ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಪ್ರಚಲಿತ » ಸರ್ಕಾರಿ ಲೋಕಪಾಲಕ್ಕೆ ವೆಬ್‌ದುನಿಯಾ ಓದುಗರ ತಿರಸ್ಕಾರ (Webdunia Online Poll | Anna Hazare | Lokpal | Jan Lokpal)
PTI
ಆತ್ಮೀಯ ಓದುಗರೇ,
ಅಣ್ಣಾ ಹಜಾರೆ ಅವರು ನಮ್ಮ ನಿಮ್ಮೆಲ್ಲರ ಧ್ವನಿಗಳನ್ನು ಒಗ್ಗೂಡಿಸಿ, ನಾವು-ನೀವು ಸರಕಾರದ ಪ್ರತಿಯೊಂದು ಹಂತದಲ್ಲಿ ಎದುರಿಸುತ್ತಿರುವ ಬವಣೆಗಳನ್ನು, ಲಂಚ ರುಷುವತ್ತುಗಳ ಆಟಾಟೋಪಕ್ಕೆ ಕಡಿವಾಣ ಹಾಕುವ ನಮ್ಮ ಒಳದನಿಗಳನ್ನು ಒಗ್ಗೂಡಿಸಿ, ರಾಷ್ಟ್ರವನ್ನೇ ಎತ್ತಿ ಕಟ್ಟಿದ್ದಾರೆ. ಸ್ವಾತಂತ್ರ್ಯ ದೊರೆತು 64 ವರ್ಷಗಳ ನಂತರವಾದರೂ ಪ್ರಬಲವಾದ ಲೋಕಪಾಲ ಕಾಯ್ದೆ ಆಗಲೇಬೇಕು ಎಂದು ಪಟ್ಟು ಹಿಡಿಯುವ ಮೂಲಕ, ಈ ನಿಟ್ಟಿನಲ್ಲಿ ಯಶಸ್ವಿಯೂ ಆಗುತ್ತಿದ್ದಾರೆ.

ಈ ಸಂದರ್ಭದಲ್ಲಿ ವೆಬ್‌ದುನಿಯಾ ಆನ್‌ಲೈನ್ ಸಮೀಕ್ಷೆ ಕೈಗೊಂಡಿದ್ದುದು ನಿಮಗೆಲ್ಲರಿಗೂ ಗೊತ್ತಿದೆ. ಒಂದು ವಾರ ಕಾಲ ಜಗತ್ತಿನಾದ್ಯಂತ ವೆಬ್‌ದುನಿಯಾ ಓದುಗರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, ಅದರ ಅಂತಿಮ ಫಲಿತಾಂಶ ಇಲ್ಲಿದೆ.

ದೇಶವನ್ನು ಅತೀ ಹೆಚ್ಚು ಕಾಡುತ್ತಿರುವ ಪೆಡಂಭೂತವೆಂದರೆ ಭ್ರಷ್ಟಾಚಾರವೇ ಎಂಬುದನ್ನು ಶೇ.77.18 ಮಂದಿಯೂ ಒಪ್ಪಿಕೊಂಡಿದ್ದಾರೆ. ಉಳಿದಂತೆ, ಬೆಲೆ ಏರಿಕೆ, ರಾಜಕಾರಣಿಗಳಿಗೆ ಇಚ್ಛಾಶಕ್ತಿಯಿಲ್ಲದಿರುವುದು ಮತ್ತು ಚುನಾವಣಾ ವ್ಯವಸ್ಥೆಯೇ ಸರಿ ಇಲ್ಲ ಎಂಬ ಅಭಿಪ್ರಾಯವನ್ನು ಕೆಲವು ಮಂದಿ ವ್ಯಕ್ತಪಡಿಸಿದ್ದಾರೆ.

ಅಣ್ಣಾ ಹಜಾರೆಯನ್ನು ಯುಪಿಎ ಸರಕಾರವು ಬಂಧಿಸಿರುವುದು ಖಂಡಿತವಾಗಿಯೂ ತಪ್ಪು ಎಂದವರು ಶೇ.30.61 ಮಂದಿ. ಈ ವಿಷಯದಲ್ಲಿ ಸರಕಾರ ದಿಕ್ಕು ತಪ್ಪಿದೆ ಎಂದವರು ಶೇ.26.66 ಮಂದಿ. ಪ್ರಜಾಪ್ರಭುತ್ವದಲ್ಲಿ ಸರಕಾರಕ್ಕೆ ಭರವಸೆಯಿಲ್ಲ (ಶೇ.21.71) ಮತ್ತು ಇದು ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ ಎಂದವರು ಶೇ.19.03 ಮಂದಿ.

