ಸರಕಾರದ ಆದೇಶವನ್ನು ಧಿಕ್ಕರಿಸಿದ ತಾಲಿಬಾನ್ ಬೆಂಬಲಿತ ಮೌಲ್ವಿಯನ್ನು ಸದೆಬಡೆಯಲು ಸರಕಾರ 4 ಸಾವಿರ ಸೈನಿಕರನ್ನು ಕಾರ್ಯಚರಣೆಗಾಗಿ ಸ್ವಾತ್ ಕಣಿವೆಗೆ ರವಾನಿಸಿದೆ.
ಮಲಕಾಂಡ್ ಪ್ರದೇಶದಲ್ಲಿ ಮೌಲ್ವಿಯ ಆದೇಶದ ಮೇರೆಗೆ ಸೈನಿಕ ವಾಹನದ ಮೇಲೆ ಬಾಂಬ್ ದಾಳಿ ನಡೆಸಿ ನಾಲ್ವರು ಸೈನಿಕರನ್ನು ಗಾಯಗೊಳಿಸಿದ ಹಿನ್ನೆಲೆಯಲ್ಲಿ ಸರಕಾರ ಸೇನೆಯನ್ನು ರವಾನಿಸಿದೆ.
ತಾಲಿಬಾನ್ ಬೆಂಬಲಿತ ಮೌಲ್ವಿ ಮೌಲಾನಾ ಫೈಜುಲ್ಲಾ ಎಫ್‌ಎಂ ಪ್ರಸರಣವನ್ನು ಅನಧಿಕೃತವಾಗಿ ಉಪಯೋಗಿಸಿಕೊಂಡು ಉಗ್ರವಾದವನ್ನು ಹರಡಿಸಲು ಯತ್ನಿಸುತ್ತಿರುವ ಆರೋಪವನ್ನು ಸರಕಾರ ದಾಖಲಿಸಿತ್ತು.
ಆದರೆ ಸರಕಾರದ ಆದೇಶವನ್ನು ಧಿಕ್ಕರಿಸಿದ ಹಿನ್ನೆಲೆಯಲ್ಲಿ ಮೌಲ್ವಿಯ ಹಾಗೂ ಆತನ ಸಾವಿರಾರು ತಾಲಿಬಾನ್ ಬೆಂಬಲಿಗರ ಅಟ್ಟಹಾಸ ಅಡಗಿಸಲು ಪ್ಯಾರಾ ಮಿಲಿಟರಿ ಪಡೆಗಳನ್ನು ರವಾನಿಸಲಾಗಿದೆ ಎಂದು ಸೇನಾ ವಕ್ತಾರ ಮೇಜರ್ ಜನರಲ್ ವಹೀದ್ ಅರ್ಷದ್ ತಿಳಿಸಿದ್ದಾರೆ.
ಫೈಜುಲ್ಲಾ ನಿಷೇಧಿತ ತಾಂಜಿಮ್ ನಿಫಾಜ್-ಎ-ಶರೀಯತ್ ಮುಹಮ್ಮದಿ ಸಂಘಟನೆಯ ಮುಖಂಡನಾಗಿದ್ದು ಸಾವಿರಾರು ಬೆಂಬಲಿಗರನ್ನು ಹೊಂದಿದ್ದಾರೆ ಎಂದು ಮೇಜರ್ ತಿಳಿಸಿದ್ದಾರೆ.
ಪೆಶಾವರ್‌ದಿಂದ 50 ಕಿ.ಮಿ ದೂರದಲ್ಲಿರುವ ಸ್ವಾತ್ ಕಣಿವೆಯಲ್ಲಿರುವ ಮದರಸಾಗೆ ದಾಳಿ ಮಾಡಲು ಸಜ್ಜಾಗಿದ್ದು, ಹಿಂಸಾಚಾರ ನಡೆಯಬಹುದೆನ್ನುವ ಆತಂಕದಲ್ಲಿ ಜನರು ಸ್ಥಳವನ್ನು ತೊರೆದು ಹೋಗುತ್ತಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.
ಸೇನಾ ಹೆಲಿಕಾಪ್ಟರ್‌ಗಳು ಪ್ರದೇಶವನ್ನು ಸುತ್ತುವರೆದಿದ್ದು ಎಲ್ಲ ಪ್ರಮುಖ ರಸ್ತೆಗಳನ್ನು ಬಂದ್ ಮಾಡಲಾಗಿದೆ, ಶಾಲಾಕಾಲೇಜ್‌ಗಳಿಗೆ ರಜೆ ಘೋಷಿಸಲಾಗಿದೆ ಎಂದು ಸ್ಥಳಿಯರು ತಿಳಿಸಿದ್ದಾರೆ.
|