ಮೂಗುತಿ ಧರಿಸಿದ ಕಾರಣಕ್ಕಾಗಿ ಕೆಲಸದಿಂದ ವಜಾಗೊಂಡಿದ್ದ ಬ್ರಿಟಿಷ್ ಏರ್‌ವೇಸ್‌ನ ಮಹಿಳಾ ಸಿಬ್ಬಂದಿ, ತನ್ನ ಕೆಲಸದ ಸಮಯದಲ್ಲಿ ಮೂಗುತಿ ಧರಿಸಲು ಅವಕಾಶ ನೀಡಲಾಗಿದೆ.
ಮೂಗುತಿ ಕಳಚಲು ನಿರಾಕರಿಸಿದ ಕಾರಣಕ್ಕೆ ವಜಾಗೊಂಡ 43 ವರ್ಷದ ಅಮೃತ್ ಲಾಲ್ಜಿ, ಮೂಗುತಿಯು ಧಾರ್ಮಿಕ ನಂಬಿಕೆಗಳ ಪ್ರತೀಕವಾಗಿತ್ತು ಎಂದು ಹೇಳಿದ್ದಾರೆ.
ಹೀಥ್ರೂ ವಿಮಾನ ನಿಲ್ದಾಣದ ಬ್ರಿಟಿಷ್ ಏರ್‌ವೇಸ್ ವಿಐಪಿ ಕೊಠಡಿಗೆ ಆಹಾರ ಸರಬರಾಜು ಮಾಡುವ ಯೂರೆಸ್ಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಲಾಲ್ಜಿ, ವಜಾ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದು, ಗುರುವಾರ ಆಕೆಯನ್ನು ಮರಳಿ ನೇಮಿಸಿಕೊಳ್ಳಲು ನಿರ್ಧರಿಸಲಾಯಿತು.
ತಾವು ನಿಯಮಾವಳಿಯನ್ನು ಅಪಾರ್ಥಮಾಡಿಕೊಂಡಿದ್ದೆವು ಎಂದು ಕಂಪೆನಿಯು ತಿಳಿಸಿದ್ದು, ಭಾನುವಾರದಿಂದ ಲಾಲ್ಜಿ ಅವರು ಕೆಲಸಕ್ಕೆ ಹಾಜರಾಗುವರು ಎಂದು ತಿಳಿಸಿದೆ.
ನನಗೆ ಮಾಧ್ಯಮದಿಂದ, ಒಕ್ಕೂಟದಿಂದ ಹಾಗೂ ನನ್ನ ದೇವಸ್ಥಾನದಿಂದ ತುಂಬಾ ಸಹಕಾರ ಸಿಕ್ಕಿದೆ. ನನ್ನ ಉದ್ಯೋಗವನ್ನು ಮರಳಿಪಡೆಯಲು ನಾನು ಮೂರು ತಿಂಗಳು ಕಾಯಬೇಕಾಯಿತು ಎಂದು ಲಾಲ್‌ಜಿ ಅವರು ಹೇಳಿದ್ದಾರೆ. ನಾನು ಉಪಾಹಾರ ವಿಭಾಗದಲ್ಲಿ ಕೆಲಸ ಮಾಡುತ್ತಿಲ್ಲವಾದ ಕಾರಣ, ಮೂಗುತಿಯನ್ನು ಧರಿಸಿಯೇ ನನ್ನ ಕೆಲಸವನ್ನು ಪ್ರಾರಂಭಿಸಲು ಅವು ಒಪ್ಪಿಗೆ ಸೂಚಿಸಿದ್ದಾರೆ ಎಂದು ಹೇಳಿದರು.
ಮುಖ ಚುಚ್ಚಿಕೊಳ್ಳುವಿಕೆಗೆ ಸಂಬಂಧಿಸಿದ ಕಾನೂನುಗಳು ಉಪಾಹಾರ ವಿಭಾಗದಲ್ಲಿ ಮಾತ್ರ ಕಡ್ಡಾಯವಾಗಿದೆ ಎಂಬ ವಿಷಯವು ತಿಳಿದುಬಂದಿದೆ ಎಂದು ಯೂರೆಸ್ಟ್ ವಕ್ತಾರರು ತಿಳಿಸಿದ್ದಾರೆ.
|