ಪಶ್ಚಿಮ ಜಕಾರ್ತದಲ್ಲಿ ಗುರುವಾರ ನಸುಕಿನಲ್ಲೇ ಭಾರೀ ಭೂಕಂಪ ಅಪ್ಪಳಿಸಿದೆ. ನಿದ್ರಾವಸ್ಥೆಯಲ್ಲಿದ್ದ ಜನರು ಭೀತಿಯಿಂದ ಮನೆಯಿಂದ ಹೊರಗೋಡಿದರು. ಅಧಿಕಾರಿಗಳು ಸುನಾಮಿ ಮುನ್ನೆಚ್ಚರಿಕೆ ನೀಡಿದ್ದರೂ ಅಂತಹ ಯಾವುದೇ ದುರಂತ ಸಂಭವಿಸಲಿಲ್ಲ.
ಸುಮಾತ್ರ ದ್ವೀಪದ ತೀರಪ್ರದೇಶದ ನಗರ ಬೆಂಕುಲು ಪಶ್ಚಿಮಕ್ಕೆ 145 ಕಿಮೀ ದೂರದಲ್ಲಿ 7.1 ತೀವ್ರತೆಯ ಭೂಕಂಪ ಅಪ್ಪಳಿಸಿತು ಎಂದು ಅಮೆರಿಕ ಬೌಗೋಳಿಕ ಸಮೀಕ್ಷೆ ತಿಳಿಸಿದೆ. ಸಮುದ್ರಗರ್ಭದಲ್ಲಿ 30 ಕಿಮೀ ಆಳದಲ್ಲಿ ಕಂಪನ ಸಂಭವಿಸಿದೆ ಎಂದು ಅದು ಹೇಳಿದೆ.
ಶಕ್ತಿಯುತ ಸರಣಿ ಭೂಕಂಪಗಳಿಂದ ತಲ್ಲಣಿಸಿದ್ದ ಬೆಂಕುಲು ನಿವಾಸಿಗಳು ತಮ್ಮ ಮನೆಗಳಿಂದ ಹೊರಗೋಡಿ ಕಾರುಗಳಲ್ಲಿ ಮತ್ತು ಮೋಟರ್ ಸೈಕಲ್‌ಗಳಲ್ಲಿ ಪಲಾಯನಮಾಡಿದರು ಎಂದು ರೇಡಿಯೊ ವರದಿ ಮಾಡಿದೆ. ಕಂಪನದ ಬಳಿಕ ಯಾವುದೇ ಸಾವುನೋವು ಅಥವಾ ಹಾನಿಯಾದ ಬಗ್ಗೆ ವರದಿಯಾಗಿಲ್ಲ ಎಂದು ಸ್ಥಳೀಯ ಹವಾಮಾನ ಇಲಾಖೆ ಅಧಿಕಾರಿ ತಿಳಿಸಿದರು.
ವಾಲ್ಕೆನೊಗಳ ಕಮಾನಿರುವ ಬೆಂಕಿಯ ಉಂಗುರದ ಪ್ರದೇಶದಲ್ಲಿರುವುದರಿಂದ ಇಂಡೋನೇಶಿಯ ಭೂಕಂಪಪೀಡಿತ ಪ್ರದೇಶವೆನಿಸಿದೆ.ಕ ಳೆದ ತಿಂಗಳು ಇಂಡೋನೇಶಿಯಾದಲ್ಲಿ ಸಂಭವಿಸಿದ 8.4 ತೀವ್ರತೆಯ ಭೂಕಂಪ ಮತ್ತು ಬಳಿಕದ ಕಂಪನಗಳಿಂದ 23 ಜನರು ಸತ್ತಿದ್ದರು ಮತ್ತು ಸಾವಿರಾರು ಕಟ್ಟಡಗಳು ನೆಲಸಮವಾಗಿದ್ದವು.
ಇದಾದ ಬಳಿಕ ಈ ಪ್ರದೇಶಗಲ್ಲಿ ನೂರಾರು ಲಘುಕಂಪನಗಳಾಗಿವೆ. ಪೆಸಿಫಿಕ್ ಸುನಾಮಿ ಮುನ್ನೆಚ್ಚರಿಕೆ ಕೇಂದ್ರ ಮತ್ತು ಜಪಾನ್ ಹವಾಮಾನ ಸಂಸ್ಥೆ ಆರಂಭದಲ್ಲಿ ಭೂಕಂಪಕ್ಕೆ ಸ್ಥಳೀಯವಾಗಿ ಸುನಾಮಿ ಅಲೆ ಎಬ್ಬಿಸುವ ಸಾಮರ್ಥ್ಯವಿದೆ ಎಂದು ಎಚ್ಚರಿಕೆ ನೀಡಿತ್ತು. ಆದರೆ ಈ ಬೆದರಿಕೆ ಶಮನವಾದ ಬಳಿಕ ಈ ಎಚ್ಚರಿಕೆಯನ್ನು ತೆರವು ಮಾಡಲಾಯಿತು.
|