ಪಾಕಿಸ್ತಾನದ ಅಧ್ಯಕ್ಷ ಪರ್ವೇಜ್ ಮುಷರ್ರಫ್ ವಿವಾದಾತ್ಮಕ ಅಧ್ಯಕ್ಷೀಯ ಚುನಾವಣೆಯಲ್ಲಿ ಶನಿವಾರ ಜಯಭೇರಿ ಬಾರಿಸಿದರು. ಆದರೆ ಅವರ ಅಭ್ಯರ್ಥಿತನದ ವಿರುದ್ಧ ಅರ್ಜಿಗಳನ್ನು ಕುರಿತು ಸುಪ್ರೀಂಕೋರ್ಟ್ ನೀಡುವ ತೀರ್ಪಿನ ಮೇಲೆ ಅವರ ಭವಿಷ್ಯ ನಿಂತಿದೆ.
ಮುಷರ್ರಫ್ 257 ಮತಗಳಲ್ಲಿ 252 ಮತಗಳನ್ನು ಗಳಿಸಿದ್ದಾರೆಂದು ರಾಷ್ಟ್ರೀಯ ಮತ್ತು ಪ್ರಾಂತೀಯ ಅಸೆಂಬ್ಲಿಗಳ ಸದಸ್ಯರ ಮತದಾನದ ಬಳಿಕ ಮುಖ್ಯ ಚುನಾವಣೆ ಆಯುಕ್ತ ಕಾಜಿ ಮುಹಮ್ಮದ್ ಫರೂಕ್ ಸಂಸತ್ತಿನಲ್ಲಿ ಪ್ರಕಟಿಸಿದರು.
ವ್ಯಾಪಕ ನಿರೀಕ್ಷೆಯಂತೆ ಮುಷರ್ರಫ್ ಜಯಗಳಿಸಿದರೂ, ಜನರಲ್ ತಲೆಯ ಮೇಲಿನ ಕತ್ತಿ ಈಗಲೂ ತೂಗುತ್ತಿದೆ. ಮುಷರ್ರಫ್ ಅಭ್ಯರ್ಥಿಯಾಗಿ ಸ್ಪರ್ಧೆಯನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಗಳ ಬಗ್ಗೆ ತೀರ್ಪು ನೀಡುವವರೆಗೆ ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಬಾರದೆಂದು ಸುಪ್ರೀಂಕೋರ್ಟ್ ತಿಳಿಸಿದೆ. ಅ.17ರಂದು ಸುಪ್ರೀಂಕೋರ್ಟ್ ಈ ಅರ್ಜಿಗಳ ವಿಚಾರಣೆ ನಡೆಸಲಿದೆ.
ರಕ್ತರಹಿತ ಕ್ರಾಂತಿಯಲ್ಲಿ ಅಧಿಕಾರ ಕಬಳಿಸಿದ ಮಿಲಿಟರಿ ಅಧಿಪತಿ ಪಾಕಿಸ್ತಾನ ಮುಸ್ಲಿಂ ಲೀಗ್ ಬೆಂಬಲದಿಂದ ಚುನಾವಣೆಯಲ್ಲಿ ಗೆಲ್ಲುವರೆಂದು ನಿರೀಕ್ಷಿಸಲಾಗಿತ್ತು, ಪಾಕಿಸ್ತಾನ ಮುಸ್ಲಿಂ ಲೀಗ್ ಮೂರು ಪ್ರಾಂತೀಯ ಅಸೆಂಬ್ಲಿಗಳನ್ನು ನಿಯಂತ್ರಿಸುತ್ತದೆ.
|