ಚಂದ್ರಾವತಿ ಬಡ್ಡಡ್ಕ ಮಂಗಳೂರಿನ ಎಮ್ನೇಶಿಯಾ ದಿಲಂಜ್ ಎಂಬ ಪಬ್ಬಿನಲ್ಲಿ ಶ್ರೀರಾಮ ಸೇನೆಯ 'ಸಂಸ್ಕೃತಿ ಉಳಿಸುವ' ಗೂಸಾದ ಚಿತ್ರಣ ಟಿವಿ ವಾಹಿನಿಗಳಲ್ಲಿ ಬಿತ್ತರವಾಗುತ್ತಿರುವಂತೆ ಹತ್ತು ದಿಕ್ಕುಗಳಿಂದ ಹಲವು ಧ್ವನಿಗಳು ಕೇಳಿಬಂದಿವೆ. ಮಹಿಳೆಯರಿಗೆ ಇಲ್ಲಿ ರಕ್ಷಣೆಯಿಲ್ಲ ಎಂಬುದರಿಂದ ಹಿಡಿದು, ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ, ದೇಶದ ಸಂಸ್ಕೃತಿ ನಾಶವಾಗುತ್ತಿದೆ, ಸರಕಾರವೇ ಗೂಂಡಾಗಿರಿ ಪೋಷಿಸುತ್ತಿದೆ, ಭಾರತದಲ್ಲಿ ತಾಲಿಬಾನೀಕರಣ, ಯುವ ಜನಾಂಗ ದಾರಿ ತಪ್ಪುತ್ತಿದೆ, ರಾಜಕೀಯ ಒಳಸಂಚು ಸೇರಿದೆ ಎಂಬಿತ್ಯಾದಿ ಮಾತುಗಳು ಕೇಳುತ್ತಲೇ ಇವೆ.
ಬಹುಶಃ ಈ ದೃಶ್ಯಗಳು ಸುದ್ದಿವಾಹಿನಿಗಳಲ್ಲಿ ಎಡೆಬಿಡದೆ ರಂಗುರಂಗಿನ ವ್ಯಾಖ್ಯಾನದೊಂದಿಗೆ ಪ್ರಸಾರವಾಗದೆ, ಬರಿಯ ಮುದ್ರಣ ಮಾಧ್ಯಮಗಳ ವರದಿಗೆ ಸೀಮಿತವಾಗಿರುತ್ತಿದ್ದರೆ ಪ್ರಕರಣ ಇಷ್ಟೊಂದು ಕಾವೇರುತ್ತಿರಲಿಲ್ಲ, ಮತ್ತು ಅವಕಾಶವಾದಿ ರಾಜಕಾರಣಿಗಳು ಇಷ್ಟೊಂದು ಹೇಳಿಕೆಗಳನ್ನು ನೀಡುತ್ತಿರಲಿಲ್ಲ. ಯಾಕೆಂದರೆ, ಇಂತಹ ಘಟನೆಗಳು ಆಗೀಗ ಅಲ್ಲಲ್ಲಿ ನಡೆಯುತ್ತಿದ್ದರೂ, ಅವುಗಳು ಅಷ್ಟೊಂದು ಸದ್ದು ಮಾಡಿದ್ದು ಕಡಿಮೆಯೇ. ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯವಾಗಿ ಕಂಡು ಬಂದ ಜೋಡಿಗಳಿಗೆ ಈ ಹಿಂದೆಯೂ ಇಂತಹ ಸಂಘಟನೆಗಳು ಸಾಕಷ್ಟು ಬಾರಿ ಥಳಿಸಿದ ಘಟನೆಗಳನ್ನು ಸಂಜೆ ಪತ್ರಿಕೆಗಳಲ್ಲಿ ಓದಿದ್ದೇವೆ, ಓದುತ್ತಿರುತ್ತೇವೆ.
ಈಗ ಒಂದು ನಿರ್ದಿಷ್ಟ ಘಟನೆಗೆ ಸಂಬಂಧಿಸಿ ರಾಜಕೀಯ ಪಕ್ಷಗಳು ಬೊಬ್ಬೆ ಹೊಡೆಯಲಾರಂಭಿಸಿವೆ. ಹಿಂದೆ ಕಾಂಗ್ರೆಸ್ ಅಥವಾ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರಗಳು ಅಸ್ತಿತ್ವದಲ್ಲಿದ್ದಾಗಲೂ ಇಂತಹ ಘಟನೆಗಳು ಸಾಕಷ್ಟು ನಡೆದಿವೆ. ಆಗೆಲ್ಲ ನಮ್ಮ ಮುಖಂಡರು ಈ ರಾಜ್ಯದಲ್ಲಿ ಯಾರಿಗೂ ರಕ್ಷಣೆಯೇ ಇಲ್ಲ ಎಂದೋ, ಅಥವಾ ಹಿರಿಯ ರಾಜಕಾರಣಿಗಳು ಏರಿಳಿತದ ತಮ್ಮ ಧ್ವನಿಯಲ್ಲಿ ಘಟನೆಯನ್ನು ಖಂಡಿಸಿದ್ದೋ ಇಷ್ಟೊಂದು ರಭಸದಲ್ಲಿ ಆಗಿರಲಿಲ್ಲ. ಈಗ ಬಿಜೆಪಿ ಸರಕಾರವಿದೆ. ಅದು ಇದ್ದಾಗಲೂ ಈ ರೀತಿ ನಡೆಯುತ್ತಿದೆ.
