ಕರಾಚಿಯಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ಬೇನಜೀರ್ ಭುಟ್ಟೊ ಅವರ ರಾಜಕೀಯ ರಾಲಿ ಮೇಲೆ ಭಯೋತ್ಪಾದನೆ ದಾಳಿಯನ್ನು ಅಮೆರಿಕ ಶುಕ್ರವಾರ ಖಂಡಿಸಿದ್ದು, ಮುಗ್ಧ ಜನರ ಹತ್ಯೆಯನ್ನು ಯಾವುದೇ ರಾಜಕೀಯ ಕಾರಣ ಸಮರ್ಥಿಸಿಕೊಳ್ಳುವುದಿಲ್ಲ ಎಂದು ಹೇಳಿದೆ.
ಬೇನಜೀರ್ ಭುಟ್ಟೊ ಅವರ ಶಾಂತಿಯುತ ರಾಜಕೀಯ ರಾಲಿಯಲ್ಲಿ ನಡೆದ ಭಯೋತ್ಪಾದಕ ದಾಳಿಗಳನ್ನು ಅಮೆರಿಕ ಖಂಡಿಸುತ್ತದೆ. ದಾಳಿಯಲ್ಲಿ ಮೃತಪಟ್ಟ ದುರ್ದೈವಿಗಳಿಗೆ ಮತ್ತು ಅವರ ಕುಟುಂಬಕ್ಕಾಗಿ ನಾವು ಪ್ರಾರ್ಥಿಸುತ್ತೇವೆ. ಮುಗ್ಧ ಜನರ ಹತ್ಯೆಯನ್ನು ಯಾವುದೇ ರಾಜಕೀಯ ಕಾರಣ ಸಮರ್ಥಿಸುವುದಿಲ್ಲ ಎಂದು ವಿದೇಶಾಂಗ ಇಲಾಖೆಯು ಹೇಳಿಕೆಯಲ್ಲಿ ತಿಳಿಸಿದೆ.
ಜನರಲ್ಲಿ ಭಯಭೀತಿ ಮೂಡಿಸಿ ಸ್ವಾತಂತ್ರ್ಯವನ್ನು ಮೊಟಕು ಮಾಡುವುದು ಇದಕ್ಕೆ ಹೊಣೆಯಾದವರ ಇಚ್ಛೆಯಾಗಿದೆ. ಅಧ್ಯಕ್ಷ ಮುಷರ್ರಫ್ ಮತ್ತು ಪಾಕಿಸ್ತಾನದ ಸರ್ಕಾರ ಕೂಡ ದಾಳಿಯನ್ನು ಖಂಡಿಸಿದೆ. ಭಯೋತ್ಪಾದನೆ ಬೆದರಿಕೆ ಮೂಲೋತ್ಪಾಟನೆಗೆ ಮತ್ತು ಮುಕ್ತ, ಪ್ರಜಾಪ್ರಭುತ್ವ ಮತ್ತು ಶಾಂತಿಯುತ ಸಮಾಜ ನಿರ್ಮಾಣಕ್ಕೆ ಅಮೆರಿಕ ಪಾಕಿಸ್ತಾನದ ಜನತೆಗೆ ಬೆಂಬಲವಾಗಿ ನಿಂತಿದೆ ಎಂದು ಅದು ಹೇಳಿದೆ.
ಮಾಜಿ ಪ್ರಧಾನಮಂತ್ರಿ ಬೇನಜೀರ್ ಭುಟ್ಟೊ ಅವರ ಮೇಲೆ ದಾಳಿ ಖಂಡನೀಯ. ಭುಟ್ಟೊ ಅವರನ್ನು ಬಾಯಿ ಮುಚ್ಚಿಸುವ ದುರುದ್ದೇಶದ ಯತ್ನದಿಂದ ಅವರು ಪಾರಾಗಿದ್ದಾರೆ. ಆದರೆ ನೂರಾರು ಅಮಾಯಕ ಪಾಕಿಸ್ತಾನಿಯರು ದುರದೃಷ್ಟಶಾಲಿಗಳಾಗಿದ್ದು, ಹೇಡಿತನದ ಕೃತ್ಯಕ್ಕೆ ಜೀವತೆತ್ತಿದ್ದಾರೆ.
ಇಂತಹ ಹೇಯ ಹಿಂಸಾಚಾರಕ್ಕೆ ಹೊಣೆಯಾದವರವನ್ನು ನಾನು ಖಂಡಿಸುವುದಾಗಿ ವಿದೇಶಾಂಗ ವ್ಯವಹಾರಗಳ ಸಮಿತಿಯ ಅಧ್ಯಕ್ಷ ಲ್ಯಾಂಟೋಸ್ ಹೇಳಿದ್ದಾರೆ.
|