ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಪ್ರಚಲಿತ > ಬೆಳಗಾವಿ ಅಧಿವೇಶನದ 'ಪ್ರಹಸನ'
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬೆಳಗಾವಿ ಅಧಿವೇಶನದ 'ಪ್ರಹಸನ'
ನಾಗೇಂದ್ರ ತ್ರಾಸಿ

PTI
ಬೆಳಗಾವಿಯಲ್ಲಿ ನಡೆದ ಎರಡನೇ ಬಾರಿಯ ಐತಿಹಾಸಿಕ ಅಧಿವೇಶನ ಮುಕ್ತಾಯ ಕಂಡಿದೆ. ಆದರೆ ಉತ್ತರಕರ್ನಾಟಕ ಅಭಿವೃದ್ದಿಯ ಕೂಗು, ಗಡಿ ಸಮಸ್ಯೆಯಂತಹ ಗಂಭೀರ ಸಮಸ್ಯೆಗಳ ಚರ್ಚೆಗಿಂತ ಅಧಿಕವಾಗಿ ಅಕ್ರಮ ಗಣಿಗಾರಿಕೆ ಅನುರಣಿಸುವ ಮೂಲಕ ಅಧಿವೇನದಲ್ಲಿನ ಹೆಚ್ಚಿನ ಸಮಯ ಹಾಳಾಗುವಂತಾಗಿದೆ. ಅವೆಲ್ಲಕ್ಕಿಂತ ಮುಖ್ಯವಾಗಿ ಪ್ರತಿಪಕ್ಷ ಮತ್ತು ಆಡಳಿತಾರೂಢ ಪಕ್ಷಗಳು ನಡೆದುಕೊಂಡ ರೀತಿ ಮಾತ್ರ ನಾಚಿಕೆ ಹುಟ್ಟಿಸುವಂತಾಗಿದ್ದು ಮಾತ್ರ ವಿಪರ್ಯಾಸ. ಅಧಿವೇಶನದ ಆರಂಭವಾದ (ಜ.16) ದಿನದಿಂದ ಆರಂಭಿಸಿ ಬುಧವಾರ(21)ರವರೆಗೂ ಸದನದಲ್ಲಿ ಗಂಭೀರ ಚರ್ಚೆಗಳೇ ನಡೆಯಲಿಲ್ಲ. ಅಧಿವೇಶನದ ಕೊನೆಯ ಎರಡು ದಿನಗಳಲ್ಲಿ ಗಣಿ ಚರ್ಚೆಗೆ ವಿದಾಯ ಹೇಳಿ, ಉತ್ತರ ಕರ್ನಾಟಕ ಅಭಿವೃದ್ದಿ ಚರ್ಚೆಗಾಗಿಯೇ ಮೀಸಲಿಟ್ಟಿದ್ದು ಶ್ಲಾಘನೀಯ.

ಆದರೆ ಸದನದಲ್ಲಿ ಗಣಿ ಕುರಿತ ಚರ್ಚೆಯಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಸಿಬಿಐ ತನಿಖೆಗೆ ಪಟ್ಟು ಹಿಡಿದು ಕೋಲಾಹಲ ಎಬ್ಬಿಸಿತ್ತು. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಸಚಿವ ಜನಾರ್ದನ ರೆಡ್ಡಿಯವರು ಇಡೀ ಸದನದ ಕಲಾಪಗಳನ್ನು ವೈಯಕ್ತಿಕ ಪ್ರತಿಷ್ಠೆಯ ಕಣವನ್ನಾಗಿ ಮಾಡಿಕೊಂಡು ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿರುವುದ್ದು ನಾಚಿಕೆಗೇಡಿನ ವಿಷಯ.

