| ಸಿಂಗ್-ಜರ್ದಾರಿ ಭೇಟಿ: ಅಮೆರಿಕ 'ಒತ್ತಡ' ತಂತ್ರದ ಫಲವೇ? | | | | | | |
| | |
| . . . ಅವಿನಾಶ್ ಬಿ. ಇತ್ತೀಚಿನ ಕೆಲವೊಂದು ವಿದ್ಯಮಾನಗಳತ್ತ ಕಣ್ಣೋಟ ಹಾಯಿಸಿದರೆ, ಅಮೆರಿಕವು ಒಮ್ಮೆ ಭಾರತದತ್ತ, ಮಗದೊಮ್ಮೆ ಪಾಕಿಸ್ತಾನದತ್ತ ವಾಲುತ್ತಾ, ಈ ಜಾಗತಿಕ ಆರ್ಥಿಕ ಸಂಕಷ್ಟ ದಿನಗಳಲ್ಲಿಯೂ ಜಗತ್ತಿನ ಪ್ರಬಲ ಶಕ್ತಿಯಾಗಿ ಪ್ರವರ್ಧಮಾನಕ್ಕೆ ಬರುತ್ತಿರುವ ಭಾರತವನ್ನು ಅಸ್ಥಿರಗೊಳಿಸಲು ಒಳಗಿಂದೊಳಗೆಯೇ ಕಾರ್ಯತಂತ್ರ ರೂಪಿಸುತ್ತಿದೆಯೇ ಎಂಬ ಬಗ್ಗೆ ಶಂಕೆ ಮೂಡುತ್ತಿವುದು ಸಹಜ.ಇದಕ್ಕೆ ಕಾರಣವೂ ಇಲ್ಲದಿಲ್ಲ. ಅಮೆರಿಕದ ಆರ್ಥಿಕ ಸ್ಥಿತಿ ಸಪಾಟಾಗಿ ಹೋಗಿದೆ. ಅಲ್ಲಿನ ಕಂಪನಿಗಳ ಲಾಭಕೋರ ಮನಸ್ಥಿತಿಯಿಂದ, ಸ್ವಯಂಕೃತಾಪರಾಧದಿಂದಾಗಿ ಆರ್ಥಿಕ ಸಂಕಷ್ಟವು ಅಮೆರಿಕಕ್ಕೆ, ಆ ಮೂಲಕ ವಿಶ್ವಕ್ಕೇ ಹಂದಿ ಜ್ವರದ ವೈರಸ್ ರೀತಿ ಹರಡಿ ಅಲ್ಲೋಲ ಕಲ್ಲೋಲ ಸೃಷ್ಟಿಸಿರುವುದು ಎಲ್ಲರಿಗೂ ತಿಳಿದ ವಿಷಯ. ಅಮೆರಿಕ ಯಾವ ಪರಿ ಹೊಡೆತ ತಿಂದಿದೆಯೆಂದರೆ, ಅಲ್ಲಿ ಸಾವಿರಾರು ಜನ ಬೀದಿಗೆ ಬಿದ್ದಿದ್ದಾರೆ. ವಿಶ್ವದ ಹಿರಿಯಣ್ಣ ಎಂಬ ಪಟ್ಟವಂತೂ ಕುಸಿದು ಬಿದ್ದು ನರಳಾಡುತ್ತಿದೆ.ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮರಿಗೆ ಇದರ ಅರಿವಿದೆ. ಅಂತೆಯೇ, ತಮ್ಮ ರಾಷ್ಟ್ರಕ್ಕೆ ಈ ಪರಿ ಹೊಡೆತ ಬಿದ್ದರೂ ಚೀನಾ ಮತ್ತು ಭಾರತಗಳು ಎದೆ ಸೆಟೆದು ನಿಂತಿರುವುದನ್ನು ನೋಡುವುದು ಅಮೆರಿಕಕ್ಕೆ ಆಗುತ್ತಿಲ್ಲ. ಹೀಗಾಗಿ, ಏನಾದರೂ ಮಾಡಿ ಈ ಉಪಖಂಡದ ಬೆಳವಣಿಗೆಯಾಗದಂತೆ ತಡೆಯುವ ನಿಟ್ಟಿನಲ್ಲಿ ಅಮೆರಿಕವೂ ಕಾರ್ಯತಂತ್ರ ಹೆಣೆಯುತ್ತಿದೆಯೇ ಎಂಬ ಪ್ರಶ್ನಾರ್ಥಕ ಚಿಹ್ನೆ ದಪ್ಪವಾಗಿಯೇ ಎದ್ದುಗಾಣುತ್ತಿರುವುದು ಸುಳ್ಳಲ್ಲ.