ವಿಶ್ವದ ಪ್ರಥಮ ತೇಲುವ ಪರಮಾಣು ವಿದ್ಯುತ್ ಸ್ಥಾವರವನ್ನು 2011ರಲ್ಲಿ ರಷ್ಯದ ಆರ್ಕ್‌ಟಿಕ್‌ನಲ್ಲಿ ಸ್ಥಾಪಿಸಲಾಗುವುದು ಎಂದು ಆರ್ಕಾನ್‌ಗೆಲ್ಸ್ಕ್ ಪ್ರದೇಶದ ರಾಜ್ಯಪಾಲ ತಿಳಿಸಿದ್ದಾರೆ. 70 ಮೆಗಾವಾಟ್ ಸಾಮರ್ಥ್ಯದ ವಿದ್ಯುತ್ ಘಟಕವನ್ನು ಈ ವರ್ಷ ಆರಂಭಿಸಲಾಗಿದ್ದು, 2010ರೊಳಗೆ ಮುಗಿಯುತ್ತದೆ ಎಂದು ಹೇಳಿದರು.
ಜಾಗತಿಕ ಮಾರುಕಟ್ಟೆಯಲ್ಲಿ ತೇಲುವ ವಿದ್ಯುತ್ ಸ್ಥಾವರ ಹೊಸ ಉತ್ಪನ್ನವಾಗಿದ್ದು, ಅದಕ್ಕೆ ಒಳ್ಳೆಯ ಬೇಡಿಕೆ ಬರಬಹುದೆಂದು ಆಶಿಸಿದರು.ಆರ್ಕ್‌ಟಿಕ್ ಬಂದರಿನಲ್ಲಿ ಈ ಸ್ಥಾವರ ನಿರ್ಮಾಣವನ್ನು ಏಪ್ರಿಲ್‌ನಲ್ಲಿ ರಷ್ಯಾ ಆರಂಭಿಸಿತು.
ಒಂದು ದಶಕದಲ್ಲಿ ಇನ್ನೂ 6 ಸ್ಥಾವರಗಳ ನಿರ್ಮಾಣವನ್ನು ರಷ್ಯ ನಿರೀಕ್ಷಿಸಿದೆ ಎಂದು ರಿಯಾ ನೊವೋಸ್ಟಿ ವರದಿ ಮಾಡಿದೆ. ತೇಲುವ ವಿದ್ಯುತ್ ಸ್ಥಾವರಗಳ ಖರೀದಿಗೆ 20ಕ್ಕೂ ಹೆಚ್ಚು ರಾಷ್ಟ್ರಗಳು ಆಸಕ್ತಿ ಹೊಂದಿದೆ ಎಂದು ರಷ್ಯದ ಪರಮಾಣು ಅಧಿಕಾರಿಯೊಬ್ಬರು ತಿಳಿಸಿದರು.
ವಿದ್ಯುತ್ ಕೊರತೆಯ ಹೊರವಲಯದ ಪ್ರದೇಶಗಳಲ್ಲಿ ಮತ್ತು ವಿದ್ಯುತ್ ಜಾಲದ ಗೈರುಹಾಜರಿಯಲ್ಲಿ ಸತತ ವಿದ್ಯುತ್ ಪೂರೈಕೆ ಅಗತ್ಯವಾದ ಯೋಜನೆಗಳ ಅನುಷ್ಠಾನಕ್ಕೆ ಅವನ್ನು ಬಳಸಲಾಗುವುದು.
ಪ್ರಥಮ ತೇಲುವ ವಿದ್ಯುತ್ ಸ್ಥಾವರದ ವೆಚ್ಚ 10 ಶತಕೋಟಿ ರೂಬಲ್ಸ್(400 ದಶಲಕ್ಷ ಡಾಲರ್) ಎಂದು ಅಂದಾಜು ಮಾಡಲಾಗಿತ್ತು, ಬಳಿಕ ಅದನ್ನು 6 ಶತಕೋಟಿ ರೂಬಲ್‌ಗೆ ಇಳಿಸಲಾಗಿದೆ.
|