ಕೊನೆಗೂ ಅಕ್ರಮ ಗಣಿಗಾರಿಕೆಯನ್ನು ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ ನೀಡಿದ ಮೇಲೆ ಪ್ರತಿಪಕ್ಷಗಳು ತಮ್ಮ ಕೂಗಾಟವನ್ನು ನಿಲ್ಲಿಸಿದ್ದವು. ಆಕ್ರಮ ಗಣಿಗಾರಿಕೆ ಕುರಿತಂತೆ ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆಯವರು ನೀಡಿದ ವರದಿಯಲ್ಲಿ, ಬಿಜೆಪಿಯ ಸಚಿವ ಜನಾರ್ದನ ರೆಡ್ಡಿ, ಕರುಣಾಕರ ರೆಡ್ಡಿ ಹಾಗೂ ಕಾಂಗ್ರೆಸ್‌ನ ಧರಂಸಿಂಗ್ ಅವರ ಬಗ್ಗೆಯೂ ಸಾಕಷ್ಟು ದಾಖಲೆಗಳನ್ನು ನೀಡಿ ಅವರ ವಿರುದ್ಧ ಯಾಕೆ ಕಾನೂನು ಕ್ರಮ ಕೈಗೊಳ್ಳಬಾರದು ಎಂಬುದಾಗಿಯೂ ತಿಳಿಸಿದ್ದರು.
ಹಾಗಾದರೆ ಅಧಿವೇಶನದ ಕಲಾಪದಲ್ಲಿ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಯಾವುದು ಕೂಡ ಲೋಕಾಯುಕ್ತರ ವರದಿ ಬಗ್ಗೆ ಗಟ್ಟಿಯಾಗಿ ಮಾತನಾಡಲೇ ಇಲ್ಲ ! ಅಷ್ಟೆಲ್ಲಾ ಬೊಂಬಡ ಬಜಾಯಿಸಿದ ಪ್ರತಿಪಕ್ಷಗಳು ಅಕ್ರಮ ಗಣಿಗಾರಿಕೆ ಬಗ್ಗೆ ಲೋಕಾಯುಕ್ತರು ನೀಡಿದ ವರದಿ ಕುರಿತೇ ಗಂಭೀರವಾಗಿ ಚರ್ಚೆ ನಡೆಸಬೇಕಿತ್ತು, ಅದನ್ನು ಬಿಟ್ಟು ಮತ್ತೆ ಸಿಬಿಐ, ಹಾಲಿ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ನಡೆಸುವ ಅಗತ್ಯವಾದರೂ ಏನಿದೆ ? ಈಗಾಗಲೇ ತನಿಖೆ ನಡೆಸಿರುವ ವರದಿ ಲೆಕ್ಕಕ್ಕಿಲ್ಲ ಎಂದಾದ ಮೇಲೆ ಲೋಕಾಯುಕ್ತ ವರದಿಯ ಔಚಿತ್ಯವಾದರು ಏನು ? ಈಗಾಗಲೇ ಸರ್ಕಾರದ ಮುಂದೆ ಅದೆಷ್ಟು ಆಯೋಗದ ವರದಿಗಳಿವೆ, ಅವೆಲ್ಲ ಯಾಕಾಗಿ...ಕಣ್ಣೊರೆಸುವ ತಂತ್ರವೇ ?...

ಹೋಗಲಿ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರಕಿದೆ, ಗಡಿಯಲ್ಲಿ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿಯೇ ಸಾಕಷ್ಟು ಗಲಾಟೆಗಳು ನಡೆದವು ಆ ಬಗ್ಗೆಯೂ ಮಹತ್ವದ ಚರ್ಚೆ ನಡೆಯಲೇ ಇಲ್ಲ. ಹೋದ ಪುಟ್ಟ...ಬಂದ ಪುಟ್ಟ ಎಂಬ ಗಾದೆಯಂತೆ ಉತ್ತರ ಕರ್ನಾಟಕ ಅಭಿವೃದ್ದಿಗೆ ಸರ್ಕಾರ ಬದ್ದ ಎಂಬುದಾಗಿ ಹೇಳಿ, 1,200 ಕೋಟಿ ರೂ.ಗಳ ಪ್ಯಾಕೇಜ್ ಘೋಷಿಸಿ, ನಂಜುಂಡಪ್ಪ ವರದಿ ಜಾರಿಗೂ ಬದ್ದ ಎಂದು ಹೇಳುವ ಮೂಲಕ ಅಧಿವೇಶನಕ್ಕೆ ತೆರೆ ಬಿದ್ದಿತ್ತು.

ಈಗಾಗಲೇ ಗಡಿಭಾಗದ ಸೊಲ್ಲಾಪುರ, ಅಕ್ಕಲಕೋಟೆ ಕನ್ನಡಿಗರು ಕೃಷಿಯನ್ನು ನೆರೆಯ ರಾಜ್ಯದ ಕೃಪಾಕಟಾಕ್ಷದಿಂದ ಲಾಭದಾಯಕವನ್ನಾಗಿ ಮಾಡಿಕೊಂಡಿದ್ದಾರೆ. ಗಡಿಭಾಗದ ಸಮೀಪವೇ ಇರುವ ಮಹಾರಾಷ್ಟ್ರದ ರಸ್ತೆ,ಶಾಲೆಗಳು ಉತ್ತಮ ಸೌಲಭ್ಯ ಹೊಂದಿದೆ. ಆದರೆ ವಿಪರ್ಯಾಸವೆಂದರೆ ಗಡಿಯಂಚಿನ ಹಳ್ಳಿಯ ರಸ್ತೆಗಳು, ಶಾಲೆಗಳು ನರಕಸದೃಶವಾಗಿವೆ. ಗಡಿಭಾಗದ ಕಬ್ಬು ಬೆಳೆಗಾರರ ಉತ್ತಮ ಬೆಲೆಯನ್ನೇ ಈವರೆಗೂ ಪಡೆದಿಲ್ಲ. ಆ ಬೆಲೆ ಸಿಗಬೇಕಿದ್ದರೆ ಈ ರೈತರು ಮಹಾರಾಷ್ಟ್ರಕ್ಕೆ ಹೋಗಬೇಕು!!

