ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಪ್ರಚಲಿತ » ಬಲೂಚಿಸ್ತಾನ ಬ್ಲಂಡರ್, ಶೇಮ್ ಮತ್ತು ಶರಮ್ ಎಲ್ ಶೇಖ್... (Manmohan Singh | Indo Pak | Sharm El Sheikh Joint statement | Baluchistan)
 
PTI
ಅವಿನಾಶ್ ಬಿ.
ಬದುಕಿ ಮತ್ತು ಬದುಕಲು ಬಿಡಿ ಎಂಬ ಅಮೂಲ್ಯ ಧ್ಯೇಯದಿಂದ ಬಾಳುತ್ತಿರುವವರು ಭಾರತೀಯರು. ಆದರೆ ಪಾಕಿಸ್ತಾನದೊಳಗಿರುವವರ ಮನಸ್ಥಿತಿಯನ್ನೇ ನೋಡಿ... ಭಾರತದಲ್ಲಿ ಇಷ್ಟೊಂದು ಮಂದಿಯನ್ನು ಕೊಂದರೂ ಕೂಡ ಯಾವುದೇ ಎಗ್ಗಿಲ್ಲದೆ, ನಮ್ಮೂರಲ್ಲಿ ನಡೀತಾ ಇರೋ ಹಿಂಸಾಚಾರದಲ್ಲಿ ಭಾರತದ ಕೈವಾಡವಿದೆ ಎಂದು ಏನೂ ಆಗದಂತೆ ಹೇಳಿಬಿಡುತ್ತದೆ, ಅದಕ್ಕೆ ನಮ್ಮ ಪ್ರಧಾನ ಮಂತ್ರಿಗಳು ಕಣ್ಣು ಮುಚ್ಚಿ ಸಹಿ ಹಾಕಿ, ಆ ಆರೋಪಕ್ಕೊಂದು ಅಧಿಕೃತ ರೂಪ ಕೊಡುತ್ತಾರೆ ಎಂದಾದರೆ, ಅಷ್ಟೊಂದು ಜವಾಬ್ದಾರಿಯುತ ಸ್ಥಾನದಲ್ಲಿರುವವರು ಮೈಯೆಲ್ಲಾ ಕಣ್ಣಾಗಿರಬೇಕಾಗುತ್ತದೆ ಎಂಬ ಪುಟ್ಟ ಸಾಮಾನ್ಯ ಜ್ಞಾನವೂ ಇಲ್ಲವಾಯಿತೇಕೆ?

ತಪ್ಪು ಮಾಡಿದ್ದು ಆಗಿದೆ. ಶರಮ್ ಎಲ್ ಶೇಖ್‌ನಲ್ಲಿ ಬಿಡುಗಡೆ ಮಾಡಲಾದ ಜಂಟಿ ಹೇಳಿಕೆ ಮತ್ತು ಆ ಬಳಿಕ ತಕ್ಷಣವೇ ಪ್ರಧಾನಿ ಮನಮೋಹನ್ ಸಿಂಗ್ ಅವರು ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಲು ತಡವರಿಸುತ್ತಾ, ಪಾಕಿಸ್ತಾನವು ಕ್ರಮ ಕೈಗೊಳ್ಳುವವರೆಗೂ ಸಮಗ್ರ ಮಾತುಕತೆ ಇಲ್ಲ ಎಂದು ಹೇಳಿದ್ದು ಎಷ್ಟು ನಿಜವೋ, ಅಂತಾರಾಷ್ಟ್ರೀಯ ಸಮುದಾಯದಲ್ಲಿ ಭಾರತದ ಮಾನಕ್ಕೆ, ಅದರ ಹೊಣೆಗಾರಿಕೆಗೆ ಚ್ಯುತಿ ಬಂದದ್ದು ಕೂಡ ಅಷ್ಟೇ ನಿಜ.

