ಚೀನಾಗೆ ತಮ್ಮ ಭೇಟಿಯು ಭಾರತ-ಚೀನಾ ಬಾಂಧವ್ಯದಲ್ಲೊಂದು ಮೈಲಿಗಲ್ಲು ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಬಣ್ಣಿಸಿದ್ದಾರೆ. ನೆರೆಯ ರಾಷ್ಟ್ರ ಸಾಧಿಸಿರುವ ಪ್ರಗತಿ ಬಗ್ಗೆ ತಾವು ಆಶ್ಚರ್ಯ ಮತ್ತು ಸ್ಥಂಬೀಭೂತರಾಗಿರುವುದಾಗಿ ಅವರು ಹೇಳಿದ್ದಾರೆ.
ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದ ಅಂತಾರಾಷ್ಟ್ರೀಯ ಇಲಾಖೆಯ ಸಚಿವ ವಾಂಗ್ ಜಿಯಾರೈ ಜತೆ ಮಾತನಾಡಿದ ಅವರು, ಉಭಯ ರಾಷ್ಟ್ರಗಳ ಬಾಂಧವ್ಯ ಗಟ್ಟಿಗೊಳಿಸಲು ತಮ್ಮ ಪ್ರವಾಸ ಮೈಲಿಗಲ್ಲಾಗಿದೆ ಎಂದು ಬಣ್ಣಿಸಿದ್ದಾರೆ.
ಸೋನಿಯಾ ಅವರನ್ನು ಬರಮಾಡಿಕೊಂಡ ಚೀನಾದ ನಾಯಕ ಅವರ ಭೇಟಿಯು ಪಕ್ಷದಿಂದ ಪಕ್ಷದ ಮಟ್ಟದಲ್ಲಿ ಮತ್ತು ಉಭಯ ರಾಷ್ಟ್ರಗಳ ನಡುವೆ ಕೂಡ ಮೈಲಿಗಲ್ಲು ಎಂದು ಹೇಳಿದರು. ನಿಮ್ಮ ಭೇಟಿಯು ಇಡೀ ಜಗತ್ತಿನ ಗಮನವನ್ನು ಸೆಳೆದಿದೆ ಎಂದು ವಾಂಗ್ ಹೇಳಿದರು.
ಚೀನಾದ ಅಧ್ಯಕ್ಷ ಹು ಜಿಂಟಾವೊ ಕಳೆದ ನವೆಂಬರ್‌ನಲ್ಲಿ ಭಾರತಕ್ಕೆ ಆಗಮಿಸಿದ್ದಾಗ ಚೀನಾಕ್ಕೆ ಭೇಟಿ ನೀಡುವಂತೆ ತಮಗೆ ಆಹ್ವಾನ ನೀಡಿದ್ದನ್ನು ಸೋನಿಯಾ ಸ್ಮರಿಸಿದರು. ತಾವು 11 ವರ್ಷಗಳ ಕೆಳಗೆ ಚೀನಾಗೆ ಭೇಟಿ ನೀಡಿದ್ದನ್ನು ಅವರು ನೆನಪಿಸಿಕೊಂಡರು.
ಸೋನಿಯಾ ಪುತ್ರ ರಾಹುಲ್, ಕಾಂಗ್ರೆಸ್ ನಾಯಕ ಕರಣ್ ಸಿಂಗ್ ಮತ್ತು ಕೇಂದ್ರ ಸಚಿವರಾದ ಪ್ರಥ್ವಿರಾಜ್ ಚೌಹಾನ್ ಮತ್ತು ಚೀನಾಗೆ ಭಾರತದ ರಾಯಭಾರಿ ನಿರುಪಮಾ ರಾವ್ ಕೂಡ ಸಭೆಯಲ್ಲಿ ಬಾಗವಹಿಸಿದ್ದರು.
|