ವೋಟ್ ಬ್ಯಾಂಕ್ ರಾಜಕಾರಣ ಮಾಡುವ ರಾಜಕಾರಣಿಗಳು ಮೊದಲು ಗಡಿಭಾಗದಲ್ಲಿನ ಜನರಿಗೆ ಮೂಲಭೂತ ಸೌಕರ್ಯ, ರೈತರಿಗೆ, ಅವರು ಬೆಳೆದ ಬೆಳೆಗಳ ಬಗ್ಗೆ ಮೊದಲ ಆದ್ಯತೆ ನೀಡಬೇಕು. ಕರ್ನಾಟಕದ ದೌರ್ಬಲ್ಯವನ್ನು ಚೆನ್ನಾಗಿ ಉಪಯೋಗಿಸಿಕೊಂಡಿರುವ ಎಂಇಎಸ್ ಇಲ್ಲಿನ ಮರಾಠಿಗರ ಮೇಲೆ ತನ್ನ ಹಿಡಿತ ಸಾಧಿಸಲು ಸಾಧ್ಯವಾಗಿದೆ. ಕೇವಲ ಉತ್ತರಕರ್ನಾಟಕದ ಅಭಿವೃದ್ದಿಗಾಗಿ ಅಧಿವೇಶನ ನಡೆಸುತ್ತೇವೆ ಎಂದರೇ ಸಾಕೆ ? ಈಗ ವಿರೋಧಪಕ್ಷದಲ್ಲಿ ಕುಳಿತಿರುವ ಕಾಂಗ್ರೆಸ್ ಈ ಹಿಂದೆ ಮಾಡಿದ್ದಾದರೂ ಏನು ಎಂಬುದಕ್ಕೆ ರಾಜ್ಯದ ಗಡಿಭಾಗದ ಹಳ್ಳಿಗಳು ಜ್ವಲಂತ ಸಾಕ್ಷಿಯಾಗಿ ನಿಂತಿವೆ. ಆ ನೆಲೆಯಲ್ಲಿ ವಿರೋಧ ಪಕ್ಷ ಹಾಗೂ ಆಡಳಿತರೂಢ ಪಕ್ಷಗಳು ಉತ್ತರ ಕರ್ನಾಟಕ ಅಭಿವೃದ್ದಿ, ನೀರಾವರಿ, ರೈತರ ಬಗ್ಗೆ, ಭಯೋತ್ಪಾದನೆ ಬಗ್ಗೆ ತಲೆದೂಗುವಂತಹ ಚರ್ಚೆ ನಡೆಯಲೇ ಇಲ್ಲ. ಅದೇ ರೀತಿ ಕನ್ನಡ ನಾಡು,ನುಡಿ, ಜಲದ ಬಗ್ಗೆ ಮಾತನಾಡುವ ರಾಜಕಾರಣಿಗಳು, ಈವರೆಗೆ 74 ಸಾಹಿತ್ಯ ಸಮ್ಮೇಳನಗಳು ನಡೆದಿದ್ದು, ಆ ಸಂದರ್ಭದಲ್ಲಿ ಕೈಗೊಂಡ ನಿರ್ಣಯಗಳನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಲಾಗುತ್ತದೆ ಆ ಬಗ್ಗೆ ಯಾವುದಾದರು ಚರ್ಚೆ ನಡೆಯಿತಾ ಅದೂ ಇಲ್ಲ. 75ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿರುವ ಎಲ್.ಬಸವರಾಜು ಅವರು ಇತ್ತೀಚೆಗೆ ಪಾಕ್ಷಿಕ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಕಟ್ಟಡಗಳು ಧ್ವಂಸವಾದರೆ ಕಟ್ಟಬಹುದು, ಆದರೆ ನೆಲದ ಸಂಸ್ಕೃತಿ, ಪ್ರಜಾಪ್ರಭುತ್ವವೇ ನೆಲಕಚ್ಚಿದರೆ ಹೇಗೆ ಎಂಬ ಆತಂಕವನ್ನು ಹೊರಹಾಕಿದ್ದಾರೆ. ಈ ಬಗ್ಗೆಯೂ ರಾಜಕಾರಣಿಗಳು ಗಂಭೀರವಾಗಿ ಚಿಂತನೆ ನಡೆಸಬೇಕಾದ ಅಗತ್ಯವಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅನೇಕತೆಯಲ್ಲಿ ಏಕತೆ: ಗಣರಾಜ್ಯೋತ್ಸವ ಪೆರೇಡ್‌ನ ಹೆಮ್ಮೆ
ಕಲಾಪ: ನಾಯಕರು ಒಳಗೆ, ನೈತಿಕತೆ ಹೊರಗೆ!
ಎಂಇಎಸ್: ಭಾಷೆಯ ಹೆಸರಲ್ಲಿ ದ್ವೇಷದ ಬೀಜ
ಸತ್ಯಂ ರಾಜು: ನೆಲದ ಕಾನೂನು v/s ನೆಲದ ಪ್ರೀತಿ
ಅ'ಸತ್ಯಂ': ಚಿನ್ನದ ನವಿಲು ಈಗ ಕಾಗದದ ಹುಲಿ!
ದಾಳಿಗೊಂದು ತಿಂಗಳು: ಎಚ್ಚರಿಕೆ ನೀಡುತ್ತಲೇ ಇದೆ ಭಾರತ