ಅದಕ್ಕೇ ಮಾಜಿ ವಿದೇಶಾಂಗ ಸಚಿವ ಯಶವಂತ ಸಿನ್ಹಾ ಅವರು ಬುಧವಾರ ಸಂಸತ್ತಿನಲ್ಲಿ ಪ್ರಧಾನಿ ವಿರುದ್ಧ ಹರಿಹಾಯ್ದದ್ದು. ಉಭಯ ದೇಶಗಳ ನಡುವಣ ಸಂಬಂಧದ ಕುರಿತ ಜಂಟಿ ಹೇಳಿಕೆಯ ಅಲ್ಪವಿರಾಮ, ಅರ್ಧವಿರಾಮ, ಪೂರ್ಣವಿರಾಮಗಳೂ ಅತ್ಯಂತ ಮುಖ್ಯವಾದದ್ದು. ಅಟಲ್ ಬಿಹಾರಿ ವಾಜಪೇಯಿಯವರಂತೂ ಜಂಟಿ ಹೇಳಿಕೆ ನೀಡುವಾಗ, ಆ ಪ್ಯಾರಾ ಇಲ್ಲಿರಬೇಕು, ಇಲ್ಲಿ ಅಲ್ಪವಿರಾಮ ಹಾಕಬೇಕು ಎಂಬುದಾಗಿ ಸೂಚಿಸುತ್ತಿದ್ದುದನ್ನು ಸಿನ್ಹಾ ನೆನಪಿಸಿಕೊಂಡರು. ಸತ್ಯವೂ ಕೂಡ. ಇದು ಅಂತಾರಾಷ್ಟ್ರೀಯ ಸಂಬಂಧಗಳ ವಿಷಯ, ಭಾರತದ ಪ್ರತಿಷ್ಠೆಯ ವಿಷಯವೂ ಹೌದಲ್ಲವೇ? ಅದಕ್ಕೇ ಹೇಳಿದ್ದು ಅವರು, ಈಜಿಪ್ಟಿನಲ್ಲಿ ಭಾರತಕ್ಕಾದ ಮುಖಭಂಗವನ್ನು ಸಪ್ತಸಾಗರದಲ್ಲಿ ತೊಳೆದರೂ ಶುಭ್ರಗೊಳಿಸುವುದು ಸಾಧ್ಯವಿಲ್ಲವೆಂಬುದಾಗಿ!

ಬಲೂಚಿಸ್ತಾನದ ಬಗ್ಗೆ ಒಂದಿಷ್ಟು:
ಇದು ಭಾರತ-ಆಫ್ಘಾನಿಸ್ತಾನ ಗಡಿಯಲ್ಲಿರುವ ಪಾಕಿಸ್ತಾನೀ ಪ್ರದೇಶ. ಗಾತ್ರದಲ್ಲಿ ಪಾಕಿಸ್ತಾನದ ಅತಿದೊಡ್ಡ ಪ್ರಾಂತ್ಯವೂ, ಅತೀ ಹೆಚ್ಚು ಅಶಾಂತಿಯುಳಅಳ ಪ್ರದೇಶವೂ ಹೌದು. ಅಲ್ಲಿನ ಜನರಲ್ಲಿ ಹೆಚ್ಚಿನವರಿಗೆ ಪಾಕ್ ಸರಕಾರದ ಬಗ್ಗೆ ಅಸಮಾಧಾನ. ಅಲ್ಲಿನ ಪ್ರಕೃತಿ ಸಂಪತ್ತನ್ನು ಲೂಟಿಮಾಡುವ ಸರಕಾರ, ತಮಗೆ ಏನೂ ಆರ್ಥಿಕ, ರಾಜಕೀಯ ಬೆಂಬಲ ನೀಡುತ್ತಿಲ್ಲವೆಂಬುದು ಅವರ ಆರೋಪ. ಹೀಗಾಗಿ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ ಹುಟ್ಟಿಕೊಂಡು, ಪ್ರತ್ಯೇಕತೆಯ ಹೋರಾಟ ನಡೆಸುತ್ತಿದೆ. ಬಲೂಚಿಸ್ತಾನದಲ್ಲಿ ಭಾರತ ಮತ್ತು ಅದರ ಬೇಹುಗಾರಿಕಾ ಸಂಸ್ಥೆ 'ರಾ' ಕೈವಾಡವಿದೆ ಎಂದು ಪಾಕ್ ಹಿಂದಿನಿಂದಲೂ ಆರೋಪಿಸುತ್ತಾ ಬಂದಿದೆ, ಭಾರತವು ಅದನ್ನು ನಿರಾಕರಿಸುತ್ತಲೇ ಬಂದಿದೆ. ಆದರೆ, ಜಂಟಿ ಹೇಳಿಕೆಯಲ್ಲಿ ಈ ವಿಷಯವನ್ನು ಪಾಕಿಸ್ತಾನವು ಏಕಪಕ್ಷೀಯವಾಗಿ ಉಲ್ಲೇಖಿಸಿರುವುದು ಭಾರತೀಯರನ್ನು ಕೆರಳಿಸಿದೆ.