ಹಾಗಂತ ಪ್ರಸಕ್ತ ಸರ್ಕಾರದ ಪರವಾಗಿ ವಾದಿಸುತ್ತಿಲ್ಲ, ಈ ಪುಂಡಾಟಿಕೆಯನ್ನು ಸಮರ್ಥಿಸುತ್ತಲೂ ಇಲ್ಲ. ಕಾನೂನು ಕೈಗೆತ್ತಿಕೊಂಡ ಈ ಪುಂಡಾಟಿಕೆ ತಪ್ಪೇ. ಪಬ್ಬಿಗೆ ಹೋದ ಮಹಿಳೆಯರಿಗೆ ಹೊಡೆದದ್ದು ತಪ್ಪು. ಅದು ಖಂಡನಾರ್ಹವೂ ಹೌದು. ಆದರೆ ಅಲ್ಲಲ್ಲಿ ಆಗೀಗ್ಗೆ ನಡೆಯುತ್ತಿರುವ ಘಟನೆಗಳಲ್ಲೊಂದು, ಎಷ್ಟೆಲ್ಲಾ ತಿರುವುಗಳನ್ನು ಪಡೆದುಕೊಂಡು ರಾಷ್ಟ್ರಮಟ್ಟದಲ್ಲಿ ಹೇಗೆ ಸುದ್ದಿಯಾಗುತ್ತದೆ, ಅದು ರಾಜಕೀಯ ತಿರುವು ಪಡೆದುಕೊಂಡು ಒಂದು ಊರಿನ ಹೆಸರು, ರಾಜ್ಯದ ಹೆಸರು ಯಾವ ರೀತಿ ಕೆಡುತ್ತದೆ ಎಂಬುದು ಇಲ್ಲಿ ಯೋಚಿಸಬೇಕಾದ ಸಂಗತಿ. ಅಷ್ಟೆ. ಅದರಲ್ಲೂ ಟಿವಿ ವಾಹಿನಿಯೊಂದು, ಹೋಟೇಲಿಗೆ ಊಟಕ್ಕೆ ತೆರಳಿದ್ದ ಮಹಿಳೆಯರ ಯುವತಿಯರ ಮೇಲೆ ಹಲ್ಲೆ ಎಂದೇ ವರದಿ ಪ್ರಕಟಿಸಿರುವುದು ಮಾಧ್ಯಮಗಳ ಜವಾಬ್ದಾರಿಯನ್ನೂ ನೆನಪಿಸಿಕೊಡುತ್ತದೆ.
ಶ್ರೀರಾಮ ಸೇನೆ ಪಬ್ಬಿಗೆ ನುಗ್ಗಿ ಕಂಡವರ ಮಕ್ಕಳ ಮೇಲೆ ಕೈ ಮಾಡಿದ್ದು ತಪ್ಪು. ಈ 'ಕಂಡವರ ಮಕ್ಕಳು' ಕಂಡಕಂಡಲ್ಲಿ ಕುಡಿದು ಚಿತ್ತಾಗಿ ತೂರಾಡಲಿ. ಅವರವರ ಸ್ವಾತಂತ್ರ್ಯ. ಅದರ ಸಾಧಕ ಬಾಧಕಗಳಿಗೆ ಅವರೇ ಜವಾಬ್ದಾರರು. ಹಾಗಿರುವಾಗ ಅದನ್ನು ತಡೆಯುವುದು, ಅವರ ಮೇಲೆ ಹಲ್ಲೆ ನಡೆಸುವುದು ಇವೆಲ್ಲಾ ಇವರಿಗ್ಯಾಕೆ ಉಸಾಬರಿ? ಅದೂ ಅಲ್ಲೇ ಕಾದು ಕುಳಿತಿದ್ದ ಕ್ಯಾಮರಾ, ಮಾಧ್ಯಮಗಳವರೆದುರು ವೀರಾವೇಶ ತೋರಿದ ಶ್ರೀರಾಮ ಸೇನೆಯ ಪರಿಸ್ಥಿತಿ ಇದೀಗ ಕೋಲು ಕೊಟ್ಟು ಹೊಡಿಸಿಕೊಂಡಂತಾಗಿದೆ. ಅವರೇ ಈ ಮಾಧ್ಯಮಗಳವರನ್ನು ಕರೆದೊಯ್ದಿದ್ದರೆ? ಅಥವಾ ಇದರ ಹಿಂದೆ ಬೇರೇನಾದರೂ ವ್ಯವಸ್ಥಿತ ಸಂಚು ಇದೆಯೇ? ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ.
