ಮಾಜಿ ಪ್ರಧಾನಮಂತ್ರಿ ಬೇನಜೀನರ್ ಭುಟ್ಟೊ ಪಾಕಿಸ್ತಾನಕ್ಕೆ ಹಿಂತಿರುಗಲು ಮುಕ್ತರಾಗಿದ್ದರೂ, ಅವರ ವಿರುದ್ಧವಿರುವ ಭ್ರಷ್ಟಾಚಾರದ ಆರೋಪಗಳನ್ನು ಎದುರಿಸಬೇಕು ಎಂದು ಪ್ರಧಾನಮಂತ್ರಿ ಶೌಕತ್ ಅಜೀಜ್ ತಿಳಿಸಿದರು.
ಸ್ವಯಂ ದೇಶಭ್ರಷ್ಟರಾಗಿರುವ 54 ವರ್ಷ ವಯಸ್ಸಿನ ಭುಟ್ಟೊ 9 ವರ್ಷಗಳ ಬಳಿಕ ಪಾಕಿಸ್ತಾನಕ್ಕೆ ಹಿಂತಿರುಗಲು ನಿಗದಿಯಾಗಿದೆ. ಆದರೆ ಅಧ್ಯಕ್ಷ ಮುಷರ್ರಫ್ ನೀಡಿರುವ ಕ್ಷಮಾದಾನದ ಬಗ್ಗೆ ಸುಪ್ರೀಂಕೋರ್ಟ್ ಇನ್ನೂ ತೀರ್ಪು ನೀಡಬೇಕಿದೆ.
"ಅವರು ಪಾಕ್‌ಗೆ ಹಿಂತಿರುಗಲು ಮುಕ್ತರಾಗಿದ್ದಾರೆ, ನೆಲದ ಕಾನೂನು ಪಾಕಿಸ್ತಾನದ ಯಾವುದೇ ಪೌರರಂತೆ ಅವರಿಗೂ ಅನ್ವಯವಾಗುವುದು"ಎಂದು ಅಜೀಜ್ ಹೇಳಿದರು."ಭುಟ್ಟೊ ವಿರುದ್ಧ ಹಲವಾರು ಭ್ರಷ್ಚಾಚಾರದ ಆರೋಪಗಳಿವೆ. ನಾವು ಅವರಿಗೆ ಕ್ಷಮಾದಾನ ನೀಡಿದ್ದೇವೆ. ಆದರೆ ಇದು ಸಂವಿಧಾನದ ಅಗತ್ಯಗಳನ್ನು ಪೂರೈಸುವುದೇ ಎಂದು ಸುಪ್ರೀಂಕೋರ್ಟ್ ಪರಿಶೀಲಿಸಲಿದೆ.
ಅವರ ವಿರುದ್ಧ ಭ್ರಷ್ಟಾಚಾರದ ಆರೋಪ ತೆಗೆದುಹಾಕಲು ಜನರ ತೀವ್ರ ಪ್ರತಿರೋಧವಿದೆ" ಎಂದು ಹೇಳಿದರು.ಭುಟ್ಟೊ ಪ್ರಕರಣಕ್ಕೂ ಇನ್ನೊಬ್ಬರು ಪ್ರಧಾನಮಂತ್ರಿ ನವಾಜ್ ಷರೀಫ್ ಪ್ರಕರಣಕ್ಕೂ ವ್ಯತ್ಯಾಸವಿದೆ. ನವಾಜ್ ಷರೀಫ್ ಬಲವಂತದ ದೇಶಭ್ರಷ್ಟತೆಯಿಂದ ಪಾಕಿಸ್ತಾನಕ್ಕೆ ವಾಪಸಾದ ಬಳಿಕ ಪುನಃ ಸೌದಿಅರೇಬಿಯಕ್ಕೆ ಗಡೀಪಾರು ಮಾಡಲಾಗಿತ್ತು.
ಷರೀಫ್ ಪ್ರಕರಣದಲ್ಲಿ ಅವರು ಮಾಡಿದ ಅಪರಾಧಗಳಿಗೆ ಕೋರ್ಟ್ ಶಿಕ್ಷೆ ವಿಧಿಸಿತು. ಬಳಿಕ ಕೋರಿಕೆಯ ವ್ಯವಸ್ಥೆಯ ಮೂಲಕ ಅವರು ದೇಶವನ್ನು ತ್ಯಜಿಸಿದರು ಮತ್ತು 10 ವರ್ಷ ಹಿಂತಿರುಗುವುದಿಲ್ಲ ಎಂದು ಹೇಳಿದರೆಂದು ಅಜೀಜ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
|