ಪರ್ವೇಜ್ ಮುಷರಫ್ ಅವರೊಂದಿಗಿನ ಅಧಿಕಾರ ಹಂಚಿಕೆ ಸಂಧಾನ ಸ್ಥಗಿತಗೊಂಡಿದೆ ಎಂದು ಮಾಜಿ ಪ್ರಧಾನ ಮಂತ್ರಿ ಬೆನಜೀರ್ ಭುಟ್ಟೋ ಅವರು ಹೇಳಿಕೆ ನೀಡಿದ ಒಂದೇ ದಿನದಲ್ಲಿ, ಮಹತ್ವದ ಬೆಳವಣಿಗೆಯೊಂದು ನಡೆದಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ಸರಕಾರದಿಂದ ಶೀಘ್ರವೇ ಘೋಷಿಸಲ್ಪಡಲಿರುವ ರಾಷ್ಟ್ರೀಯ ಸಾಮರಸ್ಯ ಸುಗ್ರೀವಾಜ್ಞೆಗೆ ಅಂತಿಮ ರೂಪ ನೀಡಲಾಗುತ್ತಿರುವಂತೆಯೇ, ಸರಕಾರ ಮತ್ತು ಭುಟ್ಟೋ ನೇತೃತ್ವದ ಪಾಕಿಸ್ತಾನ ಪೀಪಲ್ ಪಾರ್ಟಿ (ಪಿಪಿಪಿ) ಮಧ್ಯೆ ರಾಷ್ಟ್ರೀಯ ಸಹಮತ ಏರ್ಪಟ್ಟಿದೆ.
ಭುಟ್ಟೋ ಅವರಲ್ಲದೆ ಇತರೆಲ್ಲಾ ಮುಖ್ಯ ರಾಜಕೀಯ ನಾಯಕರಿಗೆ ಕ್ಷಮಾದಾನ ನೀಡಿ, ಅವರ ವಿರುದ್ಧದ ರಾಜಕೀಯ ಕೇಸುಗಳನ್ನು ಹಿಂತೆಗೆದುಕೊಳ್ಳಲಾಗುತ್ತದೆ ಎಂದು ವರದಿಗಳು ತಿಳಿಸಿವೆ.
1988 ಮತ್ತು 1999ರ ನಡುವೆ ರಾಜಕಾರಣಿಗಳು ಮತ್ತು ಇತರ ಮುಖಂಡರ ವಿರುದ್ಧ ದಾಖಲಾದ ಭ್ರಷ್ಟಾಚಾರ ಕೇಸುಗಳನ್ನು ಈ ಸುಗ್ರೀವಾಜ್ಞೆಯು ರದ್ದುಗೊಳಿಸಲಿದೆ ಎಂದು ಮೂಲಗಳು ತಿಳಿಸಿವೆ.
ಆದರೆ, ಪ್ರಧಾನಮಂತ್ರಿ ಹಾಗೂ ಸಂಸತ್ ವಿಸರ್ಜಿಸುವ ಅಧಿಕಾರವೂ ಸೇರಿದಂತೆ ಅಧ್ಯಕ್ಷರಿಗೆ ಇರುವ ವಿಶೇಷ ಅಧಿಕಾರಗಳಿಗೆ ಸಂಬಂಧಿಸಿದ ಸಂವಿಧಾನದ ವಿವಾದಾತ್ಮಕ ಪರಿಚ್ಛೇದ 58-2-ಬಿಗೆ ಯಾವುದೇ ಬದಲಾವಣೆ ಮಾಡಲಾಗಿಲ್ಲ.
ಉಭಯ ಬಣಗಳ ನಡುವಿನ ಉಳಿದ ಸಮಸ್ಯೆಗಳ ಬಗ್ಗೆ ಅಕ್ಟೋಬರ್ ಆರರ ಅಧ್ಯಕ್ಷೀಯ ಚುನಾವಣೆಯ ನಂತರ ಮಾತುಕತೆ ನಡೆಸಲಾಗುವುದು ಎಂದು ಮೂಲಗಳು ಉಲ್ಲೇಖಿಸಿದ್ದನ್ನು ದೈನಿಕವು ವರದಿ ಮಾಡಿದೆ.
|