ಮಾಜಿ ಪ್ರಧಾನಮಂತ್ರಿ ಬೇನಜೀರ್ ಭುಟ್ಟೊ ತಮಗೆ ಪೂರ್ವಭಾವಿ ಜಾಮೀನು ನೀಡಬೇಕೆಂಬ ಕೋರಿಕೆಯನ್ನು ಸಿಂಧ್ ಹೈಕೋರ್ಟ್ ಮಂಗಳವಾರ ವಜಾ ಮಾಡಿದೆ.ಭುಟ್ಟೊ ಸ್ವದೇಶಕ್ಕೆ ಮರಳಿದಾಗ ಭ್ರಷ್ಟಾಚಾರ ಆರೋಪಗಳನ್ನು ಕುರಿತಂತೆ ಅವರನ್ನು ಬಂಧಿಸುವ ಇಚ್ಛೆ ಸರ್ಕಾರಕ್ಕೆ ಇಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ಸಿಂಧ್ ಹೈಕೋರ್ಟ್‌ಗೆ ತಿಳಿಸಿದ ಬಳಿಕ ಭುಟ್ಟೊ ಅರ್ಜಿಯನ್ನು ಕೋರ್ಟ್ ವಜಾ ಮಾಡಿತು.
ಅ.18ರಂದು ಸ್ವದೇಶಕ್ಕೆ ಮರಳುವುದಾಗಿ ಶಪಥ ತೊಟ್ಟಿರುವ ಭುಟ್ಟೊಗೆ ಪೂರ್ಣ ಸ್ವರೂಪದ ಭದ್ರತೆ ನೀಡುವುದಾಗಿ ಒಳಾಡಳಿತ ಸಚಿವಾಲಯ ತಿಳಿಸಿದೆ. ಭುಟ್ಟೊ ವಿರುದ್ಧದ ಮೂರು ಭ್ರಷ್ಟಾಚಾರ ಆರೋಪಗಳಲ್ಲಿ ಅವರನ್ನು ಬಂಧಿಸುವ ಇಚ್ಛೆ ಸರ್ಕಾರಕ್ಕಿಲ್ಲ ಎಂದು ಅರ್ಜಿಗಳ ವಿಚಾರಣೆ ಸಂದರ್ಭದಲ್ಲಿ ಉಪ ಪ್ರಾಸಿಕ್ಯೂಟರ್ ಜನರಲ್ ಕೋರ್ಟ್‌ಗೆ ತಿಳಿಸಿದರು.
ಅಧ್ಯಕ್ಷ ಮುಷರ್ರಫ್ ರಾಷ್ಟ್ರೀಯ ಮರುಸಂಧಾನ ಸುಗ್ರೀವಾಜ್ಞೆ ಘೋಷಣೆ ಮಾಡಿರುವುದರಿಂದ ಅದು ರದ್ದಾಗಿದೆ ಎಂದು ಅವರು ಕೋರ್ಟ್‌ಗೆ ತಿಳಿಸಿದರು.ಬಳಿಕ ಭುಟ್ಟೊ ವಕೀಲ ಮತ್ತು ಪಿಪಿಪಿ ಸೆನೇಟರ್ ಫಾರೂಕ್ ನಾಯಕ್ ಸಲ್ಲಿಸಿದ ಮುನ್ನೆಚ್ಚರಿಕೆ ಜಾಮೀನು ಅರ್ಜಿಗಳನ್ನು ಕೋರ್ಟ್ ವಜಾ ಮಾಡಿತು.
|