ಪಾಕಿಸ್ತಾನದ ಅಧ್ಯಕ್ಷ ಪರ್ವೇಜ್ ಮುಷರ್ರಫ್ ಜತೆ ಸಂಭವನೀಯ ಅಧಿಕಾರ ಹಂಚಿಕೆ ಒಪ್ಪಂದ ಕುರಿತ ಮಾತುಕತೆ ಸಂಪೂರ್ಣ ಸ್ಥಗಿತಗೊಂಡಿದೆ ಎಂದು ಮಾಜಿ ಪ್ರಧಾನಮಂತ್ರಿ ಬೇನಜೀರ್ ಭುಟ್ಟೊ ಬುಧವಾರ ತಿಳಿಸಿದ್ದಾರೆ. ಭ್ರಷ್ಟಾಚಾರ ಪ್ರಕರಣ ಕುರಿತು ತಮಗೆ ಕ್ಷಮೆ ನೀಡಿರುವ ವರದಿಗಳನ್ನು ಅಪಪ್ರಚಾರ ಎಂದು ಅವರು ತಳ್ಳಿಹಾಕಿದ್ದಾರೆ.
ಸ್ವಯಂ ದೇಶಭ್ರಷ್ಟತೆಯಿಂದ ಅ.18ರಂದು ಸ್ವದೇಶಕ್ಕೆ ವಾಪಸಾಗಲು ನಿರ್ಧರಿಸಿರುವ ಭುಟ್ಟೊ, ಕಳೆದ ತಿಂಗಳ ಕೊನೆವರೆಗೆ ಮುಷರ್ರಫ್ ಜತೆ ಒಡಂಬಡಿಕೆ ಸನಿಹದಲ್ಲಿತ್ತು. ಆದರೆ ಆಗಿನಿಂದ ಅದು ಸಂಪೂರ್ಣ ಸ್ಥಗಿತಗೊಂಡಿದೆ ಎಂದು ಹೇಳಿದರು.
ಪ್ರಸಕ್ತ ಆಡಳಿತದಿಂದ ಈ ಪರಿಸ್ಥಿತಿ ತಿಳಿಗೊಳಿಸಲು ಸಾಧ್ಯವಾಗುತ್ತಿಲ್ಲ. ಇದು ಬೀದಿ ಚಳವಳಿಗೆ ಇಳಿಯಬಹುದೆಂದು ತಮಗೆ ಭಯವಾಗಿರುವುದಾಗಿ ಹೇಳಿದರು. ಪ್ರಧಾನಮಂತ್ರಿ ಶೌಕತ್ ಅಜೀಜ್ ಅಧ್ಯಕ್ಷತೆ ವಹಿಸಿದ್ದ ಪಾಕಿಸ್ತಾನದ ಕ್ಯಾಬಿನೆಟ್ ಸಭೆಯಲ್ಲಿ ಭುಟ್ಟೊ ವಿರುದ್ಧ ಭ್ರಷ್ಟಾಚಾರ ಆರೋಪ ಕೈಬಿಡಲು ನಿರ್ಧರಿಸಿದ ಬಳಿಕ ಅವರ ಪ್ರತಿಕ್ರಿಯೆ ಹೊರಬಿದ್ದಿದೆ.
ಕ್ಷಮಾದಾನದ ಪ್ರಸ್ತಾವನೆಯನ್ನು ತಳ್ಳಿಹಾಕಿದ ಅವರು, ಇದು ವಿವಾದ ಮತ್ತು ಗೊಂದಲ ಸೃಷ್ಟಿಗೆ,ವಾಸ್ತವ ವಿಷಯಗಳಿಂದ ಜನರ ಗಮನ ಕದಲಿಸಲು ರೂಪಿಸಲಾಗಿದೆ ಎಂದು ಅವರು ಹೇಳಿದರು.
|