ಇತ್ತ ಮಹಾ ಚುನಾವಣೆ ಬಂದು ಕಾಲ್ಬುಡಕ್ಕೆ ನಿಂತಿರುವಾಗ ಈ ಅವಕಾಶವನ್ನು ಯಾವ ರಾಜಕಾರಣಿಗಳು ಬಳಸಿಕೊಳ್ಳದಿದ್ದಾರು? ಬಿಜೆಪಿ ಸರ್ಕಾರವೂ ಘಟನೆಯನ್ನು ಖಂಡಿಸಿದೆ. ಅಲ್ಲದೆ, ಇದು ಸರ್ಕಾರದ ವಿರುದ್ಧ ಹೂಡಿರುವ ವ್ಯವಸ್ಥಿತ ಸಂಚು, ಇದರ ಕುರಿತು ತನಿಖೆಯಾಗಬೇಕು, ಶ್ರೀರಾಮ ಸೇನೆಯನ್ನು ನಿಷೇಧಿಸುವ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ ಎಂದೂ ಹೇಳುತ್ತಿದೆ. ಈಗಾಗಲೇ 25ರಷ್ಟು ಮಂದಿಯ ಬಂಧನವೂ ಆಗಿದೆ.
ಈ ಕುರಿತಂತೆ ಏನಾಯಿತೆಂದು ತಿಳಿಯೋಣ ಅಂತ ಮಂಗಳೂರಿನ ಮಾಧ್ಯಮ ಮಿತ್ರರಿಗೆ ಫೋನಾಯಿಸಿ ಏನಿದು, ಮಂಗಳೂರಿನಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ವಾ ಅಂತ ಕೇಳಿದರೆ, ಎಲ್ಲಾ ಟಿವಿ ಸುದ್ದಿವಾಹಿನಿಗಳ ಕೊಡುಗೆ ಮಾರಾಯ್ತಿ, ಆ ಟಿವಿಗಳು ಇದಕ್ಕಿಂತ ಮುಂಚೆ ಅಲ್ಲಿ ಯಾವೆಲ್ಲಾ ದೃಶ್ಯಗಳು ನಡೆಯುತ್ತಿದ್ದವು ಎಂಬುದನ್ನು ತೋರಿಸದೆ ಹೊಡೆದಿದ್ದನ್ನು ಮಾತ್ರವೇ ತೋರಿಸ್ತಿವೆ ಎಂದು ಅಡ್ಡ ಗೋಡೆ ಮೇಲೆ ದೀಪವಿಟ್ಟಂತೆ ಹೇಳಿದರು. ಅಲ್ಲದೆ, "ನೀನು ಅಷ್ಟು ವರ್ಷ ಮಂಗಳೂರಲ್ಲಿದ್ದೆ, ನಿನ್ನನ್ನು ಯಾರಾದರೂ ಬಡಿದರಾ" ಎಂದು ತಿರುಗಿ ನನ್ನನ್ನೇ ಪ್ರಶ್ನಿಸಿದರು. ಇನ್ನೂ ಕೆಲವು ಮಂಗಳೂರ ಮಹಿಳೆಯರ ಪ್ರಕಾರ, ಅಷ್ಟೊಂದು ಕ್ರೂರವಾಗಿ ನಡೆದುಕೊಳ್ಳುವುದು ಬೇಡವಿತ್ತು ಎಂದು ಹೇಳಿದರೂ, ಇಂತಹ ಹುಡುಗಿಯರ ಲಂಗುಲಗಾಮಿಲ್ಲದ ವರ್ತನೆಗೆ ಇದೊಂದು ಪಾಠ, ಈ ಘಟನೆ ಕೆಲವರಲ್ಲಾದರೂ ಭಯಹುಟ್ಟಿಸಿರಬಹುದು ಎಂಬುದಾಗಿ ಹೇಳುತ್ತಾರೆ.
