ಸುಮಾರು 8 ವರ್ಷಗಳ ಸ್ವಯಂ ಗಡೀಪಾರಿನ ಬಳಿಕ ಅ.18ರಂದು ಪಾಕಿಸ್ತಾನಕ್ಕೆ ವಾಪಸಾಗಲಿರುವ ಮಾಜಿ ಪ್ರಧಾನಮಂತ್ರಿ ಬೇನಜೀರ್ ಭುಟ್ಟೊ ಅವರಿಗೆ ಬೆಂಬಲಿಗರು ಹೃತ್ಪೂರ್ವಕ ಸ್ವಾಗತ ನೀಡಲು ಸಿದ್ಧತೆ ನಡೆಸಿದ್ದಾರೆ. ಆದರೆ ಅವರ ವಿರುದ್ಧ ಭ್ರಷ್ಟಾಚಾರ ಪ್ರಕರಣಗಳ ಬಗ್ಗೆ ಕ್ಷಮಾದಾನ ನೀಡಿರುವ ಕಾನೂನಿನ ಬಗ್ಗೆ ಅನಿಶ್ಚಿತತೆ ಆವರಿಸಿದೆ.
ಭುಟ್ಟೊ ಗುರುವಾರ ಬಂದರು ನಗರಕ್ಕೆ ಆಗಮಿಸಿದ ಕೂಡಲೇ ಪಾಕಿಸ್ತಾನ ಪೀಪಲ್ಸ್ ಪಕ್ಷವು ಅವರನ್ನು ಬರಮಾಡಿಕೊಳ್ಳಲು ತನ್ನ ಕಾರ್ಯಕರ್ತರ ತಂಡವನ್ನು ಅಲ್ಲಿಗೆ ಕಳಿಸಲು ಯೋಜಿಸಿದೆ.
ಆದರೆ ಅವರ ವಾಪಸಾತಿಗೆ ಸುಗಮ ಮಾರ್ಗ ಕಲ್ಪಿಸಲು ಅಧ್ಯಕ್ಷ ಮುಷರ್ರಫ್ ಜಾರಿ ಮಾಡಿದ ರಾಷ್ಟ್ರೀಯ ಸಂಧಾನ ಸುಗ್ರೀವಾಜ್ಞೆಯನ್ನು ಪ್ರಶ್ನಿಸಿದ ಅರ್ಜಿಯನ್ನು ಸುಪ್ರೀಂಕೋರ್ಟ್ ಇತ್ಯರ್ಥ ಮಾಡಲಿರುವುದರಿಂದ ಅವರ ಆಗಮನವನ್ನು ಮುಂದೂಡಬೇಕೆಂಬ ಸರ್ಕಾರದ ಒತ್ತಾಯಕ್ಕೆ ಭುಟ್ಟೊ ಧೃತಿಗೆಟ್ಟಿಲ್ಲ.
ಬೇನಜೀರ್ ತಂದೆ ಜುಲ್ಫಿಕರ್ ಅಲಿ ಭುಟ್ಟೊ ಅವರನ್ನು 1979ರಲ್ಲಿ ಜಿಯಾ ಉಲ್ ಹಕ್ ಗಲ್ಲಿಗೇರಿಸಿದ ಬಳಿಕ ಬೇನಜೀರ್ ಅವರನ್ನು ಐದು ವರ್ಷಗಳ ಕಾಲ ಸೆರೆಮನೆಯಲ್ಲಿಟ್ಟ ಬಳಿಕ 1984ರಲ್ಲಿ ಇಂಗ್ಲೆಂಡ್‌ಗೆ ತೆರಳಲು ಅವಕಾಶ ನೀಡಲಾಗಿತ್ತು.
|