ಭಾರತದಲ್ಲಿರುವ ನಾಲ್ಕು ಎಡಪಕ್ಷಗಳ ವಿರೋಧದಿಂದಾಗಿ ಭಾರತ ಮತ್ತು ಅಮೆರಿಕ ನಡುವಣ ಮಹತ್ವದ ಪರಮಾಣು ಒಪ್ಪಂದದ ಗಡುವು ಮೀರುತ್ತಿದೆ ಎಂದು ಅಮೆರಿಕ ರಾಜ್ಯಾಂಗ ಇಲಾಖೆ ಎಚ್ಚರಿಸಿದೆ.
ಒಪ್ಪಂದದ ಪ್ರಕಾರ ಮುಂದುವರಿಯಬೇಕೇ ಎಂಬುದು ಭಾರತದ ಆಂತರಿಕ ವಿಚಾರ ಎಂದು ರಾಜ್ಯಾಂಗ ಇಲಾಖೆಯ ರಾಜಕೀಯ ವ್ಯವಹಾರ ವಿಭಾಗದ ಅಧೀನ ಕಾರ್ಯದರ್ಶಿ ನಿಕೋಲಸ್ ಬರ್ನ್ಸ್ ಹೇಳಿದರು.
ಈ ಒಪ್ಪಂದದ ಅನುಸಾರ, ಭಾರತವು ಈ ಹಿಂದೆ ಅಣ್ವಸ್ತ್ರ ಪರೀಕ್ಷೆ ಕೈಗೊಂಡಿದ್ದರೂ, ಅಮೆರಿಕದಿಂದ ಪರಮಾಣು ಇಂಧನವು ಆಮದುಮಾಡಿಕೊಳ್ಳಬಹುದಾಗಿದೆ.
ಈ ನಿರ್ಧಾರಗಳಲ್ಲಿ ಮಧ್ಯಪ್ರವೇಶಿಸಲು ನಾವು ಬಯಸುವುದಿಲ್ಲ. ಆದರೆ ತಕ್ಷಣ ನಿರ್ಧಾರ ಕೈಗೊಳ್ಳಲು ಇದು ಸಕಾಲ ಎಂದಷ್ಟೇ ಹೇಳಲಿಚ್ಛಿಸುತ್ತೇವೆ ಎಂದು ಬರ್ನ್ಸ್ ಅವರು ನ್ಯೂಯಾರ್ಕಿನಲ್ಲಿ ವಿದೇಶಾಂಗ ವ್ಯವಹಾರಗಳ ಮಂಡಳಿಯಲ್ಲಿ ಹೇಳಿದರು.
ನಮ್ಮ ಬಳಿ ಬೇಕಾದಷ್ಟು ಸಮಯವೇನೂ ಇಲ್ಲ ಎಂದಿರುವ ಅವರು, ಅಮೆರಿಕವು ಚುನಾವಣಾ ವರ್ಷಕ್ಕೆ ಕಾಲಿರಿಸುತ್ತಿದೆ. ಇಂತಹ ಸಂದರ್ಭದಲ್ಲಿ ಶಾಸನವೊಂದನ್ನು ಅಂಗೀಕರಿಸುವುದು ತ್ರಾಸದಾಯಕ ಎಂದಿರುವ ಬರ್ನ್ಸ್, ಈ ಒಪ್ಪಂದವನ್ನು ನಾವು ಈ ವರ್ಷಾಂತ್ಯದೊಳಗೆ ಅಮೆರಿಕ ಕಾಂಗ್ರೆಸ್ ಎದುರು ಮಂಡಿಸಬೇಕಾಗಿದೆ ಎಂದು ನುಡಿದರು.
|