ಈಜಿಪ್ಟಿನಲ್ಲಿ ಬಿಡುಗಡೆಗೊಳಿಸಲಾದ ಭಾರತ-ಪಾಕ್ ಜಂಟಿ ಹೇಳಿಕೆಯಲ್ಲಿ ಬಲೂಚಿಸ್ತಾನದ ಪ್ರಕ್ಷುಬ್ದತೆಯಲ್ಲಿ ಭಾರತದ ಕೈವಾಡವಿದೆ ಎಂಬ ಅಂಶವನ್ನು ಸೇರಿಸಿದ್ದು ಯಾಕೆ ಮತ್ತು ಉಗ್ರಗಾಮಿಗಳ ವಿರುದ್ಧ ಕ್ರಮ ಕೈಗೊಳ್ಳುವವರೆಗೂ 'ಸಮಗ್ರ' ಮಾತುಕತೆಯಿಲ್ಲ ಎಂಬ ಭಾರತದ ನಿಲುವಿನಿಂದ ಹಿಂದೆ ಸರಿದದ್ದು ಯಾಕೆ ಎಂಬ ಕಾರಣಕ್ಕಷ್ಟೇ ಲೋಕಸಭೆಯಲ್ಲಿ ಪ್ರತಿಪಕ್ಷಗಳು ಸರಕಾರದ ಮೇಲೆ ಹರಿಹಾಯ್ದದ್ದು.

ಏಕಪಕ್ಷೀಯವಾದ 'ಜಂಟಿ' ಹೇಳಿಕೆ:
ಬಲೂಚಿಸ್ತಾನ ಆಂತರಿಕ ವಿಷಯದಲ್ಲಿ ಭಾರತದ ಕೈವಾಡವಿರುವ ಕುರಿತ ಉಲ್ಲೇಖಕ್ಕೆ ಜಂಟಿ ಹೇಳಿಕೆಯಲ್ಲಿ ಅವಕಾಶ ಮಾಡಿಕೊಟ್ಟದ್ದೇ ತಪ್ಪು. ಇರಲಿ, ರಾಜತಾಂತ್ರಿಕ ಕಾರಣಗಳಿಗಾಗಿ, ಭಾರತ-ಪಾಕ್ ಬಾಂಧವ್ಯ ವೃದ್ಧಿಯಾಗಬೇಕೆಂಬ ಆಶಯದಲ್ಲಿ ಅದನ್ನು ಅಳವಡಿಸಲೇಬೇಕಾದ ಅನಿವಾರ್ಯತೆ ಇತ್ತು ಎಂದಿಟ್ಟುಕೊಳ್ಳೋಣ, ಹಾಗಿದ್ದರೆ, 'ಇಲ್ಲ, ಭಾರತಕ್ಕೂ ಬಲೂಚಿಸ್ತಾನಕ್ಕೂ ಏನೂ ಸಂಬಂಧವಿಲ್ಲ' ಎಂಬ ಒಂದು ನಿರಾಕರಣೆ ವಾಕ್ಯವನ್ನಾದರೂ ಅದರಲ್ಲಿ ಸೇರಿಸಿಕೊಳ್ಳಬಹುದಿತ್ತಲ್ಲವೇ ಎಂಬುದು ಭಾರತೀಯರ ಪ್ರಶ್ನೆ.

