ಪಾಕಿಸ್ತಾನದ ಅಧ್ಯಕ್ಷ ಪರ್ವೇಜ್ ಮುಷರ್ರಫ್ ಮಂಗಳವಾರ ಐಎಸ್‌ಐ ಮುಖ್ಯಸ್ಥ ಅಸ್ಫಾಕ್ ಪರ್ವೇಜ್ ಕಿಯಾನಿ ಅವರನ್ನು ಸೇನಾ ಮುಖ್ಯಸ್ಥರ ಹುದ್ದೆಗೆ ತಮ್ಮ ಉತ್ತರಾಧಿಕಾರಿಯಾಗಿ ಆಯ್ಕೆಮಾಡಿದ್ದಾರೆ.
ಇದರಿಂದ ಸುಮಾರು 8 ತಿಂಗಳಿಂದ ಸೇನಾ ಮುಖ್ಯಸ್ಥರು ಯಾರಾಗಬಹುದು ಎಂಬ ಊಹಾಪೋಹಗಳಿಗೆ ತೆರೆಬಿದ್ದಿದೆ.ಕಿಯಾನಿ ಆಯ್ಕೆಗೆ ಯಾವುದೇ ದಿನಾಂಕ ನೀಡಿರದಿದ್ದರೂ, ಮುಷರ್ರಫ್ ಒಂದೊಮ್ಮೆ ತಮ್ಮ ಸಮವಸ್ತ್ರವನ್ನು ತ್ಯಜಿಸಿದ ಕೂಡಲೇ ಕಿಯಾನಿ ಹೊಸ ಹುದ್ದೆ ಸ್ವೀಕರಿಸುತ್ತಾರೆಂದು ರಾಜ್ಯಸ್ವಾಮ್ಯದ ಪಿಟಿವಿ ತಿಳಿಸಿದೆ.
ಇದರ ಜತೆಗೆ ಲೆ.ಜನರಲ್ ತಾರಿಖ್ ಮಜೀದ್ ಸಿಬ್ಬಂದಿ ಸಮಿತಿಯ ಜಂಟಿ ಮುಖ್ಯಸ್ಥರ ಅಧ್ಯಕ್ಷರಾಗಲಿದ್ದು ಅ.8ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಮುಷರ್ರಫ್ ತಮ್ಮ ಉನ್ನತ ಸೇನಾಧಿಕಾರಿಗಳ ಹುದ್ದೆಗಳ ಪುನರ್ರಚನೆ ಮಾಡಿ ಮೇ.ಜನರಲ್ ನದೀಮ್ ತಾಜ್‌ಗೆ ಲೆ.ಜನರಲ್ ದರ್ಜೆ ನೀಡಿ ಐಎಸ್‌ಐನ ಹೊಸ ಮುಖ್ಯಸ್ಥನನ್ನಾಗಿ ಮಾಡಿದ 10 ದಿನಗಳ ಬಳಿಕ ಹೊಸ ನೇಮಕಾತಿಗಳ ಪ್ರಕಟಣೆ ಹೊರಬಿದ್ದಿದೆ.
ಮಾಜಿ ಪ್ರಧಾನಮಂತ್ರಿ ಬೇನಜೀರ್ ಭುಟ್ಟೊಗೆ ಮಿಲಿಟರಿ ಕಾರ್ಯದರ್ಶಿಯಾಗಿ ಕಿಯಾನಿ ಈ ಮುಂಚೆ ಸೇವೆ ಸಲ್ಲಿಸಿದ್ದು, ಮುಷರ್ರಫ್ ಜತೆ ಭುಟ್ಟೊ ರಾಜಕೀಯ ಹೊಂದಾಣಿಕೆ ಬೆಸೆಯಲು ಕಿಯಾನಿ ಮಾತುಕತೆ ನಡೆಸಿದ್ದರು.
|