ನಾಗೇಂದ್ರ ತ್ರಾಸಿ ಪ್ರಪಂಚದಲ್ಲಿರುವ ಇಸ್ಲಾಂ ರಾಷ್ಟ್ರಗಳಲ್ಲಿನ ಕದನ ಮುಗಿಯುವಂತಹದ್ದಲ್ಲ. ಇರಾನ್, ಇರಾಕ್, ಸೌದಿ ಅರೇಬಿಯಾ, ಇಸ್ರೇಲ್ ಒಂದೊಂದು ದೇಶದ್ದು ಒಂದೊಂದು ತೆರನಾದ ರಕ್ತಪಾತದ ಕಥನ... ಇಸ್ಲಾಂ ಎಂದರೆ ಅದರ ಅರ್ಥ 'ಶಾಂತಿ', ವಿಪರ್ಯಾಸವೆಂದರೆ ಆ ಹೆಸರನ್ನೇ ಈಗ ಕೆಡಿಸತೊಡಗಿದ್ದಾರೆ ಉಗ್ರಗಾಮಿಗಳು. ಅವರು ಶಾಂತಿ ಸ್ಥಾಪಿಸಲು ಹೊರಟಿರುವುದು ಕತ್ತಿಯ ಮೊನೆಯಿಂದ ! ಅದು ಬುದ್ದನ ಶಾಂತಿ ಅಲ್ಲ, ಯೇಸುವಿನ ಶಾಂತಿ ಅಲ್ಲ.. ಗಾಂಧಿಯ ಅಹಿಂಸಾ ದಾರಿಯಲ್ಲ.. ಕಾಫಿರರ ವಿರುದ್ಧ ಯುದ್ಧ ಹೂಡಿ ಜಯಸಾಧಿಸುವ ಜಿಹಾದಿ ಶಾಂತಿ !. ಹಾಗೇ ಇಡೀ ಪ್ರಪಂಚವನ್ನೇ ಇಸ್ಲಾಂ ಜಗತ್ತನ್ನಾಗಿ ಮಾಡುವ ಮೂಲಕ ಶಾಂತಿ ಸ್ಥಾಪಿಸುವ ಕಲ್ಪನೆಯೇ ವಿಚಿತ್ರವಾದದ್ದು. ಅಂತಹ ಕಲ್ಪನೆಯ ಲ್ಯಾಬೋರೇಟರಿಯಾಗಿ, ಜಿಹಾದಿಗಳ ಸ್ವರ್ಗವಾಗುತ್ತಿದೆ ಪಾಕಿಸ್ತಾನ.ನಮಗೆ ತಾಲಿಬಾನ್‌ನಿಂದ ಅಪಾಯವಿದೆ, ಮೂಲಭೂತವಾದಿ ಸಂಘಟನೆಗಳನ್ನು ಮಟ್ಟಹಾಕುವ ಮೂಲಕ ಪಾಕಿಸ್ತಾನವನ್ನು ರಕ್ಷಿಸಬೇಕಾಗಿದೆ ಎಂದು ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಇದೀಗ ತಾಲಿಬಾನ್ ಕೈವಶದಲ್ಲಿರುವ ಸ್ವಾಟ್ ಕಣಿವೆಯಲ್ಲಿ ಶರಿಯತ್ ಕಾನೂನು ಜಾರಿಗೆ ತಥಾಸ್ತು ಎಂದಿದ್ದಾರೆ.