ಪಾಕಿಸ್ತಾನ ಅಧ್ಯಕ್ಷೀಯ ಚುನಾವಣೆಗೆ ಅಧ್ಯಕ್ಷ ಪರ್ವೇಜ್ ಮುಷರಫ್ ಅವರ ನಾಮಪತ್ರ ಮಾನ್ಯತೆಯ ವಿರುದ್ಧ ಸಲ್ಲಿಸಲಾಗಿದ್ದ ಮೂರು ಸಂವಿಧಾನಾತ್ಮಕ ಅಹವಾಲಿನ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ವಿಭಾಗೀಯ ಪೀಠವು, ಅಟಾರ್ನಿ ಜನರಲ್ ಹಾಗೂ ಪಕ್ಷಗಳಿಗೆ ನೋಟೀಸು ಜಾರಿಮಾಡಿದೆ.
ಅಕ್ಟೋಬರ್ 6ರಂದು ಚುನಾವಣೆ ನಡೆಯಲಿದ್ದು, ಪಕ್ಷಗಳಿಗೆ ಮತ್ತು ಪಾಕಿಸ್ತಾನದ ಅಟಾರ್ನಿ ಜನರಲ್‌ಗೆ ನ್ಯಾಯಾಲಯವು ನೋಟೀಸ್ ಜಾರಿ ಮಾಡಿದ್ದು, ಕೇಸಿನ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಲಾಗಿದೆ.
ನಿವೃತ್ತ ನ್ಯಾಯಮೂರ್ತಿ ವಾಜಿಹುದ್ದೀನ್‌ರ ವಕೀಲ ಹಮೀದ್ ಖಾನ್, ಅಮೀನ್ ಫಾಹಿಮ್ ವಕೀಲ ಸರ್ದಾರ್ ಲತೀಫ್ ಖೋಸಾ ಮತ್ತು ಸಿವಿಲ್ ಸೊಸೈಟಿ ವಕೀಲ ಡಾ. ಫಾರೂಖ್ ಹಸನ್ ಇವರ ವಾದವಿವಾದಗಳನ್ನು ಆಲಿಸಿದ ಸರ್ವೋಚ್ಚ ನ್ಯಾಯಾಲಯದ ಉನ್ನತ ಪೀಠ, ಪ್ರಕರಣದಲ್ಲಿ ಉಲ್ಲೇಖಿಸಿರುವ ಕೆಲವು ಸಂವಿಧಾನಾತ್ಮಕ ಮತ್ತು ಕಾನೂನುಬದ್ಧ ಅಂಶಗಳು 1998ರ ಸಂವಿಧಾನ ಮತ್ತು ಅಧ್ಯಕ್ಷೀಯ ಚುನಾವಣಾ ಕಾನೂನಿನ 41-2,62,63,41-7,44-2 ಪರಿಚ್ಛೇದಗಳಡಿಯಲ್ಲಿ ವ್ಯಾಖ್ಯಾನಿಸಲ್ಪಟ್ಟಿವೆ ಎಂದು ಅಭಿಪ್ರಾಯಪಟ್ಟಿರುವುದಾಗಿ ಜಿಯೋ ಟಿವಿ ವರದಿ ಮಾಡಿದೆ. ಈ ಮೊದಲು, ಒಂಬತ್ತು ಸದಸ್ಯರನ್ನೊಳಗೊಂಡ ಪೀಠದಲ್ಲಿ ವಿಚಾರಣೆಗೆ ನ್ಯಾಯಮೂರ್ತಿ ಸರ್ದಾರ್ ರಾಝಾ ನಿರಾಕರಿಸಿದ ಬಳಿಕ, ಪಾಕಿಸ್ತಾನ ಮುಖ್ಯ ನ್ಯಾಯಮೂರ್ತಿ ಇಫ್ತಿಕರ್ ಮಹಮ್ಮದ್ ಚೌಧರಿ ಅವರು ನ್ಯಾ.ಮೂ. ಜಾವೇದ್ ಇಕ್ಬಾಲ್ ಮುಂದಾಳುತ್ವದಲ್ಲಿ ಎಂಟು ಸದಸ್ಯರ ನೂತನ ಉನ್ನತ ಪೀಠವನ್ನು ನಿಯೋಜಿಸಿದ್ದರು.
|