ಪಾಕಿಸ್ತಾನ ಸರ್ಕಾರವು ತಾಲಿಬಾನ್‌ಗೆ ನಿಕಟವಾಗಿರುವ ಇಸ್ಲಾಮಿಕ್ ಗುಂಪುಗಳನ್ನು ಬೆಂಬಲಿಸುತ್ತಿದೆ ಎಂದು ಪ್ರಮುಖ ಅಂತಾರಾಷ್ಚ್ರೀಯ ಚಿಂತಕರ ಚಾವಡಿ ಮಂಗಳವಾರ ಆರೋಪಿಸಿದೆ. ಬಲೂಚಿಸ್ತಾನದಲ್ಲಿ ಬುಡಕಟ್ಟು ಜನರ ಬಂಡಾಯವನ್ನು ಹತ್ತಿಕ್ಕಲು ಪಾಕಿಸ್ತಾನ ಈ ಬೆಂಬಲ ನೀಡಿದೆ ಎಂದು ಅದು ತಿಳಿಸಿದೆ.
ಒಡೆದು ಆಳುವ ನೀತಿಯಲ್ಲಿ ನಂಬಿಕೆ ಇರಿಸಿರುವ ಮುಷರ್ರಫ್ ಆಡಳಿತ ತಾಲಿಬಾನ್‌ನ ಮುಖ್ಯ ಪೋಷಕ, ಇಸ್ಲಾಮಿಕ್ ಪಕ್ಷವಾದ ಜೆಯುಐ-ಎಫ್ ಮುಂತಾದುವನ್ನು ಬೆಂಬಲಿಸುತ್ತಿದೆ ಎಂದು ಅಂತಾರಾಷ್ಟ್ರೀಯ ಬಿಕ್ಕಟ್ಟು ಪರಿಹಾರ ತಂಡವು ತಿಳಿಸಿದೆ. "ಪಾಕಿಸ್ತಾನ:ಬಲೂಚಿಸ್ತಾನದಲ್ಲಿ ಮರೆತ ಸಂಘರ್ಷ" ಎಂಬ ವರದಿಯಲ್ಲಿ ಈ ವಿಷಯವನ್ನು ಅದು ತಿಳಿಸಿದೆ.
ಜಾತ್ಯತೀತ ಬೆಲೂಚಿಗಳು ಮತ್ತು ಸೌಮ್ಯವಾದಿ ಪಾಸ್ತೂನ್ ಪಡೆಗಳನ್ನು ಎದುರಿಸುವ ಪ್ರಯತ್ನವಾಗಿ ಮುಷರ್ರಫ್ ಆಡಳಿತ ಈ ಕ್ರಮಕ್ಕೆ ಮುಂದಾಗಿದೆ ಎಂದು ಚಿಂತಕರ ಚಾವಡಿ ಹೇಳಿದೆ.ಬೆಲೂಚಿಗಳು ಹೆಚ್ಚಿನ ಸ್ವಾಯತ್ತೆಗೆ ಮತ್ತು ಪ್ರದೇಶದ ಸಮೃದ್ಧ ಸಂಪನ್ಮೂಲಗಳಲ್ಲಿ ಹೆಚ್ಚಿನ ಪಾಲು ನೀಡುವಂತೆ ಒತ್ತಾಯಿಸಿ ಮೂರು ವರ್ಷಗಳಿಂದ ಆಂದೋಲನ ನಡೆಸಿದ್ದಾರೆ.
ಪ್ರಸ್ತುತ ಮಿಲಿಟರಿ ಸರ್ವಾಧಿಕಾರದ ಬದಲಿಗೆ ಕಾನೂನುಬದ್ಧ ಸರ್ಕಾರವನ್ನು ಮುಕ್ತ, ಪಾರದರ್ಶಕ ಚುನಾವಣೆ ಮೂಲಕ ಸ್ಥಾಪಿಸಿದರೆ ಪ್ರಾಂತ್ಯದಲ್ಲಿ ಬಂಡಾಯ ಶಮನವಾಗುತ್ತದೆ ಎಂದು ಅದು ಪ್ರತಿಪಾದಿಸಿದೆ. ಬೆಲೂಚಿಗಳನ್ನು ಮಣಿಸಲು ಆಕ್ರಮಣ,ಹತ್ಯೆಗಳು, ಜೈಲುಶಿಕ್ಷೆ, ಚಿತ್ರಹಿಂಸೆಗಳಿಗೆ ಕೊನೆಹಾಡುವಂತೆ ಐಸಿಜಿ ಸರ್ಕಾರಕ್ಕೆ ಸೂಚಿಸಿದೆ.ಆಕ್ರಮಣಕಾರಿ ಕ್ರಮಗಳಿಂದ ಬಂಡಾಯಕ್ಕೆ ಪುಷ್ಠಿ ನೀಡುತ್ತದೆ ಎಂದು ಐಸಿಜಿಯ ಏಷ್ಯ ಕಾರ್ಯಕ್ರಮದ ನಿರ್ದೇಶಕ ರಾಬರ್ಟ್ ಟೆಂಪ್ಲರ್ ತಿಳಿಸಿದ್ದಾರೆ.
|