ಇರಾಕಿಗೆ ಪೂರ್ಣ ರಕ್ಷಣೆ ಒದಗಿಸುವಂತಾಗಬೇಕಿದ್ದರೆ ಇರಾಕಿ ರಕ್ಷಣಾ ಪಡೆಗಳಿಗೆ ಇನ್ನೂ ಒಂದು ವರ್ಷದ ಅಗತ್ಯವಿದೆ ಎಂದು ಇರಾಕಿನಲ್ಲಿರುವ ಅಮೆರಿಕದ ಕಮಾಂಡರ್ ಲೆಫ್ಟಿನೆಂಟ್ ಜನರಲ್ ರೇಮಂಡ್ ಟಿ. ಒಡಿರ್ನೋ ತಿಳಿಸಿದ್ದಾರೆ.
ಇರಾಕಿ ರಕ್ಷಣಾ ಪಡೆಗಳು ಸ್ವಾವಲಂಬಿಯಾಗಲು ಇನ್ನಷ್ಟು ಸಮಯ ಅಗತ್ಯವಿದೆ ಹಾಗೂ ಕೆಲವು ಸವಾಲುಗಳು ಇನ್ನೂ ಇವೆ ಎಂದು ರೇಮಂಡ್ ಅವರನ್ನು ಉಲ್ಲೇಖಿಸಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
ಇತ್ತೀಚಿನ ತಿಂಗಳುಗಳಲ್ಲಿ ಅಮೆರಿಕ ಪಡೆಗಳಲ್ಲಿನ ಹೆಚ್ಚಳವು, ಇರಾಕಿನಲ್ಲಿ ಕಾರ್ಯಾಚರಣೆ ನಡೆಸುವ ವಿದೇಶಿ ಬಣಗಳ ಮೇಲಿನ ತೀವ್ರ ಒತ್ತಡ ಹೇರಿದ್ದು, ಉತ್ತಮ ಫಲಿತಾಂಶ ತೋರಿಸಿದೆ ಎಂದು ಇರಾಕಿನಲ್ಲಿ ದೈನಂದಿನ ಸೇನಾ ಕಾರ್ಯಾಚರಣೆಗಳ ಮೇಲ್ವಿಚಾರಕರಾಗಿರುವ ಲೆಫ್ಟಿನೆಂಟ್ ಜನರಲ್ ರೇಮಂಡ್ ಟಿ ಒಡಿರ್ನೋ ಹೇಳಿದ್ದಾರೆ.
ಇರಾಕಿ ಪಡೆಗಳು ಅರ್ಹತೆಯುಳ್ಳ ಕಮಾಂಡರ್‌ಗಳ ಕೊರತೆಯನ್ನು ಎದುರಿಸುತ್ತಿದ್ದು, ತಮ್ಮ ಸ್ವಂತ ತಂತ್ರಗಳನ್ನು ಹೆಣೆಯಲು ಅಸಮರ್ಥವಾಗಿವೆ ಎಂದು ಹೇಳಿರುವ ಅವರು, ಬಂಡುಕೋರರ ನಿರ್ನಾಮಕ್ಕೆ ಬಾಗ್ದಾದ್ ಸರಕಾರವು ಪ್ರಯತ್ನಿಸುತ್ತಿದೆ ಎಂದು ಭರವಸೆಯನ್ನು ವ್ಯಕ್ತಪಡಿಸಿದರೂ, ಅಲ್ಲಿ ಇನ್ನೂ ಜನಾಂಗೀಯ ಕಲಹ ಇದೆ ಎಂದು ನುಡಿದರು.
ಅಮೆರಿಕ ಪಡೆಗಳು ಯುದ್ಧತಂತ್ರದ ಮೇಲ್ವಿಚಾರಣೆ ವಹಿಸುವತ್ತ ಗಮನ ಹರಿಸಿವೆ. ಈ ತಂತ್ರದ ಪ್ರಕಾರ, ಅಮೆರಿಕ ಪಡೆಗಳು ಅತ್ಯಂತ ಕಡಿಮೆ ಸಮಯದಲ್ಲಿ ಇರಾಕಿಗಳಿಗೆ ಸಹಕಾರ ನೀಡಲು ಮತ್ತು ಪ್ರತಿಕ್ರಿಯೆ ನೀಡುವಂತೆ ಇರಾಕ್ ಪಡೆಗಳಿಗೆ ಭದ್ರತಾ ಕಾರ್ಯಾಚರಣೆಗಳನ್ನು ಒಪ್ಪಿಸಲಾಗುತ್ತದೆ. ಆದರೆ ಇದಕ್ಕೆ ಇನ್ನೂ ಒಂದು ವರ್ಷ ಬೇಕಾಗುತ್ತದೆ ಎಂದವರು ಹೇಳಿದರು.
ಅಧ್ಯಕ್ಷ ಬುಷ್ ಅವರಿಂದ ಈ ವರ್ಷ ಇರಾಕಿಗೆ ಕಳುಹಿಸಲಾಗಿರುವ ಐದು ಹೆಚ್ಚುವರಿ ಸೇನಾ ತುಕಡಿಗಳನ್ನು ಮುಂದಿನ ವರ್ಷದೊಳಗೆ ಹಿಂಪಡೆದುಕೊಳ್ಳಲಾಗುವುದು. ಆದರೆ ಅಮೆರಿಕ ಪಡೆಗಳಿಂದ ಶೀಘ್ರವೇ ಸೇನಾ ಕಾರ್ಯಾಚರಣೆಯನ್ನು ವಹಿಸಿಕೊಳ್ಳುವಂತೆ ಅನೇಕ ಡೆಮಾಕ್ರಟ್ ಸದಸ್ಯರು ಮತ್ತು ರಿಪಬ್ಲಿಕನ್ ಸದಸ್ಯರು ಇರಾಕನ್ನು ಆಗ್ರಹಿಸಿದ್ದರು.
|