ಇನ್ನು ಹಜಾರೆ ಬಣದ ಜನ ಲೋಕಪಾಲ ಮಸೂದೆಯೇ ಸಂಸತ್ತಿನಲ್ಲಿ ಜಾರಿಯಾಗಬೇಕು ಎಂದವರು ಶೇ.57.73 ಮಂದಿ. ಸರಕಾರದ್ದನ್ನೂ, ಜನಲೋಕಪಾಲವನ್ನೂ ಸೇರಿಸಿ ಬೇರೆಯೇ ಪ್ರಬಲ ಕಾಯ್ದೆ ತರಬೇಕು ಎಂದವರು ಶೇ.39 ಮಂದಿ. ಸರಕಾರಿ ಲೋಕಪಾಲಕ್ಕೆ ಮತ ನೀಡಿದವರು ಕೇವಲ ಶೇ.2.36 ಮಂದಿ. ಮತ್ತು ಜನರಿಗೆ ಕಾಯ್ದೆಯ ಮೇಲೆ ಇನ್ನೂ ಭರವಸೆ ಇದೆ ಎಂದು ತೋರಿಸಿಕೊಡುವ ಅಂಶವೆಂದರೆ, ಎರಡೂ ಬೇಡ ಎಂಬ ನಿರಾಶಾದಾಯಕ ಉತ್ತರ ಕ್ಲಿಕ್ ಮಾಡಿದವರು ಶೇ.0.59 ಮಂದಿ ಮಾತ್ರವೇ.

ಇನ್ನು ಅಣ್ಣಾ ಹಜಾರೆಯವರ ಜನಲೋಕಪಾಲ ಕಾಯ್ದೆಯಿಂದ ನೂರಕ್ಕೆ ನೂರು ಭ್ರಷ್ಟಾಚಾರ ನಿಗ್ರಹ ಆಗುತ್ತದೆ ಎಂದು ನಂಬಿದವರು ಕೇವಲ ಶೇ.11.64 ಮಂದಿ ಮಾತ್ರ. ಆದರೆ ಶೇ.80ರಷ್ಟಾದರೂ ಭ್ರಷ್ಟಾಚಾರ ನಿಗ್ರಹವಾಗುತ್ತದೆ ಎಂದು ನಂಬಿದವರು ಶೇ.49.03 ಮಂದಿ. ಮತ್ತು ಶೇ.60ರಷ್ಟು ಭ್ರಷ್ಟಾಚಾರ ತೊಲಗಿಸಬಹುದು ಎಂದವರು ಶೇ.28.88 ಮಂದಿ. ಏನೂ ಆಗದು ಎಂದವರು ಶೇ.0.65 ಮಂದಿ ಮಾತ್ರ.

ಇನ್ನು, ಸರಕಾರವು ಆರಂಭದಿಂದಲೇ ಅಣ್ಣಾ ಹಜಾರೆ ಅವರನ್ನು ಮಟ್ಟ ಹಾಕಲು ಪ್ರಯತ್ನಿಸಿದ ಸಂದರ್ಭದಲ್ಲಿ ಮತ್ತು ದೇಶಾದ್ಯಂತ ಜನರು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದಾಗ, ಈ ಸರಕಾರವೂ ತುರ್ತು ಪರಿಸ್ಥಿತಿ ಹೇರುವ ದುಸ್ಸಾಹಸಕ್ಕೆ ಇಳಿಯುತ್ತದೆ ಎಂದು ಶೇ.39.40 ಮಂದಿ ಮಾತ್ರ ಭಾವಿಸಿದರು. ಶೇ.60.60 ಮಂದಿಯೂ ಸಾಧ್ಯತೆ ಇಲ್ಲ ಎಂದೇ ಭರವಸೆಯಿಂದ ನುಡಿದಿದ್ದಾರೆ.

