ಶನಿವಾರ ನಡೆಯುವ ಪಾಕಿಸ್ತಾನದ ಅಧ್ಯಕ್ಷೀಯ ಚುನಾವಣೆಯಲ್ಲಿ ಮುಷರ್ರಫ್ ಜಯಗಳಿಸಬಹುದೆಂದು ನಿರೀಕ್ಷಿಸಲಾಗಿದೆ. ಆದರೆ ಮುಷರ್ರಫ್ ಜಯಗಳಿಸಿದರೂ, ಸುಪ್ರೀಂಕೋರ್ಟ್ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
1999 ಕ್ಷಿಪ್ರಕ್ರಾಂತಿ ಮೂಲಕ ಅಧಿಕಾರ ಗದ್ದುಗೆಗೆ ಏರಿದ ಮುಷರ್ರಫ್‌ಗೆ ಮಾಜಿ ಪ್ರಧಾನಮಂತ್ರಿ ಬೇನಜೀರ್ ಭುಟ್ಟೊ ಅವರ ನಿಷ್ಠರಾದ ನಿವೃತ್ತ ನ್ಯಾಯಾಧೀಶರೊಬ್ಬರು ಎದುರಾಳಿಯಾಗಿದ್ದಾರೆ. ಆದರೆ ಪ್ರತಿಪಕ್ಷಗಳು ಚುನಾವಣೆಯನ್ನು ಬಹಿಷ್ಕರಿಸುವ ಅಥವಾ ಗೈರುಹಾಜರಾಗುವ ಮೂಲಕ ಬಹುತೇಕ ಮತಗಳು ಅವರ ಬುಟ್ಟಿಗೆ ಬೀಳುವುದೆಂದು ನಿರೀಕ್ಷಿಸಲಾಗಿದೆ.
ಫೆಡರಲ್ ಮತ್ತು ಪ್ರಾಂತೀಯ ವಿಧಾನಸಭೆಗಳ ಸದಸ್ಯರು 10ರಿಂದ 3 ಗಂಟೆ ನಡುವಿನ ರಹಸ್ಯ ಮತದಾನಲ್ಲಿ ಮತ ಚಲಾಯಿಸಲಿದ್ದಾರೆ. ಆದರೆ ಮುಷರ್ರಫ್ ಅಭ್ಯರ್ಥಿತನ ಅಸಂವಿಧಾನಿಕ ಎಂಬ ವಿರೋಧಿಗಳ ಅರ್ಜಿಯ ವಿಚಾರಣೆ ಇತ್ಯರ್ಥವಾದ ಬಳಿಕ ಅಧಿಕೃತ ಫಲಿತಾಂಶ ಘೋಷಿಸುವುದಾಗಿ ಸುಪ್ರೀಂಕೋರ್ಟ್ ಶುಕ್ರವಾರ ತೀರ್ಪು ನೀಡಿದೆ.
ಈ ಅರ್ಜಿಗಳ ಬಗ್ಗೆ ವಿಚಾರಣೆಯು ಅ.17ರಂದು ನಡೆಯಲಿದೆ. ಅವರು ಚುನಾವಣೆಯಲ್ಲಿ ಜಯಗಳಿಸಿದರೂ ಕೂಡ ಅಧಿಕಾರ ವಹಿಸಿಕೊಳ್ಳಲು ಇನ್ನೂ 11 ದಿನಗಳ ಕಾಲ ಕಾಯಬೇಕಾಗುತ್ತದೆ ಅವರ ಪ್ರಸಕ್ತ ಅಧಿಕಾರಾವಧಿ ನ.15ಕ್ಕೆ ಅಂತ್ಯಗೊಳ್ಳುತ್ತದೆ. ಅಧ್ಯಕ್ಷ ಹುದ್ದೆಯನ್ನು ಪುನಃ ವಹಿಸಿಕೊಳ್ಳಲು ಅವರಿಗೆ ಅವಕಾಶ ಸಿಗದಿದ್ದರೆ ಮಿಲಿಟರಿ ಆಡಳಿತವನ್ನು ಅವರು ಘೋಷಿಸಬಹುದೆಂಬ ಊಹಾಪೋಹ ದಟ್ಟವಾಗಿದೆ.
ರಾಷ್ಟ್ರದ ಉನ್ನತ ನ್ಯಾಯಾಧೀಶರ ಉಚ್ಚಾಟನೆ ಯತ್ನದಲ್ಲಿ ವಿಫಲರಾದ ಮುಷರ್ರಫ್ ಜನಪ್ರಿಯತೆ ಕುಸಿತ ಕಂಡಿತ್ತು. ಚುನಾವಣೆಯಲ್ಲಿ ಗೆದ್ದರೆ ತಮ್ಮ ಜನರಲ್ ಹುದ್ದೆಯನ್ನು ತ್ಯಜಿಸಿ ನಾಗರಿಕ ಕಾನೂನನ್ನು ಮರುಸ್ಥಾಪಿಸುವುದಾಗಿ ಅವೃರು ಹೇಳಿದ್ದರು.
|