ಯಾಕಿಂತಹ ಮಾತು ಎಂದು ಕೆದಕಿದರೆ, "ಶಿಕ್ಷಣ ಉದ್ಯೋಗಕ್ಕಾಗಿ ಎಲ್ಲೆಲ್ಲಿಂದಲೋ ಬರುವ ಇಂತಹವರು ಯಾವುದೇ ಭಯವಿಲ್ಲದೆ ಅರೆಬರೆ ಬಟ್ಟೆತೊಟ್ಟು ಹೊತ್ತುಗೊತ್ತಿಲ್ಲದೆ, ತಿರುಗಾಡುತ್ತಾರೆ. ಇದನ್ನು ಕಂಡವರು ಮಂಗಳೂರಿನ ಹುಡುಗಿಯರೇ ಹಾಗೆ ಎಂಬ ಹಣೆಪಟ್ಟಿ ಕೊಡುತ್ತಾರೆ. ಇತರ ಪ್ರದೇಶಗಳ ಮಂದಿ ಮಂಗಳೂರಿನ ಹುಡುಗಿಯರು ತುಂಬ ಫಾಸ್ಟ್ ಎಂಬ ಅಭಿಪ್ರಾಯ ಹೊಂದಿದ್ದರೆ ಇದಕ್ಕೆ ಇಂತಹ ಪರಊರ ಹುಡಿಗಿಯರೇ ಕಾರಣ" ಎಂದು ತಮ್ಮ ವಾದವನ್ನು ಸಮರ್ಥಿಸಿಕೊಳ್ಳುತ್ತಾರೆ.
ಟಿವಿಯಲ್ಲಿ ತೋರಿಸುತ್ತಿದ್ದ ದೃಶ್ಯಗಳನ್ನು ಕಂಡಾಗ ಹಳ್ಳಿಗಳಲ್ಲಿ ಅವಿದ್ಯಾವಂತ ಕುಡುಕ ಗಂಡಂದಿರು ತಮ್ಮ ಹೆಂಡಿರ ಜುಟ್ಟು ಹಿಡಿದು ಬಡಿವಂತೆ ಕಾಣುತ್ತಿತ್ತು. ಅಟ್ಟಾಡಿಸಿಕೊಂಡು ಬಡಿದ ಶ್ರೀರಾಮ ಸೇನೆಯ ಅಟ್ಟಹಾಸ ಕಂಡ ಹುಡುಗಿಯರಂತೂ ಸದ್ಯದ ಮಟ್ಟಿಗೆ ಇತ್ತ ತಲೆಹಾಕಲಾರರು.
ಇದೀಗ ಈ ಘಟನೆಗೆ ಕೇಂದ್ರ ಸಚಿವೆ ರೇಣುಕಾ ಚೌಧುರಿಯವರು ಭಾರತವನ್ನು ತಾಲಿಬಾನೀಕರಣ ಮಾಡಲಾಗುತ್ತಿದೆ ಎಂದಿದ್ದಾರೆ. ಮಹಿಳಾ ಆಯೋಗವು ಮಂಗಳೂರಿಗೆ ಹೊರಟಿದೆಯಂತೆ. ಬರಬೇಕು. ಮಾನವ ಹಕ್ಕುಗಳವರು ಬಂದಾರು, ಅವರೂ ಬರಬೇಕು. ಈ ಎಲ್ಲದರ ಮಧ್ಯೆ ಕಾಡುವುದು, ಎಷ್ಟೋ ಅಸಹಾಯಕ ಮಹಿಳೆಯರು ದೌರ್ಜನ್ಯಗಳನ್ನು ಸಹಿಸಲಾಗದೆ ಸತ್ತಿದ್ದಾರೆ, ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬರುತ್ತಿಲ್ಲ. ದೂರು ನೀಡಿದವರಿಗೆ ರಕ್ಷಣೆ ಒದಗುತ್ತಿಲ್ಲ. ಇಂತಹ ಅನೇಕ ಘಟನೆಗಳು ಯಾಕೆ ಮಾಧ್ಯಮಗಳಲ್ಲಿ ಅತಿಯಾಗಿ ಎದ್ದುಕಾಣಿಸಿಲ್ಲ? ಕೆಲವು ಪ್ರಕರಣಗಳು ಸಿಂಗಲ್ ಕಾಲಮ್ ನ್ಯೂಸ್ ಆಗಿ ಸತ್ತುಹೋಗಿವೆ. ಒಂದು ಘಟನೆ ನೆನಪಿಗೆ ಬರುತ್ತದೆ. 