ವಿವಾಹವಾಗದೆಯೇ ಒಟ್ಟಿಗೆ ಜೀವಿಸುವವರ ಸಂಖ್ಯೆ ಶೇ.65ರಷ್ಟು ಹೆಚ್ಚಾಗಿದೆ ಎಂದು ನೂತನ ವರದಿಯೊಂದು ತಿಳಿಸಿದ್ದು, ವಿವಾಹಿತ ಪೋಷಕರ ಸಂಖ್ಯೆಯು ಶೀಘ್ರದಲ್ಲೇ ಇಳಿಮುಖವಾಗುವ ಸಾಧ್ಯತೆಗಳಿವೆ ಎಂಬ ಎಚ್ಚರಿಕೆಯನ್ನು ನೀಡಿದೆ.
ಜತೆಯಾಗಿ ವಾಸಿಸುವ ಪದ್ಧತಿಯು ಬ್ರಿಟನ್‌ನಲ್ಲಿ ಬೆಳೆಯುತ್ತಿದ್ದು, ಹೆಚ್ಚಿನ ಯುವಕ ಯುವತಿಯರು ವಿವಾಹವಾಗದೆ ಜೀವನ ನಡೆಸುತ್ತಾರೆ ಎಂದು ಕೌಟುಂಬಿಕ ಜೀವನ ಕುರಿತಾದ ರಾಷ್ಟ್ರೀಯ ಅಂಕಿಅಂಶ ಕಚೇರಿಯ ವರದಿಯು ತಿಳಿಸಿದೆ.
ಇದೇ ಸಂದರ್ಭ, ವಿವಾಹಿತ ದಂಪತಿಗಳ ಸಂಖ್ಯೆಯು ಶೇ.4ರಷ್ಟು ಇಳಿಮುಖವಾಗಿದೆ ಎಂದು ವರದಿ ಹೇಳಿದೆ.
ವಿವಾಹವಾಗದೇ ಜೊತೆಯಲ್ಲಿ ವಾಸಿಸುವವರ ಸಂಖ್ಯೆಯ ಹೆಚ್ಚಳವು ವಿವಾಹಗಳಲ್ಲಿನ ಇಳಿಕೆಗೆ ಕಾರಣ ಎಂಬುದನ್ನು ಸೂಚಿಸುವುದಿಲ್ಲ, ಯಾಕೆಂದರೆ, ಸಂಶೋಧನೆಗಳ ಪ್ರಕಾರ, 25ರಿಂದ 29ರ ವಯಸ್ಸಿನ ಮಹಿಳೆಯರಲ್ಲಿ ಅತಿ ಕಡಿಮೆ ಮಂದಿ 25ನೇ ವಯಸ್ಸಿನೊಳಗೇ ಮದುವೆ ಅಥವಾ ಸಹಜೀವನದ ಮೂಲಕ ಒಟ್ಟಾಗಿರುತ್ತಾರೆ ಎಂದು ಒಎನ್ಎಸ್ ತಿಳಿಸಿದೆ.
ಯುವ ಮಹಿಳಾ ಪೀಳಿಗೆಯಲ್ಲಿ ಸಹಸ್ವಾಮ್ಯದ ವಿಳಂಬವನ್ನು ಸೂಚಿಸುತ್ತದೆ ಎಂದು ವರದಿಯನ್ನು ಉಲ್ಲೇಖಿಸಿ ಟೆಲಿಗ್ರಾಫ್ ವರದಿ ಮಾಡಿದೆ. ಅವಿವಾಹಿತ ತಾಯಂದಿರ ಮಕ್ಕಳಿಗಿಂತ ವಿವಾಹಿತ ದಂಪತಿಯ ಮಕ್ಕಳು ಹೆಚ್ಚು ಆರೋಗ್ಯವಂತರಾಗಿರುವುದು ಮತ್ತು ಶಾಲೆಗಳಲ್ಲಿ ಪ್ರತಿಭಾವಂತರಾಗಿರುವುದು, ವಿವಾಹಿತ ಕುಟುಂಬಗಳ ಇಳಿಕೆ ಮತ್ತು ಅವಿವಾಹಿತ ಸಂಬಂಧಗಳ ಏರಿಕೆಯು ಆರೋಗ್ಯದ ಮೇಲೂ ನಕಾರಾತ್ಮಕ ಪರಿಣಾಮ ಬೀರಿರಬಹುದು ಎಂಬುದರ ಸೂಚಕವಾಗಿದೆ ಎಂಬುದು ಈ ವರದಿಯ ಇನ್ನೊಂದು ಅಂಶವಾಗಿದೆ.
ಆರೋಗ್ಯ ಸ್ಥಿತಿಯ ವಿವಿಧ ದಾಖಲೆಗಳಲ್ಲಿ ಕಂಡುಬಂದಂತೆ, ವಿವಾಹಿತ ಮಹಿಳೆಗಿಂತ ಅವಿವಾಹಿತ ವೃದ್ಧ ಮಹಿಳೆಯರ ಆರೋಗ್ಯವು ಉತ್ತಮವಾಗಿರುತ್ತದೆ ಎಂಬುದನ್ನು ಈ ವರದಿಯು ತಿಳಿಸಿದೆ.
|