ಭಾರತದ ಜತೆ ಪರಮಾಣು ಒಪ್ಪಂದ ಅನುಷ್ಠಾನಗೊಳ್ಳುತ್ತದೆಂದು ಬುಷ್ ಆಡಳಿತದ ಅಧಿಕಾರಿಯೊಬ್ಬರು ಆಶಯ ವ್ಯಕ್ತಪಡಿಸಿದ್ದಾರೆ. ಇದರಿಂದ 20 ವರ್ಷಗಳಲ್ಲಿ ಅಮೆರಿಕದ ಜತೆ ಉತ್ತಮ ಬಾಂಧವ್ಯಹೊಂದಿರುವ 2 ಅಥವಾ 3 ರಾಷ್ಟ್ರಗಳಲ್ಲಿ ಒಂದಾಗಿ ಭಾರತವನ್ನು ಕಾಣಲು ಅಮೆರಿಕನ್ನರಿಗೆ ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ಪಿಬಿಎಸ್ ಜತೆ ಸಂದರ್ಶನದಲ್ಲಿ ಅಮೆರಿಕದ ರಾಜಕೀಯ ವ್ಯವಹಾರಗಳ ಅಧೀನ ಕಾರ್ಯದರ್ಶಿ ನಿಕೋಲಾಸ್ ಬರ್ನ್ಸ್ ಮೇಲಿನ ಮಾತುಗಳನ್ನು ಹೇಳಿದ್ದಾರೆ.ಪರಮಾಣು ಒಪ್ಪಂದದಿಂದ 1947ರಿಂದ ನಾವು ಹೊಂದಿರುವ ಬಾಂಧವ್ಯದಲ್ಲಿ ಮಹಾನ್ ವ್ಯೂಹಾತ್ಮಕ ಬದಲಾವಣೆ ಉಂಟಾಗುತ್ತದೆ.
ಇದು ನಮಗೆ ಮತ್ತು ಭಾರತೀಯರಿಗೂ ಅತ್ಯಂತ ಅನುಕೂಲ ಮಾಡಿಕೊಡುತ್ತದೆ ಎಂದು ಅವರು ಹೇಳಿದರು.ಅಮೆರಿಕದ ವ್ಯೂಹಾತ್ಮಕ ಸಂಬಂಧವು ರಾಷ್ಟ್ರ ಆರ್ಥಿಕವಾಗಿ ಬೆಳೆಯುತ್ತಿದೆ ಎಂಬ ಸತ್ಯವನ್ನು ಮೀರಿದೆ ಎಂದು ಬರ್ನ್ಸ್ ವಾದಮಂಡಿಸಿದರು.
ನಮಗೆ ಸ್ನೇಹಿತರು, ಮೈತ್ರಿಕೂಟ ಬೇಕಾಗಿದೆ. ಪ್ರಜಾಪ್ರಭುತ್ವವನ್ನು ಸಾಗರೋತ್ತರ ರಾಷ್ಟ್ರಗಳಲ್ಲಿ ಬೆಳೆಸಲು, ಮ್ಯಾನ್ಮಾರ್ ಸಂಘರ್ಷ ಪರಿಹಾರಕ್ಕೆ, ಜಾಗತಿಕ ಹವಾಮಾನ ಬದಲಾವಣೆ, ಅಂತಾರಾಷ್ಟ್ರೀಯ ಮಾದಕ ವಸ್ತು ಮತ್ತು ಕ್ರಿಮಿನಲ್ ಜಾಲವನ್ನು ಹತ್ತಿಕ್ಕಲು ನೆರವಾಗುವ ರಾಷ್ಟ್ರಗಳು ನಮಗೆ ಅಗತ್ಯವಾಗಿದೆ ಎಂದು ಬರ್ನ್ಸ್ ಹೇಳಿದರು.
|