ಚೂರುಚೂರಾಗಿ ಬಿದ್ದ ರಕ್ತಸಿಕ್ತ ದೇಹಗಳು, ರಸ್ತೆಯಲ್ಲಿ ಹೊತ್ತಿಉರಿಯುತ್ತಿರುವ ಕಾರ್‌ಗಳು ಪಾಕಿಸ್ತಾನದ ಪ್ರಧಾನಮಂತ್ರಿ ಬೇನಜೀರ್ ಭುಟ್ಟೊ ರಾಲಿಯಲ್ಲಿ ಆತ್ಮಹತ್ಯೆ ಬಾಂಬ್ ಸ್ಫೋಟ ಸಂಭವಿಸಿದ ಬಳಿಕದ ದೃಶ್ಯಗಳು. ಕಸಾಯಿಖಾನೆಯಲ್ಲಿ ಕಂಡುಬರುವಂತೆ ನೆಲದಲ್ಲಿ ರಕ್ತ ಮತ್ತು ಮಾಂಸದ ಚೂರುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.
ಕೆಲವು ಜನರು ನೆಲದ ಮೇಲೆ ನಿಶ್ಚಲವಾಗಿ ಬಿದ್ದಿದ್ದರು. ಇನ್ನೂ ಕೆಲವರು ಸಂಪೂರ್ಣವಾಗಿ ಅಂಗವಿಕಲರಾಗಿದ್ದರು. ಉರಿಯುವ ವಾಸನೆ ಹೊರಹೊಮ್ಮುತ್ತಿತ್ತು. ಅವು ಮಾಂಸ ಸುಟ್ಟ ವಾಸನೆಯೇ ಅಥವಾ ಬೇರೆ ವಾಸನೆಯೇ ಎಂದು ಗೊತ್ತಾಗಲಿಲ್ಲ ಎಂದು ಪ್ರತ್ಯಕ್ಷದರ್ಶಿ ಹೇಳಿದ್ದಾರೆ.
ಪಾಕಿಸ್ತಾನದ ಇತಿಹಾಸದಲ್ಲೇ ಅತ್ಯಂತ ಭೀಕರ ಆತ್ಮಹತ್ಯೆ ದಾಳಿ ಇದಾಗಿದ್ದು, 125 ಜನರು ಬಲಿಯಾಗಿದ್ದು 400ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಕರಾಚಿ ಮೇಯರ್ ತಿಳಿಸಿದ್ದಾರೆ.
ಬೇನಜೀರ್ ಭುಟ್ಟೊ ಬೆಂಗಾವಲು ವಾಹನಗಳು ಹಾದುಹೋಗುವಾಗ ಭುಟ್ಟೊ ಅವರ ದರ್ಶನಕ್ಕಾಗಿ ನೂರಾರು ಜನರು ಕರ್ಜಾ ರಸ್ತೆಯಲ್ಲಿ ಸೇರಿದ್ದರು. ಮಧ್ಯರಾತ್ರಿ ಕಳೆದ ಸ್ವಲ್ಪಹೊತ್ತಿನಲ್ಲೇ ಸಣ್ಣ ಸ್ಫೋಟ ಸಂಭವಿಸಿದ ಕೂಡಲೇ ಇನ್ನೊಂದು ಭೀಕರ ಸ್ಫೋಟ ಸಂಭವಿಸಿತು.
ಭುಟ್ಟೊ ಕಾರಿನ ಸಮೀಪ ಆಕಾಶದೆತ್ತರಕ್ಕೆ ಬೆಂಕಿಯ ಜ್ವಾಲೆಗಳು ದಟ್ಟವಾಗಿ ಹರಡಿತು.ಸ್ಫೋಟದ ಬಳಿಕ ನೂರಾರು ಜನರು ಚೆಲ್ಲಾಪಿಲ್ಲಿಯಾಗಿ ಚದುರಿದರು ಎಂದು ಪ್ರತ್ಯಕ್ಷದರ್ಶಿ ಮುಹಮದ್ ಅಲಿ ಬಾಲುಂಚ್ ಡಾನ್ ಟೆಲಿವಿಷನ್‌ಗೆ ತಿಳಿಸಿದ್ದಾರೆ.
ಏನಾಯಿತೆಂದು ತಿಳಿಯುವಷ್ಟರಲ್ಲಿ ನನ್ನ ಸೋದರರು ಮತ್ತು ಕುಟುಂಬ ಗಾಯಗೊಂಡಿದ್ದು ಕಂಡುಬಂತು. ನಾನು ಐದಾರು ದೇಹಗಳನ್ನು ಆಂಬುಲೆನ್ಸ್‌ಗೆ ಸಾಗಿಸಿದೆ ಎಂದು ಅವರು ಹೇಳಿದ್ದಾರೆ.
|