ಮಯನ್ಮಾರಿನ ಜುಂಟಾ ಮಿಲಿಟರಿ ಪಡೆಗಳು ಬೌದ್ಧ ಮಂದಿರಗಳನ್ನು ಮತ್ತು ಸಾರ್ವಜನಿಕ ಇಂಟರ್ನೆಟ್ ಸಂಪರ್ಕಗಳನ್ನು ಮುಚ್ಚಿರುವಂತೆಯೇ, ಮಿಲಿಟರಿ ಆಡಳಿತವನ್ನು ವಿರೋಧಿಸುತ್ತಿರುವ ಪ್ರಜಾಪ್ರಭುತ್ವ ಪರ ಪ್ರತಿಭಟನಾಕಾರರನ್ನು ಚದುರಿಸಲು ಸೈನಿಕರು ಮತ್ತು ಪೊಲೀಸರು ಮತ್ತು ಬೆದರು ಗುಂಡು ದಾಳಿ ಮತ್ತು ಅಶ್ರುವಾಯು ಸಿಡಿಸಿದರು.
ಕಳೆದ ಎರಡು ವಾರಗಳಿಂದ ಪ್ರತಿದಿನ ಜನರು ಸಭೆ ಸೇರಿ ಆಡಳಿತವನ್ನು ಶಾಂತಿಯುತವಾಗಿ ವಿರೋಧಿಸುತ್ತಿದ್ದಾರೆ. ಸರಕಾರವು ಉಗ್ರ ಕ್ರಮ ಕೈಗೊಂಡ ಮೂರನೇ ದಿನ ರಸ್ತೆಗಳೆಲ್ಲಾ ಖಾಲಿಯಾಗಿದ್ದು, ಭದ್ರತಾ ಪಡೆಗಳು ಸಣ್ಣಪುಟ್ಟ ಗುಂಪುಗಳಲ್ಲಿ ಕಂಡುಬಂದ ಕಾರ್ಯಕರ್ತರನ್ನಷ್ಟೇ ಚದುರಿಸುತ್ತಿದ್ದರು.
ಸಾವಿರಾರು ಬೌದ್ಧ ಭಿಕ್ಷುಗಳು ಪ್ರತಿಭಟನೆಗೆ ಬೆನ್ನೆಲುಬಾಗಿದ್ದರು, ಆದರೆ ಅವರನ್ನೆಲ್ಲಾ ಅವರ ಬೌದ್ಧಮಂದಿರಗಳಲ್ಲೇ ಗೃಹಬಂಧನದಲ್ಲಿರಿಸಲಾಗಿದೆ. ಎರಡು ಅತಿದೊಡ್ಡ ಪಟ್ಟಣಗಳಾದ ಯಂಗೂನ್ ಮತ್ತು ಮಂಡಲಯ್‌ಗಳಲ್ಲಿನ ಈ ಮಂದಿರಗಳ ಗೇಟಿಗೆ ಬೀಗ ಜಡಿಯಲಾಗಿದ್ದು, ಕಂಪೌಂಡ್ ಸುತ್ತ ತಂತಿಬೇಲಿ ಅಳವಡಿಸಲಾಗಿದೆ.
ಇಂಧನ ಬೆಲೆ ಏರಿಕೆ ವಿರುದ್ಧ ಸುಮಾರು ಆರು ವಾರಗಳ ಹಿಂದೆ ಆರಂಭವಾಗಿದ್ದ ಪುಟ್ಟ ಪ್ರತಿಭಟನೆಯೊಂದು, 45 ವರ್ಷಗಳ ಮಿಲಿಟರಿ ಆಡಳಿತವನ್ನು ಕೊನೆಗೊಳಿಸಬೇಕೆಂದು ಸಾವಿರಾರು ಮಂದಿ ಪ್ರತಿಭಟನಾ ಪ್ರದರ್ಶನ ನಡೆಸುವ ಮೂಲಕ ಆರಂಭವಾದ ಆಂದೋಲನವು, ಸರಕಾರವು ಕೈಗೊಳ್ಳುತ್ತಿರುವ ಉಗ್ರ ಕ್ರಮದಿಂದಾಗಿ ದುರ್ಬಲವಾಗುತ್ತಿದೆ ಎಂಬ ಬಗ್ಗೆ ಯಂಗೂನ್ ನಿವಾಸಿಗಳು ನಿರಾಶಾವಾದ ವ್ಯಕ್ತಪಡಿಸಿದ್ದಾರೆ.
ಜುಂತಾ ಆಡಳಿತವು ಪ್ರಜಾಪ್ರಭುತ್ವವಾದಿ ಕಾರ್ಯಕರ್ತರ ಮೇಲೆ ದೌರ್ಜನ್ಯ ಎಸಗುತ್ತಿರುವುದು ಜಾಗತಿಕವಾಗಿ ಆಕ್ರೋಶ ಮೂಡಿಸಿದೆ. ಅಮೆರಿಕ, ಯೂರೋಪ್ ಹಾಗೂ ಏಷ್ಯಾದ ವಿವಿಧೆಡೆ ಪ್ರತಿಭಟನಾಕಾರರು ಮಿಲಿಟರಿ ಜನರಲ್‌ಗಳ ಕೃತ್ಯವನ್ನು ಖಂಡಿಸಿದ್ದಾರೆ.
ದಬ್ಬಾಳಿಕೆ ಕೊನೆಗೊಳಿಸಲು ಮಯನ್ಮಾರ್ ಮುಖಂಡರ ಮೇಲೆ ಒತ್ತಡ ಹೇರುವಂತೆ ಶ್ವೇತಭವನವು "ಎಲ್ಲಾ ನಾಗರಿಕ ರಾಷ್ಟ್ರಗಳನ್ನು" ಆಗ್ರಹಿಸಿದೆ.
|