2006ರಲ್ಲಿ ಸಮ್ಮಿಶ್ರ ಸರ್ಕಾರ ರಾಜ್ಯದಲ್ಲಿತ್ತು. ಆಗ ಬೆಳ್ತಂಗಡಿಯ ಕಡುಬಡತನದ ಮಹಿಳೆಯೊಬ್ಬಳು ತನ್ನ ನಾಲ್ಕು ಮಕ್ಕಳನ್ನು ಸುತ್ತ ಮುತ್ತ ಕಟ್ಟಿಕೊಂಡು ನೇಣಿಗೆ ಶರಣಾಗಿದ್ದಳು. ಇಂತಹ ಹೃದಯ ವಿದ್ರಾವಕ ಘಟನೆಗಳು ಹುಡುಕಿದರೆ ಬೇಕಷ್ಟು ಸಿಕ್ಕಾವು. ಆಗ ಯಾಕೆ ಮಹಿಳಾ ಆಯೋಗ ಬರಲಿಲ್ಲ? ಮಾನವ ಹಕ್ಕುಗಳವರು ಎಚ್ಚೆತ್ತುಕೊಂಡಿಲ್ಲ? ಈಗ 'ಅಟ್ಟಾಡಿಸಿ ಹೊಡೆದ' ಘಟನೆಯ ಫೂಟೇಜ್ ಬಹುತೇಕ ಎಲ್ಲಾ ಭಾಷೆಗಳ ಟಿವಿ ವಾಹಿನಿಗಳಲ್ಲೂ ಬಿತ್ತರವಾಗಿವೆ. ಮಂಗಳೂರಿನ ಘಟನೆಯಾದ ಕಾರಣ, 'ಏನಾಯ್ತು ನಿಮ್ಮ ಮಂಗಳೂರಲ್ಲಿ' ಅಂತ ನನ್ನನ್ನು ಪ್ರಶ್ನಿಸಿದರೆಲ್ಲ ಹೀಗಿಗೆ ಅಂತ ವರದಿಯಾದ ಸುದ್ದಿಗಳನ್ನು ವಿವರಿಸಿ ನೀವೇನಂತೀರಿ ಎಂದು ಕೇಳಿದಾಗ ವ್ಯಕ್ತವಾದ ಅನಿಸಿಕೆಗಳು ಹೀಗಿವೆ:
ಸೌಮ್ಯ: ಅವರು ಸಾರ್ವಜನಿಕವಾಗಿ ಕುಡಿದು ತೂರಾಡುತ್ತಿದ್ದರೆ ಬಾರಿಸಬೇಕಿತ್ತು. ಆದರೆ ಅವರು ಪಬ್ ಒಳಗಡೆ ಇದ್ದಾಗ ಬಡಿದದ್ದು ತಪ್ಪು. ಆದರೂ ಹುಡುಗೀರು ಹೀಗೆ ಪಬ್‌ಗೆ ತೆರಳಿ ಅಮಲೇರಿಸಿಕೊಂಡು ನರ್ತಿಸಬಾರದು, ಅವರವರ ಮನೆಯಲ್ಲಿ ಬೇಕಾದ್ದು ಮಾಡಿಕೊಳ್ಳಲಿ. ಹುಡುಗಿಯರಿಗೆ ಸ್ವಯಂ ನಿಯಂತ್ರಣವಿರಬೇಕು.
ಭುವನ: ಅವರು ಚೆನ್ನಾಗಿಯೇ ಉಡುಪು ಧರಿಸಿದ್ದಾರೆ. ಇದು ಆಧುನಿಕ ಯುಗ. ಅಂತಹ ದಿರಿಸು ಅಶ್ಲೀಲವಲ್ಲ. ಆ ಹುಡುಗ ಹುಡುಗಿಯರು ಬೇಕಾದ್ದು ಮಾಡಲಿ, ಇವರು ಯಾರು ಕೇಳಲು? ನೋಡಿ.... ನೋಡಿ... ಆ ಹುಡುಗಿಯ ಕೂದಲು ಹಿಡಿದು ಬಗ್ಗಿಸುತ್ತಿದ್ದಾನೆ ಆತ. ಇದು ತಪ್ಪು.
ನಾಗೇಶ: ಪಬ್‌ಗಳಲ್ಲಿ ಕುಡಿದು ಕುಣಿದು ತೂರಾಡುವುದನ್ನು ಖಂಡಿಸುವುದು ಸರಿಯೇ.. ಆದ್ರೂ ಆ ರೀತಿ ಹೊಡೆದು ಬಡಿದು ದೈಹಿಕ ಹಲ್ಲೆ ನಡೆಸುವುದು ಅಷ್ಟೊಂದು ಸೂಕ್ತವಲ್ಲಂತ ನಂಗನಿಸುತ್ತದೆ.
ರಾಜೇಶ್: ಹಾಗಾದ್ರೆ ಹೊರಗಡೆ ಹೋಗಿ ಸಂತೋಷದಿಂದ ಇರುವುದಕ್ಕೂ ಹಕ್ಕಿಲ್ವಾ?
ರವಿವರ್ಮ: ಹಾಗೇ ಆಗಬೇಕು ಹುಡ್ಗೀರ್ಗೆ, ಅವರಿಗಲ್ಲ, ಇಂತಹ ಯುವಕ-ಯುವತಿಯರ ಹೆತ್ತವರಿಗೆ ಫಸ್ಟ್ ಚುರುಕು ಮುಟ್ಟಿಸಬೇಕು. ಈಗಿನ ಅಪ್ಪಅಮ್ಮಂದಿರು ಹೇಳೋದೇನ್ ಗೊತ್ತಾ, ನಾವು ಪಾರ್ಟಿಗೆ ಹೋಗ್ತಾ ಇದ್ದೇವೆ, ನೀನು ಬೇರೆಯವರೊಂದಿಗೆ ಹೋಗು. ಇಂತಹ ಸಂಸ್ಕೃತಿ ಹೆಚ್ಚುತ್ತಿರುವುದು ಆರೋಗ್ಯಕರ ಸಮಾಜದ ಲಕ್ಷಣ ಅಲ್ಲ.