ದಿನಕ್ಕೊಂದು ಹೇಳಿಕೆ ಬದಲಿಸುತ್ತಾ, ಹಾಗೆ ಮಾಡಿಯೇ ಇಲ್ಲ, ಹೇಳಲೇ ಇಲ್ಲ ಎಂಬಿತ್ಯಾದಿ ಎಡಬಿಡಂಗಿ ನುಡಿಗಳನ್ನು ಹೊರಬಿಡುತ್ತಿರುವುದು ನಮ್ಮ ನೆರೆಯ ರಾಷ್ಟ್ರ ಪಾಕಿಸ್ತಾನಕ್ಕೆ ಕಾಶ್ಮೀರದೊಳಗೆ ಉಗ್ರಗಾಮಿಗಳನ್ನು ನುಸುಳಿಸಿದಷ್ಟೇ ಸಲೀಸಾಗಿಬಿಟ್ಟಿದೆ. ಆದರೆ ಭಾರತವೂ ಇದೇ ರೀತಿ ಸ್ಪಷ್ಟನೆ ನೀಡಬೇಕಾದ ಅನಿವಾರ್ಯತೆ ಸೃಷ್ಟಿಸಿಕೊಂಡು ಯಾಕೆ ತಲೆ ತಗ್ಗಿಸುವಂತಾಯಿತು? ಜಂಟಿ ಹೇಳಿಕೆಯ ಕರಡು ರೂಪಿಸುವಾಗ ಮತ್ತು ಅದಕ್ಕೆ ಸಹಿ ಹಾಕುವಾಗ ತೋರಿದ್ದ ನಿರ್ಲಕ್ಷ್ಯದಿಂದಲೇ ಅಲ್ಲವೇ? ಇದನ್ನೇ ಪ್ರಧಾನಮಂತ್ರಿ ಅವರು ಲೋಕಸಭೆಯಲ್ಲಿ ಸಮರ್ಥಿಸಿಕೊಳ್ಳುತ್ತಾರಾದರೆ ಮತ್ತು 'ವಿದೇಶಾಂಗ ನೀತಿ ಬಗ್ಗೆ ವಿರೋಧ ಪಕ್ಷಗಳಿಂದ ಕಲಿಯಬೇಕಾದುದೇನೂ ಇಲ್ಲ' ಎಂಬ ಉಡಾಫೆ ಮಾತನಾಡುತ್ತಾರೆ ಎಂದರೆ ಅದಕ್ಕೆ ಖಂಡಿತಾ ಸಮರ್ಥನೆಯಿಲ್ಲ.

ಮೂವರು ಭಾರತೀಯ ಕಸಬ್‌ಗಳು!
2009ರ ಜುಲೈ 16ರಂದು, ಈಜಿಪ್ಟಿನ ಶರಮ್ ಎಲ್ ಶೇಕ್‌ನಲ್ಲಿ ಅಲಿಪ್ತ ರಾಷ್ಟ್ರಗಳ ಶೃಂಗ ಸಮಾವೇಶದ ಪಾರ್ಶ್ವದಲ್ಲಿ, ಸಿಂಗ್-ಯೂಸುಫ್ ರಾಜಾ ಗಿಲಾನಿ ಕೈಕುಲುಕಿ, ಜಂಟಿ ಹೇಳಿಕೆಯನ್ನು ಬಿಡುಗಡೆಗೊಳಿಸಿದಾಗ, ಎಲ್ಲಕ್ಕೂ ಹೆಚ್ಚಾಗಿ ಬೆಚ್ಚಿ ಬಿದ್ದವರು ಭಾರತೀಯ ಪತ್ರಕರ್ತರು. ಯಾಕೆಂದರೆ ಇತರ ಭಾರತೀಯರಂತೆ, ಬಲೂಚಿಸ್ತಾನದಲ್ಲಿ ನಿಜಕ್ಕೂ ಏನು ನಡೆಯುತ್ತಿದೆ ಎಂಬುದರ ಅರಿವು ಅವರಿಗೂ ಇರಲಿಲ್ಲ. ಸಂಬಂಧವೇ ಇಲ್ಲದ ವಿಷಯದಲ್ಲಿ ಭಾರತೀಯರ ಕೈವಾಡವಿದೆ ಎಂಬ ಅಂಶ ಉಲ್ಲೇಖಿಸಿ, ಅದನ್ನು ಭಾರತದ ಪ್ರಧಾನಮಂತ್ರಿ ಡಾ.ಮನಮೋಹನ್ ಸಿಂಗ್ ಅವರ ಸಹಿ ಬೀಳುವಂತೆ ಮಾಡುವಲ್ಲಿ ಪಾಕಿಸ್ತಾನವು ಹೇಗೆ ಯಶಸ್ವಿಯಾಯಿತು ಎಂಬುದನ್ನು ತಿಳಿಯಬೇಕಿದ್ದರೆ, ಪಾಕಿಸ್ತಾನದ ಜಿಯೋ ಟಿವಿಯ ಕಾರ್ಯನಿರ್ವಾಹಕ ಸಂಪಾದಕ ಹಮೀದ್ ಮೀರ್ ಅವರು ಅಂಕಣವೊಂದರಲ್ಲಿ ಹೇಳಿದ್ದನ್ನು ಕೇಳಬೇಕು.

