ಭಾರತ-ಚೀನಾ-ರಷ್ಯಾದ ಅಂತರಾಷ್ಟ್ರೀಯ ಸಂಬಂಧಗಳು ಇನ್ನಷ್ಟು ಬಲಪಡಿಸಿಕೊಳ್ಳಬೇಕಾದ ಅವಶ್ಯಕತೆ ಇದೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಪ್ರಣಬ್ ಮುಖರ್ಜಿ ಅಭಿಪ್ರಾಯಪಟ್ಟಿದ್ದಾರೆ.
ಬುಧವಾರ ಚೀನಾದ ಹರ್ಬಿನ್‌ನಲ್ಲಿ ಜರುಗಿದ ಭಾರತ-ಚೀನಾ-ರಷ್ಯಾ ವಿದೇಶಾಂಗ ಸಚಿವರುಗಳ ತ್ರಿಪಕ್ಷೀಯ ಸಭೆಯಲ್ಲಿ ಮಾತನಾಡಿದ ನಂತರ ಪ್ರಣಬ್, ಸುದ್ದಿಗಾರರಿಗೆ ಈ ವಿಷಯವನ್ನು ತಿಳಿಸಿದರು.
ಈ ತ್ರಿಪಕ್ಷೀಯ ಸಭೆಯು, ಮೂರು ರಾಷ್ಟ್ರಗಳ ಮಧ್ಯೆ ಪರಸ್ಪರ ಸಹಕಾರವನ್ನು ವೃದ್ಧಿಗೊಳಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ತಿಳಿಸಿದ ಪ್ರಣಬ್, ಇದು ಯಾವುದೆ ರಾಷ್ಟ್ರಗಳ ವಿರುದ್ಧವಾಗಲಿ, ಸಂಘಟನೆಗಳ ವಿರುದ್ಧವಾಗಲಿ ರೂಪುಗೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.
ಬುಧವಾರ ನಡೆದ ಮಹತ್ವದ ಈ ತ್ರಿಪಕ್ಷೀಯ ಸಭೆಯಲ್ಲಿ ಚೀನಾದ ವಿದೇಶಾಂಗ ಸಚಿವ ಯಾಂಗ್, ರಷ್ಯಾದ ವಿದೇಶಾಂಗ ಸಚಿವ ಸರ್ಗಿ ಲಾವ್ರೊವ್ ಮತ್ತು ಭಾರತದ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ, ಮೂರು ರಾಷ್ಟ್ರಗಳ ನಡುವಿನ ಅಂತಾರಾಷ್ಟ್ರೀಯ ಸಂಬಂಧಗಳ ಕುರಿತು ಹಲವು ಮಹತ್ವದ ಒಪ್ಪಂದಗಳನ್ನು ಮಾಡಿಕೊಂಡರು.
|