15 ರ ಹರೆಯದ ಅಮಿಯಾ ಫೂಕನ್, ಕಳೆದ ವರ್ಷದ ಅಕ್ಟೋಬರ್ ತಿಂಗಳಲ್ಲಿ ಅಸ್ಸಾಂನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ ತಂದೆಯನ್ನು ಕಳೆದುಕೊಂಡಿದ್ದಳು. ಆದರೂ, ಮೂರು ತಿಂಗಳಲ್ಲಿ, ಆಕೆ ಗಣರಾಜ್ಯೋತ್ಸವ ದಿನದ ಪೆರೇಡ್‌ನಲ್ಲಿ ಭಾಗವಹಿಸುವ ಹೆಮ್ಮೆಯ ಎನ್‌ಸಿಸಿ ಕೆಡೆಟ್‌ಗಳಲ್ಲಿ ಒಬ್ಬಳಾಗಿ ಹೆಮ್ಮೆಯಿಂದಲೇ ಭಾಗವಹಿಸುತ್ತಿದ್ದಾಳೆ.ಜನವರಿ 26ರ ಪ್ರಜಾಪ್ರಭುತ್ವ ದಿನಾಚರಣೆಯ ವೈಭವೋಪೇತ ಮೆರವಣಿಗೆಯಲ್ಲಿ ಭಾಗವಹಿಸಲು ದೇಶಾದ್ಯಂತ 17 ಪ್ರದೇಶಗಳಿಂದ ಆಯ್ದ 2000ದಷ್ಟು ಎನ್‌ಸಿಸಿ ಕೆಡೆಟ್‌ಗಳಲ್ಲಿ ಫೂಕನ್ ಕೂಡ ಒಬ್ಬಳು." ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪೆರೇಡ್‌ಗೆ ನಾನು ಆಯ್ಕೆಯಾಗುತ್ತಿದ್ದೇನೆಂದು ತಿಳಿದಾಗ ತುಂಬಾ ಖುಷಿ ಪಟ್ಟೆ. ನನಗಿಂತ ನನ್ನ ತಂದೆ ತುಂಬಾ ಹೆಮ್ಮೆ ಪಟ್ಟುಕೊಂಡಿದ್ದರು. ಅವರಿಗೆಷ್ಟು ಸಂತೋಷವಾಗಿತ್ತೆಂದರೆ, ಸಿಕ್ಕಿದವರಿಗೆಲ್ಲರಿಗೂ ಈ ವಿಷಯ ಡಂಗುರ ಸಾರುತ್ತಿದ್ದರು" ಎಂದು ಹೇಳುತ್ತಿದ್ದಂತೆಯೇ ಆಕೆಯ ಕಂಠ ಗದ್ಗದಿತವಾಗತೊಡಗಿತ್ತು. ವಿಜಯ್ ಚೌಕದಲ್ಲಿ ರಿಹರ್ಸಲ್ ನಡೆಸುತ್ತಿದ್ದಳಾಕೆ.ಅಕ್ಟೋಬರ್ ತಿಂಗಳಲ್ಲಿ ಸರಣಿ ಸ್ಫೋಟ ನಡೆದಾಗ, ನಾವೆಲ್ಲವನ್ನೂ ಕಳೆದುಕೊಂಡಿದ್ದೆವು. ಪೆರೇಡ್‌ನಲ್ಲಿ ಭಾಗವಹಿಸುವ ಬಯಕೆಯೂ ಬತ್ತಿ ಹೋಗಿತ್ತು. ಆದರೆ ನನ್ನ ತಾಯಿ ನನಗೆ ಧೈರ್ಯ ತುಂಬಿ... ನೀನು ಹೋಗಲೇ ಬೇಕು ಎಂದರು. ಯಾಕೆಂದರೆ ನಿನ್ನ ತಂದೆಯ ಇಚ್ಛೆಯೂ ಅದೇ ಆಗಿತ್ತು ಎಂದು ನೆನಪಿಸಿದಾಗ ಇಲ್ಲವೆನ್ನಲಾಗಲಿಲ್ಲ ಎಂದು ಕಣ್ಣೀರು ಕೆನ್ನೆಗಳಿಂದ ಜಾರದಂತೆ ತಡೆದುಕೊಳ್ಳುತ್ತಾ ನುಡಿಯುತ್ತಿದ್ದಳಾಕೆ.ಫೂಕನ್‌ನಂತೆಯೇ ಎಲ್ಲರೂ ಕೂಡ ಇಂಥದ್ದೇ ಮನಕಲಕಿಸುವ ಹಿನ್ನೆಲೆ ಹೊಂದಿರಲಿಕ್ಕಿಲ್ಲ. ಆದರೆ ಇದು ಅವರು ತಮ್ಮ ಜೀವಮಾನದಲ್ಲೇ ಪಡೆದ ಅಪರೂಪದ, ಹೆಮ್ಮೆಯ ಅವಕಾಶ ಮತ್ತು ದೇಶದ, ದೇಶ ಭಕ್ತಿಯನ್ನು ಉದ್ದೀಪನಗೊಳಿಸುವ ಕಾರ್ಯಕ್ರಮದಲ್ಲಿ ಭಾಗವಹಿಸುವ ಧನ್ಯತಾ ಭಾವಕ್ಕೆ ಒಳಗಾಗಿಸುವ ಅಪೂರ್ವ ಕ್ಷಣಗಳನ್ನು, ನೆನಪುಗಳನ್ನು ಕಟ್ಟಿಕೊಡುವ ಕಾಲ.' ನಾನು ಇದೇ ಮೊದಲ ಬಾರಿ ದೇಶದ ರಾಜಧಾನಿಗೆ ಬರುತ್ತಿದ್ದೇನೆ. ಇಲ್ಲಿ ಸಿಕ್ಕಾಪಟ್ಟೆ ಚಳಿ ಎಂದು ಈ ಹಿಂದೆ ಇಲ್ಲಿ ಪೆರೇಡ್‌ಗಳಲ್ಲಿ ಭಾಗವಹಿಸಿದ್ದ ನನ್ನ ಮಿತ್ರರು ಹೇಳಿದ್ದರು. ಆದರೆ ನನಗೇನೂ ಹಾಗನಿಸುತ್ತಿಲ್ಲ. ಬೆಳಗ್ಗೆ ಮಾತ್ರ ತಾಲೀಮಿಗೆ ಹೊರಟಾಗ ಚಳಿ ಕೊರೆಯುತ್ತದೆ. ಅಷ್ಟೆ' ಎನ್ನುತ್ತಾನೆ ತಮಿಳುನಾಡಿನಿಂದ ಬಂದಿರುವ ಶರತ್ ನಾಯರ್.ರಾಜ್ಮಾ-ಚಾವಲ್‌ನಂತಹ ಉತ್ತರ ಭಾರತೀಯ ತಿನಿಸುಗಳು ನನಗೆ ಹಿಡಿಸೋದಿಲ್ಲ ಎನ್ನುವ ಆತ, ಬಿಗಿಯಾದ ಕಾರ್ಯದಟ್ಟಣೆ ಇದ್ದರೂ ಪ್ರತಿಯೊಂದು ಕ್ಷಣವನ್ನೂ ಆಸ್ವಾದಿಸುತ್ತಿದ್ದೇನೆ ಎನ್ನುತ್ತಾನೆ. ಹಲವು ಮಿತ್ರರು ಸಿಕ್ಕಿದ್ದಾರೆ ಮತ್ತು ನಾವೆಲ್ಲ ಬೇಸಿಗೆ ರಜೆಯಲ್ಲಿ ಒಂದೆಡೆ ಸೇರುವ ಬಗ್ಗೆ ತೀರ್ಮಾನ ಮಾಡಿಕೊಂಡಿದ್ದೇವೆ ಎಂದೂ ಆತ ಸೇರಿಸುತ್ತಾನೆ.ಇದೇ ರೀತಿ, ಉತ್ತರ ಪ್ರದೇಶದಿಂದ ಬಂದು ಪರಿಚಯವಾಗಿ ಗೆಳೆತನ ಬೆಳೆಸಿಕೊಂಡವರನ್ನು ಭೇಟಿಯಾಗಲೆಂದೇ ಮತ್ತೆ ಮುಂದಿನ ತಿಂಗಳು ದೆಹಲಿಗೆ ಬರುವುದಾಗಿ ಹೇಳುತ್ತಾಳೆ ಜಮ್ಮು ಮತ್ತು ಕಾಶ್ಮೀರದ ರೋಶನಾರಾ ಖಾನ್. 'ನಾನು ದೆಹಲಿಗೆ ಬಂದಿರುವುದು ಇದೇ ಮೊದಲಲ್ಲ. ಆದರೆ ಬಂದರೂ ಇಲ್ಲಿನ ಮಾರ್ಕೆಟ್‌ಗೆ ಭೇಟಿ ನೀಡಿರಲೇ ಇಲ್ಲ. ಉತ್ತರ ಪ್ರದೇಶದ ಮಿತ್ರರು ಇಲ್ಲಿನ ಮಾರ್ಕೆಟ್ ಬಗ್ಗೆ ಮಾತನಾಡುತ್ತಿರುವುದನ್ನು ಕೇಳಿದ್ದೇನೆ. ಹೀಗಾಗಿ ಮುಂದಿನ ತಿಂಗಳು ಇಲ್ಲಿಗೆ ಬಂದು ನಾವಾಗಿಯೇ ಮಾರ್ಕೆಟ್ ಪ್ರವಾಸ ಮಾಡಲು ನಿರ್ಧರಿಸಿದ್ದೇವೆ' ಎನ್ನುತ್ತಾಳಾಕೆ.ಮಿಜೋರಾಂನಿಂದ ಬಂದಿರುವ ಪುಯಿಯಾ ಅವರ ಪ್ರಕಾರ, ಇತರ ಸಂಸ್ಕೃತಿಯ ಬಗ್ಗೆ ಕಲಿತುಕೊಳ್ಳಲು ಇದೊಂದು ಅತ್ಯುತ್ತಮ ಅವಕಾಶ. 'ಇದು ನಮಗೆ ಶಾಲೆಯಲ್ಲಿ ಕಲಿಸುವ ಸಾಮಾಜಿಕ ಅಧ್ಯಯನಕ್ಕಿಂತಲೂ ಉತ್ತಮ. ಅದೆಷ್ಟೋ ಜನರೊಂದಿಗೆ ಬೆರೆಯುತ್ತೇವೆ, ಪುಸ್ತಕದ ಬದನೆಕಾಯಿಯಲ್ಲಿರುವುದಕ್ಕಿಂತಲೂ ಹೆಚ್ಚಾಗಿ ನೇರವಾಗಿ ಬೇರೆಯವರ ಸಂಸ್ಕೃತಿ, ಆಚಾರ-ವಿಚಾರಗಳನ್ನು ತಿಳಿದುಕೊಳ್ಳುತ್ತೇವೆ' ಎಂದು ಆತ ಹೇಳಿದ್ದಾರೆ. |