ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಐಷಾರಾಮಿ ಕಾರು, ಬಂಗಲೆ, ತಿರುಗಾಡಲು ಖಾಸಗಿ ಜೆಟ್ ಇರುತ್ತದೆಂದು ನಾವು ನಿರೀಕ್ಷಿಸಬಹುದು. ಆದರೆ ಬ್ರೂನೈ ಸುಲ್ತಾನರಾದ ಹಾಜಿ ಹಸನ್-ಅಲ್-ಬೋಲ್ಕಿಯಾ ಅವರು ಹಣವನ್ನು ನೀರಿನಂತೆ ಪೋಲು ಮಾಡುವ ಜೀವನಶೈಲಿಯನ್ನು ಗಮನಿಸಿದಾಗ ಎಂತಹವರಾದರೂ ಮೂಗಿನ ಮೇಲೆ ಬೆರಳಿಟ್ಟುಕೊಳ್ಳದೇ ಇರಲಾರರು.
61 ವರ್ಷ ಪ್ರಾಯದ ಬೋಲ್ಕಿಯ ತನ್ನ ಬ್ಯಾಡ್ಮಿಂಟನ್ ಕೋಚ್‌ಗೆ 1.26 ದಶಲಕ್ಷ ಪೌಂಡ್‌ಗಳನ್ನು ನೀಡಿದ್ದಾರೆ. ಆಕ್ಯುಪಂಕ್ಟರ್ ಮತ್ತು ಅಂಗಮರ್ಧನ ಚಿಕಿತ್ಸೆಗೆ 1.25 ದಶಲಕ್ಷ ಪೌಂಡ್‌ಗಳನ್ನು ಖರ್ಚು ಮಾಡಿದ್ದಾರೆಂದು ಕೋರ್ಟ್ ದಾಖಲೆಗಳು ಬಹಿರಂಗಪಡಿಸಿವೆ. ತನ್ನ ಸಾಕು ಹಕ್ಕಿಗಳ ಸಂಗ್ರಹಕ್ಕಾಗಿ ಅವರು ಕಾವಲುಗಾರರಿಗೆ 50,000 ಪೌಂಡ್‌ಗಳನ್ನು ವೆಚ್ಚಮಾಡಿದ್ದಾರೆ. ಪ್ರತಿಯೊಬ್ಬ ಹೌಸ್‌ಕೀಪರ್‌ಗೆ ಸುಮಾರು 7 ದಶಲಕ್ಷ ಪೌಂಡ್‌ಗಳನ್ನು ಅವರು ಕೊಟ್ಟಿದ್ದಾರೆ. ರಾಜಕುಮಾರ ಜೆಫ್ರಿ ಜತೆ ಕಾನೂನು ಸಮರದ ಸಂದರ್ಭದಲ್ಲಿ ಕಣ್ಣುಕೋರೈಸುವ ಈ ಅಂಕಿಅಂಶಗಳು ಬಹಿರಂಗವಾದವು.
ಅವರ ಜೀವನಶೈಲಿಯ ಅನುಸರಣೆ ಸಲುವಾಗಿ ಸರ್ಕಾರದ ಹಣದಿಂದ ನಾಲ್ಕು ವರ್ಷಗಳಲ್ಲಿ 4 ಶತಕೋಟಿ ಪೌಂಡ್ ಅವರ ಖಾತೆಗೆ ಸಂದಾಯವಾಗಿದೆ. ಬ್ರೂನೈ ಸುಲ್ತಾನರ ಸುಪರ್ದಿಯಲ್ಲಿ 5000 ಐಷಾರಾಮಿ ಕಾರುಗಳು, ಸ್ಪೋರ್ಟ್ಸ್ ಕಾರುಗಳು ಮತ್ತು ಖಾಸಗಿ ಬೋಯಿಂಗ್ ವಿಮಾನಗಳಿವೆ. ಇನ್ನು ಅವರ ಅರಮನೆ 1788 ಕೋಣೆಗಳಿಂದ ಕೂಡಿದೆ. ಕಾನೂನಿನ ಇತಿಹಾಸದಲ್ಲಿ ಅತ್ಯಂತ ದುಬಾರಿಯಾದ ಕುಟುಂಬ ವೈಮನಸ್ಸಿನಿಂದ 11 ಮಕ್ಕಳ ತಂದೆಯಾದ ಬ್ರೂನೈ ಸುಲ್ತಾನರ ಅಗಾಧ ಆಸ್ತಿಪಾಸ್ತಿಗಳ ವಿವರ ಬಹಿರಂಗವಾಗಿದೆ. ಸುಮಾರು 40 ವರ್ಷಗಳವರೆಗೆ ರಾಜ್ಯಭಾರ ಮಾಡಿದ ಸುಲ್ತಾನರು ತಮ್ಮ ಸೋದರನ ಜತೆ ಕಳೆದ 10 ವರ್ಷಗಳಿಂದ ಕಾನೂನು ಸಮರಕ್ಕೆ ಇಳಿದಿದ್ದಾರೆ.
ತಮ್ಮ ಕಿರಿಯ ಸೋದರ ಹಣಕಾಸು ಸಚಿವರಾಗಿದ್ದಾಗ 8 ಶತಕೋಟಿ ಪೌಂಡ್‌ಗಳನ್ನು ಅಕ್ರಮವಾಗಿ ಸಂಪಾದಿಸಿದ್ದಾರೆಂದು ಸುಲ್ತಾನರು ಕೋರ್ಟ್‌ಗೆ ತಿಳಿಸಿದ್ದು, ಕೋರ್ಟ್ ಹೊರಗೆ ಇತ್ಯರ್ಥಕ್ಕೆ ಒಪ್ಪಿಕೊಂಡ 3 ಶತಕೋಟಿ ಪೌಂಡ್ ನೀಡಲು ವಿಫಲರಾಗಿದ್ದಾರೆಂದು ಆರೋಪಿಸಿದ್ದಾರೆ.
|