ಒಂದು ಬಾರಿ ಹಿಂದೆ ತಿರುಗಿ ನೋಡಿ. ಇತ್ತೀಚೆಗೆ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅವರ ಬಾಯಿಂದ ದಿಟ್ಟ ನಿರ್ಧಾರವೊಂದು ಬಂದಿತ್ತು. ಪಾಕಿಸ್ತಾನವು ಭಾರತವಿರೋಧಿ ಭಯೋತ್ಪಾದಕ ಬಣಗಳ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಮತ್ತಷ್ಟು ನಿಖರ ಸಾಕ್ಷ್ಯಾಧಾರ ದೊರೆಯದ ಹೊರತು, 26/11 ಮುಂಬೈ ದಾಳಿ ಬಳಿಕ ನಿಂತು ಹೋಗಿದ್ದ ಶಾಂತಿ ಮಾತುಕತೆ ಮುಂದುವರಿಕೆಯ ಪ್ರಶ್ನೆಯೇ ಇಲ್ಲ ಎಂದು ಖಡಾಖಂಡಿತವಾಗಿ ಘೋಷಿಸಿದ್ದರವರು.ಮೊನ್ನೆ ಮೊನ್ನೆ ಅಮೆರಿಕದ ವಿದೇಶಾಂಗ ಅಧೀನ ಕಾರ್ಯದರ್ಶಿ ವಿಲಿಯಂ ಬರ್ನ್ಸ್ ಭಾರತಕ್ಕೆ ಬಂದಿದ್ದರಲ್ಲ, ಅವರು ಬಂದು, ನಮ್ಮ ಪ್ರಧಾನಿ ಕೈಗೆ ಕೊಟ್ಟ 'ಒಬಾಮ ಸಂದೇಶ' ಪತ್ರದಲ್ಲಿ ಏನಿದ್ದಿರಬಹುದು ಎಂಬ ಕುತೂಹಲವೇ ಭಾರತೀಯ ಸುದ್ದಿ ಮಾಧ್ಯಮಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದನ್ನು ನಮ್ಮ ಪ್ರಿಯ ಓದುಗರೂ ಗಮನಿಸಿದ್ದಿರಬಹುದು. ಅದರಲ್ಲಿ 'ಪಾಕಿಸ್ತಾನ ಜೊತೆಗೆ ಮಾತುಕತೆ ಮುಂದುವರಿಸಿ' ಎಂಬ ಒತ್ತಡ ತಂತ್ರವೂ ಒಳಗೊಂಡಿತ್ತೇ ಎಂಬ ಬಗ್ಗೆ ಕೇಂದ್ರವೂ ಬಾಯಿ ಬಿಡುತ್ತಿಲ್ಲ. ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಹೇಳುವ ಪ್ರಕಾರ, ಅದರಲ್ಲಿ ಕೆಲವೊಂದು "ಸಲಹೆ"ಗಳಿದ್ದವು. ಯಾವುದೇ ಒತ್ತಡ ಇರಲಿಲ್ಲವಂತೆ.