ಮಧ್ಯಂತರ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ನೇಪಾಳವನ್ನು ಗಣತಂತ್ರ ರಾಷ್ಟ್ರವನ್ನಾಗಿ ಘೋಷಿಸಬೇಕು ಎಂಬ ಮಾವೊವಾದಿಗಳ ಬೇಡಿಕೆ ಪ್ರಜಾಪ್ರಭುತ್ವ ಎನಿಸಿಕೊಳ್ಳುವುದಿಲ್ಲ. ಈ ಬೇಡಿಕೆಯನ್ನು ಮಧ್ಯಂತರ ಸರಕಾರ ಪೂರೈಸಲಾರದು ಎಂದು ನೇಪಾಳದ ಹಿರಿಯ ನಾಯಕರು ಅಭಿಪ್ರಾಯಪಟ್ಟಿದ್ದಾರೆ.
ನವೆಂಬರ್ 22ರಂದು ಶಾಸನಸಭೆಗಳಿಗೆ ಚುನಾವಣೆ ನಡೆಸಲು ಎಲ್ಲ ರಾಜಕೀಯ ಪಕ್ಷಗಳು ಒಪ್ಪಿಗೆ ಸೂಚಿಸಿರುವಾಗ, ಮಾವೊವಾದಿಗಳು ತಮ್ಮ ಷರತ್ತುಬದ್ದ ಬೇಡಿಕೆಯನ್ನು ಮುಂದಿಟ್ಟಿರುವುದರಿಂದ ಮಹತ್ವದ ಚುನಾವಣೆಗಳನ್ನು ಮುಂದೂಡಲು ಕಾರಣವಾಯಿತು ಎಂದು ಸಿಪಿಎನ್-ಯೂಎಂಎಲ್ ಪ್ರಧಾನ ಕಾರ್ಯದರ್ಶಿ ಮಾಧವ ಕುಮಾರ್ ನೇಪಾಳ್ ಹೇಳಿದ್ದಾರೆ.
ಇತ್ತೀಚೆಗಷ್ಟೆ ಸರಕಾರದಿಂದ ಹೊರ ಬಂದಿರುವ ಮಾವೊವಾದಿಗಳಿಗೆ ಚುನಾವಣೆಗೆ ಹೋಗುವುದು ಇಷ್ಟವಿಲ್ಲ ಎಂದು ತೋರುತ್ತಿದೆ ಎಂದು ಅವರು ಆಪಾದಿಸಿದರು.
ಶಾಸನ ಸಭೆಯ ಚುನಾಣೆಗಿಂತ ಮುಂಚೆಯೇ ದೇಶವನ್ನು ಗಣತಂತ್ರ ರಾಷ್ಟ್ರವನ್ನಾಗಿ ಘೋಷಿಸಲು ಮತ್ತು ಅನುಪಾತ ಅಧಾರಿತ ಮತದಾನ ಪದ್ಧತಿಯನ್ನು ಜಾರಿಗೆ ತರಲು ಮಾವೊವಾದಿಗಳಿಗೆ ಯಾವುದೇ ಆಧಾರವಿಲ್ಲ ಎಂದು ನೇಪಾಳ್ ಅವರು ಇಲ್ಲಿ ನಡೆದ ಸಮಾರಂಭವೊಂದರಲ್ಲಿ ಹೇಳಿದರು.
ಮಾವೊವಾದಿಗಳು ಆರೋಪಿಸಿರುವಂತೆ ಶಾಸನ ಸಭೆಯ ಚುನಾವಣೆಗೆ ತಡೆಯೊಡ್ಡಲು ರಾಜ ಮನೆತನ ಸಂಚು ರೂಪಿಸುತ್ತಿದೆ ಎಂಬುದಕ್ಕೆ ಯಾವುದೇ ಸಾಕ್ಷಿಗಳಿಲ್ಲ ಎಂದು ಅವರು ಹೇಳಿದರು.
ಒಂದು ವೇಳೆ ರಾಜ ಚುನಾವಣೆಯನ್ನು ತಡೆಗಟ್ಟುವ ಸಂಚಿನಲ್ಲಿ ಭಾಗಿಯಾಗಿದ್ದಾನೆಂದು ಕಂಡು ಬಂದರೆ ಸಂಸತ್ತಿನಲ್ಲಿ ಎರಡು ಮೂರಾಂಶ ಬಹಮತ ಮೂಲಕ ರಾಜಪ್ರಭುತ್ವನ್ನು ಕಿತ್ತು ಹಾಕುವ ಅಧಿಕಾರವನ್ನು ಸಂವಿಧಾನ ನೀಡಿದೆ ಎಂದು ಅವರು ಹೇಳಿದರು.
|