ಭಾರತ-ರಷ್ಯಾ-ಚೀನಾದ ಮೂರನೇ ವಿದೇಶಾಂಗ ಸಚಿವರ ಸಭೆಯಲ್ಲಿ ಭಾಗವಹಿಸಲು ವಿದೇಶಾಂಗ ಸಚಿವ ಪ್ರಣವ್ ಮುಖರ್ಜಿ ಬುಧವಾರ ಬೆಳಿಗ್ಗೆ ಇಲ್ಲಿಗೆ ಆಗಮಿಸಿದರು. ಹಿರಿಯ ಅಧಿಕಾರಿಗಳನ್ನು ಜತೆಗೂಡಿದ ಮುಖರ್ಜಿ ಚೀನಾದ ಹೈಲಾಂಗ್‌ಜಿಯಾಂಗ್ ಪ್ರಾಂತ್ಯಕ್ಕೆ ವಿಶೇಷ ವಿಮಾನದಲ್ಲಿ ಆಗಮಿಸಿದರು.
ಚೀನಾ ಮತ್ತು ರಷ್ಯಾ ವಿದೇಶಾಂಗ ಸಚಿವರಾದ ಯಾಂಗ್ ಜೈಚಿ ಮತ್ತು ಸರ್ಗೈ ಲಾವ್‌ರೋವ್ ಜತೆ ಅವರು ಮಾತುಕತೆ ನಡೆಸಲಿದ್ದು, ಮಾತುಕತೆಗೆ ಮುನ್ನ ಯಾಂಗ್ ಬೋಜನಕೂಟದ ಆತಿಥ್ಯ ವಹಿಸಲಿದ್ದಾರೆ.
ಹೈಲೋಂಗ್‌ಜಿಯಾಂಗ್ ಪ್ರಾಂತ್ಯದ ಕಮ್ಯುನಿಸ್ಟ್ ಪಕ್ಷದ ಕಾರ್ಯದರ್ಶಿ ಕಿಯಾನ್ ಯುನ್ಲು ಸಂಜೆ ಆಯೋಜಿಸಿರುವ ಔತಣಕೂಟದಲ್ಲಿ ಕೂಡ ಮೂವರು ವಿದೇಶಾಂಗ ಸಚಿವರು ಪಾಲ್ಗೊಳ್ಳಲಿದ್ದಾರೆ. ಮೂವರು ವಿದೇಶಾಂಗ ಸಚಿವರು ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ವಿಷಯಗಳನ್ನು ಹಾಗೂ ತ್ರಿಪಕ್ಷೀಯ ಸಹಕಾರದ ವಿಸ್ತರಣೆ ಕುರಿತು ಸಹ ಮಾತುಕತೆ ನಡೆಸುವರೆಂದು ನಿರೀಕ್ಷಿಸಲಾಗಿದೆ.
ಮುಖರ್ಜಿ ಯಾಂಗ್ ಜತೆ ಗುರುವಾರ ದ್ವಿಪಕ್ಷೀಯ ಮಾತುಕತೆ ನಡೆಸಲು ನಿಗದಿಯಾಗಿದ್ದು, ಅವರು ಲಾವ್‌ರೋವ್ ಭೇಟಿ ಮಾಡುವುದು ಸ್ಪಷ್ಟವಾಗಿಲ್ಲ. ಕಳೆದ ಫೆಬ್ರವರಿಯಲ್ಲಿ ಮತ್ತು 2005 ಜೂನ್‌ನಲ್ಲಿ ಭೇಟಿ ಬಳಿಕ ಇದು ಮೂರನೇ ತ್ರಿಪಕ್ಷೀಯ ಭೇಟಿಯಾಗಿದೆ.
ಮುಖರ್ಜಿ ವಿದೇಶಾಂಗ ಸಚಿವರಾದ ಮೇಲೆ ಚೀನಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲ ಬಾರಿ. ಕಳೆದ ವರ್ಷ ಮೇನಲ್ಲಿ ಅವರು ರಕ್ಷಣಾ ಸಚಿವರಾಗಿದ್ದಾಗ ಚೀನಕ್ಕೆ ಭೇಟಿ ನೀಡಿದ್ದರು.
|