ಮಯನ್ಮಾರ್‌ನಲ್ಲಿ ಜುಂಟ ಸೇನಾಧಿಪತ್ಯ ಪ್ರತಿಭಟನಾಕಾರರ ಬಂಧನವನ್ನು ಮುಂದುವರೆಸಿರುವ ಹಿನ್ನೆಲೆಯಲ್ಲಿ, ಜಪಾನ್ ಆ ದೇಶಕ್ಕೆ ಇದುವರೆಗೆ ನೀಡುತ್ತಿದ್ದ ಆರ್ಥಿಕ ನೆರವನ್ನು ಹಿಂತೆಗೆದುಕೊಂಡಿದೆ ಎಂದು ಉನ್ನತ ಸರಕಾರಿ ವಕ್ತಾರ ಲೊಬುಟಕ ಮಾಚಿಮುರ ತಿಳಿಸಿದ್ದಾರೆ.
ಮಯನ್ಮಾರ್ ಜುಂಟಾ ಸೇನಾಡಳಿತಕ್ಕೆ ರಾಜಕೀಯ ಪ್ರತಿಭಟನಾಕಾರರ ಬಂಧನವನ್ನು ಕೈಬಿಡಬೇಕು ಎಂದು ವಿಶ್ವಸಂಸ್ಥೆ ಮಾಡಿರುವ ಮನವಿ ಕೂಡ ತಿರಸ್ಕೃತಗೊಂಡಿದ್ದು, "ನಾವು ನಮ್ಮ ದಾರಿಯಲ್ಲಿ ಮುಂದುವರೆಯುತ್ತೇವೆ, ಯಾರು ನಮ್ಮೊಂದಿಗೆ ಕೈಜೋಡಿಸಲು ಪ್ರಾಮಾಣಿಕವಾಗಿ ಮುಂದೆ ಬರುತ್ತಾರೋ ಅವರಿಗೆ ಸ್ವಾಗತವಿದೆ" ಎಂದು ಅಲ್ಲಿನ ಮಿಲಿಟರಿ ಆಡಳಿತಾಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.
ಇತ್ತೀಚೆಗೆ ಮಯನ್ಮಾರ್ ಸೈನಿಕರು ಪ್ರತಿಭಟನಾಕಾರರ ವಿರುದ್ಧ ನಡೆಸಿದ ಗುಂಡಿನ ದಾಳಿಯಲ್ಲಿ ಜಪಾನಿನ ದೃಶ್ಯ ಛಾಯಾಗ್ರಾಹಕನೋರ್ವ ಸೇರಿದಂತೆ, 11 ಜನರು ಮೃತಪಟ್ಟಿದ್ದರು.
ಆದರೆ, ಜಪಾನಿನ ಪತ್ರಿಕಾ ಛಾಯಾಗ್ರಾಹ ಪ್ರವಾಸಿ ವೀಸಾದ ಮೂಲಕ ಮಯನ್ಮಾರ್‌ಗೆ ಆಗಮಿಸಿದ್ದು, ಇದೊಂದು ಆಕಸ್ಮಿಕ ಘಟನೆ ಎಂದು ಅಲ್ಲಿನ ಸ್ಥಳೀಯ ಪತ್ರಿಕೆಗಳು ವರದಿ ಮಾಡಿದ್ದವು.
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಜಪಾನ್, ಮಯನ್ಮಾರ್ ಜುಂಟಾ ಸೇನಾಡಳಿತದ ಆಧಿಪತ್ಯವನ್ನು ತೀವ್ರವಾಗಿ ಟೀಕಿಸಿರುವುದು ಮಾತ್ರವಲ್ಲದೆ, ಆ ದೇಶಕ್ಕೆ ನೀಡುತ್ತಿರುವ 4.7 ಮಿಲಿಯನ್ ಆರ್ಥಿಕ ನೆರವನ್ನು ತಡೆ ಹಿಡಿಯುತ್ತಿರುವುದಾಗಿ ಪ್ರಕಟಿಸಿದೆ.
|