ಎನ್‌ಡಬ್ಲ್ಯುಎಫ್‌ಸಿ ಸಭೆಯಲ್ಲಿ ತೆಹ್ರಿಕ್ ಎ ನಿಫಾಜ್‌ನ ಮೂಲಭೂತವಾದಿ ಧರ್ಮಗುರು ಸುಫಿ ಮಹಮದ್ ಖಾನ್ ಬೇಡಿಕೆಗೆ ಜರ್ದಾರಿ ಮಣಿದಿದ್ದು, ಸ್ವಾಟ್ ಸೇರಿದಂತೆ ಇಡೀ ಮಲಾಕಂಡ್ ವಿಭಾಗದಲ್ಲಿ ಶರಿಯತ್ ಕಾನೂನು ಚಲಾವಣೆಗೆ ಅನುಮತಿ ನೀಡಿರುವುದು ವಿಶ್ವದ ದೊಡ್ಡಣ್ಣನ ಕೆಂಗಣ್ಣಿಗೆ ಗುರಿಯಾಗುವಂತೆ ಮಾಡಿದ್ದಲ್ಲದೆ, ಜರ್ದಾರಿ ಅವರ ಕ್ರಮ ಆತಂಕಕ್ಕೆ ಎಡೆಮಾಡಿಕೊಟ್ಟಿದೆ.ಮುಂಬೈ ಮೇಲೆ ನಡೆದ ಭಯೋತ್ಪಾದನಾ ದಾಳಿ, ಕಟ್ಟರ್ ಉಗ್ರರನ್ನೇ ಪೋಷಿಸುತ್ತಿರುವ ಪಾಕಿಸ್ತಾನದಲ್ಲಿ ಇಂತಹ ಬೆಳವಣಿಗೆ ಮುಂದುವರಿದಲ್ಲಿ ಆ ದೇಶಕ್ಕೊಂದು ಭವಿಷ್ಯ ಇದೆಯಾ ಎಂಬುದು ಜಾಗತಿಕವಾಗಿ ಕಾಡುವ ಪ್ರಶ್ನೆ. ಉಗ್ರರನ್ನು ಮಟ್ಟಹಾಕುವ ಮಾತನ್ನಾಡುತ್ತಿದ್ದ ಪಾಕ್, ತಾಲಿಬಾನ್ ಬೇಡಿಕೆಗೆ ಮಣಿದ ಮೇಲೆ ಪಾಕ್ ಸ್ಥಿತಿ ಭಸ್ಮಾಸುರನ ಕಥೆಗಿಂತ ಭಿನ್ನವಾಗಲಾರದು ಎಂಬುದು ನಗ್ನ ಸತ್ಯ. ಅಫ್ಘಾನ್ ಗಡಿಭಾಗದಲ್ಲಿ ತಾಲಿಬಾನ್ ಫೆಡರಲ್ ಅಡ್ಮಿಮಿನಿಸ್ಟ್ರೇಶನ್ ಟ್ರೈಬಲ್ ಏರಿಯಾ (ಎಫ್‌ಎಟಿಎ) ಎಂಬ ಹೆಸರಲ್ಲಿ ಕಾರ್ಯಾಚರಿಸುತ್ತಾ, ನಾರ್ಥ್‌ವೆಸ್ಟ್ ಫ್ರಾಂಟಿಯರ್ ಪ್ರದೇಶದಲ್ಲಿ ಪೈಶಾಚಿಕ ಕೃತ್ಯವೆಸಗುತ್ತಿರುವುದು ಜಗಜ್ಜಾಹೀರಾಗಿದೆ. ಪಂಜಾಬ್ ಗಡಿಭಾಗದಲ್ಲೂ ಪಂಜಾಬ್ ಹಾಗೂ ಕಾಶ್ಮೀರಿ ಬಂಡುಕೋರರ ಜತೆ ಅದು ಕೈಜೋಡಿಸುವ ಮೂಲಕ ಸಾಕಷ್ಟು ವಿಧ್ವಂಸಕ ಕೃತ್ಯ ನಡೆಸುತ್ತಿದೆ. ಕಳೆದ ಎಂಟು ವರ್ಷಗಳಿಂದ ಮಿಲಿಟರಿ ಆಡಳಿತದಿಂದ ಕಂಗೆಟ್ಟು ಹೋಗಿದ್ದ ಪಾಕಿಸ್ತಾನದಲ್ಲಿ ಪ್ರಜಾಸತ್ತಾತ್ಮಕ ರೀತಿಯಲ್ಲಿ ಚುನಾವಣೆ ನಡೆದು ಅಧಿಕಾರದ ಗದ್ದುಗೆ ಏರಿದ ಜರ್ದಾರಿ ಹಾಗೂ ಯೂಸೂಫ್ ರಾಜಾ ಗಿಲಾನಿ ನಡೆದುಕೊಳ್ಳುತ್ತಿರುವ ರೀತಿಯಾದರೂ ಎಂತಹದ್ದು? ಇಡೀ ಪಾಕ್‌ನಾದ್ಯಂತ ಭಾರೀ ಶಸ್ತ್ರಸಜ್ಜಿತ ಉಗ್ರಗಾಮಿಗಳ ಗುಂಪು ಪ್ರಬಲವಾಗುತ್ತಿದೆ. ಕ್ರಿಮಿನಲ್ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ, ದೇಶದ ಆರ್ಥಿಕ ಸ್ಥಿತಿ ಕುಸಿದು ಹೋಗಿದೆ, ಶೇ.25ರಷ್ಟು ಹಣದುಬ್ಬರ, ಕೈಗಾರಿಕೆಗಳಿಗೆ ಸಮರ್ಪಕವಾದ ವಿದ್ಯುತ್ ಪೂರೈಕೆ ಇಲ್ಲ, ಕೃಷಿ ಕ್ಷೇತ್ರ ಸತ್ತುಹೋಗಿದೆ, ನಿರುದ್ಯೋಗ ತಾಂಡವವಾಡುತ್ತಿದೆ. ಇಷ್ಟೆಲ್ಲಾ ಸಮಸ್ಯೆಗಳಿಂದ ನರಳುತ್ತಿರುವ ಪಾಕ್ ಮತ್ತದೇ ಮತಾಂಧ ಮೂಲಭೂತವಾದಿಗಳ ಷರತ್ತಿಗೆ ಮಣಿಯುವ ಮೂಲಕ ಪ್ರಜಾತಂತ್ರ ವ್ಯವಸ್ಥೆಯನ್ನೇ ಅಣಕಿಸುವಂತೆ ನಡೆದುಕೊಳ್ಳುತ್ತಿರುವುದು ವಿಪರ್ಯಾಸ.ಕಳೆದ 60 ವರ್ಷಗಳಲ್ಲಿ ಪಾಕಿಸ್ತಾನ ಯಾವತ್ತೂ ಪ್ರಜಾಪ್ರಭುತ್ವ ದೇಶವಾಗಿ ರೂಪುಗೊಂಡಿಲ್ಲ, ಜಾತ್ಯತೀತ ಧೋರಣೆಯ ಬೇನಜೀರ್ ಭುಟ್ಟೋ ಅವರು ಎರಡು ಬಾರಿ ಪ್ರಧಾನಿಯಾಗಿ ಅಧಿಕಾರದ ಗದ್ದುಗೆ ಏರಿದರೂ ಕೂಡ ಮೂಲಭೂತವಾದಿಗಳು ಆ ಸರ್ಕಾರವನ್ನು ಕೆಳಗುರುಳಿಸುವಲ್ಲಿ ಯಶಸ್ವಿಯಾಗಿದ್ದರು. ಅಲ್ಲಿ ಯಾವುದೇ ಸರ್ಕಾರವಿದ್ದರೂ ಅದರ ಹಿಂದೆ ಕಾವಲು ಕಾಯುತ್ತಿರುವುದು ಐಎಸ್ಐ!