ಆ ಬಳಿಕದ ಬೆಳವಣಿಗೆ, ರಷ್ಯಾದಲ್ಲಿ ನಡೆದ ಬ್ರಿಕ್ (ಬ್ರೆಜಿಲ್, ರಷ್ಯಾ, ಇಂಡಿಯಾ, ಚೀನಾಗಳ ಮೊದಲಕ್ಷರ) ರಾಷ್ಟ್ರಗಳ ಸಮಾವೇಶದ ಸಂದರ್ಭದಲ್ಲಿ ಭಾರತದ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಹಾಗೂ ಪಾಕ್ ಅಧ್ಯಕ್ಷ ಜರ್ದಾರಿ ಕೈಕುಲುಕಾಟದ ಭೇಟಿ! ಮತ್ತೆ, ಭಯೋತ್ಪಾದಕರ ವಿರುದ್ಧ ಕ್ರಮ ಕೈಗೊಳ್ಳಲು, ಹೋರಾಡಲು ಪಾಕಿಸ್ತಾನವು ಸಮಯಾವಕಾಶ ಕೇಳಿರುವುದರಿಂದ ನಾವು ಅದಕ್ಕೆ ಅವಕಾಶ ಕೊಟ್ಟಿದ್ದೇವೆ ಎಂದು ಬುಧವಾರ ಸಿಂಗ್ ರಷ್ಯಾದಿಂದ ಮರಳುವ ಹಾದಿಯಲ್ಲಿ ಘೋಷಿಸಿಬಿಟ್ಟಿದ್ದಾರೆ. ಮಾತುಕತೆಯೇ ಇಲ್ಲ ಎಂದವರ ನಿಲುವು ಮೃದುವಾಯಿತೇಕೆ? ಎಂಬ ಶಂಕೆಗೂ ಕಾರಣವಿದೆ. ಸಿಂಗ್-ಜರ್ದಾರಿ ಮೊನ್ನೆ ಮಾತನಾಡಿದರು. ಮುಂದಿನ ತಿಂಗಳು ಈಜಿಪ್ಟ್‌ನಲ್ಲಿ ನಡೆಯುವ ಅಲಿಪ್ತ ರಾಷ್ಟ್ರಗಳ ಸಮಾವೇಶದ ಪಾರ್ಶ್ವದಲ್ಲಿ ಮತ್ತೊಮ್ಮೆ ಭೇಟಿಯಾಗಲು ಇಬ್ಬರೂ ನಿರ್ಧರಿಸಿದ್ದಾರೆ, ಉಭಯ ರಾಷ್ಟ್ರಗಳ ವಿದೇಶಾಂಗ ಕಾರ್ಯದರ್ಶಿ ಮಟ್ಟದ ಮಾತುಕತೆಯೂ ರಷ್ಯಾದಲ್ಲಿ ನಡೆದಿದ್ದು, ಅದು ಕೂಡ ಮುಂದುವರಿಯಲಿದೆ. ಇದು ಭಾರತ-ಪಾಕ್ ನಡುವಣ ಶಾಂತಿ ಮಾತುಕತೆಯ ಮುಂದುವರಿಕೆಯೇ ಅಲ್ಲವೇ? ವಿದೇಶಾಂಗ ಕಾರ್ಯದರ್ಶಿ ಶಿವಶಂಕರ್ ಮೆನನ್ ನೀಡಿದ ಉತ್ತರ 'ಅಲ್ಲ'. ಪಾಕಿಸ್ತಾನ ಏನು ಮಾಡಿದೆ, ನಾವೇನು ಮಾಡಬಹುದು ಎಂಬುದರ ಕುರಿತು ಮಾಹಿತಿ ವಿನಿಮಯ ಮಾತ್ರವಂತೆ.2008 ರ ನವೆಂಬರ್ 26ರಂದು ಮುಂಬೈ ಮೇಲೆ ನಡೆದ ಭಯೋತ್ಪಾದನಾ ದಾಳಿಯ ಬಳಿಕ ಭಾರತ ಕಷ್ಟಪಟ್ಟು ಸಂಗ್ರಹಿಸಿದ್ದ ಸ್ಪಷ್ಟ ಸಾಕ್ಷ್ಯಾಧಾರಗಳನ್ನೆಲ್ಲಾ ಪಾಕಿಸ್ತಾನವು, ಒಪ್ಪಿಕೊಳ್ಳುವಂತೆ ಜಾಗತಿಕ ಒತ್ತಡದ ಹೊರತಾಗಿಯೂ, 'ಇದು ಸಾಕಾಗುವುದಿಲ್ಲ' ಎಂದು ಝಾಡಿಸಿ ಒದ್ದುಬಿಡುವಷ್ಟರ ಮಟ್ಟಕ್ಕೆ ತಲೆ ಎತ್ತಿ ನಿಂತದ್ದು ಹೇಗೆ? ಪಾಕ್ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಮತ್ತು ಒಬಾಮ ನಡುವೆ ನಡೆದ ಮಾತುಕತೆಯ ಫಲಶ್ರುತಿ ಇದು ಆಗಿರಬಹುದೇ?ಭಾರತದ ಬಳಿ ದಿಟ್ಟವಾದ, ಬಲವಾದ ಸಾಕ್ಷ್ಯಾಧಾರಗಳಿವೆ. ಹೀಗಾಗಿ, ಮೊನ್ನೆ ಮೊನ್ನೆಯಷ್ಟೇ ರಚನೆಗೊಂಡ ಯುಪಿಎ-II ಸರಕಾರವು, "ಪಾಕಿಸ್ತಾನ ಭಯೋತ್ಪಾದನೆ ನಿಲ್ಲಿಸದೆ ಮಾತುಕತೆಯೇ ಇಲ್ಲ" ಎಂದು ಸ್ಪಷ್ಟ ಶಬ್ದಗಳಲ್ಲಿ ಉಚ್ಚರಿಸಿತ್ತು. ಇದು ಪಾಕಿಸ್ತಾನವನ್ನು ಕಂಗೆಡಿಸಿತು. ಅಮೆರಿಕಕ್ಕೆ ದೂರು ಹೋಗಿದ್ದಿರಲೂಬಹುದು. ಕಾಶ್ಮೀರ ವಿವಾದ ಪ್ರಸ್ತಾಪಿಸಿ, ಉಭಯ ರಾಷ್ಟ್ರಗಳ ನಡುವೆ ಕಾಶ್ಮೀರ ವಿವಾದವೇ ದೊಡ್ಡ ಅಡ್ಡಿ ಎಂದು ಈ ಸಮಸ್ಯೆಯನ್ನು ಅಂತಾರಾಷ್ಟ್ರೀಕರಣಗೊಳಿಸಲು ಮತ್ತೊಮ್ಮೆ ಪ್ರಯತ್ನವನ್ನೂ ಪಾಕ್ ಮಾಡಿತು.ಭಾರತ ಈ ಬಾರಿ ಬಿಡುವುದಿಲ್ಲ ಎಂಬುದು ಬಹುಶಃ ಅಮೆರಿಕಕ್ಕೂ ಮನದಟ್ಟಾಗಿದ್ದಿರಬಹುದು. ತನ್ನ ಬಳಿ ಬೇರೆ ದೇಶಗಳಿಗೆ ಉದಾರ 'ನೆರವು' ನೀಡುವಷ್ಟು ನಿಧಿ ಇಲ್ಲ ಎಂಬ ಅರಿವಿದ್ದರೂ, ಪಾಕಿಸ್ತಾನದಲ್ಲಿ ತಾಲಿಬಾನ್, ಅಲ್ ಖಾಯಿದಾ ಮುಂತಾದ ಅದೆಷ್ಟೋ ರಾಶಿ ರಾಶಿ ಉಗ್ರರನ್ನು ಮಟ್ಟ ಹಾಕಲು ಪಡೆಗಳನ್ನು ಮತ್ತು ಹಣಕಾಸು ಪ್ಯಾಕೇಜ್‌ಗಳನ್ನು ಕೂಡ ಘೋಷಿಸತೊಡಗಿತು. ಅಂದರೆ ಮುಂದಿನ ಐದು ವರ್ಷಗಳ ಕಾಲ ಪಾಕಿಸ್ತಾನಕ್ಕೆ ವಾರ್ಷಿಕವಾಗಿ ಒಂದೂವರೆ ಶತಕೋಟಿ ಡಾಲರ್ ಹಣ! (ಪಾಕಿಸ್ತಾನ ಜೊತೆಗೆ ಸಂವರ್ಧಿತ ಪಾಲುದಾರಿಕೆ ಕಾಯ್ದೆ, ಇದು ಸೆನೆಟರ್‌ಗಳಾದ ಜಾನ್ ಎಫ್.