ನಾನು ನನ್ನ ಖಾಸಗಿ ಜೀವನದ ಬಗ್ಗೆ ಎಂದಿಗೂ ಯೋಚಿಸುವುದಿಲ್ಲ, ದೇಶಕ್ಕಾಗಿ ಎಂತಹ ಅಪಾಯವನ್ನಾದರು ಎದುರಿಸಲು ಸಿದ್ಧ ಎಂದು ಹೇಳುವ ಮೂಲಕ ಪಾಕಿಸ್ತಾನದ ಮಾಜಿ ಪ್ರಧಾನಿ ಬೆನಜಿರ್ ಭುಟ್ಟೊ, ಪಾಕಿಸ್ತಾನದ ಆಡಳಿತ ಮತ್ತು ಉಗ್ರಗಾಮಿತನದ ವಿರುದ್ಧ ತೀವ್ರ ಕಿಡಿಕಾರಿದ್ದಾರೆ.
ತಮ್ಮ ಮೇಲೆ ನೇರ ದಾಳಿ ನಡೆದ ನಂತರ, ತಮ್ಮ ನಿವಾಸದಲ್ಲಿ ಎರಡನೇ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಭುಟ್ಟೊ, ಈ ದೇಶ ರಕ್ಷಣೆಗಾಗಿ ನಾನು ಎಂತಹ ಅಪಾಯವನ್ನಾದರು ಎದುರಿಸುವ ಜವಾಬ್ದಾರಿಯನ್ನು ಹೊರುತ್ತೇನೆ ಮತ್ತು ಪಾಕಿಸ್ತಾನವನ್ನು ರಕ್ಷಣೆ ಮಾಡಿ ಮತ್ತೊಮ್ಮೆ ಪ್ರಜಾಪ್ರಭುತ್ವವನ್ನು ಸ್ಥಾಪನೆಗೊಳಿಸುವವರೆಗೂ ಹೋರಾಡುತ್ತೇನೆ ಎಂದು ಪತ್ರಕರ್ತರೆದುರು ಭುಟ್ಟೊ ಶಪಥ ಮಾಡಿದರು.
ಆಡಳಿತಾರೂಢ ಸರಕಾರದ ವಿರುದ್ಧ ತೀವ್ರ ಹರಿಹಾಯ್ದ ಭುಟ್ಟೊ, ಉಗ್ರಗಾಮಿಗಳಿಗೆ ಹಣಕಾಸಿನ ನೆರವು ಮತ್ತುಪ್ರಾಯೋಜಕತ್ವವನ್ನು ಯಾರು ನೀಡುತ್ತಾರೆ ಎಂಬುದರ ಬಗ್ಗೆ ಸರಕಾರ ತೀವ್ರ ನಿಗಾ ವಹಿಸಬೇಕೆಂದು ಆಗ್ರಹಿಸಿದರು.
ದೇಶದಿಂದ ಸ್ವಯಂ ಗಡಿಪಾರುಗೊಂಡು ಹಲವು ವರ್ಷಗಳ ಕಾಲ ವಿದೇಶದಲ್ಲಿ ಜೀವನ ಕಳೆದು, ಈ ತಿಂಗಳ ಮಧ್ಯಭಾಗದಲ್ಲಿ ಪಾಕಿಸ್ತಾನದ ಕರಾಚಿನ ನಗರಕ್ಕೆ ಆಗಮಿಸಿದಾಗ, ಭುಟ್ಟೊ ಅವರನ್ನು ಗುರಿಯಾಗಿರಿಸಿಕೊಂಡು ಉಗ್ರಗಾಮಿ ಸಂಘಟನೆಯೊಂದು ಬಾಂಬ್ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಅದೃಷ್ಟವಶಾತ್ ಭುಟ್ಟೊ ಪಾರಾದರಾದರೂ, ಅವರ 140 ಬೆಂಬಲಿಗರು ಸಾವಿಗೀಡಾಗಿದ್ದರು.
|