ಅವೆಲ್ಲದಕ್ಕೂ ತಳಪಾಯ ಹಾಕಿಕೊಟ್ಟ ಮಹಾಪುರುಷನ ಹೆಸರು ಸರ್ವಾಧಿಕಾರಿ ಜಿಯಾ ಉಲ್ ಹಕ್. ಪ್ರಥಮವಾಗಿ ಪಾಕಿಸ್ತಾನದ ಸೇನೆಯೊಳಗೆ ಇಸ್ಲಾಮ್ ಧರ್ಮ ತಳವೂರುವಂತೆ ಮಾಡಿದ್ದ ಪುಣ್ಯಾತ್ಮ. 1977ರಲ್ಲಿ ಜನರಲ್ ಜಿಯಾ ಉಲ್ ಹಕ್ ಪಾಕಿಸ್ತಾನದ ಮೇಲೆ ಮಿಲಿಟರಿ ಆಡಳಿತ ಹೇರುತ್ತಿದ್ದಂತೆಯೇ ಕರ್ಮಠ ಮೂಲಭೂತವಾದಿಗಳು ಎಚ್ಚೆತ್ತುಕೊಂಡಿದ್ದರು.ಇಸ್ಲಾಂ ಧರ್ಮಪ್ರಚಾರದ ಮುಖವಾಡ ಹೊತ್ತ ತಬ್ಲೀಘಿ ಜಮಾತ್ ಎಂಬ ಸಂಘಟನೆ ಕೈವಿಂದ್‌ನಲ್ಲಿ ವಾರ್ಷಿಕ ಸಮಾವೇಶ ನಡೆಸಿದಾಗ ಜಿಯಾ ಖುದ್ದಾಗಿ ಭಾಗವಹಿಸುವ ಮೂಲಕ ಕರ್ಮಠ ಮೂಲಭೂತವಾದಿಗಳಿಗೆ ಮಣೆಹಾಕುವ ಸಂದೇಶವನ್ನು ರವಾಸಿದ್ದರ ಪರಿಣಾಮವೇ, ಪಾಕ್‌ನ ಹಲವು ಧಾರ್ಮಿಕ ಗುಂಪುಗಳು ಪಾಕ್ ಮಿಲಿಟರಿ ಸಂಪರ್ಕಕ್ಕೆ ಬಂದಿದ್ದವು. ಅಲ್ಲಿಂದಲೇ ಪ್ರಾರಂಭವಾದದ್ದು ಪಾಕ್ ಎಂಬ ದೇಶದ ನಿಜವಾದ ಹಕೀಕತ್ !ದಿನಕ್ಕೆ ಐದು ಬಾರಿ ನಮಾಜ್ ಮಾಡಿದ ಅಧಿಕಾರಿಗಳಿಗೆ ಜಿಯಾ ಬಡ್ತಿ ನೀಡತೊಡಗಿದ, ಧರ್ಮ, ಮೂಲಭೂತವಾದಿಗಳನ್ನು ಆರಾಧಿಸತೊಡಗಿದ, ಅವೆಲ್ಲಕ್ಕೂ ಬೆಂಗಾವಲಾಗಿದ್ದದ್ದು ಇಂಟರ್ ಸರ್ವಿಸ್ ಇಂಟೆಲಿಜೆನ್ಸ್. ಹಾಗಾಗಿ ಪಾಕ್‌ನ 60 ವರ್ಷದ ಆಡಳಿತದಲ್ಲಿ ಮೂಲಭೂತವಾದಿಗಳ ಹಾಗೂ ಐಎಸ್‌ಐನದ್ದೇ ಪಾರುಪತ್ಯ! ಕರ್ಮಠ ಮೂಲಭೂತವಾದಿಗಳಿಗೆ ಮಣೆಹಾಕುವ ಮೂಲಕ ಕೆಟ್ಟ ಸಂಪ್ರದಾಯಕ್ಕೆ ನಾಂದಿಹಾಕಿದ ಜಿಯಾ 1988ರಲ್ಲಿ ವಿಮಾನ (ಇದರ ಹಿಂದೆ ಅಮೆರಿಕದ ಸಿಐಎ ಕೈವಾಡ ಇದೆ ಎಂದು ಹೇಳಲಾಗುತ್ತಿದೆ) ಸ್ಫೋಟದಲ್ಲಿ ದುರಂತ ಅಂತ್ಯ ಕಂಡಿದ್ದ.