ಮಾಜಿ ಪ್ರಧಾನಮಂತ್ರಿ ಬೇನಜೀರ್ ಭುಟ್ಟೊ ಬೆಂಗಾವಲು ವಾಹನಗಳ ಮೇಲೆ ಅವಳಿ ದಾಳಿಗಳನ್ನು ಇಬ್ಬರು ಆತ್ಮಹತ್ಯೆ ಬಾಂಬರ್‌ಗಳಿಂದ ನಡೆಸಲಾಯಿತು ಎಂದು ದಾಳಿಯ ಬಗ್ಗೆ ತನಿಖೆ ನಡೆಸುತ್ತಿರುವ ತನಿಖೆದಾರರು ಭಾವಿಸಿದ್ದಾರೆ. ಆದರೆ ಒಬ್ಬರೇ ಬಾಂಬರ್ ಈ ದಾಳಿಯಲ್ಲಿ ಭಾಗಿಯಾಗಿದ್ದಾನೆಂದು ಪಾಕಿಸ್ತಾನದ ಒಳಾಡಳಿತ ಸಚಿವರು ಪ್ರತಿಪಾದಿಸಿದ್ದಾರೆ. ವಿವಿಧ ತೀವ್ರತೆಗಳ ಅವಳಿ ಆತ್ಮಹತ್ಯೆ ಬಾಂಬ್ ದಾಳಿಗಳಿಂದ ಸ್ಫೋಟ ಸಂಭವಿಸಿದೆ ಎಂದು ತನಿಖೆದಾರರು ತೀರ್ಮಾನಿಸಿದ್ದಾರೆಂದು ಪೊಲೀಸ್ ತನಿಖಾ ದಳಕ್ಕೆ ಸಮೀಪವರ್ತಿ ಮೂಲಗಳು ತಿಳಿಸಿರುವುದಾಗಿ ಡಾನ್ ಸುದ್ದಿಪತ್ರಿಕೆ ವರದಿ ಮಾಡಿದೆ. ತನಿಖೆಯ ಸಂದರ್ಭದಲ್ಲಿ ಮೊದಲ ಸ್ಫೋಟವು ಎರಡನೆ ಸ್ಫೋಟಕ್ಕಿಂತ ಕಡಿಮೆ ತೀವ್ರತೆ ಹೊಂದಿದ್ದರೂ ಕೂಡ ಆತ್ಮಹತ್ಯೆ ದಾಳಿಯ ಫಲಶ್ರುತಿ ಎಂದು ಅಭಿಪ್ರಾಯ ತಾಳಿದ್ದಾರೆ.
ಇನ್ನೊಂದು ಕತ್ತರಿಸಿದ ತಲೆಯು ಪತ್ತೆಯಾಗಿರುವುದರಿಂದ ಈ ಅಭಿಪ್ರಾಯಕ್ಕೆ ಪುಷ್ಠಿ ನೀಡುತ್ತದೆ ಎಂದು ವರದಿ ಹೇಳಿದೆ. ಪೊಲೀಸರು ವೈದ್ಯರ ನೆರವಿನಿಂದ ಕತ್ತರಿಸಿದ ರುಂಡದ ಮುಖಕ್ಕೆ ಮರುರೂಪ ನೀಡಲಿದ್ದಾರೆ. ಮೊದಲ ಸ್ಫೋಟ ಗ್ರೆನೇಡ್ ದಾಳಿಯಿಂದ ಸಂಭವಿಸಿದೆ ಎಂದು ಪ್ರಾಂತೀಯ ಪೊಲೀಸ್ ಮುಖ್ಯಸ್ಥ ಹೇಳಿರುವುದರಿಂದ ಯಾರೇ ಪೊಲೀಸ್ ಅಧಿಕಾರಿ ಅವರ ಹೇಳಿಕೆಯನ್ನು ವಿರೋಧಿಸಿಲ್ಲ.
ಒಬ್ಬನೆ ಬಾಂಬರ್ ನಡೆದುಕೊಂಡು ಬಂದು ದಾಳಿ ನಡೆಸಿದ್ದಾನೆಂದು ಅಧಿಕಾರಿಗಳಿಗೆ ಖಚಿತವಾಗಿದೆ. ಮೊದಲ ಸ್ಫೋಟವು ಗ್ರೆನೇಡ್ ದಾಳಿಯಿಂದ ಉಂಟಾಗಿದೆ ಎಂದು ಒಳಾಡಳಿತ ಸಚಿವ ಅಫ್ತಬ್ ಅಹ್ಮದ್ ಖಾನ್ ಹೇಳಿದರು.
|