"ಎರಡು ದಿನಗಳ ಮೊದಲು, ಅಂದರೆ ಜುಲೈ 14ರಂದು ಉಭಯ ರಾಷ್ಟ್ರಗಳ ವಿದೇಶಾಂಗ ಕಾರ್ಯದರ್ಶಿಗಳಾದ ಭಾರತದ ಶಿವಶಂಕರ್ ಮೆನನ್ ಮತ್ತು ಪಾಕಿಸ್ತಾನದ ಸಲ್ಮಾನ್ ಬಶೀರ್ ನಡುವೆ ಮಾತುಕತೆ ನಡೆದಿತ್ತು. ಬಲೂಚಿಸ್ತಾನದ ಮೇಲೆಯೇ ಚರ್ಚೆ ಕೇಂದ್ರೀಕೃತವಾಗಿತ್ತು. ಆ ಮಾತುಕತೆಯಲ್ಲಿ, ಭಾರತವು ಶಾಂತಿ ಮಾತುಕತೆಯಿಂದ "ಭಯೋತ್ಪಾದನೆಯ ಮೇಲೆ ಕ್ರಮ ಕೈಗೊಳ್ಳುವ ವಿಷಯ"ವನ್ನು ಹೊರಗಿಡಬೇಕು, ಇಲ್ಲವಾದಲ್ಲಿ, ಬಲೂಚಿಸ್ತಾನದ ಪ್ರಕ್ಷುಬ್ಧತೆಯಲ್ಲಿ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಭಾಗಿಯಾಗಿರುವ ಮೂರು ಮಂದಿ "ಭಾರತೀಯ ಕಸಬ್‌ಗಳನ್ನು" ಅಂತಾರಾಷ್ಟ್ರೀಯ ಮಾಧ್ಯಮದ ಮುಂದೆ ಬಹಿರಂಗಪಡಿಸಬೇಕಾದೀತು. ಮತ್ತು ಬಲೂಚಿಸ್ತಾನ ವಿಮೋಚನಾ ಸೇನೆ (ಬಿಎಲ್ಎ) ಭಯೋತ್ಪಾದನೆ ಚಟುವಟಿಕೆಗಳಿಗೆ ಅಫ್ಘಾನಿಸ್ತಾನದಲ್ಲಿರುವ ಭಾರತೀಯ ರಾಯಭಾರ ಕಚೇರಿಯೇ ನಿಯಂತ್ರಣ ಕೇಂದ್ರ ಎಂಬುದನ್ನು ಸಾಬೀತುಪಡಿಸುವುದು ಪಾಕಿಸ್ತಾನಕ್ಕೆ ಕಷ್ಟವೇನಲ್ಲ ಎಂಬೊಂದು ಸಂದೇಶವು ಬಶೀರ್‌ರಿಂದ ಮೆನನ್‌ಗೆ ತಲುಪಿತ್ತು" ಎಂದಿದ್ದಾರೆ ಶರಮ್ ಎಲ್ ಶೇಖ್‌ನಲ್ಲೇ ಇದ್ದ ಹಮೀದ್ ಮೀರ್!

ಹೇಗಿದ್ದರೂ ಸುಳ್ಳನ್ನು ಸತ್ಯ ಎಂದು ತೋರಿಸಿಕೊಡಲು ಹೆಣಗಾಡುವುದರಲ್ಲಿ, ಆ ಮೂಲಕ ಯಾವುದೇ ಒಂದು ಸಮಸ್ಯೆಯ ಗಂಭೀರತೆಯನ್ನು ತಿಳಿಗೊಳಿಸುತ್ತಾ, ಅಂತಾರಾಷ್ಟ್ರೀಯ ಗಮನ ಬೇರೆಡೆ ಸೆಳೆಯುವುದರಲ್ಲಿ ಪಾಕಿಸ್ತಾನವು ನಿಪುಣನೇ ಅಲ್ಲವೇ? ಭಾರತವೂ ಈ ರೀತಿಯ ಬೆದರಿಕೆಗೆ ಬಗ್ಗಿತೇ?

ಪಾಕಿಸ್ತಾನಿ ಅಧಿಕಾರಿಗಳು ಹೇಳುವಂತೆ, ಪಾಕಿಸ್ತಾನವು ಮೂವರನ್ನು 'ಭಾರತೀಯರನ್ನು' ಬಲೂಚಿಸ್ತಾನದಲ್ಲಿ ಬಂಧಿಸಿದ್ದು, ಅವರು ಬಲೂಚಿಸ್ತಾನದಲ್ಲಿ ಕಾರ್ಯನಿರತರಾಗಿದ್ದರು ಎಂಬುದಕ್ಕೆ ನಿರಾಕರಿಸಲಾಗದ ಸಾಕ್ಷ್ಯಾಧಾರಗಳಿವೆಯಂತೆ. ಇದಲ್ಲದೆ, 2004ರಲ್ಲಿ ಗ್ವಡಾರ್‌ನಲ್ಲಿ ಚೀನೀ ಇಂಜಿನಿಯರುಗಳ ಮೇಲಿನ ದಾಳಿಯಲ್ಲೂ ಭಾರತೀಯರ ಕೈವಾಡವಿರುವ ಸಾಕ್ಷ್ಯಾಧಾರಗಳಿರುವುದರಿಂದ, ಇದರ ಬಗ್ಗೆ ಮಾತೆತ್ತಿದರೆ ಭಾರತದ ಪ್ರತಿಷ್ಠೆಗೆ ಧಕ್ಕೆಯಾಗುತ್ತದೆ ಎಂದು ಬಶೀರ್ ಅವರು ಮೆನನ್‌ಗೆ ಮನವರಿಕೆ ಮಾಡಿದ್ದರಂತೆ.