ಆ ಸಂಪ್ರದಾಯ ಮುಂದೆ ಯಥಾಸ್ಥಿತಿಯಲ್ಲೇ ಮುಂದುವರಿಯಿತು, ಸರ್ವಾಧಿಕಾರಿ ಜನರಲ್ ಪರ್ವೆಜ್ ಮುಷರಫ್ ಕೂಡ ಅಧಿಕಾರದ ಗದ್ದುಗೆ ಏರಿ, ತಮ್ಮ ಸಂಪುಟ ರಚಿಸುವಾಗ ತಮಗೆ ಜಿಯಾ ಬಗ್ಗೆ ಅಪಾರ ಗೌರವ ಇದೆ ಎಂಬುದನ್ನು ತೋರಿಸಿಕೊಳ್ಳುವ ಸಲುವಾಗಿ ಜಿಯಾ ಪುತ್ರ ಎಜಾಜ್ ಉಲ್ ಹಕ್‌ನನ್ನು ಧಾರ್ಮಿಕ ವ್ಯವಹಾರಗಳ ಸಚಿವನನ್ನಾಗಿ ಮಾಡಿದ್ದರು. ಎಂಟು ವರ್ಷಗಳ ಬಳಿಕವೂ, ತಾಲಿಬಾನ್ ಉಗ್ರರನ್ನು ಮಟ್ಟಹಾಕುತ್ತೇವೆ ಎಂದು ಬೊಬ್ಬಿರಿಯುತ್ತಿದ್ದ ಅಧ್ಯಕ್ಷ ಜರ್ದಾರಿ ಎನ್‌ಡಬ್ಲ್ಯುಎಫ್‍ಸಿ ಸಭೆಯಲ್ಲಿ ಭಾಗವಹಿಸಿ ಶರಿಯತ್ ಕಾನೂನು ಜಾರಿಗೆ ಅನುಮತಿ ನೀಡಿದ್ದಾರೆ. ಹಾಗಾದರೆ ಪಾಕ್‌ನಲ್ಲಿ ನಿಜಕ್ಕೂ ಆಡಳಿತ ನಡೆಸುತ್ತಿರುವವರು ಯಾರು? ಐಎಸ್‌ಐ-ಮೂಲಭೂತವಾದಿ ಸಂಘಟನೆಗಳನ್ನು ಎದುರು ಹಾಕಿಕೊಂಡು ಸಶಕ್ತ ಪಾಕ್ ನಿರ್ಮಾಣ ಸಾಧ್ಯವೇ ? ಜಾಗತಿಕವಾಗಿ ತಲೆನೋವಾಗಿರುವ ಪಾಕ್‌ನಲ್ಲೇ ಠಿಕಾಣಿ ಹೂಡಿರುವ ತಾಲಿಬಾನ್, ಅಲ್ ಖಾಯಿದಾ, ಹಿಜ್ಬುಲ್ ಮುಜಾಹಿದೀನ್, ಲಷ್ಕರ್ ಎ ತೊಯಿಬಾ, ಹರ್ಕತುಲ್ ಮುಜಾಹಿದೀನ್, ಪಾಕಿಸ್ತಾನ್ ಜಮಾತ್ ಎ ಇಸ್ಲಾಮಿ, ಲಷ್ಕರ್ ಎ ಝಂಗ್ವಿ ಸೇರಿದಂತೆ ಜಿಹಾದಿ ಉಗ್ರಗಾಮಿ ಸಂಘಟನೆಗಳನ್ನು ಮಟ್ಟಹಾಕುವ ಧೈರ್ಯ ಪಾಕಿಸ್ತಾನಕ್ಕೆ ಇದೆಯಾ ?ಪಾಕ್ ರಕ್ಷಿಸಲು ಹೊರಟಿರುವುದು ಪ್ರಜಾಪ್ರಭುತ್ವವನ್ನೇ ಅಥವಾ ಉಗ್ರರನ್ನೇ?! |