ಇನ್ನು ಅಣ್ಣಾ ಹಜಾರೆಯವರ ಈ ಆಂದೋಲನವನ್ನು ಸ್ವಾತಂತ್ರ್ಯ ಹೋರಾಟಕ್ಕೇ ಹೆಚ್ಚಿನವರು ಹೋಲಿಸಿದ್ದಾರೆ. ಶೇ.35.28 ಮಂದಿ ಇದನ್ನು ಬೆಂಬಲಿಸಿದರೆ, ಇಲ್ಲ, ಇದು ಅಣ್ಣಾ ಅವರದ್ದೇ ಪ್ರತ್ಯೇಕ, ವಿಶಿಷ್ಟ ಹೋರಾಟ ಎಂದವರು ಶೇ.33.38 ಮಂದಿ. ಉಳಿದಂತೆ ಶೇ.15.90 ಮಂದಿ ಇದನ್ನು ಗಾಂಧೀಜಿ ಸತ್ಯಾಗ್ರಹಕ್ಕೆ, ಶೇ.7.56 ಮಂದಿ ಜೆ.ಪಿ.ಆಂದೋಲನಕ್ಕೆ, ಶೇ.6.9 ಮಂದಿ ಇದನ್ನು ಕ್ವಿಟ್ ಇಂಡಿಯಾ ಚಳವಳಿಗೆ ಹೋಲಿಸಿದ್ದರೆ, ಶೇ.0.99 ಮಾತ್ರವೇ, ಇದು ತೋರಿಕೆಯ ಸತ್ಯಾಗ್ರಹ ಎಂದಿದ್ದಾರೆ.

ಇನ್ನು ಪ್ರಮುಖ ಪ್ರಶ್ನೆ, ಅಣ್ಣಾ ಹಜಾರೆ ಹೋರಾಟಕ್ಕೆ ಜನ ಸಾಮಾನ್ಯರು ಹೇಗೆ ಬೆಂಬಲಿಸಬಹುದು ಎಂಬ ಪ್ರಶ್ನೆಗೆ, ಜನಲೋಕಪಾಲ ಕುರಿತು ಜನಜಾಗೃತಿ ಮೂಡಿಸುವ ಮೂಲಕ ಎಂದವರು ಶೇ.43.19 ಮಂದಿ. ಏನೂ ಮಾಡಲ್ಲ, ಸುಮ್ಮನಿರುತ್ತೇವೆ ಎಂದವರು ಶೇ.1.05 ಮಂದಿ.

ಜನಾಭಿಪ್ರಾಯಕ್ಕೆ ಸರಕಾರ ಮತ್ತು ಸಂಸದರು ಮನ್ನಣೆ ನೀಡದಿದ್ದರೆ, ಜನರಿಂದ ಆರಿಸಿ ಕಳುಹಿಸಿದವರಿಗೇನು ಬೆಲೆ? ಹೀಗಾಗಿ ಒಗ್ಗಟ್ಟಿನ ಹೋರಾಟಕ್ಕೆ ವಿಜಯ ದೊರೆಯುತ್ತಿದೆ. ಶಕ್ತಿಶಾಲಿ ಲೋಕಪಾಲ ಮಸೂದೆಯೊಂದು ಕಾಯ್ದೆ ರೂಪ ಪಡೆಯುವ ಎಲ್ಲ ಸಾಧ್ಯತೆಗಳೂ ಗೋಚರಿಸುತ್ತಿವೆ.

ಈ ಆನ್‌ಲೈನ್ ಸಮೀಕ್ಷೆಯಲ್ಲಿ ಪಾಲ್ಗೊಂಡ ಎಲ್ಲರಿಗೂ ವೆಬ್‌ದುನಿಯಾದಿಂದ ಆತ್ಮೀಯ ಕೃತಜ್ಞತೆಗಳು. ಇದೇ ಹೊತ್ತಿಗೆ, ಕಾಮೆಂಟ್ ಮಾಡುವಾಗ ದಯವಿಟ್ಟು ಅಶ್ಲೀಲ ಭಾಷೆ ಪ್ರಯೋಗಿಸಬೇಡಿ ಎಂದು ಅರ್ಥವಾಗುವವರಲ್ಲಿ ಮತ್ತೊಮ್ಮೆ ಮನವಿ. ಪಾಲಿಸ್ತೀರಲ್ಲಾ?

-ಅವಿನಾಶ್ ಬಿ.

ಇವನ್ನೂ ಓದಿ
ಇದನ್ನು ಸಹ ಶೋಧಿಸು: ವೆಬ್ದುನಿಯಾ ಆನ್ಲೈನ್ ಸಮೀಕ್ಷೆ, ಅಣ್ಣಾ ಹಜಾರೆ, ಲೋಕಪಾಲ, ಜನಲೋಕಪಾಲ, ಕನ್ನಡ ಓದುಗರ ಜನಾಭಿಪ್ರಾಯ, ಆನ್ಲೈನ್ ಅಭಿಪ್ರಾಯ