ಒಟ್ಟಿನಲ್ಲಿ, ದ್ವಿಪಕ್ಷೀಯವಾಗಿದ್ದ ಕಾಶ್ಮೀರ ವಿವಾದವನ್ನು ಯಾವ ರೀತಿ ಅಂತಾರಾಷ್ಟ್ರೀಯ ಸಂಗತಿಯಾಗಿ ಮಾಡುವಲ್ಲಿ ಪಾಕಿಸ್ತಾನ ಸಫಲವಾಗಿದೆಯೋ, ಆಂತರಿಕ ಬಿಕ್ಕಟ್ಟಾಗಿರುವ ಬಲೂಚಿಸ್ತಾನವನ್ನು ಅಂತಾರಾಷ್ಟ್ರೀಕರಣಗೊಳಿಸುವಲ್ಲಿ ಪಾಕಿಸ್ತಾನ ಸಫಲವಾಗಿದೆ. ಈ ಮೂಲಕ, "ನಾವು ಕೂಡ ಭಯೋತ್ಪಾದನೆ ಬಲಿಪಶುಗಳು" ಎಂದು ಜೋರಾಗಿಯೇ ಕೂಗಲು ಪಾಕಿಸ್ತಾನಕ್ಕೆ ಮತ್ತಷ್ಟು ಶಕ್ತಿ ನೀಡಿದಂತಾಗಿದೆ ಎಂಬುದನ್ನು ಮರೆಯುವಂತಿಲ್ಲ.

ವಸ್ತು ಸ್ಥಿತಿ ಹೀಗಿರುವಾಗ ಪ್ರಧಾನ ಮಂತ್ರಿಗಳು ಕಣ್ಣು ಮುಚ್ಚಿ ಸಹಿ ಹಾಕಿದರಲ್ಲ, ಇದಕ್ಕೇನನ್ನೋಣ? ಜಂಟಿ ಹೇಳಿಕೆಯಲ್ಲಿ ಮಾತ್ರವೇ "ಸಮಗ್ರ ಮಾತುಕತೆಗೆ ಒಪ್ಪಿಗೆ" ನೀಡಿ, ಹೊರಗೆ ಬಂದು ಪತ್ರಿಕಾಗೋಷ್ಠಿಯಲ್ಲಾಗಲೀ, ಸಂಸತ್ತಿನ ಒಳಗೆ, ಹೊರಗೆ "ಪಾಕ್ ಕ್ರಮ ಕೈಗೊಳ್ಳುವವರೆಗೂ ಸಮಗ್ರ ಮಾತುಕತೆಯಿಲ್ಲ, ಭಯೋತ್ಪಾದನೆಗೂ ಮಾತುಕತೆಗೂ ಸಂಬಂಧ ಕಡಿದುಕೊಂಡಿಲ್ಲ" ಎಂದು ವಾದ ಹೂಡಿದರೆ ಯಾರು ಕೇಳಬೇಕು? ಅಂತಾರಾಷ್ಟ್ರೀಯ ಸಮುದಾಯಕ್ಕೆ ಮುಖ್ಯವಾಗಿರುವುದು ಲಿಖಿತ ಜಂಟಿ ಹೇಳಿಕೆಯೇ ಹೊರತು, ಪ್ರಧಾನಮಂತ್ರಿಗಳ ಈ ಸ್ಪಷ್ಟೀಕರಣವೋ, ನಿರಾಕರಣೆಯೋ ಅಥವಾ ಸಮ್ಮತಿಯೋ ಆಗಿರುವ ಹೇಳಿಕೆಯಂತೂ ಖಂಡಿತಾ ಅಲ್ಲ ಎಂಬುದನ್ನು ಜವಾಬ್ದಾರಿಯುತ ಸ್ಥಾನದಲ್ಲಿರುವವರು ಖಂಡಿತಾ ಮನಗಾಣಬೇಕಿತ್ತು.

