ಅಮೆರಿಕ ಇರಾನ್ ವಿರುದ್ಧ ಮಾನಸಿಕ ಯುದ್ಧದಲ್ಲಿ ತೊಡಗಿದ್ದರೂ, ಇರಾನ್ ವಿರುದ್ಧ ದುಬಾರಿ ಮಿಲಿಟರಿ ಕಾರ್ಯಾಚರಣೆ ನಡೆಸುವ ಪರಿಸ್ಥಿತಿಯಲ್ಲಿ ಅಮೆರಿಕವಿಲ್ಲ ಎಂದು ಇರಾನ್ ಹೇಳಿದೆ.
ತಮ್ಮ ಸರ್ಕಾರವು ಅಮೆರಿಕದ ಜತೆ ಸಂಘರ್ಷ ತಪ್ಪಿಸಲು ಎಲ್ಲ ಯತ್ನವನ್ನು ಮಾಡುತ್ತಿದ್ದು, ಶಾಂತಿಯುತ ಉದ್ದೇಶಕ್ಕೆ ಅಣುಶಕ್ತಿ ಅಭಿವೃದ್ಧಿಗೊಳಿಸುವ ಹಕ್ಕನ್ನು ಇರಾನ್ ಕೈಬಿಡುವುದಿಲ್ಲ ಎಂದು ವಿದೇಶಾಂಗ ಸಚಿವ ಮನೋಚೆರ್ ಮೋಟಕಿ ಹೇಳಿದರು.
"ನಾವು ಪರಮಾಣು ಬಾಂಬ್‌ಗಾಗಿ ಎದುರುನೋಡುತ್ತಿಲ್ಲ. ನಮಗೆ ಅಣ್ವಸ್ತ್ರ ಬೇಕಿಲ್ಲ. ಅದು ನಮ್ಮ ಮಿಲಿಟರಿ ಸಿದ್ಧಾಂತದಲ್ಲಿ ಇಲ್ಲ" ಎಂದು ವಿಶ್ವಸಂಸ್ಥೆ ಪ್ರಧಾನ ಸಭೆಯ ಅಂತಿಮ ದಿನ ಅವರು ವರದಿಗಾರರಿಗೆ ತಿಳಿಸಿದರು.
ಈ ಮುಂಚೆ ಅಣ್ವಸ್ತ್ರಗಳನ್ನು ಬಳಸಿದ ಮತ್ತು ಇಂತಹ ಹೊಸ ಪೀಳಿಗೆಯ ಶಸ್ತ್ರಗಳ ಪರೀಕ್ಷೆ ನಡೆಸುತ್ತಿರುವ ರಾಷ್ಟ್ರಗಳು ಜಾಗತಿಕ ಭದ್ರತೆಗೆ ಅತೀ ಬೆದರಿಕೆ ಒಡ್ಡಿವೆ ಎಂದು ಅವರು ಹೇಳಿದರು.
ಇರಾನ್ ಪರಮಾಣು ಕಾರ್ಯಕ್ರಮ ಅಣ್ವಸ್ತ್ರ ತಯಾರಿಕೆಯ ಗುರಿ ಹೊಂದಿರುವುದರಿಂದ ಯುರೇನಿಯಂ ಸಂಸ್ಕರಣೆ ಕೈಬಿಡಬೇಕೆಂದು ಅಮೆರಿಕ ಬಯಸಿದೆ. ಅಮೆರಿಕ ಕಳೆದ 2 ವರ್ಷಗಳಿಂದ ಒಂದು ರೀತಿಯ ಮಾನಸಿಕ ಯುದ್ಧ ನಡೆಸುತ್ತಿದ್ದು, ಮಿಲಿಟರಿ ಕಾರ್ಯಾಚರಣೆಯ ಸಂಭವನೀಯತೆ ಬಗ್ಗೆ ಹೇಳುತ್ತಿದೆ ಎಂದು ಮೊಟಾಕಿ ನುಡಿದರು.
ಆದರೆ ನಮ್ಮ ವಿಶ್ಲೇಷಣೆ ಸ್ಪಷ್ಟವಾಗಿದೆ. ತಮ್ಮ ತೆರಿಗೆದಾರರಿಗೆ ಹೊರೆ ಹೇರಿ ಇನ್ನೊಂದು ಯುದ್ಧ ಮಾಡುವ ಪರಿಸ್ಥಿತಿಯಲ್ಲಿ ಅಮೆರಿಕವಿಲ್ಲ ಎಂದು ಇರಾನಿನ ಸಚಿವರು ಹೇಳಿದರು.
|