ಶೋಭಾ: ಸ್ವಾತಂತ್ರ್ಯ ಇರ್ಬೇಕು. ಆದ್ರೆ ಸ್ವೇಚ್ಛೆಯಲ್ಲ. ಅನೈತಿಕವಾಗಿ ವರ್ತಿಸುವುದನ್ನು ನಾನು ವಿರೋಧಿಸುತ್ತೇನೆ. ಆದರೆ ಯಾರೂ ಕಾನೂನನ್ನು ಕೈಗೆತ್ತಿಕೊಂಡು ಆ ಪರಿಯಲ್ಲಿ ಅಟ್ಟಾಡಿಸಿ ಹೊಡೆದಿರುವುದು ಸರಿಯಲ್ಲ. ಅದ್ಯಾವ ಸೇನೆಯಾಗಿದ್ದರೂ, ಅದರ ನೀತಿ ಸರಿಇದ್ದರೂ ರೀತಿ ಸರಿಇಲ್ಲ. ಅವರು ಕಾನೂನು ರೀತಿಯಲ್ಲೇ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು.
ಅಭಿಷೇಕ್: ಹಲ್ಲೆ ಸರಿಯೋ ತಪ್ಪೋ ಎಂಬುದು ಬೇರೆ ವಿಚಾರ. ಆದರೆ ಇದು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುವ ಘಟನೆಯಂತೂ ಅಲ್ಲ. ಅದೇ ಇನ್ನೊಂದು ಘಟನೆ ನೋಡಿ. ಪಂಜಾಬಿನಲ್ಲಿ ನವವಧೂವರರನ್ನು ಮನೆತನದ ಮರ್ಯಾದೆ ತೆಗೆದರೆಂದು ಕ್ರೋಧಗೊಂಡ ಹುಡುಗಿಯ ಹೆತ್ತವರೇ ಗುಂಡಿಕ್ಕಿ ಕೊಂದರು. ಇದಕ್ಕೆ ನಿಮ್ಮ ಮಹಿಳಾ ಆಯೋಗ, ಅಥವಾ ಮಾನವಹಕ್ಕುಗಳು ಏನನ್ನುತ್ತವೆ? ಆ ನವದಂಪತಿಗಳಿಗೆ ಜೀವಿಸುವ ಹಕ್ಕಿಲ್ಲವೇ? ಶಾಲೆ-ಕಾಲೇಜುಗಳಲ್ಲಿಯೂ ಅದೆಷ್ಟೋ ಹೊಡೆದಾಟಗಳಾಗುತ್ತವೆ. ಆಗ ಪುರುಷರ ಮಾನವ ಹಕ್ಕುಗಳ ಉಲ್ಲಂಘನೆಯಾಗುವುದು ಯಾರಿಗೂ ಕಾಣಿಸುವುದಿಲ್ಲವೇಕೆ? ಮತ್ತೊಂದು ಘಟನೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಮುಸ್ಲಿಂ ಹುಡುಗಿಯೊಬ್ಬಳು ಜೀನ್ಸ್ ತೊಟ್ಟಿದ್ದಳೆಂಬ ಕಾರಣಕ್ಕೆ ಮತಾಂಧ ಚಿಕ್ಕಪ್ಪನೇ ಆಕೆಯನ್ನು ಗುಂಡಿಟ್ಟು ಸಾಯಿಸಿದ್ದ ಘಟನೆ ಬಗ್ಗೆ ಕೇಳಿದ್ದೇವೆ. ಇದು ಮಾನವ ಹಕ್ಕುಗಳ ಉಲ್ಲಂಘನೆಯಲ್ಲವೇ? ಇದು ರಾಷ್ಟ್ರ ಮಟ್ಟದಲ್ಲಿ ಈ ಪರಿ ಗಮನ ಸೆಳೆದಿಲ್ಲವೇಕೆ?
ದೀಪಕ್: ಸರಿಯೋ ತಪ್ಪೋ ನಂಗೊತ್ತಿಲ್ಲ. ಅದು ಅವರವರ ಅಭಿಪ್ರಾಯಕ್ಕೆ ಬಿಟ್ಟದ್ದು. ಆದರೆ ಕಾನೂನನ್ನು ಕೈಗೆತ್ತಿಕೊಳ್ಳಬಾರದು ಎಂದಾಗ ಒಂದು ಮಾತು. ಕೆಲವು ದಿನಗಳ ಹಿಂದೆ ಗದಗಿನ ಒಂದು ಊರಲ್ಲಿ ಇಬ್ಬರು ನಕಲಿ ಮಂತ್ರವಾದಿಗಳನ್ನು ಊರವರು ಹಿಡಿದು ಮರಕ್ಕೆ ಕಟ್ಟಿಹಾಗಿ ಛಟೀರ್ ಪಟೀರ್ ಎಂಬುದಾಗಿ ಎಗಾದಿಗ ಬಾರಿಸಿದರು. ಮನಸೋಇಚ್ಛೆ ಬಾರಿಸಿದ ಬಳಿಕ ಪೊಲೀಸರಿಗೆ ಒಪ್ಪಿಸಿದರು. ಈ ಘಟನೆಯನ್ನೂ ಟಿವಿ 9ಲ್ಲಿ ಪದೇಪದೇ ತೋರಿಸಲಾಯಿತು. ಬಡಿದವರ ಅಭಿಪ್ರಾಯವೂ ಪ್ರಸಾರವಾಯಿತು. ಕಾನೂನು ಎಲ್ಲರಿಗೂ ಒಂದೇ ತಾನೆ? ಇಲ್ಲಿ ಅವರು ಕಾನೂನನ್ನು ಕೈಗೆತ್ತಿಕೊಂಡಿದ್ದು ಸರಿಯಾ? ಹಿಡಿದು ಪೊಲೀಸರಿಗೆ ಒಪ್ಪಿಸುವುದು ಮಾತ್ರ ಅವರ ಕೆಲ್ಸವಲ್ವಾ?
ಶಂಕರ್: ಒಳ್ಳೇದಾಗಿದೆ. ಇನ್ನೂ ಚೆನ್ನಾಗಿ ಎರ್ಡೆರ್ಡು ಬಿಡ್ಬೇಕಿತ್ತು. ಅಪ್ಪಅಮ್ಮ ಕಷ್ಟ ಪಟ್ಟು ಕಲೀರಿ ಮಕ್ಳೆ ಅಂತ ಕಳ್ಸಿದ್ರೆ ಇವ್ರು ಇದನ್ನು ಕಲಿಯೋದಾ ಇಲ್ಲಿಬಂದು. ಇಂಥವರನ್ನು ಕಂಡು ಇಲ್ಲಿ ನಮ್ಮ ಮಕ್ಳು ಹಾಳಾಗ್ತಾರೆ.
ವಾಣಿ: ಮೊದ್ಲು ಟಿವಿ ವಾಹಿನಿಗಳ ಮೇಲೆ ಕೇಸು ಜಡೀಬೇಕು. ಆ ಹುಡ್ಗೀರ್ಗೆ ಅವ್ರೆಲ್ಲಾ ಸೇರಿ ಹೊಡೀತಿದ್ರೆ, ಇವ್ರು ಕ್ಯಾಮರಾ ಹಿಡ್ಕೊಂಡು ಇಂಚಿಂಚನ್ನೂ ಶೂಟ್ ಮಾಡ್ತಿದ್ರು. ಮಾನವ ಹಕ್ಕುಗಳು ಕಣ್ಮುಂದೆಯೇ ಉಲ್ಲಂಘನೆಯಾಗುತ್ತಿದ್ದರೂ ಇವರಿಗೆ ಶೂಟಿಂಗ್ ಮಾಡೋದಷ್ಟೇ ಕೆಲಸವಾಗಿಬಿಟ್ಟಿತ್ತು. ಇಂಥದ್ದು ನಡೀತದೆ ಎಂದು ಗೊತ್ತಿದ್ದೇ ಅಲ್ಲಿಗೆ ತೆರಳಿದ್ದ ಅವರು, ರಾಷ್ಟ್ರಮಟ್ಟದಲ್ಲಿ ಇದನ್ನೊಂದು ಇಶ್ಯೂ ಆಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅನ್ಯಾಯ ನಡೀತದೆ ಅಂತ ಗೊತ್ತಿದ್ದೂ ಪೊಲೀಸರಿಗೆ ತಿಳಿಸದ ಈ ಮಾಧ್ಯಮಗಳು ಇದ್ದರೆಷ್ಟು ಬಿಟ್ಟರೆಷ್ಟು? ಒಟ್ಟಿನಲ್ಲಿ ಇದೆಲ್ಲ ಪೂರ್ವಯೋಜಿತ ಸಂಚು. 'ನಾವ್ ಹೊಡೀತೀವಿ, ನೀವು ವರದಿ ಮಾಡಿ' ಅಂತ 'ಬ್ರೇಕಿಂಗ್ ನ್ಯೂಸ್' ಪತ್ರಕರ್ತರನ್ನೆಲ್ಲಾ ಕರೆದೊಯ್ದಿದ್ದಾರೆ ಈ ಪುಂಡರು. ಇದರ ಹಿಂದೆ ಉದ್ದೇಶ ಬೇರೆಯೇ ಇರಬಹುದು. ಅದನ್ನು ಮೊದ್ಲು ತನಿಖೆ ಮಾಡ್ಲಿ.
