ಸ್ವಯಂಪ್ರರಣೆಯಿಂದ ಸ್ವದೇಶವನ್ನು ತೋರೆದಿದ್ದ ಪಾಕಿಸ್ತಾನದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೊ ಅವರು ಸ್ವದೇಶಕ್ಕೆ ಗುರುವಾರ ಮರಳಿ ತಮ್ಮ ಪಕ್ಷದ ಅಧಿಕಾರವನ್ನು ಕೈಗೆ ತೆಗೆದುಕೊಂಡರು. ಮುಂಬರುವ ಚುನಾವಣೆಯಲ್ಲಿ ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ಪರವಾಗಿ ಅವರು ಸ್ಪರ್ಧಿಸಲಿದ್ದಾರೆ. ಪಾಕಿಸ್ತಾನ ಇತ್ತಿಚಿನ ದಿನಗಳಲ್ಲಿ ರಾಜಕೀಯವಾಗಿ ಪ್ರಕ್ಷುಬ್ದಗೊಂಡಿದೆ.
ಪಾಕ್ ಮಾಜಿ ಪ್ರಧಾನಿ ಬೆನಜೀರ್ ಅವರು, ದುಬೈನ ತಮ್ಮ ನಿವಾಸವನ್ನು ಬೆಳಿಗ್ಗೆ ಎಂಟು ಗಂಟೆಗೆ ಬಿಟ್ಟಿದ್ದು, ಎಮಿರೆಟ್ಸ್ ವಿಮಾನದ ಮೂಲಕ ಬರುತ್ತಿರುವ ಅವರು ಮದ್ಯಾಹ್ನ ಒಂದು ಗಂಟೆಯ ಸುಮಾರಿಗೆ ಕರಾಚಿಗೆ ಬಂದಿಳಿದರು.
ಆಲ್ ಖೈದಾ ಮತ್ತು ತಾಲಿಬಾನ್ ಉಗ್ರರು ಆತ್ಮಹತ್ಯಾ ದಾಳಿಯ ಬೆದರಿಕೆ ಹಾಕಿರುವುದರಿಂದ ಸುಮಾರು 20 ಸಾವಿರ ಪೊಲೀಸರನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿದೆ. ಪಾಕಿಸ್ತಾನದ ಪೀಪಲ್ಸ್ ಪಾರ್ಟಿಯ ಬೆಂಬಲಿಗರು ಅಪಾರ ಸಂಖ್ಯೆಯಲ್ಲಿ ಆಗಮಿಸಿ ಬೇನಜೀರ್‌ಗೆ ಹೃತ್ಪೂರ್ವಕ ಸ್ವಾಗತ ನೀಡಿದರು.
ಸಿಂಧ್ ಪ್ರಾಂತ್ಯ ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ಭದ್ರಕೋಟೆಯಾಗಿದ್ದು ಇಡೀ ಪ್ರಾಂತ್ಯದ ತುಂಬ ಬೆನಜೀರ್ ಸ್ವಾಗತಕ್ಕೆ ಬೃಹತ್ ಗಾತ್ರದ ಕಟೌಟ್‌ಗಳನ್ನು ನಿಲ್ಲಿಸಲಾಗಿದೆ. ಕರಾಚಿ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಭುಟ್ಟೊ ಅವರನ್ನು ಪಾಕಿಸ್ತಾನದ ನಿರ್ಮಾಣಕ್ಕೆ ಕಾರಣರಾದ ಮಹ್ಮದ್ ಅಲಿ ಜಿನ್ನಾ ಅವರ ಸಮಾಧಿ ಬಳಿ ಬೃಹತ್ ಮೆರವಣಿಗೆಯಲ್ಲಿ ಕರೆದುಕೊಂಡು ಹೋಗಲಾಯಿತು, ಪಾಕಿಸ್ತಾನಕ್ಕೆ ತೆರಳುವ ಮುನ್ನ ಖಾಸಗಿ ಟಿವಿ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ತನ್ನ ಸುರಕ್ಷತೆಯ ಕುರಿತು ಅರಿವಿದ್ದು, ಈ ವಿಚಾರವನ್ನು ಮುಷರಫ್ ಅವರೊಂದಿಗೆ ಚರ್ಚಿಸಿದ್ದೇ ನೆ, ನನ್ನ ಪ್ರಾಣಕ್ಕೆ ಎರವಾಗಬಹುದಾದ ಕಾಣದ ಕೈಗಳ ಕುರಿತು ಈ ಸಂದರ್ಭದಲ್ಲಿ ಮಾಹಿತಿ ನೀಡಿದ್ದೆನೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಬೆನಜೀರ್ ಭುಟ್ಟೊ ಅವರು ಎರಡನೆ ಬಾರಿ ಸ್ವಯಂಪ್ರೇರಿತ ಗಡಿಪಾರಿನಿಂದ ಸ್ವದೇಶಕ್ಕೆ ಮರಳುತ್ತಿರುವುದು, 1988ರಲ್ಲಿ ಮಿಲಿಟರಿ ಸರ್ವಾಧಿಕಾರಿ ಜಿಯಾ ಉಲ್ ಹಕ್ ವಿರುದ್ಧ ಪ್ರತಿಭಟನೆ ನಡೆಸುವುದಕ್ಕೆ ಸ್ವದೇಶಕ್ಕೆ ಮರಳಿದ್ದರು. ಜನರಲ್ ಜಿಯಾ ಉಲ್ ಹಕ್ ಅವರು ಬೆನಜೀರ್ ತಂದೆ ಜುಲ್ಫಿಕರ್ ಅಲಿ ಭುಟ್ಟೊ ಅವರ ಸರಕಾರವನ್ನು ಪದಚ್ಯುತಗೊಳಿಸಿದ್ದು ಅಲ್ಲದೆ ಜುಲ್ಫಿಕರ್ ಅವರಿಗೆ ಮರಣದಂಡನೆ ವಿಧಿಸಿದ್ದರು.
|