ಪಾಕಿಸ್ತಾನ ಅಧ್ಯಕ್ಷ ಪರ್ವೇಜ್ ಮುಷರಫ್ ಅವರ ಮರುಚುನಾವಣೆಯ ಪ್ರಯತ್ನವನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಪಕ್ಷ ಕಾರ್ಯಕರ್ತರು ಮತ್ತು ವಕೀಲರು ಹಾಗೂ ಪೊಲೀಸರ ಮಧ್ಯೆ ಏರ್ಪಟ್ಟ ಘರ್ಷಣೆ ಸಂದರ್ಭ ಪತ್ರಕರ್ತರು ಶನಿವಾರ ಇಸ್ಲಾಮಾಬಾದ್‌ನಲ್ಲಿ ಸಚಿವರೊಬ್ಬರನ್ನು ಥಳಿಸಿದ್ದಾರೆ.
ಕಪ್ಪು ಬಾವುಟಗಳನ್ನು ಹಿಡಿದುಕೊಂಡು ಘೋಷಣೆ ಕೂಗುತ್ತಿದ್ದ ವಕೀಲರ ಮೇಲೆ ಲಾಠಿ ಪ್ರಹಾರ ಹಾಗೂ ಗುಂಡುದಾಳಿ ನಡೆಸಿದ ಪೊಲೀಸರು ಚುನಾವಣಾ ಆಯೋಗ ಕಛೇರಿ ಬಳಿ ನೇರ ಪ್ರಸಾರದಲ್ಲಿ ನಿರತರಾಗಿದ್ದ ಟಿವಿ ಕ್ಯಾಮರಾಮನ್ ಮತ್ತು ಪತ್ರಕರ್ತರತ್ತ ತಿರುಗಿದರು.
ಪೊಲೀಸ್ ಕ್ರಮದಿಂದ ಆಕ್ರೋಶಗೊಂಡ ಪತ್ರಕರ್ತರು, ಚುನಾವಣಾ ಆಯೋಗದಿಂದ ಹೊರಬರುತ್ತಿದ್ದ ಮಾಹಿತಿ ಖಾತೆ ರಾಜ್ಯ ಸಚಿವ ತಾರಿಕ್ ಅಜೀಮ್ ಅವರನ್ನು ಥಳಿಸಿದರು ಎಂದು ಟಿವಿ ಚಾನೆಲ್‌ಗಳು ವರದಿ ಮಾಡಿವೆ.
ಅಕ್ಟೋಬರ್ 6ರಂದು ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯ ನಾಮಪತ್ರ ಪರಿಶೀಲನೆ ನೋಡಲೆಂದು ಅಜೀಮ್ ಅವರು ಪ್ರಧಾನ ಮಂತ್ರಿ ಶೌಕತ್ ಅಜೀಜ್ ಅವರೊಂದಿಗೆ ಚುನಾವಣಾ ಆಯೋಗಕ್ಕೆ ತೆರಳಿದ್ದರು.
ಮುಷರಫ್ ಅವರಿಗೆ ಸೇನಾ ಸಮವಸ್ತ್ರದಲ್ಲೇ ಮರುಚುನಾವಣೆಗೆ ಸರ್ವೋಚ್ಚ ನ್ಯಾಯಾಲಯ ಅನುಮತಿ ನೀಡಿತ್ತು. ಇದನ್ನು ವಿರೋಧಿಸಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ನಡೆದ ಘರ್ಷಣೆಯನ್ನು ನೇರಪ್ರಸಾರ ಮಾಡಿದ ಟಿವಿ ಚಾನೆಲ್‌ಗಳನ್ನು ಪ್ರಸಾರವನ್ನು ನಿರ್ಬಂಧಿಸಲಾಗಿದೆ.
ಪ್ರತಿಭಟನಾಕಾರರು "ಮುಷರಫ್ ತೆರಳಿ" ಎಂಬ ಘೋಷಣೆಯನ್ನು ಕೂಗುತ್ತಾ ಸರ್ವೋಚ್ಚ ನ್ಯಾಯಾಲಯದ ಕಟ್ಟಡದ ಬಳಿ ಇರುವ ಚುನಾವಣಾ ಆಯೋಗ ಕಛೇರಿಗೆ ಧಾವಿಸುತ್ತಿದ್ದರು.
ಅಲಿ ಅಹ್ಮದ್ ಕುರ್ಡ್ ಅವರನ್ನೊಳಗೊಂಡಂತೆ ಅನೇಕ ಹಿರಿಯ ವಕೀಲರನ್ನು ಬಂಧಿಸಲಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯ ಬಾರ್ ಎಸೋಸಿಯೇಶನ್ ಅಧ್ಯಕ್ಷ ಮುನೀರ್ ಎ. ಮಾಲಿಕ್ ತಿಳಿಸಿದ್ದಾರೆ.
ಪೊಲೀಸರು ಮುಖ್ಯ ಚುನಾವಣಾ ಆಯೋಗಾಧಿಕಾರಿಗಳ ಕಛೇರಿಯತ್ತ ಸಾಗುತ್ತಿದ್ದ ಪ್ರತಿಪಕ್ಷಗಳಾದ ಜಮಾತೆ ಇಸ್ಲಾಮಿ ಮತ್ತು ಮುಸ್ಲಿಂ ಲೀಗ್‌ನ ನೂರಾರು ಕಾರ್ಯಕರ್ತರನ್ನು ತಡೆದು ತಡೆದಿದ್ದಾರೆ.
ಇಸ್ಲಾಮಾಬಾದ್‌ನಲ್ಲಿ ರಾಜಕೀಯ ಕಾರ್ಯಕರ್ತರನ್ನು ಬಂಧಿಸಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ ಎಂದು ಸಂಸತ್ತಿನ ಪ್ರತಿಪಕ್ಷ ಸದಸ್ಯ ಖ್ವಾಜಾ ಮಹಮ್ಮದ್ ಆಸಿಫ್ ತಿಳಿಸಿದ್ದಾರೆ.
ಮುಖ್ಯ ಮೂರು ಚಾನೆಲ್‌ಗಳಾದ ಜಿಯೋ, ಎಆರ್‌ವೈ ಮತ್ತು ಆಜ್ ಟಿವಿಗಳನ್ನು ಇಸ್ಲಾಮಾಬಾದ್, ರಾವಲ್ಪಿಂಡಿ ಮತ್ತು ದೇಶದ ಅನೇಕ ಭಾಗಗಳಲ್ಲಿ ತಡೆಹಿಡಿಯಲಾಗಿದೆ.
|