ಸೌದಿ ಅರೇಬಿಯದ ಕೆಂಪು ಸಮುದ್ರ ತೀರದ ನಗರ ಅಲ್ ಕುನ್‌ಫುಡಾದಲ್ಲಿ ವಿಷಮಿಶ್ರಿತ ಆಹಾರ ಸೇವನೆಯಿಂದ ಒಂದೇ ಕುಟುಂಬಕ್ಕೆ ಸೇರಿದ ಮೂವರು ಭಾರತೀಯ ಮೂಲದ ಮಕ್ಕಳು ಅಸುನೀಗಿದ್ದಾರೆ. ಶನಿವಾರ ಬೆಳಿಗ್ಗೆ ವಿಷಾಹಾರ ಸೇವನೆಯಿಂದ 6 ವರ್ಷ ವಯಸ್ಸಿನ ಬಾಲಕ ಅನಾಸ್ ಅಸುನೀಗಿದ ಬಳಿಕ ಅವನ ಸೋದರಿ 3 ವರ್ಷದ ಮರಿಯಾಮ್ ಅದೇ ದಿನ ರಾತ್ರಿ ಸತ್ತಳು.
9 ವರ್ಷ ವಯಸ್ಸಿನ ನಾಜ್ಲಾ ಭಾನುವಾರ ನಸುಕಿನಲ್ಲಿ ಸತ್ತಳು. ಆದಾಗ್ಯೂ, ಮೂವರ ತಂದೆಯಾದ ಸೌದಿ ವಿದ್ಯುತ್ ಗುತ್ತಿಗೆ ಕಂಪನಿಯಲ್ಲಿ ಎಂಜಿನಿಯರ್ ಆಗಿರುವ ಮುಹಮ್ಮದ್ ಖಾಲಿದ್ ಇಕ್ಬಾಲ್ ಮತ್ತು ಅವರ ಪತ್ನಿ ಉಜ್ಮಾ ಅಪಾಯದಿಂದ ಪಾರಾಗಿದ್ದಾರೆ. ತಂದೆ, ತಾಯಿ ಮತ್ತು ಮಕ್ಕಳನ್ನು ವಿಷಾಹಾರ ಸೇವನೆಯ ಲಕ್ಷಣದೊಂದಿಗೆ ಕುನ್ಫುಡಾ ಜನರಲ್ ಆಸ್ಪತ್ರೆಗೆ ಸೇರಿಸಲಾಗಿತ್ತು,
ಮೃತ ಮಕ್ಕಳ ಮನೆಯನ್ನು ಪರಿಶೀಲಿಸಿದ ಆರೋಗ್ಯ ತಜ್ಞರು ಪಕ್ಕದ ಮನೆಯಲ್ಲಿ ಸಿಂಪಡಿಸಿದ ಕೆಲವು ಕೀಟನಾಶಕಗಳು ಆಹಾರವನ್ನು ಕಲುಷಿತಗೊಳಿಸಿರಬಹುದೆಂದು ಶಂಕಿಸಿದ್ದಾರೆ.
ಆಹಾರದಲ್ಲಿ ವಿಷಮಿಶ್ರಣವಾಗಿರುವ ಬಗ್ಗೆ ಖಚಿತತೆಗೆ ಆಹಾರದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳಿಸಲಾಗಿದೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ. ಕುಟುಂಬವು ಉತ್ತರಪ್ರದೇಶದ ಆಲಿಗಢಕ್ಕೆ ಸೇರಿದವರೆಂದು ಹೇಳಲಾಗಿದೆ.
|