ಕೆರಿ ಮತ್ತು ರಿಚರ್ಡ್ ಲೂಗರ್ ಸಿದ್ಧಪಡಿಸಿರುವುದರಿಂದ ಕೆರಿ-ಲೂಗರ್ ಕಾಯ್ದೆ ಎಂಬ ಹೆಸರೂ ಇದೆ). ಒಂದು ಮಾಹಿತಿಯ ಪ್ರಕಾರ, ಅಮೆರಿಕವು ಪಾಕಿಸ್ತಾನಕ್ಕೆ ಈಗಾಗಲೇ 3.2 ಶತಕೋಟಿ ಡಾಲರ್ ನೆರವು ರವಾನಿಸಿ ಆಗಿದೆ.ಅದೆಲ್ಲ ಒತ್ತಟ್ಟಿಗಿರಲಿ. ಭಾರತ-ಪಾಕ್ ನಡುವೆ ಶಾಂತಿ ನೆಲಸುವುದು ಅಮೆರಿಕಕ್ಕೆ ಬೇಕಿಲ್ಲ. ಶಾಂತಿ ನೆಲೆಸಿದ್ದೇ ಆದಲ್ಲಿ, ಭಾರತವಂತೂ ವಿಶ್ವ ಶಕ್ತಿಯಾಗಿ ರೂಪುಗೊಳ್ಳುತ್ತದೆ. ಈ ಸಂಭಾವ್ಯ ರಾಜತಾಂತ್ರಿಕ ಒಗ್ಗಟ್ಟಿನ ಬಲವನ್ನು ಮೂಲದಲ್ಲೇ ಚಿವುಟಬೇಕಿದ್ದರೆ ಇಂಥ ರಾಜಕೀಯ ಆಟಗಳನ್ನು ಆಡಲೇಬೇಕು ಎಂಬುದು ಅಮೆರಿಕಕ್ಕೆ ತಿಳಿದಿದೆ ಎಂಬ ವಾದಕ್ಕೆ ಹುರುಳಿಲ್ಲದಿಲ್ಲ.ಭಾರತದ ಧ್ವನಿ ಜೋರಾಗುತ್ತಿದೆ ಎಂದಾದಾಗ ಪಾಕಿಸ್ತಾನವು ಒಮ್ಮೆ ತಾಲಿಬಾನ್ ಜೊತೆ ಶಾಂತಿ ಒಪ್ಪಂದ ನಡೆಸಿ ಗಮನ ಬೇರೆಡೆ ಸೆಳೆದರೆ, ಮತ್ತೊಂದು ಬಾರಿ ತಾಲಿಬಾನ್ ಮೇಲೆ ಮುಗಿಬೀಳುವುದಾಗಿ ಘೋಷಿಸುತ್ತಿದೆ. ಒಮ್ಮೆ ಜಮಾತ್ ಉದ್ ದಾವಾ ಮುಖ್ಯಸ್ಥ, ಮುಂಬೈಯ ಪ್ರಧಾನ ಸಂಚುಕೋರ ಹಫೀಸ್ ಸಯೀದ್ ಮತ್ತಿತರ ಉಗ್ರರನ್ನು ಬಂಧಿಸುತ್ತದೆ, ಬಳಿಕ ಬಿಡುಗಡೆ ಮಾಡುತ್ತದೆ. ಸಹಾಯ ಮಾಡೀ ಎಂದು ಅಮೆರಿಕದೆದುರು ಹೋಗಿ ಕೈ-ಬಾಯಿ ಬಿಟ್ಟು ನಿಲ್ಲುತ್ತದೆ. ಅಲ್ಲಿಗೆ ಮುಂಬೈ ದಾಳಿ ಎಂಬ ವಿಷಯದ ಸದ್ದು ಮೂಲೆಗೆ ಸರಿಯುತ್ತದೆ. ಭಾರತವು ಮುಂಬೈ ದಾಳಿ ವಿಷಯ ಎತ್ತಿದಾಗಲೆಲ್ಲಾ, ಪಾಕಿಸ್ತಾನವು "ನಾವು ಕೂಡ ಭಯೋತ್ಪಾದನೆ-ಪೀಡಿತರು, ತಾಲಿಬಾನ್‌ಗಳು ನಮಗೆ ತೀರಾ ಕಿರಿಕಿರಿ ಮಾಡುತ್ತಿದ್ದಾರೆ" ಎನ್ನುತ್ತಾ, ವಿಷಯಾಂತರ ಮಾಡುತ್ತಲೇ ಇದೆ, ಅದರಲ್ಲಿ ಯಶಸ್ವಿಯೂ ಆಗುತ್ತಿದೆ.