ಅಕ್ಟೋಬರ್ 17ರ ನಂತರದ ದಿನಗಳಲ್ಲಿ ದಕ್ಷಿಣ ಏಷ್ಯಾ ದೇಶಗಳ ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳಾಗಲಿವೆ ಎಂದು ಪಾಕಿಸ್ತಾನದ ಹಿಂದೂ ಜ್ಯೋತಿಷಿಯೊಬ್ಬರು ಭವಿಷ್ಯ ನುಡಿದಿದ್ದಾರೆ.
ಸಂಗಾರ್‌ನ ಜ್ಯೋತಿಷಿ ಮಹಾರಾಜ್ ಪ್ರೇಮ್‌ಚಂದ್ ಹೇಮ್‌ಚಂದ್ ಪ್ರಕಾರ, ಈ ಬದಲಾವಣೆಯು ವಿಶೇಷವಾಗಿ ಭಾರತ, ಪಾಕಿಸ್ತಾನ, ಅಫಘಾನಿಸ್ತಾನ, ನೇಪಾಳ ಮತ್ತು ಬಾಂಗ್ಲಾದೇಶಗಳ ಆಡಳಿತ ಪಕ್ಷಗಳ ಮೇಲೆ ಪರಿಣಾಮ ಬೀರಲಿದೆ.
ಯಾವ ರೀತಿಯ ಬದಲಾವಣೆಗಳಾಗಬಹುದೆಂದು ಖಚಿತವಾಗಿ ತಿಳಿಸಲಾಗದು ಎಂದಿರುವ ಹೇಮ್‌ಚಂದ್, ಹಿಂದಿನ ಅನುಭವಗಳಿಂದಾಗಿ ದಕ್ಷಿಣ ಏಷ್ಯಾದಲ್ಲಿ ಯಾವುದೋ ಹೊಸ ಮಾರ್ಪಾಡುಗಳಾಗಲಿವೆ ಎಂದಿದ್ದಾರೆ.
ಸಿಂಹ ರಾಶಿಯ ತಾರಾಪುಂಜದ ಐದನೇ ತಾರೆಯಾಗಿರುವ ಶನಿಯು, 1947, 1977ರ ಸಮಯದಲ್ಲಿ ಇದ್ದ ಸ್ಥಾನದಲ್ಲಿಯೇ ಈಗಲೂ (2007) ಇದ್ದಾನೆ. ಪ್ರತಿ ಮೂವತ್ತು ವರ್ಷಗಳಿಗೊಮ್ಮೆ ಇದೇ ಸ್ಥಾನಕ್ಕೆ ಬರುತ್ತಾನೆ ಎಂದು ಹೇಮ್‌ಚಂದ್ ಅವರು ಉಲ್ಲೇಖಿಸಿದ್ದನ್ನು ಡೈಲಿ ಟೈಮ್ಸ್ ವರದಿ ಮಾಡಿದೆ.
ಪ್ರತಿ ಇಪ್ಪತ್ತು ದಿವಸಗಳಿಗೊಮ್ಮೆ ಸೂರ್ಯನು ತನ್ನ ಸ್ಥಾನವನ್ನು ಬದಲಿಸುತ್ತಾನೆ. ಅಕ್ಟೋಬರ್ 17ರಂದು ಹೊಸ ಸ್ಥಾನಕ್ಕೆ ಸ್ಥಾನಪಲ್ಲಟಗೊಳ್ಳುತ್ತಾನೆ. ಮೂವತ್ತು ವರ್ಷದ ಹಿಂದೆ ಇದ್ದಂತೆ ಶನಿಯೂ ಸ್ಥಾನಪಲ್ಲಟವಾಗುತ್ತಾನೆ ಎಂದು ಹೇಮ್‌ಚಂದ್ ಹೇಳಿದ್ದಾರೆ.
ತಾನು ಈ ಹಿಂದೆ ಹೇಳಿದ್ದ ಭವಿಷ್ಯವು ನಿಜವಾಗಿತ್ತು ಎಂದು ಹೇಳಿರುವ ಹೇಮ್‌ಚಂದ್, 1947ರಲ್ಲಿ ಶನಿಯು ಈ ಸ್ಥಾನದಲ್ಲಿ ಇದ್ದಾಗ, ಉಪಖಂಡವು ವಿಭಜನೆಯಾಗಿ ಉಂಟಾದ ಘರ್ಷಣೆಯಲ್ಲಿ ನೂರಾರು ಜನರು ಮೃತಪಟ್ಟಿದ್ದರು ಎಂದು ಹೇಳಿದರು. ಶನಿಯ ಸ್ಥಾನ ಬದಲಾದ ಹಾಗೆ ಏಷಿಯಾ ದೇಶಗಳ ಅನುಭವವೂ ಬದಲಾಗುತ್ತದೆ ಎಂದಿದ್ದಾರವರು.
ಪಾಕಿಸ್ತಾನದಲ್ಲಿ ಪ್ರಜಾಸತ್ತಾತ್ಮಕವಾಗಿ ಸಾರ್ವತ್ರಿಕ ಚುನಾವಣೆ 1977ರಲ್ಲಿ ನಡೆದಿತ್ತು, ಜುಲ್ಫಿಕರ್ ಭುಟ್ಟೋ ಅವರ ಪಿಪಿಪಿ ಸಂಸತ್ತಿನ ಹೆಚ್ಚಿನ ಸ್ಥಾನಗಳನ್ನು ಪಡೆದು ವಿಜಯ ಸಾಧಿಸಿತ್ತು. ಆದರೆ ಭ್ರಷ್ಟಾಚಾರ ಆರೋಪಗಳ ನಂತರ ನೂತನ ಚುನಾವಣೆಯನ್ನು ನಡೆಸಲು ಒಪ್ಪಿದ್ದರು. ಆದರೆ ಚುನಾವಣೆ ನಡೆಯುವ ಮುನ್ನವೇ ಸೇನೆ ದಂಗೆ ಎದ್ದು ಭುಟ್ಟೋರನ್ನು ಪದಚ್ಯುತಗೊಳಿಸಿತು ಎಂಬುದನ್ನು ಹೇಮ್‌ಚಂದ್ ಪುನರ್‌ಜ್ಞಾಪಿಸಿದರು.
ಹತ್ತಿ, ಅಕ್ಕಿ, ಹಿಟ್ಟು, ಸಕ್ಕರೆ ಮುಂತಾದ ಬಿಳಿ ಬಣ್ಣದ ಸರಕುಗಳ ಬೆಲೆ ಹೆಚ್ಚಾಗಲಿದೆ ಎಂದೂ ಅವರು ಭವಿಷ್ಯನುಡಿದರು.
|