ಎರಡು ವರ್ಷಗಳ ಹಿಂದೆ ಹವಾನಾದಲ್ಲಿ ಇದೇ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು, 'ಪಾಕಿಸ್ತಾನವೂ ಭಯೋತ್ಪಾದನೆಯ ಬಲಿಪಶು' ಎಂಬ ಹೇಳಿಕೆ ನೀಡಿದ್ದರು. ಆವಾಗಲೇ ಭಾರತೀಯರು ಧ್ವನಿಯೆತ್ತಿದ್ದರು. ಆ ಬಳಿಕ, ಮುಂಬೈ ಮೇಲೆ ದಾಳಿ ನಡೆದ ಬಳಿಕ, ಪಾಕ್ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಭೇಟಿಯ ಸಂದರ್ಭದಲ್ಲಿ, ಧೈರ್ಯವಾಗಿಯೇ ಮೊದಲು ನಿಮ್ಮ ನೆಲದಿಂದ ಭಾರತದ ಮೇಲಾಗುತ್ತಿರುವ ಭಯೋತ್ಪಾದನಾ ಚಟುವಟಿಕೆಗಳನ್ನು ನಿಲ್ಲಿಸಿ ಎಂದು ಹೇಳಿದರೂ, ಈಜಿಪ್ಟಿನಲ್ಲಿ, ಜಂಟಿ ಹೇಳಿಕೆಯ ಮೂಲಕ ಮತ್ತೆ ಎಡವಿದರು.

ಹೌದು, ಮಾತುಕತೆಯ ಮೂಲಕವೇ ಪರಿಹಾರ ಸಾಧ್ಯ ಎಂಬುದರಲ್ಲಿ ಎರಡು ಮಾತಿಲ್ಲ. ಇದು ರಾಜತಾಂತ್ರಿಕ ನೀತಿಯೂ ಹೌದು. ಆದರೆ, ಅಂತಾರಾಷ್ಟ್ರೀಯ ಮಟ್ಟದಲ್ಲೀಗ ನಾವು ಮೇಲುಗೈ ಹೊಂದಿದ್ದೇವೆ. ಹೇಗಾದರೂ ಮಾಡಿ ಪಾಕಿಸ್ತಾನದಲ್ಲಿ ಉಗ್ರಗಾಮಿಗಳ ಹುಟ್ಟಡಗಿಸಲು ಮತ್ತಷ್ಟು ಒತ್ತಡ ಹೇರಬೇಕಾದದ್ದು ಭಾರತದ, ಏಷ್ಯಾದ ಮತ್ತು ವಿಶೇಷವಾಗಿ ಪಾಕಿಸ್ತಾನದ ಒಳಿತಿಗೂ ಪೂರಕ ಎಂಬುದು ಕೂಡ ಶತಃಸಿದ್ಧ. ಇಂಥ ಒಂದು ಅವಕಾಶವನ್ನು ಭಾರತ ಕಳೆದುಕೊಳ್ಳಬಾರದಿತ್ತು, ಮೃದು ನಿಲುವಿನ ರಾಷ್ಟ್ರ ಎಂಬ ಹೆಸರಿಗೆ ಮತ್ತೆ ಮರಳಬಾರದು.