ಏನೋ ಉದ್ದೇಶವಿಟ್ಟುಕೊಂಡು ಪೊಲೀಸ್ ಕೆಲಸ ಮಾಡಲು ಹೋಗಿರುವ ಶ್ರೀರಾಮ ಸೇನೆ ಇದೀಗ ಆ ಹುಡುಗ ಹುಡುಗಿಯರ ಮೇಲೆ ಏನು ಆರೋಪ ಹೊರಿಸಿತ್ತೋ; ಅದನ್ನು ತಾನು ಎದುರಿಸುತ್ತಿದೆ. ಇವರ ಮೇಲೆ ಮಹಿಳೆಯರ ಮೇಲೆ ಹಲ್ಲೆ, ಲೈಂಗಿಕ ದೌರ್ಜನ್ಯ, ಗೂಂಡಾಗಿರಿ ಆಪಾದನೆಗಳನ್ನು ಹೇರಲಾಗಿದೆ. ವಿಪರ್ಯಾಸವೆಂದರೆ ಪಬ್‌ನಲ್ಲಿ ಅನೈತಿಕ ವರ್ತನೆ ತೋರಿದ್ದಾರೆ ಎಂದು 'ಸಮಾಜವನ್ನು ಕಾಪಾಡ' ಹೊರಟವರಿಗೆ ಅದೇ ತಿರುಗುಬಾಣವಾದಂತಿದೆ. ಇದು ಇಂತಹ ಸಾಮಾಜಿಕ ಪೊಲೀಸರಿಗೂ ಒಂದು ಪಾಠವೇ. ಈ ಹಿಂದೆ ಇಂತಹ ಸಂಸ್ಕೃತಿ ರಕ್ಷಣೆಗೆ ಹೊರಟವರು, ಬಳಿಕ ಇಂತಹ ಅಸಂಸ್ಕೃತಿಯಲ್ಲಿ ಸಿಕ್ಕ ಉದಾಹರಣೆಗಳೂ ಇವೆ.
ಒಟ್ಟಾರೆಯಾಗಿ, ಈ ಘಟನೆಯಿಂದ ವ್ಯಕ್ತವಾದ ಅಂಶಗಳೆಂದರೆ ಕಾನೂನನ್ನು ಕೈಗೆತ್ತಿಕೊಳ್ಳುವುದು ತಪ್ಪು. ಇಂತಹ ಅನೈತಿಕ ಕ್ರಿಯೆಗಳು ನಡೆಯುತ್ತವೆ ಎಂದು ದೂರು ನೀಡದೆ ಪೊಲೀಸರು ಕ್ರಮಕೈಗೊಳ್ಳುವುದಿಲ್ಲ. ಒಮ್ಮೆ ದೂರು ನೀಡಲು ಹೋಗಿ, ಮತ್ತೆ ಮತ್ತೆ ಕೋರ್ಟಿಗೆ ಅಲಿಯಬೇಕಾದ ಕಷ್ಟದ ಅರಿವಿರುವ ಯಾರೂ ದೂರು ನೀಡಲು ಹೋಗುವುದಿಲ್ಲ. ಹೀಗಾದರೆ ಹೇಗೆ?
ಮಾನವ ಹಕ್ಕುಗಳ ಉಲ್ಲಂಘನೆಯ ಬಗ್ಗೆ ಕೂಗೆದ್ದಿರುವುದು ಒಳ್ಳೆಯದೇ. ಆದರೆ ಎಲ್ಲ ಊರಿನಲ್ಲಿಯೂ ನಡೆಯುತ್ತಿರುವ ಇದೇ ರೀತಿಯ ಎಲ್ಲ ಘಟನೆಗಳಿಗೂ ಅದು ಅನ್ವಯವಾಗಬೇಕು. ಎಲ್ಲ ರೀತಿಯ ಮಾನವ ಹಕ್ಕುಗಳ ಉಲ್ಲಂಘನೆಯನ್ನೂ ತಡೆಯುವಂತಾಗಬೇಕು. ಕಾನೂನು ಕೈಗೆತ್ತಿಕೊಂಡು ತಪ್ಪು ಮಾಡಿದವರಿಗೆ ಶಿಕ್ಷೆಯಾಗಲೇಬೇಕು. ಎಲ್ಲಕ್ಕೂ ಮೊದಲು, ರಾಜಕಾರಣಿಗಳು ಇಂತಹ ವಿಷಯಗಳಲ್ಲಿ ಮನಬಂದಂತಹ ಉದ್ರೇಕಕಾರಿ ಹೇಳಿಕೆ ನೀಡುವುದು ಮೊದಲು ನಿಲ್ಲಬೇಕು ಏನಂತೀರಿ? |