದು. ಆದರೆ, ಅವುಗಳೆಲ್ಲವೂ ಇಂಥವರಿಂದಾಗಿ ತೆರೆಯಮರೆಗೆ ಸರಿಯುತ್ತಿದ್ದವು.

ಇನ್ನೊಬ್ಬರನ್ನು ಚುಚ್ಚುವುದು, ಕಾಲೆಳೆಯುವುದು ಮನಸ್ಸು ಘಾಸಿಗೊಳಿಸುವುದೇ ಗುರಿಯಾಗಿತ್ತು ಎಂಬುದು ಈ ಕಲಾಪ ನೋಡಿದವರಿಗೆ ವೇದ್ಯವಾಗುತ್ತದೆ. ಬಹುಶಃ ಅವರು ಸದನದಿಂದ ಹೊರಬಂದ ಬಳಿಕ ಬೆಂಬಲಿಗರು "ಚೆನ್ನಾಗಿ ಮಾತಾಡ್ದೆ ಮಗಾ... ಎದುರು ಪಕ್ಷದೋರ‌್ನ ಸರೀಗೆ ಅಟಕಾಯ್ಸಿಬಿಟ್ಟೆ... ಶಭಾಷ್" ಎಂಬ ಮಾತು ಕೇಳಲೆಂದೇ ಸದನಕ್ಕೆ ಹಾಜರಾಗುವಂತೆ ಸಾಮಾನ್ಯ ನೋಡುಗನಿಗೆ ಅನ್ನಿಸದಿರದು.

ರಾಜ್ಯದ ಅಭಿವೃದ್ಧಿಗೇನಾದರೂ ಉಪಕಾರವಾಯಿತೋ? ಛೆ, ಅದರ ಬಗ್ಗೆ ಏನು ಕೇಳುತ್ತೀರಿ.... ಬೆಳಗಾವಿಯಲ್ಲಿ ಅಧಿವೇಶನ ಮಾಡುವ ಮೂಲಕ ಉತ್ತರ ಕರ್ನಾಟಕವನ್ನೇ ಅಭಿವೃದ್ಧಿಪಡಿಸಿದ್ದೇವೆ ಅಂತ ಬೀಗಬಹುದು, ಅಷ್ಟು ಕೋಟಿ ಬಿಡುಗಡೆ ಮಾಡಿದ್ದೇವೆ ಅಂತಾನೂ ಎದೆತಟ್ಟಿಕೊಂಡು ಹೇಳಬಹುದು. ಆದರೆ ಅದರ ಅನುಷ್ಠಾನ? ಅದರ ಬಗ್ಗೆ ಕೇಳಲೇಬೇಡಿ!

ವಿಧಾನಮಂಡಲ ಕಲಾಪವನ್ನು ನೋಡಿದರೆ, ಎಲ್ಲೋ ಅಪಾಪೋಲಿಗಳ ಬೀದಿ ಜಗಳವನ್ನು ನೋಡಿದ ಹಾಗಾಗುತ್ತಿತ್ತು ಅಂತ ಓದುಗರೊಬ್ಬರ ಅಭಿಪ್ರಾಯವನ್ನು ಇಲ್ಲಿ ಉಲ್ಲೇಖಿಸದೆ ವಿಧಿಯಿಲ್ಲ. ಒಟ್ಟಿನಲ್ಲಿ ಬೆಂಗಳೂರಿನ ಅವಸರದ, ಯಾಂತ್ರಿಕ ಬದುಕಿನಿಂದ ಒಂದಷ್ಟು ಮುಕ್ತರಾಗಿ, ಬೆಳಗಾವಿಯ ಹವೆಯಲ್ಲಿ ಒಳ್ಳೆಯ ಮನರಂಜನಾ ಯಾತ್ರೆಯನ್ನು, ಜತೆ ಜತೆಗೇ ಪಕ್ಕದ ಗೋವಾಕ್ಕೆ "ತೀರ್ಥ"ಯಾತ್ರೆಯನ್ನೂ ಮಾಡಿಸಿಕೊಂಡು ಬಂದರು ಎಂಬ ಮಾತ್ರಕ್ಕೇ ಈ ಅಧಿವೇಶನ ಸಾರ್ಥಕವಾಯಿತು.

ಈ ರೀತಿ ಬೆಳಗಾವಿಯಲ್ಲಿ ಅಧಿವೇಶನ ನಡೆಸಿ, ರಾಜ್ಯದ ಜನತೆಯ ಕೋಟಿಗಟ್ಟಲೆ ಹಣವನ್ನು ವ್ಯಯಿಸಿದ್ದು, ಪರಸ್ಪರ ದೂಷಣೆಗಾಗಿಯೇ? ಸದನದ ಪಾವಿತ್ರ್ಯ, ಗೌರವವನ್ನೇ ಗಾಳಿಗೆ ತೂರಿದ, ಸದನದ ಗಾಂಭೀರ್ಯ ಎಲ್ಲಿ ಹೋಯಿತೂಂತ ಸೂಕ್ಷ್ಮ ದರ್ಶಕ ಹಿಡಿದು ಹುಡುಕಬೇಕಾದ ಪರಿಸ್ಥಿತಿ ತಂದೊಡ್ಡಿದ ಈ ಅಧಿವೇಶನ ಯಾವ ಪುರುಷಾರ್ಥ ಸಾಧಿಸಿದಂತಾಯಿತು? ಓ ಜನಪ್ರತಿನಿಧಿಗಳೇ ಒಂದಿಷ್ಟಾದರೂ ಆತ್ಮಾವಲೋಕನ ಮಾಡಿಕೊಳ್ಳಿ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಎಂಇಎಸ್: ಭಾಷೆಯ ಹೆಸರಲ್ಲಿ ದ್ವೇಷದ ಬೀಜ
ಸತ್ಯಂ ರಾಜು: ನೆಲದ ಕಾನೂನು v/s ನೆಲದ ಪ್ರೀತಿ
ಅ'ಸತ್ಯಂ': ಚಿನ್ನದ ನವಿಲು ಈಗ ಕಾಗದದ ಹುಲಿ!
ದಾಳಿಗೊಂದು ತಿಂಗಳು: ಎಚ್ಚರಿಕೆ ನೀಡುತ್ತಲೇ ಇದೆ ಭಾರತ
ಸರಣಿ ತಿಪ್ಪರಲಾಗ: ಪಾಕಿಸ್ತಾನಕ್ಕೇನಾಗಿದೆ?
ಅಪಾಯ! ಇಂಟರ್ನೆಟ್ ಎಕ್ಸ್‌ಪ್ಲೋರರ್ ಅಪ್‌ಡೇಟ್ ಮಾಡಿಕೊಳ್ಳಿ