ಸಂಸತ್ತಿನಲ್ಲಿ ಪ್ರಧಾನಿಯವರು ಏನೇ ಸ್ಪಷ್ಟನೆ ನೀಡಲಿ, ಜಂಟಿ ಹೇಳಿಕೆಯಲ್ಲಿ ಉಲ್ಲೇಖವಾಗಿರುವ ಅಂಶಗಳ ಆಧಾರದಲ್ಲಿ ಹೇಳಬಹುದಾದರೆ, ಒಂದನೆಯದಾಗಿ, 'ಮಾತುಕತೆಯೇ ಇಲ್ಲ' ಎಂದು ಹೇಳುತ್ತಿದ್ದ ಭಾರತ ಮಾತುಕತೆಯ ಮೇಜಿನೆದುರು ಬರುವಂತೆ ಮಾಡುವಲ್ಲಿ ಪಾಕಿಸ್ತಾನ ಸಫಲವಾಗಿದೆ. ಎರಡನೆಯದು, ಬಲೂಚಿಸ್ತಾನದಲ್ಲಿ ಭಾರತದ ಕೈವಾಡ ಎಂಬ ಅಂಶವನ್ನು ಉಲ್ಲೇಖಿಸುವ ಮೂಲಕ, "ನಾವು ಕೂಡ ಭಯೋತ್ಪಾದನೆಯ ಬಲಿಪಶುಗಳು, ನಮಗೂ ಅನುಕಂಪ ಬೇಕು" ಎಂಬ ಭಾವನೆ ಸೃಷ್ಟಿಸುವಲ್ಲಿ ಪಾಕಿಸ್ತಾನವು ಯಶಸ್ವಿಯಾಗಿದೆ. ಮತ್ತು ಭಾರತವೊಂದು ಮೃದು ರಾಷ್ಟ್ರ ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟಂತಾಗಿದೆ. ಹಾಗೂ ಕೊನೆಯದಾಗಿ, ಮುಂಬೈ ದಾಳಿಯ ಕುರಿತ ಬಿಸಿಯನ್ನು ಸ್ವಲ್ಪಮಟ್ಟಿಗೆ ತಂಪು ಮಾಡಿ, ಭಾರತ-ಪಾಕ್ ಮಾತುಕತೆಯೊಂದೇ ಎಲ್ಲದಕ್ಕೂ ಪರಿಹಾರ ಎಂಬ ಭಾವನೆ ಬರಿಸುವ ಮೂಲಕ, ಉಭಯ ರಾಷ್ಟ್ರಗಳ ಮಾತುಕತೆಯ ಮೇಲೆ ಗಮನ ಕೇಂದ್ರೀಕರಿಸುವಂತೆ ಮಾಡುವಲ್ಲಿ, ಈ ಮೂಲಕ ಭಯೋತ್ಪಾದನೆ ಮೇಲಿನ ಜಾಗತಿಕ ಗಮನವನ್ನು ಬೇರೆಡೆ ತಿರುಗಿಸುವಲ್ಲಿ ಪಾಕ್ ಯಶಸ್ವಿಯಾಗಿದೆ. ಇದು ಭಾರತಕ್ಕೆ ಹಿನ್ನಡೆಯಲ್ಲದೆ ಮತ್ತಿನ್ನೇನು?

ಆದರೆ ಈ ರೀತಿಯ 'ಎಚ್ಚರ ತಪ್ಪುವಿಕೆ'ಗಳ ಮೂಲಕ, ಮುಂಬೈ ದಾಳಿಗಳ ಬಳಿಕ ಪಾಕಿಸ್ತಾನದ ಉಗ್ರಗಾಮಿ ಚಟುವಟಿಕೆಗಳ ಮೇಲೆ ಭಾರತವು ಸಾಧಿಸಿದ್ದ ಅಂತಾರಾಷ್ಟ್ರೀಯ ಒತ್ತಡದ ಫಲವನ್ನು ತಗ್ಗಿಸಿದಂತಾಗಿದೆ ಅನ್ನಿಸುತ್ತಿದೆಯೇ? ವಿಷಯವೇ ಅಲ್ಲ ಎಂಬಂತಿದ್ದ ಬಲೂಚಿಸ್ತಾನವನ್ನು ಅಂತಾರಾಷ್ಟ್ರೀಯ ವಿಷಯವಾಗಿಸುವಲ್ಲಿ ಪಾಕ್ ಸಫಲವಾಗಿದೆ ಅನ್ನಿಸುತ್ತಿಲ್ಲವೇ? ಇರಲಿ, ಎಡವಿದ್ದಾಗಿದೆ, ಆದರೆ, "ಪಾಕ್ ತಕ್ಕ ಕ್ರಮ ಕೈಗೊಳ್ಳುವವರೆಗೂ ಮಾತುಕತೆಯಿಲ್ಲ, ಬಲೂಚಿಸ್ತಾನದಲ್ಲಿ ಭಾರತ ಕೈವಾಡವಿಲ್ಲವೇ ಇಲ್ಲ" ಎಂದು ಈಗ ಎಷ್ಟೇ ಹೇಳಿದರೂ, ಜಂಟಿ ಲಿಖಿತ ಹೇಳಿಕೆಗೆ ಸಹಿ ಬಿದ್ದಾಗ ಭಾರತದ ಕ್ರೆಡಿಬಿಲಿಟಿಗೆ ಆದ ಹಾನಿ ಸರಿಯಾಗುತ್ತದೆಯೇ? ನೀವೇನು ಹೇಳುತ್ತೀರಿ?
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