ಅತ್ತ ಅಮೆರಿಕವೂ ಕೂಡ, ತಾಲಿಬಾನ್, ಅಲ್ ಖಾಯಿದಾ ಮೇಲೆ ಕ್ರಮ ಕೈಗೊಳ್ಳಿ, ಇಲ್ಲವಾದಲ್ಲಿ ನಾವೇ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಒಮ್ಮೆ ಎಚ್ಚರಿಕೆಯ ಗಂಟೆ ಬಾರಿಸುತ್ತದೆ. ಆ ಮಾತು ಮುಗಿಸುವ ಮುನ್ನವೇ ಪಾಕಿಸ್ತಾನದ ಬಗ್ಗೆ ಮೃದು ನಿಲುವು ತಳೆದು, ಸಹಾಯಧನ, ನೆರವಿನ ಮಹಾಪೂರ ಹರಿಸುತ್ತಾ, ಭಾರತವು ನೇರಾನೇರ ಎಗರಿಬೀಳದಂತೆ ನೋಡಿಕೊಳ್ಳುತ್ತದೆ. ಪಾಕಿಸ್ತಾನ ಹಾಗೂ ಈ ಅಮೆರಿಕದ ದ್ವಂದ್ವ ನಿಲುವುಗಳ ಬಗ್ಗೆ ಯುಪಿಎ ಸರಕಾರ ಎಚ್ಚೆತ್ತುಕೊಂಡೀತೇ? ಯಾವುದೇ ಕಾರಣಕ್ಕೂ ಮುಂಬೈ ದಾಳಿಯ ಸಂಚುಕೋರರು ಪಾಕಿಸ್ತಾನದಲ್ಲಿದ್ದಾರೆ ಎಂಬ ಅಂಶದಿಂದ ವಿಷಯಾಂತರ ಮಾಡದಂತೆ ನೋಡಿಕೊಳ್ಳಬೇಕಾಗಿದೆ. ಮುಂಬೈ ದಾಳಿ ನಡೆದು ಏಳೆಂಟು ತಿಂಗಳುಗಳೇ ಕಳೆದರೂ, ಪಾಕಿಸ್ತಾನಿ ಮೂಲದ ಸಂಚುಕೋರರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವಂತೆ ಪಾಕಿಸ್ತಾನಕ್ಕೆ ಒತ್ತಡ ಹೇರಲು ಭಾರತ ಸರಕಾರ ವಿಫಲವಾಗಿದೆಯಲ್ಲಾ ಎಂದು ಭಾರತೀಯರಂತೂ ಹಣೆ ಹಣೆ ಚಚ್ಚಿಕೊಳ್ಳುತ್ತಿದ್ದಾರೆ.ಇದು ನಮ್ಮನ್ನಾಳುವವರಿಗೆ ಕೇಳಿಸುತ್ತದೆಯೇ? |
| |
| | |
| | | |
|
| | ಸಂಬಂಧಿತ ಮಾಹಿತಿ ಹುಡುಕಿ ಇದನ್ನು ಸಹ ಶೋಧಿಸು: 26 11 ಮುಂಬೈ ದಾಳಿ, ಭಯೋತ್ಪಾದನೆ, ಪಾಕಿಸ್ತಾನ, ಭಾರತ, ಅಮೆರಿಕ, ವಿಲಿಯಂ ಬರ್ನ್ಸ್, ಎಸ್ ಎಂ ಕೃಷ್ಣ, 26 11 Mumbai Attack, India, Pakistan, America, Terrorism |
|
|
| | |
|
|
| |
| | |