ರಾಜ್ಯ ಸರಕಾರಗಳ ಮಧ್ಯೆ ಸಹಕಾರದ ಸಮನ್ವಯ ಕೊರತೆಯಿಂದಾಗಿ ಭಯೋತ್ಪಾದನೆಯನ್ನು ನಿಗ್ರಹಿಸಲು ಕೇಂದ್ರ ಸರಕಾರ ವಿಶೇಷ ಘಟಕವನ್ನು ಸ್ಥಾಪಿಸಲು ಮುಖ್ಯಮಂತ್ರಿಗಳ ಸಭೆ ಕರೆಯಲು ನಿರ್ಧರಿಸಿದೆ.
ಹೈದ್ರಾಬಾದ್ ಮತ್ತು ಅಜ್ಮೀರ್ ಹಾಗೂ ಲೂಧಿಯಾನಾ ನಗರಗಳಲ್ಲಿ ನಡೆದ ಸ್ಪೋಟದ ಹಿನ್ನೆಲೆಯಲ್ಲಿ ಕೇಂದ್ರ ಭದ್ರತಾ ಸಮಿತಿ ಅಂತರ್-ರಾಜ್ಯಗಳಿಂದ ಸ್ಪೋಟದ ವಿವರಗಳನ್ನು ಪಡೆಯಲು ವಿಶೇಷ ಘಟಕಗಳ ಸ್ಥಾಪನೆಗೆ ನಿರ್ಧರಿಸಿದೆ.
ವಿವಿಧ ರಾಜ್ಯಗಳಲ್ಲಿ ದೇಶದ ಗಡಿ ಭಾಗಗಳಲ್ಲಿ ಬೇರು ಬಿಟ್ಟಿರುವ ಭಯೋತ್ಪಾದಕ ಸಂಘಟನೆಗಳ ಮಾಹಿತಿಯನ್ನು ಕಲೆಹಾಕುವಲ್ಲಿ ತನಿಖಾ ಸಂಸ್ಥೆಗಳು ತೊಂದರೆಯನ್ನು ಎದುರಿಸುತ್ತಿವೆ ಎಂದು ಕೇಂದ್ರ ಭದ್ರತಾ ಸಮಿತಿ ತಿಳಿಸಿದೆ.
ಭಯೋತ್ಪಾದನೆ ತಡೆಗೆ ವಿಶೇಷ ಘಟಕ ಕುರಿತಂತೆ ಸದ್ಯದಲ್ಲಿ ಕೇಂದ್ರ ಗೃಹ ಸಚಿವ ಶಿವರಾಜ್ ಪಾಟೀಲ್ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯಲ್ಲಿ ಚರ್ಚಿಸಲಿದ್ದಾರೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.
ಬಿಜೆಪಿ ಅಡಳಿತರೂಢವಾಗಿರುವ ರಾಜ್ಯಗಳು ವಿರೋಧ ವ್ಯಕ್ತಪಡಿಸಬಹುದಾದರೂ ಉಳಿದ ರಾಜ್ಯಗಳು ಭಯೋತ್ಪಾದನೆ ನಿಗ್ರಹ ಕ್ರಮವನ್ನು ಸ್ವಾಗತಿಸಿವೆ.
ರಾಜ್ಯದಲ್ಲಿ ಕೇಂದ್ರ ಬೆಂಬಲಿತ ವಿಶೇಷ ಘಟಕಗಳನ್ನು ಸ್ಥಾಪಿಸುವುದು ಪ್ರಜಾಪ್ರಭುತ್ವಕ್ಕೆ ತದ್ವಿರುದ್ದವಾಗಿದ್ದು, ಆಯಾರಾಜ್ಯಗಳ ಭದ್ರತೆ ರಾಜ್ಯ ಸರಕಾರಗಳ ಹೊಣೆಯಾಗಿದೆ. ಇದರಲ್ಲಿ ಕೇಂದ್ರದ ಮಧ್ಯಸ್ಥಿಕೆ ಸಲ್ಲದು ಎಂದು ಬಿಜೆಪಿ ಖಾರವಾಗಿ ಪ್ರತಿಕ್ರಯಿಸಿವೆ.
|